ಕುಟುಂಬದ ದೋಷ ನಿವಾರಣೆಗಾಗಿ ಮೃತಪಟ್ಟ ಆನಂದ ಮತ್ತು ಸರೋಜಾ ಅವರ ಆತ್ಮಗಳಿಗೆ 'ಪ್ರೇತ ವಿವಾಹ' ನಡೆಸಲಾಯಿತು. ತುಳುನಾಡಿನ 'ಕುಲೆತ ಮದಿಮೆ' ಸಂಪ್ರದಾಯದಂತೆ, ಮಣ್ಣಿನ ಪಾತ್ರೆಗಳನ್ನು ಪ್ರತಿನಿಧಿಯಾಗಿ ಬಳಸಿ, ಧರ್ಮಪಾಲ ಶೇಣಿ ಅವರ ಪೌರೋಹಿತ್ಯದಲ್ಲಿ ಈ ಅಪರೂಪದ ವಿವಾಹ ನೆರವೇರಿತು.
ದಕ್ಷಿಣ ಕನ್ನಡ: ಜಿಲ್ಲೆಯ ಪುತ್ತೂರು ತಾಲೂಕಿನ ಮುಂಡೂರು ಬಾರಿಕೆ ಎಂಬಲ್ಲಿ ಇತ್ತೀಚೆಗೆ ಅಪರೂಪದ ‘ಪ್ರೇತ ವಿವಾಹ’ ನಡೆಯಿತು. ಈ ಹಿಂದೆ ಮೃತಪಟ್ಟ ಆನಂದ ಮತ್ತು ಸರೋಜಾ ಎಂಬವರ ಆತ್ಮಗಳಿಗೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬದ ದೋಷಗಳು ನಿವಾರಣೆಯಾಗಲಿ ಎಂಬ ಉದ್ದೇಶದಿಂದ ಈ ವಿವಾಹ ನಡೆಸಲಾಯಿತು
ಮೃತ ಆನಂದ ಅವರ ಕುಟುಂಬದಲ್ಲಿ ಕಳೆದ ಹಲವು ಸಮಯದಿಂದ ಸಂತಾನ ಭಾಗ್ಯದ ಕೊರತೆ, ವಿವಾಹ ತಡೆ ಸೇರಿದಂತೆ ಹಲವು ಸಮಸ್ಯೆಗಳು ಕಾಡುತ್ತಿದ್ದು, ಈ ಕುಟುಂಬದ ಕಷ್ಟಗಳಿಗೆ ಕಾರಣವೇನು ಎಂದು ಅರಿಯಲು ಜ್ಯೋತಿಷಿಗಳ ಸಲಹೆಯಂತೆ ಪ್ರಶ್ನಾ ಚಿಂತನೆ ನಡೆಸಲಾಯಿತು. ಪ್ರಶ್ನಾ ಚಿಂತನೆಯಲ್ಲಿ ಮೃತಪಟ್ಟ ಆನಂದ ಅವರಿಗೆ ವಿವಾಹವಾಗದೆ ಆ ಆತ್ಮ ಅತೃಪ್ತವಾಗಿದೆ. ಇದರಿಂದಾಗಿ ಕುಟುಂಬದಲ್ಲಿ ಇಂತಹ ಹಲವು ದೋಷಗಳು ಕಂಡು ಬರುತ್ತಿದೆ ಎಂದು ತಿಳಿದು ಬಂದಿತ್ತು. ಈ ದೋಷ ಪರಿಹರಿಸಿ, ಮೃತ ಆತ್ಮಗಳಿಗೆ ಸದ್ಗತಿ ದೊರಕಿಸಿಕೊಡಲು ಕುಟುಂಬಸ್ಥರು ಈ ವಿವಾಹಕ್ಕೆ ನಿರ್ಧರಿಸಿದರು. ಅದರಂತೆ ಆನಂದ ಕುಟುಂಬದಲ್ಲೇ ಸೋದರ ಸಂಬಂಧದಲ್ಲಿ ಮಾವನ ಮಗಳು ಸರೋಜಾ ಅವರೊಂದಿಗೆ ಆನಂದ ಅವರ ವಿವಾಹ ಮಾಡಲಾಯಿತು.
