ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ (NIT) ಕೆಮಿಕಲ್ ಇಂಜಿನಿಯರಿಂಗ್ ಪದವೀಧರೆ ಮಾನ್ವಿ, ತಮ್ಮ ಪದವಿಗಿಂತ ಸಂವಹನ ಕಲೆ ಮತ್ತು ಹೊಸ ಕೌಶಲಗಳೇ ಉದ್ಯೋಗದಲ್ಲಿ ಯಶಸ್ಸು ನೀಡಿದವು ಎಂದು ಹೇಳಿದ್ದಾರೆ. ಪದವಿ ಕೇವಲ ಕೆಲಸಕ್ಕೆ ಪ್ರವೇಶ ಟಿಕೆಟ್ ಮಾತ್ರ ಎಂದಿದ್ದಾರೆ.

ನವದೆಹಲಿ (ಏ.17): ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ (NIT) ಕೆಮಿಕಲ್ ಇಂಜಿನಿಯರಿಂಗ್ ಪದವೀಧರೆ ಮಾನ್ವಿ ಎಂಬುವವರು ಹಂಚಿಕೊಂಡ ವಿಡಿಯೋವೊಂದು ಈಗ ವೈರಲ್ ಆಗಿದೆ. ನಾಲ್ಕು ವರ್ಷಗಳ ಕಷ್ಟದ ಓದು ಉದ್ಯೋಗದ ಅವಧಿಯಲ್ಲಿ ಎಷ್ಟು ಕಡಿಮೆ ಬಳಕೆಯಾಗುತ್ತಿದೆ ಎಂಬ ಕಹಿಸತ್ಯವನ್ನು ಅವರು ಬಿಚ್ಚಿಟ್ಟಿದ್ದಾರೆ. ಮಾನ್ವಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಳ್ಳುತ್ತಾ, "ನಾನು NIT ಯಿಂದ ಕೆಮಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದೇನೆ. ಆದರೆ ನನ್ನ ಕೆಲಸದಲ್ಲಿ ಆ ಪದವಿಯ ಕೇವಲ ಶೇ. 3ರಷ್ಟು ಅಂಶಗಳು ಮಾತ್ರ ಬಳಕೆಯಾಗುತ್ತಿವೆ. ಡಿಗ್ರಿ ಎನ್ನುವುದು ಕೆಲಸ ಸಿಗಲು ಬೇಕಾದ ಎಂಟ್ರಿ ಟಿಕೆಟ್ ಮಾತ್ರವೇ ಹೊರತು, ಇಡೀ ಪಯಣವಲ್ಲ," ಎಂದು ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಓದಿದ್ದಕ್ಕೂ ಮಾಡುವ ಕೆಲಸಕ್ಕೂ ಸಂಬಂಧವಿಲ್ಲ

ತಮ್ಮ ಸಹಪಾಠಿಗಳ ಪರಿಸ್ಥಿತಿಯ ಬಗ್ಗೆ ವಿವರಿಸಿದ ಅವರು, "ನನ್ನ ಬ್ಯಾಚ್‌ನ ಅರ್ಧಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ತಾವು ಓದಿದ ವಿಷಯಕ್ಕೆ ಸಂಬಂಧಿಸಿದ ಕೆಲಸ ಮಾಡುತ್ತಿಲ್ಲ. ಕಾಲೇಜಿನಲ್ಲಿ ನಾನು ಥರ್ಮೋಡೈನಾಮಿಕ್ಸ್, ಮೆಕ್ಯಾನಿಕ್ಸ್ ಮತ್ತು ಕೈನೆಟಿಕ್ಸ್‌ನಂತಹ ವಿಜ್ಞಾನದ ವಿಷಯಗಳನ್ನು ಓದಿದೆ. ಆದರೆ ಕೆಲಸದ ಸ್ಥಳದಲ್ಲಿ ನಾನು ಕೇವಲ ಎಕ್ಸೆಲ್ ಶೀಟ್ ನೋಡುವುದು, ಮೀಟಿಂಗ್‌ಗಳನ್ನು ಮಾಡುವುದು ಮತ್ತು ಇಂಟರ್ನೆಟ್ ಮೂಲಕ ವಿಷಯಗಳನ್ನು ತಿಳಿದುಕೊಳ್ಳುವುದರಲ್ಲಿಯೇ ನಿರತರಾಗಿದ್ದೇನೆ," ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಯಶಸ್ಸಿಗೆ ಬೇಕಾದ ನಿಜವಾದ ಕೌಶಲಗಳೇನು?

