ಈ ಪವಿತ್ರ ಕ್ಷೇತ್ರದಲ್ಲಿ ನಿಂತು ಮಾತನಾಡುತ್ತಿದ್ದೇನೆ. ಅಡ್ಡಮತದಾನ ಬಳಿಕ ಡಿಕೆಶಿ ಜೊತೆ ಆತ್ಮೀಯತೆ ಆರೋಪಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸ್ಪಷ್ಟನೆ ನೀಡಿದ್ದಾರೆ. ಧರ್ಮಸ್ಥಳದಲ್ಲಿ ವಿಜಯೇಂದ್ರ ಹೇಳಿದ್ದೇನು?

ಧರ್ಮಸ್ಥಳ (ಜೂ.26) ಅಡ್ಡಮತದಾನ, ಧರ್ಮಸ್ಥಳ ಆಣೆ ಪ್ರಮಾಣಗಳಿಂದ ಸೃಷ್ಟಿಯಾಗಿದ್ದ ವಿವಾದಕ್ಕೆ ತೆರೆ ಎಳೆಯು ಪ್ರಯತ್ವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾಡಿದ್ದಾರೆ. ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನ ದರ್ಶನ ಪಡೆದ ವಿಜಯೇಂದ್ರ, ಹಿಂದೂಗಳ ರಕ್ಷಣೆ, ರಾಜ್ಯದ ಅಭಿವೃದ್ಧಿಗಾಗಿ ಸರ್ಕಾರ ಬರಲು ಪ್ರಾರ್ಥನೆ ಮಾಡಿದ್ದೇನೆ ಎಂದಿದ್ದಾರೆ. ಇದೇ ವೇಳೆ ಸಿಎಂ ಡಿಕೆ ಶಿವಕುಮಾರ್ ಜೊತೆ ಆತ್ಮೀಯತೆ ಇದೆ ಅನ್ನೋ ಆರೋಪಗಳಿಗೆ ಬಿವೈ ವಿಜಯೇಂದ್ರ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಡಿಕೆ ಶಿವಕುಮಾರ್ ಜೊತೆ ನನಗೆ ಯಾವುದೇ ವ್ಯವಹಾರಿಕ ಅಥವಾ ಆತ್ಮೀಯತೆ ಇಲ್ಲ. ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಸಹಜ ಗೌರವ ಕೊಟ್ಡಿದ್ದೇನೆ. ಅಪಪ್ರಚಾರ ಮಾಡಿದವರಿಗೆ ಭಗವಂತ ಒಳ್ಳೆದು ಮಾಡಲಿ ಎಂಬ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ವಿಜಯೇಂದ್ರ ಹೇಳಿದ್ದಾರೆ. ಅಡ್ಡಮತದಾನದ ಬೆನ್ನಲ್ಲೇ ವಿಜಯೇಂದ್ರ ಹಾಗೂ ಡಿಕೆ ಶಿವಕುಮಾರ್ ಆತ್ಮೀಯತೆ ಕುರಿತು ಹಲವು ಆರೋಪಗಳು ಕೇಳಿಬಂದಿತ್ತು. ಈ ಕುರಿತು ವಿಜಯೇಂದ್ರ ಸ್ಪಷ್ಟನೆ ನೀಡಿದ್ದಾರೆ. ಸಾಕಷ್ಟು ಅಪಪ್ರಚಾರ ಅವತ್ತು ಮತ್ತು ಇವತ್ತು ಆಗುತ್ತಿದೆ ಎಂದಿದ್ದಾರೆ.