ಧರ್ಮಪಾಲ ಶೇಣಿ ಪೌರೋಹಿತ್ಯ
ಪ್ರೇತ ವಿವಾಹದಲ್ಲಿ ಅನುಭವವಿರುವ ಧರ್ಮಪಾಲ ಶೇಣಿ ಅವರು ವಿವಾಹದ ಪೌರೋಹಿತ್ಯ ವಹಿಸಿದ್ದರು. ಕುಟುಂಬದ ಸದಸ್ಯರು ಮೃತ ಆನಂದ ಮತ್ತು ಸರೋಜಾ ಅವರ ಪ್ರತಿನಿಧಿಗಳಾಗಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: ಪುತ್ತೂರಿನ ಕೂಲಿ ಕಾರ್ಮಿಕ ಪುರಂದರ್‌ಗೆ ಅದೃಷ್ಟ ತಂದು ಕೊಟ್ಟ ದೇಸಿ ನಾಯಿ ‘ಚಿನ್ನು’
ತುಳು ನಾಡಿನ ಪ್ರೇತ ವಿವಾಹ
ಪ್ರೇತ ವಿವಾಹ (ಕುಲೆತ ಮದಿಮೆ)ದಲ್ಲಿ ಜೀವಂತ ವ್ಯಕ್ತಿಗಳ ಮದುವೆಯ ರೀತಿಯಲ್ಲೇ ನಡೆಯುತ್ತದೆ. ಅರಂಭದಲ್ಲಿ ಹುಡುಗಿ ನೋಡುವ ಕಾರ್ಯ, ವಿವಾಹ ನಿಶ್ವಿತಾರ್ಥ ನಡೆಯುತ್ತದೆ. ಆ ಬಳಿಕ ಮದುವೆ ಮದರಂಗಿ ನಂತರ ಮದುವೆ ನಡೆಯುತ್ತದೆ. ಮದುವೆ ದಿನ ಮದುಮಗಳಿಗೆ ಹಾಗೂ ಮದುಮಗನಿಗೆ ಹೊಸ ಬಟ್ಟೆ ತೊಡಿಸಲಾಗುತ್ತದೆ. ಆರಂಭದಲ್ಲಿ ಪೂ ಸೀರೆ (ಹೂ ಸೀರೆ ) ಬದಲಿಸುವ ಕಾರ್ಯ ಆಗುತ್ತದೆ. ನಂತರ ಎರಡು ಮಣ್ಣಿನ ಪಾತ್ರೆಗಳಿಗೆ( ತಲೆಯ ಗಾತ್ರದ್ದು) ಗಂಡು, ಹೆಣ್ಣಿನ ರೀತಿ ಕಣ್ಣು, ಬಾಯಿ ರಚಿಸಲಾಗುತ್ತದೆ.
ಈ ರೀತಿಯ ಮಾನವ ಪ್ರೇತದ ರೂಪಗಳಿಗೆ ಧಾರೆ ಎರೆಯುವಲ್ಲಿಂದ ಹಿಡಿದು ಮಾಂಗಲ್ಯ ಧಾರಣೆ ನಡೆಯುತ್ತವೆ. ಕೊನೆಗೆ ಈ ಬೊಂಬೆಗಳನ್ನು ಮನೆಯೊಳಕ್ಕೆ ಕೊಂಡೊಯ್ದು ಕೆಲವೊಂದು ಕಟ್ಟು ಕಟ್ಟಳೆಗಳು ನಡೆಯುತ್ತದೆ. ಆ ಬಳಿಕ ಭೋಜನ ವ್ಯವಸ್ಥೆ ಮಾಡಲಾಗುತ್ತದೆ.
ಇದನ್ನೂ ಓದಿ: ಪವಿತ್ರ ಕ್ಷೇತ್ರದಲ್ಲಿ ಹೇಳುತ್ತಿದ್ದೇನೆ, ಡಿಕೆಶಿ ಜೊತೆ ಆತ್ಮೀಯತೆ ಆರೋಪಕ್ಕೆ ಧರ್ಮಸ್ಥಳದಲ್ಲಿ ವಿಜಯೇಂದ್ರ ಸ್ಪಷ್ಟನೆ


