ಉಡುಪಿ ಜಿಲ್ಲೆಯಲ್ಲಿ ಡೆಂಗ್ಯೂ ಆತಂಕ, ಶಾಲೆಗಳಿಗೆ ರಜೆ ಘೋಷಣೆ
* ಉಡುಪಿ ಜಿಲ್ಲೆಯಲ್ಲಿ ಡೆಂಗ್ಯೂ ಆತಂಕ
* ಮಳೆಗಾಲ ಆರಂಭವಾಗುತ್ತಿದ್ದಂತೆ ಡೆಂಗ್ಯೂ ಭೀತಿ
* ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ಘೋಷಣೆ
ವರದಿ- ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ, (ಮೇ.19): ಕರಾವಳಿ ಜಿಲ್ಲೆ ಉಡುಪಿಯಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆ ಡೆಂಗ್ಯೂ (Dengue) ಭೀತಿ ಹೆಚ್ಚುತ್ತಿದೆ . ಕುಂದಾಪುರ, ಬೈಂದೂರು ತಾಲೂಕಿನ ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಡೆಂಗ್ಯೂ ಪ್ರಕರಣಗಳು ಪತ್ತೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ.
ಡೆಂಗ್ಯೂ ಪ್ರಕರಣ ಹೆಚ್ಚುತ್ತಿರುವ ಗ್ರಾಮಗಳಲ್ಲಿ ಹತ್ತು ದಿನಗಳ ಕಾಲ ಶಾಲೆಗೆ ರಜೆ (Schools Holiday) ಘೋಷಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಜಡ್ಕಲ್ ಮದ್ದೂರು ಭಾಗದ ಶಾಲೆಗಳಿಗೆ ರಜೆ ಆದೇಶ ಜಾರಿಯಾಗಲಿದೆ.
ಉಡುಪಿ ಜಿಲ್ಲೆಯ ಅತ್ಯಂತ ಹಿಂದುಳಿದ ಕ್ಷೇತ್ರವಾಗಿರುವ ಬೈಂದೂರು ಕ್ಷೇತ್ರದಲ್ಲಿ ಡೆಂಗ್ಯೂ ರೋಗ ಮಿತಿಮೀರಿದೆ. ಬೈಂದೂರು ತಾಲೂಕಿನ ಜಡ್ಕಲ್ ಗ್ರಾ.ಪಂ. ವ್ಯಾಪ್ತಿಯ ಮುದೂರು, ಉದಯನಗರ, ಬೀಸಿನಪಾರೆ, ಕಾನ್ಕಿ ಮುಂತಾದೆಡೆ ಡೆಂಗ್ಯೂ ಕಾಣಿಸಿಕೊಂಡಿದೆ. ಇದೇ ಭಾಗದಲ್ಲಿ ಜನವರಿಯಿಂದ ಈವರೆಗೆ 100 ಕ್ಕೂ ಮಿಕ್ಕಿ ಡೆಂಗ್ಯೂ ಜ್ವರ ಪೀಡಿತ ರೋಗಿಗಳ ಪತ್ತೆಯಾಗುವ ಮೂಲಕ ಆತಂಕ ಹೆಚ್ಚಿದೆ.
Udupi Rain ಆರೆಂಜ್ ಅಲರ್ಟ್, ವ್ಯಾಪಕ ಮಳೆಹಾನಿ
ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಬರುವ ಈ ಪ್ರದೇಶ ಬಹುತೇಕ ಕಾಡು ಗುಡ್ಡ ಬೆಟ್ಟಗಳಿಂದಲೇ ಕೂಡಿದೆ.ಕಾಡು ಉತ್ಪತ್ತಿ, ಕೃಷಿ, ಅಡಿಕೆ, ರಬ್ಬರ್, ಬಾಳೆ, ಗೇರು ಕೃಷಿಯನ್ನೆ ನಂಬಿಕೊಂಡಿರುವ ಈ ಭಾಗದ ಜನತೆ ಸದ್ಯ ಡೆಂಗ್ಯೂವಿನಿಂದ ಕಂಗಾಲಾಗಿದೆ. ಅದರಲ್ಲೂ ರಬ್ಬರ್ ಪ್ಲಾಂಟೇಶನ್ ನಡೆಯುವ ಪ್ರದೇಶಗಳಲ್ಲಿ ಡೆಂಗ್ಯೂ ಪ್ರಕರಣ ಅತಿಹೆಚ್ಚು ಪತ್ತೆಯಾಗಿದೆ . ಈ ಭಾಗದಲ್ಲಿ ನಿಂತ ನೀರು ಹೆಚ್ಚಿರುವ ಕಾರಣ ಸೊಳ್ಳೆಗಳು ಹೆಚ್ಚು ಉತ್ಪತ್ತಿಯಾಗುತ್ತಿದ್ದು ಡೆಂಗ್ಯೂ ಮಿತಿ ಮೀರಲು ಕಾರಣವಾಗಿದೆ .
