ಕೊಡಗಿನಲ್ಲಿ ಮಳೆ ಕೊರತೆಗೆ 5966 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ: ಸಂಕಷ್ಟದಲ್ಲಿ ಅನ್ನದಾತ..!
ವರದಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಬರೋಬ್ಬರಿ 5966 ಹೆಕ್ಟೇರ್ ಪ್ರದೇಶದ ಬೆಳೆ ಹಾಳಾಗಿದ್ದು ಅದರ ಅಂದಾಜು ಮೊತ್ತ 5.13 ಕೋಟಿ ರೂಪಾಯಿಯಷ್ಟು ರೈತರಿಗೆ ನಷ್ಟವಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದ ಅಧಿಕಾರಿಗಳು
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು(ಅ.06): ವರ್ಷದ ಆರು ತಿಂಗಳು ಮಳೆ ಸುರಿಯುತ್ತದೆ ಎನ್ನುವ ಕೊಡಗು ಜಿಲ್ಲೆಯಲ್ಲಿ ಈ ವರ್ಷ ತೀವ್ರ ಮಳೆ ಕೊರತೆ ಎದುರಾಗಿದೆ. ಹೀಗಾಗಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ಬೆಳೆ ಬಹುತೇಕ ಒಣಗಿ ಹೋಗಿದೆ. ಪರಿಣಾಮ ಜಿಲ್ಲೆಯಲ್ಲಿ ಕೃಷಿಕರಿಗೆ ಬರೋಬ್ಬರಿ 5.13 ಕೋಟಿ ರೂಪಾಯಿ ನಷ್ಟವಾಗಿದೆ. ಈ ಕುರಿತು ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೆ ಮಾಡಿದ್ದಾರೆ. ಈ ವರದಿಯಲ್ಲಿ ಜಿಲ್ಲೆಯಲ್ಲಿ ಬರೋಬ್ಬರಿ 5966 ಹೆಕ್ಟೇರ್ ಪ್ರದೇಶದ ಬೆಳೆ ಹಾಳಾಗಿದ್ದು ಅದರ ಅಂದಾಜು ಮೊತ್ತ 5.13 ಕೋಟಿ ರೂಪಾಯಿಯಷ್ಟು ರೈತರಿಗೆ ನಷ್ಟವಾಗಿದೆ ಎಂದು ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಕಾಫಿ, ಕಾಳು ಮೆಣಸು ಬಿಟ್ಟರೆ ಭತ್ತದ ಕೃಷಿ ಮಾಡಲಾಗುತ್ತದೆ. ಅದರಲ್ಲೂ ಕುಶಾಲನಗರ ಮತ್ತು ಸೋಮವಾರಪೇಟೆ ತಾಲ್ಲೂಕುಗಳ ಸಾವಿರಾರು ರೈತರು ಭತ್ತದ ಜೊತೆಗೆ ಮೆಕ್ಕೆಜೋಳ ಬೆಳೆಯುತ್ತಾರೆ. ಇವರು ಬೆಳೆದ ಬೆಳೆಗಳು ಮಳೆಯ ತೀವ್ರ ಕೊರತೆಯಿಂದ ಹಾಳಾಗಿದ್ದು ಭಾರೀ ನಷ್ಟ ಅನುಭವಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಕೃಷಿ ಇಲಾಖೆ ಅಧಿಕಾರಿಗಳು ವಾಡಿಕೆಯಂತೆ ಕೊಡಗು ಜಿಲ್ಲೆಯಲ್ಲಿ ಅಕ್ಟೋಬರ್ ಆರಂಭದವರೆಗೆ 2474 ಮಿಲಿ ಮೀಟರ್ ಮಳೆ ಬರಬೇಕಾಗಿತ್ತು. ಆದರೆ ಇದುವರೆಗೆ 1486 ಮಿಲಿ ಮೀಟರ್ ಮಾತ್ರವೇ ಮಳೆಯಾಗಿದೆ. ಒಟ್ಟಾರೆ ಮಳೆಯಲ್ಲಿ ಶೇ 40 ರಷ್ಟು ಕೊರತೆಯಾಗಿದೆ. ಆದರೆ ಜುಲೈ ತಿಂಗಳಲ್ಲಿ ಸುರಿದ ಮಳೆಯನ್ನು ನಂಬಿ ರೈತರು 19152 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆ ಮಾಡಿದ್ದರೆ, 2934 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳದ ಬಿತ್ತನೆಯಾಗಿದೆ. ಒಟ್ಟು 22.082 ಹೆಕ್ಟೇರ್ ಜೋಳ ಮತ್ತು ಭತ್ತದ ಬಿತ್ತನೆಯಾಗಿತ್ತು. ಇದರಲ್ಲಿ ಮಳೆಯಿಲ್ಲದೆ 5966 ಹೆಕ್ಟೇರ್ ಪ್ರದೇಶದ ಬೆಳೆ ಒಣಗಿ ಹೋಗಿದೆ. ಇದರಿಂದ ಜಿಲ್ಲೆಯ ರೈತರಿಗೆ 5.13 ಕೋಟಿ ರೂಪಾಯಿ ನಷ್ಟವಾಗಿದೆ ಎಂದಿದ್ದಾರೆ.
