Asianet Suvarna News Asianet Suvarna News

ಕಾಂಗ್ರೆಸ್ ಸೇರ್ಪಡೆಗೆ ವೇದಿಕೆ ಸಿದ್ಧ: ಮೈತ್ರಿ ಬೆನ್ನಲ್ಲೇ ಬಿಜೆಪಿಗೆ ಶಾಕ್ ನೀಡಿದ ಜೆಡಿಎಸ್..!

ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಈಗಾಗಲೇ ಬಿಜೆಪಿಯ ಪ್ರತಾಪ್ ಸಿಂಹ ಅವರು ಸಂಸದರಾಗಿದ್ದು ಕ್ಷೇತ್ರದಲ್ಲಿ ಮತ್ತೆ ಗೆಲುವು ಪಡೆಯಲೇಬೇಕೆಂಬ ಹುಮ್ಮಸ್ಸಿನಲ್ಲಿ ಬಿಜೆಪಿ ಇದೆ. ಬಿಜೆಪಿಯ ಈ ಹುಮ್ಮಸ್ಸಿಗೆ ಜೆಡಿಎಸ್ ಸಂಪೂರ್ಣ ಸಹಕರಿಸುತ್ತದೆ. ಇದರಿಂದ ನಮ್ಮ ಗೆಲುವು ಮತ್ತಷ್ಟು ಸುಲಭವಾಗಲಿದೆ ಎಂದು ಬಿಜೆಪಿ ಎಣಿಸಿತ್ತು. ಆದರೆ ಜೆಡಿಎಸ್‌ನ ಬಹುತೇಕ ನಾಯಕರು ಪಕ್ಷ ಬಿಟ್ಟು ಕಾಂಗ್ರೆಸ್ ಸೇರಲು ಮುಂದಾಗಿರುವುದು ಬಿಜೆಪಿಗೆ ಶಾಕ್ ನೀಡಿದಂತೆ ಆಗಿದೆ. 

Kodagu JDS Leaders will be Join Congress After Alliance in Karnataka grg
Author
First Published Oct 5, 2023, 9:58 PM IST

ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು(ಅ.05):  ಲೋಕಸಭಾ ಚುನಾವಣೆಗೆ ಇನ್ನೇನು ದಿನಗಣನೆ ಆರಂಭವಾಗಿದೆ. ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ಕಟ್ಟಿಹಾಕಬೇಕು ಎನ್ನುವ ದೃಷ್ಟಿಯಿಂದ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿವೆ. ಆದರೆ ಈ ಮೈತ್ರಿಯೇ ಕೊಡಗು ಜಿಲ್ಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ಗೆ ಶಾಕ್ ನೀಡಿದೆ. 

ಹೌದು ಭಾರತೀಯ ಜನತಾ ಪಾರ್ಟಿ ಮತ್ತು ಜಾತ್ಯಾತೀತ ಜನತಾ ದಳ ಪಕ್ಷಗಳು ಮೈತ್ರಿ ಮಾಡಿಕೊಳ್ಳುತ್ತಿದ್ದಂತೆ ಕೊಡಗು ಜೆಡಿಎಸ್ ಪಕ್ಷದ ಬಹುತೇಕ ಜಿಲ್ಲಾ ನಾಯಕರು ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಅದಕ್ಕಾಗಿ ಈಗಾಗಲೇ ಪ್ರತ್ಯೇಕ ಸಭೆ ನಡೆಸಿರುವ ಜೆಡಿಎಸ್ ನಾಯಕರು ಸಾಮೂಹಿಕ ರಾಜೀನಾಮೆ ಸಲ್ಲಿಸಿ ಕಾಂಗ್ರೆಸ್ ಸೇರಲು ವೇದಿಕೆಯೂ ಸಜ್ಜಾಗಿದೆ. 

