ಕಾವೇರಿ ವನ್ಯಜೀವಿ ವಿಭಾಗದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮೃತಪಟ್ಟ ಘಟನೆಯ ತನಿಖೆ ಆರಂಭವಾಗಿದೆ. ಇದು ನಕಲಿ ಎನ್‌ಕೌಂಟರ್‌ ಅಲ್ಲವೆಂದು ಸಾಬೀತುಪಡಿಸಲು, ಅರಣ್ಯ ಇಲಾಖೆಯು ಬೇಟೆಗಾರರಿಂದ ವಶಪಡಿಸಿಕೊಂಡ ಸುಮಾರು 30 ಕೆ.ಜಿ. ವನ್ಯಪ್ರಾಣಿ ಮಾಂಸವನ್ನು ತನಿಖಾಧಿಕಾರಿಗಳ ಮುಂದೆ ಸಾಕ್ಷಿಯಾಗಿ ಇರಿಸಿದೆ. ಈ ಘಟನೆಯಿಂದ ಉದ್ರಿಕ್ತರಾದ ಜನರು ಅರಣ್ಯ ಇಲಾಖೆಯ ಆಸ್ತಿಪಾಸ್ತಿಗಳನ್ನು ಧ್ವಂಸಗೊಳಿಸಿದ್ದಾರೆ.

ಚಾಮರಾಜನಗರ: ಕಾವೇರಿ ವನ್ಯಜೀವಿ ವಿಭಾಗದ ಹನೂರು ವಲಯದ ಕಾಡಿನಲ್ಲಿ ಆ.15ರಂದು ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮೃತಪಟ್ಟ ಘಟನೆಯ ಸಂಬಂಧ ಉಪವಿಭಾಗಧಿಕಾರಿ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ. ತನಿಖೆಗೆ ಬಂಧ ಅಧಿಕಾರಿಯ ಮುಂದೆ ಅರಣ್ಯ ಇಲಾಖೆಯು ಬೇಟೆಗಾರರಿಂದ ವಶಕ್ಕೆ ಪಡೆದ ಮಾಂಸ, ಬಂದೂಕು ಸೇರಿದಂತೆ ಇನ್ನಿತರ ವಸ್ತುಗಳನ್ನು ಹಾಜರು ಪಡಿಸಿದ್ದಾರೆ. ಈ ಮೂಲಕ ಇದು ನಕಲಿ ಎನ್‌ಕೌಂಟರ್‌ ಅಲ್ಲ ಎಂದು ಸಾಬೀತಿಗೆ ಇಲಾಖೆ ಯತ್ನಿಸಿದೆ.

ಕೊಳ್ಳೇಗಾಲದ ಉಪವಿಭಾಗಧಿಕಾರಿ ದಿನೇಶ್‌ ಕುಮಾರ್‌ ಮೀನಾ ಅವರಿಗೆ ಜಿಲ್ಲಾಧಿಕಾರಿ ತನಿಖೆ ನಡೆಸಿ ವರದಿ ನೀಡಲು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರ ಎನ್‌ಕೌಂಟರ್‌ ನಡೆದ ಕಾವೇರಿ ವನ್ಯಜೀವಿ ವಿಭಾಗದ ಶಾಗ್ಯ ಅರಣ್ಯ ಪ್ರದೇಶ, ಹನೂರಿನ ಅರಣ್ಯ ಕಚೇರಿ, ಕಳ್ಳಬೇಟೆ ನಿಗಾ ಶಿಬಿರಗಳಿಗೆ ದಿನೇಶ್‌ ಭೇಟಿ ನೀಡಿದ್ದರು ಎಂದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎನ್‌ಕೌಂಟರ್‌ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖಾ ಸಿಬ್ಬಂದಿ ವಶಕ್ಕೆ ಪಡೆದಿರುವ 2 ಚೀಲದಲ್ಲಿನ ಸುಮಾರು 20 ರಿಂದ 30 ಕೆ.ಜಿ. ವನ್ಯಪ್ರಾಣಿ ಮಾಂಸವನ್ನು ದಿನೇಶ್‌ ಅವರ ಮುಂದೆ ಹಾಜರು ಪಡಿಸಿದ್ದಾರೆ. ಅಲ್ಲದೆ 4 ಜೊತೆ ಪ್ಯಾರಾಗನ್ ಚಪ್ಪಲಿ, 2 ಲೀಟರ್ ಮೆರಿಂಡಾ ಬಾಟಲಿನಲ್ಲಿ ಕಾಲು ಲೀಟರ್ ನೀರು, ಪರಿಕರಗಳನ್ನು ಹಾಜರು ಪಡಿಸಿದ್ದೇವೆ. ವಶಪಡಿಸಿಕೊಂಡ ಮಾಂಸದ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.

