ಪುತ್ತೂರಿನಲ್ಲಿ ಕಾಣೆಯಾಗಿದ್ದ 'ಚಿನ್ನು' ಎಂಬ ದೇಸಿ ನಾಯಿಯನ್ನು ಪತ್ತೆ ಹಚ್ಚಿಕೊಟ್ಟ ಕೂಲಿ ಕಾರ್ಮಿಕ ಪುರಂದರ ಅವರಿಗೆ, ಶ್ವಾನಪ್ರೇಮಿ ಮಾಲೀಕ ಗಣೇಶ್ ಭಟ್ ಕೇರ ಅವರು 50 ಸಾವಿರ ರೂಪಾಯಿ ಬಹುಮಾನ ನೀಡಿದ್ದಾರೆ. ಫಿಟ್ಸ್ ಸಮಸ್ಯೆಯಿಂದ ಬಳಲುತ್ತಿದ್ದ ನಾಯಿಯ ಹುಡುಕಾಟಕ್ಕಾಗಿ ಮಾಲೀಕರು ಬಹುಮಾನ ಘೋಷಿಸಿದ್ದರು.
ಮಂಗಳೂರು: ನಾಪತ್ತೆಯಾದ ದೇಸಿ ತಳಿಯ ನಾಯಿಯನ್ನು ಪತ್ತೆ ಮಾಡಿ ತಂದುಕೊಟ್ಟ ವ್ಯಕ್ತಿಗೆ ಶ್ವಾನಪ್ರೇಮಿ ಮಾಲೀಕರೊಬ್ಬರು ಸೋಮವಾರ 50 ಸಾವಿರ ರು. ಬಹುಮಾನ ನೀಡಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಫಿಟ್ಸ್ ಸಮಸ್ಯೆಯಿಂದ ಕಾಲಿನ ಸ್ವಾಧೀನ ಕಳೆದುಕೊಂಡಿದ್ದ ಈ ದೇಸಿ ನಾಯಿ ‘ಚಿನ್ನು’ ತಪ್ಪಿಸಿಕೊಂಡಿತ್ತು. ಇದನ್ನು ಪತ್ತೆಮಾಡಿ ತಂದುಕೊಟ್ಟವರಿಗೆ 50 ಸಾವಿರ ರು. ಬಹುಮಾನ ಕೊಡುವುದಾಗಿ ನಾಯಿಯ ಮಾಲೀಕ ಗಣೇಶ್ ಭಟ್ ಕೇರ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಮನೆ ಸೇರಿದ ಚಿನ್ನು
ನಾಪತ್ತೆಯಾದ ಈ ನಾಯಿಯನ್ನು ಪೋಳ್ಯ ನಿವಾಸಿ ಕೂಲಿ ಕೆಲಸ ಮಾಡುತ್ತಿರುವ ಪುರಂದರ ಎಂಬವರು ಪತ್ತೆ ಮಾಡಿ ತಂದುಕೊಟ್ಟಿದ್ದರು. ಕೊಟ್ಟ ಮಾತಿನಂತೆ ಕೂಲಿ ಕಾರ್ಮಿಕರಾದ ಪುರಂದರ ಅವರಿಗೆ 50 ಸಾವಿರ ಚೆಕ್ ನೀಡಿದ ಗಣೇಶ್ ಭಟ್ ಕೇರ ಅವರು ಚಿನ್ನು ನಮ್ಮ ಮನೆ ಸೇರಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಶ್ವಾನ ಪ್ರೇಮಿ ಗಣೇಶ್ ಕೇರ ಪೋಳ್ಯದ ತಮ್ಮ ಮನೆಯಲ್ಲಿ ವಿವಿಧ ತಳಿಯ 30 ನಾಯಿಗಳನ್ನು ಸಾಕುತ್ತಿದ್ದಾರೆ. ಇದರಲ್ಲಿ ಎರಡು ಗಂಡು ಹಾಗೂ 28 ಹೆಣ್ಣು ನಾಯಿಗಳು ಇವೆ. ಇದರಲ್ಲಿ ಕಾಲು ಸ್ವಾಧೀನ ಕಳೆದುಕೊಂಡ ಚಿನ್ನು ನಾಯಿಯೂ ಒಂದಾಗಿತ್ತು. ಬಹಳ ಮುದ್ದಿನಿಂದ ಈ ನಾಯಿಗಳನ್ನು ಸಾಕುತ್ತಿರುವ ಅವರಿಗೆ ಚಿನ್ನುವನ್ನು ಕಳೆದುಕೊಂಡಿರುವುದು ಅಪಾರ ನೋವು ಉಂಟಾಗಿತ್ತು. ಇದರಿಂದ ನಾಯಿಯನ್ನು ಪತ್ತೆ ಮಾಡಿಕೊಟ್ಟವರು ಅಥವಾ ನಾಯಿಯ ಬಗ್ಗೆ ಸುಳಿವು ಕೊಟ್ಟವರಿಗೆ ಬಹುಮಾನ ಘೋಷಣೆ ಮಾಡಿದ್ದರು.
ಪೋಳ್ಯದ ಸಮೀಪ ಪತ್ತೆಯಾಯ್ತು ಚಿನ್ನು ಹೆಸರಿನ ನಾಯಿ
ಈ ಬಗ್ಗೆ ಹಲವು ಬ್ಯಾನರ್ ಗಳನ್ನು ಮಾಡಿ ಸಾರ್ವಜನಿಕ ಪ್ರದೇಶಗಳಲ್ಲಿ ಅಳವಡಿಸಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವೀಡಿಯೋವನ್ನು ಗಮನಿಸಿದ ಪುರಂದರ ಅವರು ಪೋಳ್ಯದ ಸಮೀಪ ಚಿನ್ನುವನ್ನು ಪತ್ತೆ ಮಾಡಿ ಪುರಂದರ ಭಟ್ ಅವರಿಗೆ ತಲುಪಿಸಿದ್ದರು.


