ರಾಷ್ಟ್ರಕವಿ ಕುವೆಂಪು ಅವರ ಮಂತ್ರ ಮಾಂಗಲ್ಯ ಪರಿಕಲ್ಪನೆಯಡಿ ಸರಳ ವಿವಾಹವೊಂದು ಜರುಗಿತು. ಈ ಪದ್ಧತಿಯು ಜಾತಿ, ಧರ್ಮ, ಆಡಂಬರಗಳನ್ನು ಮೀರಿ ಮಾನವೀಯ ಮೌಲ್ಯಗಳಿಗೆ ಪ್ರಾಮುಖ್ಯತೆ ನೀಡುವುದನ್ನು ಗಣ್ಯರು ವಿವರಿಸಿದರು. ಇದೇ ಸಂದರ್ಭದಲ್ಲಿ ವಧು ರಚಿಸಿದ ಕವನ ಸಂಕಲನವನ್ನೂ ಬಿಡುಗಡೆ ಮಾಡಲಾಯಿತು.

ದೊಡ್ಡಬಳ್ಳಾಪುರ: ರಾಷ್ಟ್ರಕವಿ ಕುವೆಂಪು ಅವರ ಮಂತ್ರ ಮಾಂಗಲ್ಯ ಪರಿಕಲ್ಪನೆ ಅತ್ಯಂತ ಸರಳ, ಕಡಿಮೆ ವೆಚ್ಚದ ಮತ್ತು ಮೂಢನಂಬಿಕೆ ರಹಿತ ವಿವಾಹ ಪದ್ಧತಿಯಾಗಿದೆ ಎಂದು ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಡಾ.ಬೈರಮಂಗಲ ರಾಮೇಗೌಡ ತಿಳಿಸಿದರು. ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಹುಲುಕುಡಿ ಬೆಟ್ಟದ ಸಮೀಪವಿರುವ ಮಾಡೇಶ್ವರ ಗ್ರಾಮದ ಹಳ್ಳಿ ಮಂಟಪದಲ್ಲಿ ನಡೆದ ಸಿ.ಎಚ್. ಭರತ್ ಕುಮಾರ್ ಮತ್ತು ಕೆ.ಟಿ.ಲತಾ ಅವರ ಮಂತ್ರ ಮಾಂಗಲ್ಯ ವಿವಾಹ ಕಾರ್ಯಕ್ರಮದಲ್ಲಿ ನೂತನ ವಧು- ವರರಿಗೆ ಮಂತ್ರ ಮಾಂಗಲ್ಯ ಬೋಧನೆ ಮಾಡಿ ಮಾತನಾಡಿದರು.

ಪ್ರೀತಿ, ಸಮಾನತೆ ಮತ್ತು ಜವಾಬ್ದಾರಿಗಳ ಪ್ರಮಾಣ ವಚನ

ಜಾತಿ, ಧರ್ಮ, ಅಡಂಬರ ಹಾಗೂ ಪುರೋಹಿತಶಾಹಿ ಆಚರಣೆಗಳನ್ನು ಮೀರಿ ನಿಂತ ಮಂತ್ರ ಮಾಂಗಲ್ಯ ಮದುವೆ ಪದ್ಧತಿಯು ಮಾನವೀಯ ಮೌಲ್ಯಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ. ವಧು-ವರರು ಕನ್ನಡದಲ್ಲೇ ಪರಸ್ಪರ ಪ್ರೀತಿ, ಸಮಾನತೆ ಮತ್ತು ಜವಾಬ್ದಾರಿಗಳ ಪ್ರಮಾಣ ವಚನ ಸ್ವೀಕರಿಸುವುದು ಮಂತ್ರ ಮಾಂಗಲ್ಯದ ವಿಶೇಷವಾಗಿದೆ ಎಂದರು.

ತಾ.ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು ಮಾತನಾಡಿ, ಮನುಷ್ಯತ್ವವೇ ದೊಡ್ಡ ಧರ್ಮವೆಂಬ ವಿಚಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಕುವೆಂಪು ಅವರ ವಿಚಾರಗಳು ದಾರಿ ಮಾಡಿಕೊಡುತ್ತದೆ ಎಂದರು.

ಕೆ.ಟಿ.ಲತಾ ಅವರು ರಚಿಸಿರುವ ನಿನ್ನನ್ನೇಕೆ ಆಯ್ದುಕೊಂಡೆ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಲೇಖಕಿ ಇಂದಿರಾ ಕೃಷ್ಣಪ್ಪ, ಕಾವ್ಯದ ಭಾಷೆ ಮತ್ತು ಭಾವವು ಜನಸಾಮಾನ್ಯರಿಗೆ ಸುಲಭವಾಗಿ ತಲುಪುವಂತಿರಬೇಕು. ಸಾಮಾನ್ಯ ಜನರ ನೋವು-ನಲಿವು, ಬದುಕು ಹಾಗೂ ಸಾಮಾಜಿಕ ಸ್ಪಂದನೆಗೆ ಕನ್ನಡಿಯಾಗಬೇಕು ಎಂದರು.

ಬುದ್ಧ- ಬಸವ- ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಡಾ.ಎಸ್.ರಾಮಲಿಂಗೇಶ್ವರ(ಸಿಸಿರಾ), ಲೇಖಕ ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ, ವಧು ವರರ ಕುಟುಂಬದವರು ಭಾಗವಹಿಸಿದ್ದರು.

ಇದನ್ನೂ ಓದಿ: ಕುಂಕುಮ, ಮಾಂಗಲ್ಯ ಹಾಕ್ತೀರಿ ತಾನೆ? 16 ವರ್ಷ ಲವ್ ಹೇಗೆ ಮೆಂಟೇನ್​ ಮಾಡಿದ್ರಿ​? Suhaana Syed ಉತ್ತರ ಕೇಳಿ