90 Lakh Rupees offer Job Offer Reject ಕೆಲಸ ಮಾಡೋದು ಎಲ್ಲಿಯಾದರೇನು? ಒಳ್ಳೆಯ ಸಂಬಳ ಮುಖ್ಯ ಎಂದುಕೊಳ್ಳುವವರೂ ಇರುತ್ತಾರೆ. ಇನ್ನೊಂದು ಕಡೆ ಈ ನಿರುದ್ಯೋಗ ಇರುವ ಈ ಕಾಲದಲ್ಲಿ ಕೆಲಸ ಸಿಕ್ಕಿದರೆ ಸಾಕು ಎಂದುಕೊಳ್ಳುವವರೂ ಇರುತ್ತಾರೆ. ಈಗ ವ್ಯಕ್ತಿಯೋರ್ವ 90 ಲಕ್ಷದ ಆಫರ್ ರಿಜೆಕ್ಟ್ ಮಾಡಿದ್ದಾರೆ.
ಒಂದೊಳ್ಳೆ ಕಂಪೆನಿಯಿಂದ 90 ಲಕ್ಷ ರೂಪಾಯಿ ಆಫರ್ ಬಂದಿತ್ತು. ಆದರೂ ಕೂಡ ವ್ಯಕ್ತಿಯೋರ್ವ ಕೆಲಸ ಬೇಡ ಎಂದಿದ್ದಾರೆ. ಇದರಿಂದ HR ನೇಮಕಾತಿದಾರ ಮನೋಜ್ ಕುಮಾರ್‌ಗೆ ಸಿಗಬೇಕಿದ್ದ ಡೀಲ್ ತಪ್ಪಿ ಹೋಗಿದೆ.
ಆಫರ್ ರಿಜೆಕ್ಟ್ ಮಾಡಿದ ವ್ಯಕ್ತಿ ಹೇಳಿದ್ದೇನು?
ಆ ಕಂಪೆನಿಯ ಮ್ಯಾನೇಜರ್ ಅಡಿಯಲ್ಲಿ ಕೆಲಸ ಮಾಡಲು ಇಷ್ಟವಿಲ್ಲದ ಕಾರಣ ಆ ವ್ಯಕ್ತಿ ಆ ಆಫರ್ ರಿಜೆಕ್ಟ್ ಮಾಡಿದ್ದಾನೆ. “ಆಫರ್ ತುಂಬ ಚೆನ್ನಾಗಿದೆ. ನಾನು ಯಾರ ಕೈಕೆಳಗೆ ಕೆಲಸ ಮಾಡಬೇಕೋ ಅವರ ಜೊತೆ ಕೆಲಸ ಮಾಡಲು ಇಷ್ಟವಿಲ್ಲ, ಎಂಜಾಯ್ ಮಾಡಿಕೊಂಡು ಕೆಲಸ ಮಾಡಲು ಆಗೋದಿಲ್ಲ” ಎಂದು ಕಾರಣ ಹೇಳಿ ಆ ಆಫರ್ ರಿಜೆಕ್ಟ್ ಮಾಡಿದ್ದಾರಂತೆ.
ಲಿಂಕ್ಡ್‌ಇನ್‌ನಲ್ಲಿ ಎಚ್ ಆರ್ ಹೇಳಿದ್ದೇನು?
ಇದರ ಬಗ್ಗೆ ಲಿಂಕ್ಡ್‌ಇನ್‌ನಲ್ಲಿ ಬರೆದುಕೊಂಡಿರುವ ಮನೋಜ್ ಕುಮಾರ್, "ಕೇವಲ ಕಂಪನಿಗಳನ್ನು ನೋಡಿ ಜನರು ಕೆಲಸಕ್ಕೆ ಸೇರುವುದಿಲ್ಲ, ಅವರು ಒಳ್ಳೆಯ ಮ್ಯಾನೇಜರ್ ನೋಡಿ ಕೂಡ ಕೆಲಸಕ್ಕೆ ಸೇರುತ್ತಾರೆ. ಕಂಪೆನಿಯು ಉತ್ತಮ ಸಂಬಳ ಕೊಡಬಹುದು, ಆದರೆ ಒಳ್ಳೆಯ ಮ್ಯಾನೇಜರ್‌ನಿಂದ ಮಾತ್ರ ಅವರು ಆ ಕಂಪೆನಿಯಲ್ಲಿ ಉಳಿಯಬಹುದು” ಎಂದು ಹೇಳಿದ್ದಾರೆ.
ಜನರು ಹೇಳಿದ್ದೇನು?
ಅನೇಕರು ಈ ಪೋಸ್ಟ್ ನೋಡಿ ನೆಮ್ಮದಿ ಮುಖ್ಯ ಎಂದು ಹೇಳಿದ್ದಾರೆ. ಹಣಕ್ಕಿಂತ ಮನಸ್ಸಿನ ಶಾಂತಿ, ಆರೋಗ್ಯ ಮುಖ್ಯವಾಗಿದೆ. ದಬ್ಬಾಳಿಕೆ ಮಾಡುವ ಮ್ಯಾನೇಜರ್‌ಗಳಿದ್ದರೆ ಕಂಪನಿಗಳಿಗೆ ನಿಜಕ್ಕೂ ನಷ್ಟ ಆಗುವುದು ಎಂದಿದ್ದಾರೆ.
ಗೌರವ ಮತ್ತು ನಂಬಿಕೆ: ಇಂಟರ್ವ್ಯೂ ಮಾಡುವಾಗಲೇ ಮ್ಯಾನೇಜರ್ ಅಹಂಕಾರ ತೋರಿಸಿದರೆ ಅಥವಾ ಸಣ್ಣ ವಿಷಯದಲ್ಲೂ ಮೂಗು ತೂರಿಸುವ ಸ್ವಭಾವ ಹೊಂದಿದ್ದರೆ ಎಷ್ಟೇ ಸಂಬಳ ಕೊಟ್ಟರೂ ಕೂಡ, ಅಲ್ಲಿ ಕೆಲಸ ಮಾಡಲು ಒಪ್ಪೋದಿಲ್ಲ.
ಅದರಲ್ಲಿಯೂ ZenG ಪೀಳಿಗೆಯವರು ಮಾತ್ರ ಕೆಲಸ ಜಾಸ್ತಿ, ಒತ್ತಡ ಜಾಸ್ತಿ ಎಂದರೆ ಅಲ್ಲಿ ಇರೋದಿಲ್ಲ. ಸಂಬಳ ಕಡಿಮೆ ಆದರೂ ಓಕೆ, ಕೆಲಸ ಇಲ್ಲ ಅಂದ್ರೂ ಓಕೆ ಎಂದು ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ. ಕೈಯಲ್ಲಿ ಬೇರೆ ಆಪ್ಶನಲ್ ಕೆಲಸ ಇಲ್ಲದೆ, ಹಣವೂ ಇಲ್ಲದೆ ಕೆಲಸ ಬಿಟ್ಟು ಆಮೇಲೆ ಪರದಾಡಿದವರೂ ಕೂಡ ಇದ್ದಾರೆ.
ಕೆಲಸದ ಒತ್ತಡ, ಆಫೀಸ್ ರಾಜಕೀಯದಿಂದ ಸಾಕಷ್ಟು ಒಳ್ಳೆಯ ಉದ್ಯೋಗಿಗಳನ್ನು ಕೂಡ ಕಂಪೆನಿ ಕಳೆದುಕೊಳ್ತಿದೆ. ಇದು ಎಲ್ಲ ರಂಗದಲ್ಲಿಯೂ ಸಹಜ ಎನ್ನುವಂತಾಗಿದೆ.


