3 ಅಡಿ 4 ಇಂಚು ಎತ್ತರದ ಡಾ.ಗಣೇಶ್ ಬರಯ್ಯ, ದೈಹಿಕ ನ್ಯೂನತೆಯ ಕಾರಣಕ್ಕೆ ವೈದ್ಯಕೀಯ ಪ್ರವೇಶ ನಿರಾಕರಿಸಲ್ಪಟ್ಟರೂ ಛಲ ಬಿಡಲಿಲ್ಲ. ಸುಪ್ರೀಂಕೋರ್ಟ್ನಲ್ಲಿ ಕಾನೂನು ಹೋರಾಟ ಮಾಡಿ ಗೆದ್ದು, ಇಂದು ಜಗತ್ತಿನ ಅತಿ ಕುಬ್ಜ ಡಾಕ್ಟರ್ ಆಗಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಸಾಧಿಸುವ ಛಲವೊಂದು ಇದ್ದರೆ ಏನು ಬೇಕಾದರೂ ಮಾಡಬಹುದು. ಸಾಧಿಸದೇ ಎಲ್ಲವೂ ಪುಕ್ಕಟೆ ಸಿಗಲಿ ಎಂದು ನೋಡುವವರಿಗೆ ಕೋಟಿ ಕೊಟ್ಟರೂ ಮತ್ತೆ ಅವರು ಬೇಡುವುದು ನಿಲ್ಲುವುದಿಲ್ಲ. ಎಲ್ಲವೂ ಫ್ರೀ ಬೇಕೆಂದು ಆಸೆ ಪಡುತ್ತಾರೆ. ಕೈ ಕಾಲು ಗಟ್ಟಿ ಇದ್ದರೂ ಎಲ್ಲಿ ಏನು ಫ್ರೀ ಆಗಿ ಸಿಗುತ್ತದೆ ಎಂದು ಹುಡುಕಾಟ ನಡೆಸುವುದರಲ್ಲಿಯೇ ತಮ್ಮ ಆಯಸ್ಸನ್ನು ಕಳೆಯುತ್ತಾ, ಉಚಿತ ಕೊಡದವರಿಗೆ ಶಪಿಸುತ್ತಾ ಇರುತ್ತಾರೆ. ಆದರೆ ದೈಹಿಕ ನ್ಯೂನತೆಗಳ ನಡುವೆಯೂ, ಉಚಿತಗಳ ಆಮಿಷಗಳಿಗೆ ತಲೆಬಾಗದೇ, ಸ್ವಾಭಿಮಾನದ ಬಾಳನ್ನು ಬದುಕುವ ಜನರೂ ಹಲವರಿದ್ದಾರೆ. ಅಂಥವರಲ್ಲಿ ಒಬ್ಬರು ಗುಜರಾತಿನ 26 ವರ್ಷದ ಡಾ.ಗಣೇಶ್ ಬರಯ್ಯ.
3 ಅಡಿ 4 ಇಂಚು ಹೈಟ್ನಿಂದಾಗಿ ಇನ್ನಿಲ್ಲದ ಟೀಕೆ ಎದುರಿಸಿದವರು ಇವರು. ಇವರ ಹೈಟ್ ನೋಡಿ ಸರ್ಕಸ್ ಕಂಪೆನಿಯೊಂದು ಐದು ಲಕ್ಷ ರೂಪಾಯಿಗಳ ಆಫರ್ ನೀಡಿತ್ತು. ಇವರ ಅಪ್ಪನಿಗೆ ಆ ಹಣವನ್ನು ಕೊಟ್ಟು ಮಗನನ್ನು ಕಳಿಸುವಂತೆ ಹೇಳಿತ್ತು. ಆದರೆ ತಮ್ಮ ಮಗ ಏನೋ ಒಂದು ಸಾಧನೆ ಮಾಡಿಯೇ ತೀರುತ್ತಾನೆ ಎನ್ನುವ ಆತ್ಮವಿಶ್ವಾಸ ಆ ಅಪ್ಪನಲ್ಲಿ ಇತ್ತು. ಸಾಧನೆಯ ಹಾದಿಯಲ್ಲಿ ಬರೀ ಮುಳ್ಳುಗಳೇ ತುಂಬಿದ್ದರೂ, ಎಲ್ಲವನ್ನೂ ಮೆಟ್ಟಿನಿಂತು ಈಗ ಗಣೇಶ್ ಡಾ.ಗಣೇಶ್ ಆಗಿದ್ದಾರೆ. ಜಗತ್ತಿನ ಅತಿ ಕುಬ್ಜ ಡಾಕ್ಟರ್ ಎನ್ನುವ ಹೆಗ್ಗಳಿಕೆಯ ಜೊತೆಗೇನೇ ಎಲ್ಲವನ್ನೂ ನಿಭಾಯಿಸುವ ಚಾಕಚಕ್ಯತೆಯನ್ನು ಅವರು ಹೊಂದಿದ್ದಾರೆ.