ಧರ್ಮಸ್ಥಳ ಮಂಜುನಾಥನ ಬಳಿ ವಿಜಯೇಂದ್ರ ಪ್ರಾರ್ಥನೆ

ಧರ್ಮಸ್ಥಳದ ಸನ್ನಿಧಿ ಗೆಸ್ಟ್ ಹೌಸ್ ನಲ್ಲಿ ಸುದ್ದಿಗೋಷ್ಟಿ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ , ಕಳೆದ ಮೂರ್ನಾಲ್ಕು ದಿನಗಳ ಕಾಲ ದೆಹಲಿಯಲ್ಲಿ ರಾಷ್ಟ್ರೀಯ ನಾಯಕರ ಭೇಟಿ ಮಾಡಿದ್ದೇನೆ. ದೆಹಲಿಯಿಂದ ನೇರವಾಗಿ ಧರ್ಮಸ್ಥಳ ಬಂದು ಮಂಜುನಾಥ ಸ್ವಾಮಿ ದರ್ಶನ ಪಡೆದಿದ್ದೇನೆ. ಮಂಜುನಾಥೇಶ್ವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದಿದ್ದಾರೆ. ರಾಜ್ಯದಲ್ಲಿ ಭೀಕರ ಬರಗಾಲದ ಸನ್ನಿವೇಶ ಇದೆ, ಅದು ಸರಿಯಾಗಬೇಕು. ರೈತ ಬೆಳೆದ ಬೆಳೆಗೆ ಒಳ್ಳೆಯ ದಿನಗಳು ಬರಲಿ ಎಂದು ಪ್ರಾರ್ಥನೆ ಮಾಡಿದ್ದೇನೆ. ಅದರ ಜೊತೆಗೆ ಕರ್ನಾಟಕದಲ್ಲಿ ಮತ್ತೊಮ್ಮೆ ಜನಪರ ಒಳ್ಳೆಯ ಸರ್ಕಾರ ಬರಲಿ ಎಂದು ಪ್ರಾರ್ಥಿಸಿದ್ದೇನೆ.

ಮನಸ್ಸಿಗೆ ತೋಚಿದ್ದನ್ನು ಹೇಳಿದ್ದೆ

ಅತ್ಯಂತ ಹಿರಿಯ ಹಾಗೂ ಪಕ್ಷಕ್ಕೆ ದುಡಿದವರನ್ನ ಅಭ್ಯರ್ಥಿ ಮಾಡಿದ್ದೆವು. ಆದರೆ ಚುನಾವಣೆ ವೇಳೆ ನಡೆದ ಅಡ್ಡಮತದಾನ ನನ್ನನ್ನೂ ಸೇರಿ ಕಾರ್ಯಕರ್ತರಿಗೆ ನೋವು ತಂದಿದೆ. ಬಿಜೆಪಿಯ ಶಾಸಕ ರಿಂದಲೇ ಆದ ಅಡ್ಡ ಮತದಾನ ಬೇರೆ ಬೇರೆ ಚರ್ಚೆ ಹುಟ್ಟು ಹಾಕಿತ್ತು. ಹಾಗಾಗಿ ನನ್ನ ಮನಸ್ಸಿನ ನೋವಿನಿಂದ ಧರ್ಮಸ್ಥಳದಲ್ಲಿ ಶಾಸಕಾಂಗ ಸಭೆ ಆಗಬೇಕು ಅಂದಿದ್ದೆ. ನಾನೊಬ್ಬ ಭಾವನಾತ್ಮಕ ವ್ಯಕ್ತಿ, ನನ್ನ ಮನಸ್ಸಿಗೆ ತೋಚಿದ್ದನ್ನ ಹೇಳಿದ್ದೆ. ಪಕ್ಷದ ಹಿರಿಯ ನಾಯಕರು ಅಲ್ಲಿಯ ತನಕ ಬೇಡ, ವರಿಷ್ಠರ ಗಮನಕ್ಕೆ ತರೋಣ ಅಂದರು. ನಾನು ಅವರ ಮಾತಿಗೆ ಗೌರವ ಕೊಟ್ಟು ಮಂಜುನಾಥನ ದರ್ಶನ ಪಡೆಯಲು ಇಲ್ಲಿಗೆ ಬಂದೆ ಎಂದು ವಿಜಯೇಂದ್ರ ಹೇಳಿದ್ದಾರೆ.