ಕಾಂಗ್ರೆಸ್ ಸೇರ್ಪಡೆಗೆ ವೇದಿಕೆ ಸಿದ್ಧ: ಮೈತ್ರಿ ಬೆನ್ನಲ್ಲೇ ಬಿಜೆಪಿಗೆ ಶಾಕ್ ನೀಡಿದ ಜೆಡಿಎಸ್..!
ಈ ವರದಿಯನ್ನು ಎನ್ಡಿಆರ್ಎಫ್ ನಿಯಮಗಳ ಪ್ರಕಾರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಗಳಿಗೆ ವರದಿ ಸಲ್ಲಿಸಲಾಗಿದೆ. ವರದಿಯನ್ನು ಪರಿಶೀಲಿಸಿ ಅದರ ಆಧಾರದಲ್ಲಿ ಪರಿಹಾರಧನ ಬಿಡುಗಡೆ ಆಗಬೇಕಾಗಿದೆ ಎಂದು ಕೃಷಿ ಇಲಾಖೆ ಕೊಡಗು ಜಂಟಿ ನಿರ್ದೇಶಕ ಸೋಮಸುಂದರ್ ತಿಳಿಸಿದ್ದಾರೆ.
ಈ ಕುರಿತು ಆತಂಕ ವ್ಯಕ್ತಪಡಿಸಿರುವ ಕೊಡಗಿನ ರೈತ ಮುಖಂಡ ನೆರವಂಡ ಉಮೇಶ್ ಈ ಬಾರಿ ಜೂನ್ ತಿಂಗಳಲ್ಲಿ ಕಾಫಿ ಹೂ ಅರಳಲು ಮಳೆ ಬೇಕಾಗಿತ್ತು. ಆದರೆ ಮಳೆ ಬಾರದೆ ಕಾಫಿ ಹಾಳಾಯಿತು. ಬಳಿಕ ಜುಲೈ ತಿಂಗಳಲ್ಲಿ ಬಂದ ಮಳೆಯನ್ನು ನಂಬಿ ಭತ್ತ, ಮೆಕ್ಕೆಜೋಳ ಬಿತ್ತನೆ ಮಾಡಿದೆವು. ನಂತರ ಆಗಸ್ಟ್ ತಿಂಗಳಲ್ಲಿ ಮಳೆ ಕೊರತೆಯಿಂದ ಈ ಬೆಳೆಗಳಲ್ಲಿಯೂ ನಷ್ಟ ಅನುಭವಿಸಬೇಕಾಯಿತು. ಈಗ ಕೊಡಗು ಜಿಲ್ಲೆಯಲ್ಲಿ ಬೇಸಿಗೆಯ ಸಮಯದಲ್ಲಿ ಇರುವ ಹವಾಗುಣವಿದೆ. ಜಿಲ್ಲೆಯಲ್ಲಿ ಈ ಅವಧಿಯಲ್ಲಿ ಮಳೆಗೆ ಕೊಡೆ ಹಿಡಿದು ಓಡಾಡುತ್ತಿದ್ದ ಜನರೀಗ ಬಿಸಿಲಿನ ತಾಪ ತಾಳಲಾರದೆ ಕೊಡೆಗಳ ಮೊರೆ ಹೋಗಿದ್ದಾರೆ. ಈಗಾಗಲೇ ಜಿಲ್ಲೆಯ ಕೆಲವು ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಇನ್ನು ಮಾರ್ಚಿ, ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಪರಿಸ್ಥಿತಿ ಹೇಗಿರಲಿದೆಯೋ ಎನ್ನುವುದನ್ನು ನೆನಪಿಸಿಕೊಳ್ಳುವುದಕ್ಕೂ ಆತಂಕವಾಗುತ್ತದೆ ಎಂದಿದ್ದಾರೆ. ಬೇಸಿಗೆಯಲ್ಲಿ ಪರಿಸ್ಥಿತಿ ನಿಭಾಯಿಸಲು ಅಧಿಕಾರಿಗಳು ಈಗಲೇ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ ಎಂದಿದ್ದಾರೆ.