ಬರೀ ಮುಳ್ಳುಗಳು
ಅಂದಹಾಗೆ, ಗಣೇಶ್ ಅವರಿಗೆ ಅವರ ಸಾಧನೆಯ ಹಾದಿಯಲ್ಲಿ ಬರೀ ಮುಳ್ಳುಗಳೇ ತುಂಬಿದ್ದವು. 2018 ರಲ್ಲಿ, ತಮ್ಮ ಅಂಗವೈಕಲ್ಯವನ್ನು ಮೆಟ್ಟಿ ನಿಂತು ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಆದರೆ ಅವರ ಆಸೆ ನೆರವೇರಲೇ ಇಲ್ಲ. ಅವರನ್ನು ಭಾರತೀಯ ವೈದ್ಯಕೀಯ ಮಂಡಳಿ (MCI) ತಿರಸ್ಕರಿಸಿತು - ಅವರ ದೈಹಿಕ ಅಂಗವೈಕಲ್ಯವನ್ನು ಅನರ್ಹಗೊಳಿಸುವ ಅಂಶವೆಂದು ಉಲ್ಲೇಖಿಸಲಾಯಿತು. ಆದರೆ ಗಣೇಶ್ ಧೈರ್ಯಗುಂದಲಿಲ್ಲ. ಆ ಕ್ಷಣದಲ್ಲಿ, ನಿರಾಶೆಗೊಂಡರೂ ಧೈರ್ಯಗೆಡದೆ, ಅವರು ತಮ್ಮ ಕಾಲೇಜು ಪ್ರಾಂಶುಪಾಲ ಡಾ. ದಲ್ಪತ್‌ಭಾಯ್ ಕಟಾರಿಯಾ ಅವರನ್ನು ಬೆಂಬಲಕ್ಕಾಗಿ ಸಂಪರ್ಕಿಸಿದರು ಮತ್ತು ಅವರ ಪ್ರವೇಶ ಹಕ್ಕುಗಳಿಗಾಗಿ ಕಾನೂನುಬದ್ಧವಾಗಿ ಹೋರಾಡಲು ನಿರ್ಧರಿಸಿದರು. ಸುಪ್ರೀಂಕೋರ್ಟ್ನಲ್ಲಿ ಇವರಿಗೆ ಜಯ ಸಿಕ್ಕಿತು.
ಎಲ್ಲರಿಗೂ ಮಾದರಿ
ಈಗ ಬರಯ್ಯ ತಮ್ಮ MBBS ಮತ್ತು ಇಂಟರ್ನ್‌ಶಿಪ್ ಅನ್ನು ಪೂರ್ಣಗೊಳಿಸಿದರು, ಮತ್ತು ನವೆಂಬರ್ 2025ರಲ್ಲಿ ಅವರು ವೈದ್ಯಕೀಯ ಅಧಿಕಾರಿಯಾಗಿ ತಮ್ಮ ಮೊದಲ ನಿಯೋಜನೆಯನ್ನು ಪ್ರಾರಂಭಿಸಿದರು. ಈಗ ರೋಗಿಗಳೊಂದಿಗೆ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ಗಣೇಶ್ ಬರಯ್ಯ ಸಾರ್ವಜನಿಕ ಆರೋಗ್ಯಕ್ಕೆ ಸೇವೆ ಸಲ್ಲಿಸುವುದು ಮಾತ್ರವಲ್ಲದೆ ತಮ್ಮ ಕುಟುಂಬದ ಜೀವನ ಪರಿಸ್ಥಿತಿಗಳನ್ನು ಸುಧಾರಿಸುವ ಗುರಿಯನ್ನು ಹೊಂದಿದ್ದಾರೆ. ಅವರು ತಮ್ಮ ವೈಯಕ್ತಿಕ ಮಹತ್ವಾಕಾಂಕ್ಷೆಯನ್ನು ಹಂಚಿಕೊಂಡಿದ್ದಾರೆ. ಇನ್ನೂ ಗುಡಿಸಿಲಿನಲ್ಲಿ ನಾವು ವಾಸವಾಗಿದ್ದೇವೆ. ಮೊದಲಿಗೆ ಮನೆಯನ್ನು ರಿಪೇರಿ ಮಾಡಬೇಕು. ಕುಟುಂಬಸ್ಥರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಗಣೇಶ್ ಅವರು, ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ. ಚಿಕ್ಕ ಪುಟ್ಟ ಸಮಸ್ಯೆ ಬಂದರೆ, ಆತ್ಮಹತ್ಯೆ ಮಾಡಿಕೊಳ್ಳುವವರು, ಮಾನಸಿಕ ಖಿನ್ನತೆಗೆ ಹೋಗುವವರು, ಮರು ಪರೀಕ್ಷೆ ಎಂದಾಕ್ಷಣ ಅದನ್ನೂ ಸಹಿಸಲು ಆಗದೇ ಸಾವಿನ ಬಾಯಿಗೆ ಹೋಗುವವರು... ಹೀಗೆ ಇಂಥ ಮನಸ್ಥಿತಿಯವರ ನಡುವೆ, ಎಷ್ಟೇ ಟೀಕೆ-ಟಿಪ್ಪಣೆ ಎದುರಿಸಿದರೂ, ಎಲ್ಲರೂ ತೆಗಳಿದರೂ, ಛಲ ಬಿಡದೇ ಡಾಕ್ಟರ್ ಆಗಿದ್ದಾರೆ ಗಣೇಶ್.


