ಇತ್ತೀಚೆಗೆ "ಹೇರ್ ವಿಸ್ಪರರ್" ಎಂಬ ವಿಚಿತ್ರ ಉದ್ಯೋಗವೊಂದು ಟ್ರೆಂಡ್ ಆಗುತ್ತಿದ್ದು, ಇದರಲ್ಲಿ ವ್ಯಕ್ತಿಯೊಬ್ಬರು ಜನರ ಕೂದಲಿನೊಂದಿಗೆ ಮಾತನಾಡಿ, ಕೂದಲು ಉದುರುವಿಕೆ ಮತ್ತು ಇತರ ಸಮಸ್ಯೆಗಳಿಗೆ ಕಾರಣಗಳನ್ನು ಹೇಳುತ್ತಾರೆ. ಈ ವಿಶಿಷ್ಟ ಸೇವೆಗೆ ಸುಮಾರು 5,000 ರೂಪಾಯಿಗಳವರೆಗೆ ಶುಲ್ಕ ವಿಧಿಸಲಾಗುತ್ತಿದ್ದು, ಇದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಕಾರಣವಾಗಿದೆ.
ಉದ್ಯೋಗವೇ ಸಿಕ್ತಿಲ್ಲ, ನಿರುದ್ಯೋಗಿಯಾಗಿದ್ದೇನೆ ಎಂದು ಹೇಳುವವರ ಮಧ್ಯೆ, ಕೆಲವರು ತಾವೇ ಖುದ್ದಾಗಿ ಏನೇನೋ ಹೊಸ ಹೊಸ ಉದ್ಯೋಗಗಳನ್ನು ಹುಟ್ಟುಹಾಕುವುದು ಇದೆ. ಕೆಲವೊಮ್ಮೆ ಈ ಉದ್ಯೋಗ ಕೈಹಿಡಿದುಬಿಟ್ಟರೆ ಲಕ್ಷ ಲಕ್ಷ ಸಂಪಾದನೆ ಆಗುವುದೂ ಇದೆ. ಆದರೆ ಕೆಲವೊಮ್ಮೆ ಈ ಉದ್ಯೋಗಗಳ ಪೈಕಿ ಕೆಲವು ಉದ್ಯೋಗಗಳ ಬಗ್ಗೆ ಕೇಳಿದ್ರೆ ಕಣ್ ಕಣ್ ಬಿಡುವುದು ಮಾತ್ರವಲ್ಲದೇ ಬಾಯಿನೂ ತೆರೆದು ನೋಡಬೇಕಿದೆ. ಅಷ್ಟು ವಿಚಿತ್ರ ಎನ್ನಿಸುವ ಉದ್ಯೋಗ ಇದಾಗಿದೆ. ಅಂಥದ್ದೇ ಒಂದು ಉದ್ಯೋಗ ಸದ್ಯ ಟ್ರೆಂಡ್ನಲ್ಲಿದೆ. ಅದು ಕೂದಲಿನ ಜೊತೆ ಮಾತನಾಡುವ ಉದ್ಯೋಗ. ಇದಕ್ಕೆ ಇಂಗ್ಲಿಷ್ನಲ್ಲಿ Hair Whisperer Job ಎಂದು ಕರೆಯಲಾಗುತ್ತದೆ.
ಏನಿದು ಉದ್ಯೋಗ?