ಬಿಜೆಪಿ ಜೆಡಿಎಸ್‌ ಮೈತ್ರಿಗೆ ಎಸ್‌.ಟಿ. ಸೋಮಶೇಖರ್‌ ವಿರೋಧ: ಕಮಲ ಪಾಳಯದಲ್ಲಿ ಇರಿಸು ಮುರಿಸು..!

ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಈಗಾಗಲೇ ಬಿಜೆಪಿಯ ಪ್ರತಾಪ್ ಸಿಂಹ ಅವರು ಸಂಸದರಾಗಿದ್ದು ಕ್ಷೇತ್ರದಲ್ಲಿ ಮತ್ತೆ ಗೆಲುವು ಪಡೆಯಲೇಬೇಕೆಂಬ ಹುಮ್ಮಸ್ಸಿನಲ್ಲಿ ಬಿಜೆಪಿ ಇದೆ. ಬಿಜೆಪಿಯ ಈ ಹುಮ್ಮಸ್ಸಿಗೆ ಜೆಡಿಎಸ್ ಸಂಪೂರ್ಣ ಸಹಕರಿಸುತ್ತದೆ. ಇದರಿಂದ ನಮ್ಮ ಗೆಲುವು ಮತ್ತಷ್ಟು ಸುಲಭವಾಗಲಿದೆ ಎಂದು ಬಿಜೆಪಿ ಎಣಿಸಿತ್ತು. ಆದರೆ ಜೆಡಿಎಸ್‌ನ ಬಹುತೇಕ ನಾಯಕರು ಪಕ್ಷ ಬಿಟ್ಟು ಕಾಂಗ್ರೆಸ್ ಸೇರಲು ಮುಂದಾಗಿರುವುದು ಬಿಜೆಪಿಗೆ ಶಾಕ್ ನೀಡಿದಂತೆ ಆಗಿದೆ. 

ಜೆಡಿಎಸ್ ಕೊಡಗು ಜಿಲ್ಲಾಧ್ಯಕ್ಷರಾಗಿದ್ದ ಕೆ.ಎಂ ಗಣೇಶ್, ಅಲ್ಪಸಂಖ್ಯಾತರ ಜಿಲ್ಲಾ ಘಟಕದ ಅಧ್ಯಕ್ಷ ಇಸಾಕ್ ಖಾನ್, ಎಸ್ಸಿ ಎಸ್ಟಿ ಘಟಕದ ಅಧ್ಯಕ್ಷ ಮೋಹನ್ ಮೌರ್ಯ ಸೇರಿದಂತೆ ಹಲವರು ಈಗಾಗಲೇ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇವರು ಕಾಂಗ್ರೆಸ್ ಸೇರ್ಪಡೆಯಾಗಿರುವುದು ಖಚಿತವಾಗುತ್ತಿದ್ದಂತೆ ಉಳಿದ ಬಹುತೇಕ ನಾಯಕರು ಜೆಡಿಎಸ್‌ಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ. ಇದು ಜೆಡಿಎಸ್‌ನಿಂದ ನಮ್ಮ ಶಕ್ತಿ ಒಂದಷ್ಟು ವೃದ್ಧಿಸಲಿದೆ ಎಂದುಕೊಂಡಿದ್ದ ಬಿಜೆಪಿಗೆ ಶಾಕ್ ನೀಡಿದೆ. 