ರಾಜ್ಯದ ಲಕ್ಷಾಂತರ ಕಾರ್ಯಕರ್ತರ ಮೇಲೆ ನನಗೆ ವಿಶ್ವಾಸ ಇದೆ. ಜನ ವಿರೋಧಿ ಕಾಂಗ್ರೆಸ್ ಸರ್ಕಾರವನ್ನ ಬುಡ ಸಮೇತ ಕಿತ್ತು ಹಾಕುವ ಕೆಲಸ ಆಗಲಿದೆ. ಸಾಕಷ್ಟು ಜನ ನನಗೆ ಕರೆ ಮಾಡಿದ್ದಾರೆ. ಆವತ್ತು 17 ಜನ ಶಾಸಕರು ಯಡಿಯೂರಪ್ಪ ಅವರ ಮೇಲೆ ನಂಬಿಕೆ ಇಟ್ಟು ಬಿಜೆಪಿಗೆ ಬಂದರು. ಅದರಲ್ಲಿ 15 ಜನ ಗೆದ್ದು ಬಂದು ಮತ್ತೆ ಶಾಸಕರಾಗಿದ್ದಾರೆ. ಆದರೆ ಈಶ್ವರಪ್ಪನವರ ಹೇಳಿಕೆ ಬಗ್ಗೆ ಬಹಳ ಬೇಸರ ಆಗಿದೆ. ಹಿಂದೂ ಕಾರ್ಯಕರ್ತರ ಹತ್ಯೆ, ಮೊಕದ್ದಮೆಗಳ ಬಗ್ಗೆ ಈಶ್ವರಪ್ಪರಿಗೆ ನೆನಪಿರಬೇಕು. ಅಂತಹ ಸಂಧರ್ಭದಲ್ಲಿ ಆ 17 ಜನ ಶಾಸಕರು ಕೈ ಜೋಡಿಸಿದ ಪರಿಣಾಮ ಬಿಜೆಪಿ ಒಳ್ಳೆಯ ಸರ್ಕಾರ ಕೊಟ್ಟಿದೆ ಎಂದಿದ್ದಾರೆ.

ಅಡ್ಡಮತದಾನದಲ್ಲಿ ನಮ್ಮ ಶಾಸಕರ ಬಗ್ಗೆ ಅನುಮಾನ ಪಡುವಂತಾಗಿದೆ. ಇವತ್ತು ಪಕ್ಷಕ್ಕೆ ದ್ರೋಹ ಬಗೆದವನ್ನ ವರಿಷ್ಠರು ಗಮನಿಸ್ತಾರೆ, ಸತ್ಯ‌ ಇಂದಲ್ಲ ನಾಳೆ ಹೊರಬರುತ್ತೆ. ವಿಜಯೇಂದ್ರ ಕಾಂಗ್ರೆಸ್ ಜೊತೆ ಸೇರಿ ಅಡ್ಡ ಮತದಾನಕ್ಕೆ ಸಹಕರಿಸಿದ್ದಾರೆ ಅನ್ನೋದು ಸತ್ಯಕ್ಕೆ ದೂರ. ಇವತ್ತಿಗೆ ಈ ವಿವಾದಕ್ಕೆ ಇತೀಶ್ರೀ ಹಾಡಿ, ರಾಜ್ಯಾದ್ಯಂತ ಪ್ರವಾಸ ಮಾಡ್ತೇನೆ. ಈಗಿನ ಮುಖ್ಯಮಂತ್ರಿ ಎಷ್ಟೇ ಬಲಿಷ್ಠ ಹಾಗೂ ಆರ್ಭಟ ಇದ್ದರೂ ನಮ್ಮ ಸರ್ಕಾರ ತರುತ್ತೇವೆ ಎಂದು ವಿಜಯೇಂದ್ರ ಹೇಳಿದ್ದಾರೆ.