ಅಪಾರ ನಷ್ಟ:

ಈ ನಡುವೆ ಇದು ನಕಲಿ ಎನ್‌ಕೌಂಟರ್‌ ಎಂದು ಆರೋಪಿಸಿದ ಉದ್ರಿಕ್ತ ಜನರು 7 ಕಳ್ಳಬೇಟೆ ತಡೆ ಶಿಬಿರಗಳು ಮತ್ತು 9 ವಸತಿ ಗೃಹಗಳಿಗೆ ಹಾನಿ ಮಾಡಿದ್ದಾರೆ. ಪೀಠೋಪಕರಣ, ಸಾಮಾನುಗಳನ್ನು ಧ್ವಂಸಗೊಳಿಸಿದ್ದಾರೆ. ಜೊತೆಗೆ 1 ಇಲಾಖಾ ನಾಲ್ಕು ಚಕ್ರದ ವಾಹನ ಮತ್ತು 4 ದ್ವಿಚಕ್ರ ವಾಹನಗಳನ್ನು ಜಖಂಗೊಳಿಸಿದ್ದಾರೆ. ಇದರಿಂದ ಸರ್ಕಾರ ಮತ್ತು ಅರಣ್ಯ ಇಲಾಖೆಗೆ ಅಪಾರ ನಷ್ಟವಾಗಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ. ತನಿಖೆ ಪೂರ್ಣಗೊಂಡ ಬಳಿಕ ಹೆಚ್ಚಿನ ವಿವರ ಬಹಿರಂಗಪಡಿಸಲಾಗುವುದು ಎಂದು ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

7 ದಿನದಲ್ಲಿ ವರದಿ ಸಲ್ಲಿಕೆ

ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿಗೆ ಮೂವರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಚಾಮರಾಜನಗರ ಜಿಲ್ಲಾಧಿಕಾರಿ ತನಿಖೆಗೆ ಆದೇಶಿಸಿದ್ದಾರೆ. ತನಿಖಾ ವರದಿಗೆ ಸಲ್ಲಿಕೆಗೆ 7 ದಿನ ಅವಕಾಶ ನೀಡಿದ್ದಾರೆ. ನಿಗದಿತ ಅವಧಿಯೊಳಗೆ ತನಿಖೆ ನಡೆಸಿ ವರದಿ ಸಲ್ಲಿಸಲಾಗುತ್ತದೆ.‌ ಈಗಾಗಲೇ ತನಿಖೆ ಆರಂಭವಾಗಿದೆ, ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದೇನೆ.‌ ಗುಂಡೇಟಿಗೆ ಬಲಿ ಆದವರ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಂಪೂರ್ಣ ತನಿಖಾ ವರದಿ ಸಲ್ಲಿಸಲಾಗುತ್ತದೆ ಎಂದು ಕೊಳ್ಳೇಗಾಲ ಉಪ ವಿಭಾಗಧಿಕಾರಿ ದಿನೇಶ್ ಕುಮಾರ್ ಮೀನಾ ಹೇಳಿದ್ದಾರೆ.

ತನಿಖಾ ಟೀಂಗೆ ಏನು ಹಸ್ತಾಂತರ?