ಇತ್ತೀಚಿನ ದಿನಗಳಲ್ಲಿ, ಜನರು ವಿಶಿಷ್ಟ ರೀತಿಯಲ್ಲಿ ಹಣ ಸಂಪಾದಿಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಹೊಸ ವೃತ್ತಿಗಳು ಮತ್ತು ಸೇವೆಗಳಿಗೆ ಕಾರಣವಾಗಿವೆ, ಅಲ್ಲಿ ಸೃಜನಶೀಲತೆಯು ಆದಾಯದ ದೊಡ್ಡ ಮೂಲವಾಗಿದೆ. ಈ ಪ್ರವೃತ್ತಿಗಳು ಕೆಲವೊಮ್ಮೆ ವಿಲಕ್ಷಣ ಆದರೆ ವೈರಲ್ ವಿಚಾರಗಳಿಗೆ ಕಾರಣವಾಗುತ್ತವೆ, ಅದು ಜನರ ಗಮನವನ್ನು ತ್ವರಿತವಾಗಿ ಸೆಳೆಯುತ್ತದೆ. ಅಂತಹ ಒಂದು ಕೆಲಸವು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಸುತ್ತುತ್ತಿದೆ, ವೈರಲ್ ವೀಡಿಯೊದ ಪ್ರಕಾರ, ಉತ್ತರ ಪ್ರದೇಶದ ಗುರುಗ್ರಾಮ್‌ನಲ್ಲಿ "ಹೇರ್ ವಿಸ್ಪರರ್" ಎಂಬ ಹೊಸ ವೃತ್ತಿಪರ ಸೇವೆಯನ್ನು ಪ್ರಾರಂಭಿಸಲಾಗಿದೆ, ಇದರ ಅರ್ಥ ಕೂದಲಿನೊಂದಿಗೆ ಮಾತನಾಡುವ ವ್ಯಕ್ತಿ. ಕುತೂಹಲಕಾರಿಯಾಗಿ, ಈ ಕೆಲಸಕ್ಕೆ 5,000 ರೂಪಾಯಿಗಳವರೆಗೆ ಶುಲ್ಕ ವಿಧಿಸಲಾಗುತ್ತಿದೆ.
"ಹೇರ್ ವಿಸ್ಪರರ್" ಏನು ಮಾಡುತ್ತಾರೆ?
ಹೇರ್ ವಿಸ್ಪರರ್‌ನ ಕೆಲಸವೆಂದರೆ ಜನರ ಕೂದಲು ಏಕೆ ಹಾನಿಗೊಳಗಾಗುತ್ತಿದೆ. ಏಕೆ ಅವರ ಕೂದಲು ಉದುರುತ್ತಿದೆ. ಯಾವ ಕಾರಣಕ್ಕೆ ತಲೆ ಬೋಳಾಗುತ್ತಿದೆ ಎಂದು ಹೇಳುವುದು ಮಾತ್ರವಲ್ಲದೇ, ಅವರ ಮುಖಕ್ಕೆ ತಕ್ಕಂತೆ ಅವರಿಗೆ ಯಾವ ರೀತಿಯ ಹೇರ್ ಕಟ್ ಸ್ಯೂಟ್ ಆಗುತ್ತದೆ ಎಂದು ಹೇಳುವುದು. ಹಾಗೆಂದು ಸುಮ್ಮನೇ ಹೇಳುವುದಲ್ಲ ಮತ್ತೆ. ಹಾಗೆ ಮಾಡಿದ್ರೆ ಯಾರೂ ದುಡ್ಡು ಕೊಡುವುದಿಲ್ಲ. ಇವರು ಮಾಡೋದೇ ಬೇರೆ. ಇವೆಲ್ಲಾ ಹೇಳುವ ಮೊದಲು ಅವರು ಜನರ ಕೂದಲಿನ ಜೊತೆ ಮಾತನಾಡುತ್ತಾರಂತೆ! ಅವರ ಕೂದಲನ್ನು ಪರೀಕ್ಷಿಸಿ ಅದರ ಜೊತೆ ಸಂವಹನ ನಡೆಸಿ ಕೊನೆಗೆ ಈ ಎಲ್ಲಾ ಟಿಪ್ಸ್ ಕೊಡುತ್ತಾರೆ. ಹಾಗೆಂದು ಅವರೇನೂ ಕೂದಲು ಬರಿಸಲ್ಲ, ಅಥವಾ ಕೂದಲು ಕಟ್ ಕೂಡ ಮಾಡಲ್ಲ. ಕೇವಲ ಕೂದಲು ಉದುರುವುದಕ್ಕೆ ಕಾರಣ ಹೇಳುವುದು ಅಥವಾ ಯಾವ ರೀತಿಯ ಹೇರ್ಕಟ್ ಸ್ಯೂಟ್ ಆಗತ್ತೆ ಎಂದು ಹೇಳುವುದು ಅಷ್ಟೇ.