ಕೆಲಸದಲ್ಲಿ ಬೆಳೆಯಲು ಪದವಿಗಿಂತ ಹೆಚ್ಚಾಗಿ ಸಂವಹನ ಕಲೆ (Communication) ಮತ್ತು ಕೌಶಲದ ಅಪ್‌ಗ್ರೇಡ್ (Upskilling) ಸಹಾಯ ಮಾಡಿತು ಎಂದು ಮಾನ್ವಿ ಅಭಿಪ್ರಾಯಪಟ್ಟಿದ್ದಾರೆ. "ನನ್ನ ಡಿಗ್ರಿ ನನಗೆ ಕೇವಲ ಸಂದರ್ಶನದವರೆಗೆ ಹೋಗಲು ಸಹಾಯ ಮಾಡಿತು. ಅಲ್ಲಿಂದ ಮುಂದಿನ ಹಾದಿಯಲ್ಲಿ ನಾನು ಕಲಿತ ವೈಯಕ್ತಿಕ ಕೌಶಲಗಳೇ ನನ್ನನ್ನು ಕಾಪಾಡಿದವು," ಎಂದಿದ್ದಾರೆ.

ವಿದ್ಯಾರ್ಥಿಗಳಿಗೆ ಮಾನ್ವಿ ನೀಡಿದ ಕಿವಿಮಾತು

ಕಾಲೇಜಿನಲ್ಲಿ ಓದುತ್ತಿರುವಾಗಲೇ ಯಾವುದಾದರೂ ಒಂದು ಹೆಚ್ಚುವರಿ ಕೌಶಲ, ಟೂಲ್ ಅಥವಾ ಹವ್ಯಾಸವನ್ನು ಕಲಿತುಕೊಳ್ಳಿ. ಪದವಿಯ ಜೊತೆಗೆ ನಿಮಗೆ ಹಣ ಗಳಿಸಿಕೊಡುವಂತಹ ಯಾವುದಾದರೂ ಹೊಸ ವಿಷಯವನ್ನು ಕಲಿಯುವುದು ಇಂದಿನ ಕಾಲದಲ್ಲಿ ಅತಿ ಮುಖ್ಯ. ಡಿಗ್ರಿಯನ್ನು ನಿರ್ಲಕ್ಷಿಸಬೇಡಿ, ಆದರೆ ಡಿಗ್ರಿ ಒಂದೇ ಸಾಕು ಎಂದು ಕುಳಿತುಕೊಳ್ಳಬೇಡಿ ಎಂದಿದ್ದಾರೆ.

ಮಾನ್ವಿ ಅವರ ಈ ವಿಡಿಯೋಗೆ ನೆಟ್ಟಿಗರಿಂದ ಭಾರಿ ಬೆಂಬಲ ವ್ಯಕ್ತವಾಗಿದೆ. ಒಬ್ಬ ಯೂಸರ್‌ "ಇದು ನೂರಕ್ಕೆ ನೂರರಷ್ಟು ಸತ್ಯ, ನಾವೆಲ್ಲರೂ ಓದಿದ್ದಕ್ಕೂ ಮಾಡುತ್ತಿರುವ ಕೆಲಸಕ್ಕೂ ಸಂಬಂಧವೇ ಇಲ್ಲ," ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಸಿವಿಲ್ ಇಂಜಿನಿಯರ್, "ನಾನು ಇಂಜಿನಿಯರಿಂಗ್ ಮುಗಿಸಿ ಈಗ ಬ್ಯಾಂಕರ್ ಆಗಿ ಕೆಲಸ ಮಾಡುತ್ತಿದ್ದೇನೆ," ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಇನ್ನೊಬ್ಬ ಯೂಸರ್‌, "ಡಿಗ್ರಿ ಎನ್ನುವುದು ಕೇವಲ ಒಂದು ಐಡಿ ಕಾರ್ಡ್ ಅಷ್ಟೇ," ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.

View post on Instagram