- 2 ಚೀಲದಲ್ಲಿನ ಸುಮಾರು 20 ರಿಂದ 30 ಕೆ.ಜಿ. ವನ್ಯಪ್ರಾಣಿ ಮಾಂಸ

- ಬೇಟೆಗಾರರು ಬಳಸಿದ್ದಾರೆ ಎನ್ನಲಾದ ಗನ್‌, 4 ಪ್ಯಾರಾಗನ್ ಚಪ್ಪಲಿ

- 2 ಲೀಟರ್ ಮೆರಿಂಡಾ ಬಾಟಲಿನಲ್ಲಿ ಕಾಲು ಲೀಟರ್ ನೀರು, ಪರಿಕರ

- ವಶಪಡಿಸಿಕೊಂಡ ಮಾಂಸ ಶೀಘ್ರ ಪರೀಕ್ಷೆಗೆ ರವಾನೆಗೆ ನಿರ್ಧಾರ

- ಇದು ನಕಲಿ ಎನ್‌ಕೌಂಟರ್‌ ಅಲ್ಲ ಎಂದು ಸಾಬೀತಿಗೆ ಇಲಾಖೆ ಯತ್ನ

ಅರಣ್ಯ ಇಲಾಖೆ ಜೀಪ್‌ ಧ್ವಂಸಕ್ಕೆ ಯತ್ನಿಸಿದವರ ಮೇಲೆ ಕೇಸ್‌

ಹನೂರು (ಚಾಮರಾಜನಗರ): ಕಾವೇರಿ ವನ್ಯಜೀವಿಧಾಮದಲ್ಲಿ ನಡೆದ ಗುಂಡಿನ ದಾಳಿಯ ಬಳಿಕ ಪ್ರತಿಭಟನೆ ವೇಳೆ ಅರಣ್ಯ ಇಲಾಖೆ ಜೀಪನ್ನು ಧ್ವಂಸ ಮಾಡಲು ಯತ್ನಿಸಿ ಕೊಲೆ ಬೆದರಿಕೆ ಹಾಕಿದ ಐವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಾಲೂಕಿನ ಕುರಟ್ಟಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್.ಪಿ.ಎಸ್ ಕ್ಯಾಂಪ್ ನಿವಾಸಿಗಳಾದ ವೆಂಕಟೇಶ್, ಚಿನ್ನಿ ಪ್ರಕಾಶ್, ಪಚ್ಚಿಮುತ್ತು, ಮಾಳಶೆಟ್ಟಿ ಮತ್ತು ಮತ್ತೊಬ್ಬ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಅರಣ್ಯ ಇಲಾಖೆ ಜೀಪ್‌ ಚಾಲಕ ಅರುಣ್ ಕುಮಾರ್ ಅವರು ರಾಮಪುರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಆ.15ರ ರಾತ್ರಿ ಅರಣ್ಯ ಸಿಬ್ಬಂದಿ ಗಸ್ತು ನಡೆಸುವಾಗ ನಾಲ್ವರು ಎರಡು ಬೈಕ್‌ಗಳಲ್ಲಿ ಬಂದು ಜೀಪ್‌ಗೆ ಅಡ್ಡ ನಿಲ್ಲಿಸಿ ಜೀಪ್ ಮೇಲೆ ಕಲ್ಲು ಎಸೆದಿದ್ದಾರೆ. ನೀವು ಈ ಕಡೆ ಬಂದರೆ ನಿಮ್ಮನ್ನು ಜೀಪ್ ಸಮೇತ ಸುಟ್ಟು ಹಾಕುತ್ತೇವೆ ಎಂದು ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಹನೂರಿನಲ್ಲಿ ನಡೆದಿದ್ದು 3 ತಮಿಳಿರ ಹತ್ಯೆ: ತ.ನಾಡು ವಿಪಕ್ಷಗಳ ಆಕ್ರೋಶ