ಐದು ಸಾವಿರ ವಸೂಲಿ!
ಹೀಗೆ ಒಬ್ಬರಿಗೆ ಹೇಳಿದ್ರೆ 5 ಸಾವಿರ ರೂಪಾಯಿ ವಸೂಲಿ ಮಾಡ್ತಾರೆ. ಜನರೇನು ಹೀಗೆ ಕೊಡಲು ಹುಚ್ಚರಾ ಕೇಳಬೇಡಿ. ಇದರ ದೊಡ್ಡ ಮಾರುಕಟ್ಟೆಯೇ ಸ್ಥಾಪನೆ ಆಗಿದೆ. ಈ ವಿಶಿಷ್ಟ ಸೇವೆಗೆ ಪ್ರತಿ ಸೆಷನ್‌ಗೆ ಸುಮಾರು 5,000 ರೂಪಾಯಿ ಶುಲ್ಕ ವಿಧಿಸಲಾಗುತ್ತಿದೆ. ನಿಮ್ಮನ್ನು ಕುಳ್ಳರಿಸಿ ಅವರು ನಿಮ್ಮ ಕೂದಲಿನ ಜೊತೆ ಸಂವಹನ ಮಾಡಿ ಕೂದಲಿನ ಬಗ್ಗೆ ನಿಮಗೆ ಇರುವ ಸಮಸ್ಯೆಗಳನ್ನು ಪರಿಹರಿಸುತ್ತಾರಷ್ಟೇ. ಆಮೇಲೆ ನೀವು ಬೇಕಾದ ಕಡೆಗೆ ಹೋಗಿ ಚಿಕಿತ್ಸೆ ಪಡೆಯುವುದೋ ಅಥವಾ ಹೇರ್ಕಟ್ ಮಾಡಿಸುವುದೋ ಮಾಡಬೇಕು ಅಷ್ಟೇ.
ಇದನ್ನು ಕೇಳುವವರಿಗೆ ತಲೆ ಇಲ್ಲ ಎಂದುಕೊಂಡರೂ, ಕೇಳುವವರು ಇರುವುದರಿಂದಲೇ ಇದು ದೊಡ್ಡ ಪ್ರಮಾಣದ ಮಾರುಕಟ್ಟೆಯಾಗಿ ಸದ್ಯ ಉತ್ತರ ಪ್ರದೇಶದಲ್ಲಿ ಬೆಳೆಯುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ಇದು ಚರ್ಚೆಗೆ ಗ್ರಾಸವಾಗಿದೆ. ಕೆಲವರು ಇದನ್ನು ಹೊಸ ಮಾರ್ಕೆಟಿಂಗ್ ತಂತ್ರ ಎಂದು ಕರೆಯುತ್ತಿದ್ದರೆ, ಇನ್ನು ಕೆಲವರು ಇದನ್ನು ಅತಿಯಾಗಿ ಪ್ರಚಾರ ಮಾಡಿದ ಸೇವೆ ಎಂದು ಅಪಹಾಸ್ಯ ಮಾಡುತ್ತಿದ್ದಾರೆ. ಯಾವುದೇ ಕ್ಷೌರ ಅಥವಾ ಚಿಕಿತ್ಸೆಯನ್ನು ಸೇರಿಸದಿದ್ದಾಗ ಸಲಹೆಗಾಗಿ ಮಾತ್ರ ಇಷ್ಟು ದೊಡ್ಡ ಮೊತ್ತವನ್ನು ವಿಧಿಸುವುದು ವಿಚಿತ್ರ ಎಂದು ಜನರು ಹೇಳುತ್ತಾರೆ. ಆದಾಗ್ಯೂ, ಈ ಸೇವೆಯನ್ನು ಇನ್ನೂ ಅಧಿಕೃತವಾಗಿ ದೃಢೀಕರಿಸಲಾಗಿಲ್ಲ.