ಈ ಕುರಿತು ಪ್ರತಿಕ್ರಿಯಿಸಿರುವ ಕೆ.ಎಂ ಗಣೇಶ್ ನಾವೆಲ್ಲರೂ ಜಾತ್ಯಾತೀತ ಸಿದ್ಧಾಂತದೊಂದಿಗೆ ಕೆಲಸ ಮಾಡುತ್ತಿರುವವರು. ಈಗ ಕುಮಾರಣ್ಣ ಅವರು ಇದ್ದಕ್ಕಿದ್ದಂತೆ ಬಿಜೆಪಿ ಜೊತೆಗೆ ಕೈಜೋಡಿಸಿದರೆ ನಾವೆಲ್ಲರೂ ಅದನ್ನು ಸಹಿಸಿಕೊಳ್ಳುವುದು ಹೇಗೆ. ಅದು ನಮ್ಮ ಮನಸ್ಸಿಗೆ ಹೊಂದಿಕೊಳ್ಳುವುದಿಲ್ಲ. ಹೀಗಾಗಿ ನಾವೆಲ್ಲರೂ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇವೆ. ಅಕ್ಟೋಬರ್ 28 ರಿಂದ ನವೆಂಬರ್ 1 ರ ಒಳಗಾಗಿ ಮಡಿಕೇರಿಯಲ್ಲಿ ಬೃಹತ್ ಸಮಾವೇಶ ಮಾಡಿ ಕೆಪಿಸಿಸಿ ಅಧ್ಯಕ್ಷರಾಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಎರಡು ಸಾವಿರ ಕಾರ್ಯಕರ್ತರೊಂದಿಗೆ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದೇವೆ. ಕಾಂಗ್ರೆಸ್‌ ಜಿಲ್ಲಾ ನಾಯಕರೊಂದಿಗೆ ಸೇರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಕೆಲಸ ಮಾಡಲಿದ್ದೇವೆ ಎಂದಿದ್ದಾರೆ. 

ಜೆಡಿಎಸ್ ಸೇರಲು ಕುಮಾರಸ್ವಾಮಿ ಮನೆಗೆ ನಾ ಹೋಗಿಲ್ಲ, ಅವರೇ ನಮ್ಮ ಮನೆಗೆ ಬಂದಿದ್ದರು: ಸಿಎಂ ಇಬ್ರಾಹಿಂ

ಜನತಾ ದಳದ ನಾಯಕರು ಕಾಂಗ್ರೆಸ್ ಸೇರುತ್ತಿರುವುದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಕೊಡಗು ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುತ್ತಿರುವವರು ಯಾರೂ ಮೂಲ ಜೆಡಿಎಸ್ ನವರಲ್ಲ. ಅಧಿಕಾರದ ಆಸೆಗೆ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಗೆ ಬಂದವರು ಕಾಂಗ್ರೆಸ್‌ಗೆ ಮತ್ತೆ ವಾಪಸ್ ಹೋಗುತ್ತಿದ್ದಾರೆ. ಮೂಲ ಜೆಡಿಎಸ್‌ನವರೆಲ್ಲಾ ಜೆಡಿಎಸ್‌ನಲ್ಲೇ ಇದ್ದು ಅವರೆಲ್ಲರೂ ಲೋಕಸಭಾ ಚುನಾವಣೆಯಲ್ಲಿ ನಮ್ಮೊಂದಿಗೆ ಕೆಲಸ ಮಾಡಲಿದ್ದಾರೆ ಎಂದಿದ್ದಾರೆ.

ಕಳೆದ ಚುನಾವಣೆಯಲ್ಲಿ ಕೊಡಗಿನಲ್ಲಿ 85 ಸಾವಿರಕ್ಕೂ ಹೆಚ್ಚು ಮತಗಳ ಲೀಡ್ ಕೊಟ್ಟಿದ್ದೆವು. ಈ ಬಾರಿ ಅದಕ್ಕಿಂತಲೂ ಹೆಚ್ಚಿನ ಲೀಡ್ ತಂದು ಅಭ್ಯರ್ಥಿಯನ್ನು ಗೆಲ್ಲಿಸಲಿದ್ದೇವೆ ಎಂದಿದ್ದಾರೆ. ಏನೇ ಆಗಲಿ ರಾಜ್ಯದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಅನ್ನು ಕಟ್ಟಿ ಹಾಕಲೆಂದು ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಳ್ಳುತ್ತಿದ್ದಂತೆ ಜೆಡಿಎಸ್ ನ ಬಹುತೇಕ ನಾಯಕರು ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದು ಬಿಜೆಪಿಗೆ ಶಾಕ್ ನೀಡಿದೆ.

Follow Us:
Download App:
  • android
  • ios