ಚೆನ್ನೈ: ಚಾಮರಾಜನಗರದ ಹನೂರಿನಲ್ಲಿ ಅರಣ್ಯಾಧಿಕಾರಿಗಳ ಗುಂಡಿಗೆ 3 ಮಂದಿ ಬಲಿಯಾದ ಪ್ರಕರಣಕ್ಕೆ ತಮಿಳುನಾಡಿನ ರಾಜಕೀಯ ಪಕ್ಷಗಳು ಭಾಷೆ ಮತ್ತು ಪ್ರಾದೇಶಿಕ ಬಣ್ಣ ಕಟ್ಟಿ ಹೊಸ ಕಲಹಕ್ಕೆ ನಾಂದಿ ಹಾಡುವ ಯತ್ನ ಮಾಡಿವೆ. ಈ ಮೂಲಕ ಕರ್ನಾಟಕದ ಜೊತೆಗೆ ಕಾವೇರಿ, ಮೇಕೆದಾಟು ಬಳಿಕ ಮತ್ತೊಂದು ಸಂಘರ್ಷಕ್ಕೆ ಮುಂದಾಗಿವೆ.

ಭಾಷೆ ಬಣ್ಣ: ಅರಣ್ಯ ಸಿಬ್ಬಂದಿಯ ಗುಂಡೇಟಿಗೆ ಬಲಿಯಾದ ಮೂವರನ್ನು ತಮಿಳರು ಎಂದು ಗುರುತಿಸಿರುವ ತಮಿಳುನಾಡಿನ ವಿಪಕ್ಷಗಳಾದ ಡಿಎಂಕೆ ಮತ್ತು ಪಿಎಂಕೆ, ಈ ಕುರಿತು ಪಾರದರ್ಶಕ ತನಿಖೆ ನಡೆಸಬೇಕೆಂದು ಕರ್ನಾಟಕ ಸರ್ಕಾರವನ್ನು ಆಗ್ರಹಿಸಿವೆ.

ಈ ಕುರಿತು ಭಾನುವಾರ ಹೇಳಿಕೆ ಬಿಡುಗಡೆ ಮಾಡಿರುವ ತಮಿಳುನಾಡಿನ ಮಾಜಿ ಸಿಎಂ ಮತ್ತು ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌, ‘ಮೂವರು ತಮಿಳರ ಹತ್ಯೆ ಘಟನೆ ಕ್ರೂರ ಮತ್ತು ಆಘಾತಕಾರಿ. ಇದರ ಬಗ್ಗೆ ನಿಷ್ಪಕ್ಷಪಾತ ನ್ಯಾಯಾಂಗ ತನಿಖೆ ಆಗಬೇಕು ಹಾಗೂ ಗುಂಡು ಹಾರಿಸಿದ ಅರಣ್ಯಾಧಿಕಾರಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು. ಅಂತೆಯೇ, ಮೃತರ ಕುಟುಂಬಗಳಿಗೆ ತಮಿಳುನಾಡು ಸರ್ಕಾರ ಸೂಕ್ತ ಪರಿಹಾರ ಹಾಗೂ ಉದ್ಯೋಗ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

ಅತ್ತ ಸಿಬಿಐ ತನಿಖೆಗೆ ಆಗ್ರಹಿಸಿರುವ ಪಿಎಂಕೆ ಅಧ್ಯಕ್ಷ ಅನ್ಬುಮಣಿ ರಾಮದಾಸ್‌, ಆ ಮೂವರು ಬೇಟೆಗಾರರು ಎಂಬುದು ಸುಳ್ಳು ಎಂದಿದ್ದಾರೆ. ಜತೆಗೆ, ಸಿಎಂ ವಿಜಯ್‌ ಮಧ್ಯಪ್ರವೇಶಿಸಬೇಕು ಹಾಗೂ ಸಂತ್ರಸ್ತರ ಕುಟುಂಬಗಳಿಗೆ ಕರ್ನಾಟಕ ಸರ್ಕಾರದ ಕಡೆಯಿಂದ 1 ಕೋಟಿ ರು. ಪರಿಹಾರ ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ.