ಕೆಲಸಕ್ಕೆ ಸೇರಿ ಕೇವಲ 15 ದಿನಗಳಲ್ಲಿ ಉದ್ಯೋಗ ಕಳೆದುಕೊಂಡ ವ್ಯಕ್ತಿಯೊಬ್ಬರು ತಮ್ಮ ನೋವನ್ನು ರೆಡ್ಡಿಟ್ನಲ್ಲಿ ಹಂಚಿಕೊಂಡಿದ್ದಾರೆ. ಎಚ್‌ಆರ್‌ನಿಂದಾದ ಅನ್ಯಾಯ ಮತ್ತು ಬೆದರಿಕೆಯಿಂದಾಗಿ ಅವರು ಒಂದು ವರ್ಷಕ್ಕೂ ಹೆಚ್ಚು ಕಾಲ ಮಾನಸಿಕವಾಗಿ ನರಳಬೇಕಾಯಿತು, ಇದು ಕಾರ್ಪೊರೇಟ್ ಜಗತ್ತಿನ ಕರಾಳ ಮುಖವನ್ನು ತೆರೆದಿಟ್ಟಿದೆ.
ಕೃತಕ ಬುದ್ಧಿಮತ್ತೆಯಿಂದಲೋ, ಹಿರಿಯ ಉದ್ಯೋಗಿಗಳಿಗೆ ಆಗಿ ಬರುವುದಿಲ್ಲ ಎನ್ನುವ ಕಾರಣಕ್ಕೋ ಅಥವಾ ಯಾವುದೋ ಕ್ಷುಲ್ಲಕ ಕಾರಣಕ್ಕೆ ಸಾಫ್ಟ್ವೇರ್ ಕ್ಷೇತ್ರದಲ್ಲಿ ಉದ್ಯೋಗ ಕಡಿತ ಎನ್ನುವುದು ಈಗ ಮಾಮೂಲಾಗಿಬಿಟ್ಟಿದೆ. ಆದರೆ ಎಷ್ಟೋ ವರ್ಷ ಕೆಲಸ ಮಾಡಿದವರ ಮಾತು ಬಿಡಿ. ಇದೀಗ ಕೆಲಸಕ್ಕೆ ಸೇರಿ ಹದಿನೈದೇ ದಿನಗಳಲ್ಲಿ ಕೆಲಸದಿಂದ ತೆಗೆದುಹಾಕಿದ್ರೆ ಆ ಮನಸ್ಥಿತಿ ಹೇಗಿರುತ್ತದೆ ಎಂದು ಊಹಿಸಿಕೊಳ್ಳುವುದೂ ಕಷ್ಟ. ಕಾರ್ಪೋರೆಟ್ ಜಗತ್ತಿನ ಈ ಕರಾಳ ಮುಖವನ್ನು ಜಾಲತಾಣದಲ್ಲಿ ತೆರೆದಿಟ್ಟಿದ್ದಾರೆ. ಕೆಲಸಕ್ಕೆ ಸೇರಿ 15 ದಿನಕ್ಕೆ ತಮ್ಮನ್ನು ಕಂಪೆನಿಯಿಂದ ತೆಗೆದ ಪರಿಣಾಮ, ಮಾನಸಿಕ ಆರೋಗ್ಯದ ಮೇಲೆ ಹೇಗೆ ಶಾಶ್ವತ ಪರಿಣಾಮ ಬೀರಿತು ಎಂಬುದನ್ನು ಮಾಜಿ ಉದ್ಯೋಗಿಯೊಬ್ಬರು ರೆಡ್ಡಿಟ್ ಪೋಸ್ಟ್ ಹಂಚಿಕೊಂಡ ಬಳಿಕ, ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಲವು ಉದ್ಯೋಗಿಗಳು ತಮ್ಮ ನೋವನ್ನು ತೆರೆದಿಟ್ಟಿದ್ದಾರೆ.
ಒಂದು ವರ್ಷಗಳ ನರಕ
ರೆಡ್ಡಿಟ್ ಬಳಕೆದಾರರು ಬರೆದಿದ್ದಾರೆ, "ನನ್ನ ಮೊದಲ ಕಾರ್ಪೊರೇಟ್ ಕೆಲಸ 15 ದಿನಗಳ ಕಾಲ ನಡೆಯಿತು. ಆದರೆ ಆ 15 ದಿನಗಳ ಬಳಿಕ ಕೆಲಸದಿಂದ ತೆಗೆದು ಹಾಕಿದ ಆಘಾತವು ಒಂದು ವರ್ಷ ನನ್ನನ್ನು ನರಕಕ್ಕೆ ದೂಡಿತು ಎಂದಿದ್ದಾರೆ. ಪೋಸ್ಟ್ ಪ್ರಕಾರ, ಬಳಕೆದಾರರು ಉತ್ಸಾಹದಿಂದ ಹೊಸಬರಾಗಿ ಉದ್ಯೋಗಕ್ಕೆ ಸೇರಿಕೊಂಡರು. ಆದರೆ ವಿಷಯಗಳು ಬೇಗನೆ ತಿರುವು ಪಡೆದುಕೊಂಡವು. ಒಬ್ಬ ಮಾನವ ಸಂಪನ್ಮೂಲ ಪ್ರತಿನಿಧಿಯು (HR) ಅವರನ್ನು ಇಷ್ಟಪಡದೇ ಕೆಲವು ನೆಗೆಟಿವ್ ಕಮೆಂಟ್ಸ್ ಹೇಳಿದರು. ಇಷ್ಟೇ ಕಾರಣಕ್ಕೆ, ಕೇವಲ 15 ದಿನಗಳ ನಂತರ ಅವರನ್ನು ಕಂಪನಿಯಿಂದ ವಜಾಗೊಳಿಸಲಾಯಿತು.
ಎಚ್‌ಆರ್ ವಿಭಾಗದಿಂದ ಎಚ್ಚರಿಕೆ
ಘಟನೆಯ ಬಗ್ಗೆ ಸಾರ್ವಜನಿಕವಾಗಿ ಮಾತನಾಡದಂತೆ ಮತ್ತೊಬ್ಬ ಮಾನವ ಸಂಪನ್ಮೂಲ ಪ್ರತಿನಿಧಿ ಎಚ್ಚರಿಕೆ ನೀಡಿರುವುದಾಗಿ ಬಳಕೆದಾರರು ತಿಳಿಸಿದ್ದಾರೆ. ಕೆಲಸದಿಂದ ತೆಗೆದುಹಾಕಿದ್ದು ಮಾತ್ರವಲ್ಲದೆ, ಈ ಘಟನೆಯ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ಮಾತನಾಡದಂತೆ ಕಂಪನಿಯ ಮತ್ತೊಬ್ಬ ಎಚ್‌ಆರ್ ಅಧಿಕಾರಿ ನೀಡಿದ ಬೆದರಿಕೆ ನಿಜಕ್ಕೂ ಅಮಾನವೀಯವಾಗಿತ್ತು. "ಎಚ್‌ಆರ್‌ಗಳ ಪ್ರಪಂಚ ತುಂಬಾ ಚಿಕ್ಕದು. ನೀನು ಸರಿಯಾಗಿ ವರ್ತಿಸದೆ, ಈಗಲೇ ರಾಜೀನಾಮೆ ನೀಡದಿದ್ದರೆ ನಿನ್ನ ಮುಂದಿನ ವೃತ್ತಿಜೀವನ ಶಾಶ್ವತವಾಗಿ ನಾಶವಾಗುತ್ತದೆ" ಎಂದು ಎಚ್ಚರಿಕೆ ನೀಡಲಾಗಿತ್ತು. ಇಷ್ಟೇ ಅಲ್ಲದೆ, ಈ ಆಘಾತದಿಂದ ಪ್ಯಾನಿಕ್ ಅಟ್ಯಾಕ್ ಆಗಿ, ತಮ್ಮ ಕುಟುಂಬದ ಸದಸ್ಯರೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ, ಉದ್ಯೋಗಿಯ ಮೊಬೈಲ್ ಕಸಿದುಕೊಳ್ಳಲಾಯಿತು. ರಾಜೀನಾಮೆ ನೀಡಲು ಒಪ್ಪದಿದ್ದರೆ ಭದ್ರತಾ ಸಿಬ್ಬಂದಿಯನ್ನು ಕರೆದು ಹೊರಹಾಕುವುದಾಗಿ ಬೆದರಿಸಲಾಯಿತು ಎಂದು ಉದ್ಯೋಗಿ ಅಳಲು ತೋಡಿಕೊಂಡಿದ್ದಾರೆ.
"ನನ್ನನ್ನು ಸಮರ್ಥಿಸಿಕೊಳ್ಳಲು ನನಗೆ ನ್ಯಾಯಯುತ ಅವಕಾಶ ನೀಡಲಾಗಿಲ್ಲ ಎಂದು ನಾನು ಇನ್ನೂ ನಂಬುತ್ತೇನೆ, ಮತ್ತು ಅನುಭವವು ನನ್ನ ಆತ್ಮವಿಶ್ವಾಸವನ್ನು ಸಂಪೂರ್ಣವಾಗಿ ಛಿದ್ರಗೊಳಿಸಿತು. ನಂತರದ ತಿಂಗಳುಗಳು ಅತ್ಯಂತ ಕಠಿಣವಾಗಿದ್ದವು, ಚಿಕಿತ್ಸೆ, ಆತಂಕ, ನಿದ್ದೆಯಿಲ್ಲದ ರಾತ್ರಿಗಳು ಮತ್ತು ಸ್ನೇಹಿತರು ತಮ್ಮ ಸ್ವಂತ ಆತ್ಮವಿಶ್ವಾಸವನ್ನು ಪುನರ್ನಿರ್ಮಿಸಲು ಹೆಣಗಾಡುತ್ತಿರುವಾಗ ತಮ್ಮ ವೃತ್ತಿಜೀವನದಲ್ಲಿ ಮುಂದುವರಿಯುವುದನ್ನು ನೋಡುವುದು ಒಳಗೊಂಡಿತ್ತು ಎಂದು ಅವರು ಹೇಳಿದ್ದಾರೆ.
ಕೆಲಸದ ಸ್ಥಳದ ನಿರ್ಧಾರಗಳು ಉದ್ಯೋಗಿಗಳ ಮೇಲೆ ಹೇಗೆ ಶಾಶ್ವತ ಪರಿಣಾಮ ಬೀರುತ್ತವೆ ಎಂಬುದರ ಪ್ರತಿಬಿಂಬದೊಂದಿಗೆ ಪೋಸ್ಟ್ ಕೊನೆಗೊಂಡಿದೆ. "ಕೆಲವೊಮ್ಮೆ ಕಾರ್ಪೊರೇಟ್ ನಿರ್ಧಾರವು ಯಾರೊಬ್ಬರ ಮೇಜಿನ ಮೇಲಿನ ಮತ್ತೊಂದು ಫೈಲ್ ಆಗುತ್ತದೆ. ಉದ್ಯೋಗಿಗೆ, ಅದು ವರ್ಷಗಳವರೆಗೆ ಅವರು ಸಾಗಿಸುವ ಸ್ಮರಣೆಯಾಗಬಹುದು" ಎಂದು ಬಳಕೆದಾರರು ಬರೆದಿದ್ದಾರೆ.