ಕಳೆದ 2 ತಿಂಗಳಿಂದೀಚೆ ಜಡ್ಕಲ್ ಗ್ರಾ.ಪಂ. ವ್ಯಾಪ್ತಿಯಲ್ಲಿ ಏಕಾಏಕಿ ಡೆಂಗ್ಯೂ ರೋಗ ಪೀಡಿತರು ಹೆಚ್ಚುತ್ತಿದ್ದು, ಪಂಚಾಯತ್, ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತೆಯರು ಸೇರಿ ಡೆಂಗ್ಯೂ ನಿಯಂತ್ರಣಕ್ಕೆ ಹರಸಾಹಸಪಡುತ್ತಿದ್ದಾರೆ .ಕೊಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ನೇತೃತ್ವದಲ್ಲಿನ ತಂಡವು ಕಾರ್ಯಪ್ರವೃತ್ತಗೊಂಡಿದ್ದರೂ, ಕೂಡ ರೋಗ ಲಕ್ಷಣ ಉಲ್ಬಣಗೊಳ್ಳುತ್ತಿರುವುದು ಇಲಾಖೆಗೆ ಸವಾಲಾಗಿದೆ. ದಿನೇ-ದಿನೇ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದು ಗ್ರಾಮಸ್ಥರಲ್ಲಿ ಮತ್ತೆ ಆತಂಕ ಮೂಡಿಸಿದೆ.
ಸದ್ಯ ಜಡ್ಕಲ್ ಗ್ರಾ.ಪಂ., ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರು ಸಹಿತ ಗ್ರಾಮಸ್ಥರ ಸಹಕಾರದೊಡನೆ ಪ್ರತ್ಯೇಕ 9 ತಂಡ ರಚಿಸಿ ಡೆಂಗ್ಯೂ ಹೊಗಲಾಡಿಸುವ ಯತ್ನದಲ್ಲಿ ತೊಡಗಿದ್ದಾರೆ. ತಂಡವಾಗಿ ಗ್ರಾಮಗಳ ವಿವಿಧೆಡೆಗೆ ತೆರಳಿ ಅಲ್ಲಿನ ನಿವಾಸಿಗಳಿಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತಿದೆ. ಅದರಲ್ಲೂ ಡೆಂಗ್ಯೂ ರೋಗಲಕ್ಷಣ ಕಂಡುಬಂದವರ ರಕ್ತ ಸ್ಯಾಂಪಲ್ ಪಡೆದು ಲ್ಯಾಬೋರೇಟರಿಗಳಲ್ಲಿ ಪರೀಶೀಲನೆಗೆ ವ್ಯವಸ್ಥೆಗೊಳಿಸಲಾಗಿದೆ. ಡೆಂಗ್ಯೂ ರೋಗ ಲಕ್ಷಣ ಕಂಡುಬಂದವರನ್ನು ಕುಂದಾಪುರದ ತಾಲೂಕುಸರಕಾರಿ ಆಸ್ಪತ್ರೆಗಳಿಗೆ ಸಾಗಿಸಲು ಪ್ರತ್ಯೇಕ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ.
ಆದರೂ ಕೂಡ ಡೆಂಗ್ಯೂ ಮಿತಿ ಮೀರಿ ಹರಡುತ್ತಿರುವುದು ಸದ್ಯ ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.ಒಟ್ಟಾರೆಯಾಗಿ ಕಳೆದ ಕೆಲವು ತಿಂಗಳು ಗಳಿಂದ ಈ ಭಾಗದಲ್ಲಿ ಕರೋನಾ ಭಯ ಮರೆಯಾಗಿ ಡೆಂಗ್ಯೂ ಭಯ ಆವರಿಸಿದೆ. ಕರೋನಾ ಕರಿ ನೆರಳಿನಿಂದ ನಿಟ್ಟುಸಿರು ಬಿಟ್ಟ ಜನ ಸದ್ಯ ಡೆಂಗ್ಯೂ ರೋಗದಿಂದ ಹೈರಾಣಾಗಿದ್ದಾರೆ.
ಪ್ರಕರಣಗಳ ವಿವರ
ಉಡುಪಿ ಜಿಲ್ಲೆ ಯಲ್ಲಿ 152 ಡೆಂಗ್ಯೂ ಪ್ರಕರಣ ಖಚಿತಗೊಂಡಿದೆ.ಈ ವರೆಗೆ 2000ಕ್ಕೂ ಅಧಿಕ ಶಂಕಿತ ಪ್ರಕರಣಗಳು ಪತ್ತೆಯಾಗಿದ್ದು ಪರೀಕ್ಷೆಗೆ ಒಳಪಡಿಸಲಾಗಿದೆ. ಮುದೂರು ಪರಿಸರದಲ್ಲಿ 105, ಜಡ್ಕಲ್ ನಲ್ಲಿ 6 ಪ್ರಕರಣಗಳು ಖಚಿತವಾಗಿದೆ.ವಕೊಲ್ಲೂರಿ ನಲ್ಲಿ 2 ಪ್ರಕರಣ ದಾಖಲಾಗಿದ.ಉಡುಪಿ ಜಿಲ್ಲೆಯ ಇತರೆಡೆಗಳಲ್ಲಿ 39 ಪ್ರಕರಗಳು ಪತ್ತೆಯಾಗಿದೆ.
ಕರಾವಳಿಯಲ್ಲಿ ರೆಡ್ ಅಲರ್ಟ್ ಘೋಷಣೆ
ಕರಾವಳಿ ಜಿಲ್ಲೆಗಳಲ್ಲಿ ಇನ್ನೂ ಮೂರು ದಿನ ಉತ್ತಮ ಮಳೆಯಾಗಲಿದ್ದು, ಗುರುವಾರ ಭಾರಿ ಮಳೆ ಸುರಿಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ರೆಡ್ ಅಲರ್ಟ್ ಘೋಷಿಸಿದ್ದರೆ, ಬಳಿಕ ಮೂರು ದಿನಗಳ ಕಾಲ ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಇರಲಿದೆ.