44 year old Techie Retire: ಇಂದು ಸಾಕಷ್ಟು ಜನರು ಕೆಲಸ ಇಲ್ಲ ಎಂದು ಬೇಸರ ಮಾಡಿಕೊಂಡರೆ, ಇನ್ನೂ ಕೆಲವರು ಕಾರ್ಪೋರೇಟ್‌ ಜಾಬ್‌ಗಳಲ್ಲಿ ಸಿಗುತ್ತಿರುವ ಒತ್ತಡ, ರಾಜಕೀಯಕ್ಕೆ ಬೇಸತ್ತಿದ್ದಾರೆ. ಎಷ್ಟೋ ವರ್ಷ ದುಡಿದರೂ ಕೂಡ ಒಮ್ಮೆಲೆ ಜಾಬ್‌ನಿಂದ ತೆಗೆಯೋದುಂಟು. ಹೀಗಾಗಿ ಹೂಡಿಕೆ ಮಾಡಿದ್ದಾರಂತೆ.

44 year old Techie Retire: ಒಂದಿಷ್ಟು ವರ್ಷ ಕೆಲಸ ಮಾಡಿ, ಆರೋಗ್ಯವನ್ನು ಹಾಳು ಮಾಡಿಕೊಂಡ ನಂತರದಲ್ಲಿ 44 ವರ್ಷದ ಇಂಜಿನಿಯರ್ ಒಬ್ಬರು ₹6.5 ಕೋಟಿ ಮೌಲ್ಯದ ಹೂಡಿಕೆ ಮಾಡಿ ತಮ್ಮ ಕೆಲಸಕ್ಕೆ ಗುಡ್‌ಬೈ ಹೇಳಿದ್ದಾರೆ. ಈ ಬಗ್ಗೆ ಅವರು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಒಂದಿಷ್ಟು ವರ್ಷ ಕೆಲಸ ಮಾಡಿದರೂ ಕೂಡ, ಅತಿ ಹೆಚ್ಚು ಖರ್ಚು ಮಾಡದೆ ಹಣ ಉಳಿತಾಯ ಮಾಡಿದರು. ಆಮೇಲೆ ಅವರು ಆ ಹಣದ ಬ್ಯಾಕಪ್‌ ಇಟ್ಟುಕೊಂಡು ತಮ್ಮ ಕೆಲಸಕ್ಕೆ ಗುಡ್‌ಬೈ ಹೇಳಿದರು.

ಕೆಲಸ ಬಿಡಲು ಕಾರಣ ಏನು?

“ನಾನು ಇಂಜಿನಿಯರಿಂಗ್ ಕೆಲಸದಿಂದ ನಿವೃತ್ತಿ ಪಡೆದಿಲ್ಲ, ಆದರೆ ಸಿಕ್ಕಾಪಟ್ಟೆ ಒತ್ತಡದ ಕೆಲಸ, ಆಯಾಸದಿಂದ ನಿವೃತ್ತಿ ಪಡೆದಿದ್ದೇನೆ ಅಷ್ಟೇ” ಎಂದು ಅವರು ಹೇಳಿದ್ದಾರೆ.

ಇವರ ಜೀವನ ಹೇಗಿತ್ತು?

ಟಯರ್-1 ಕಾಲೇಜಿನಲ್ಲಿ ಓದಿದ್ದ ಇವರು ಹೆಚ್ಚಾಗಿ ಸ್ಟಾರ್ಟ್‌ಅಪ್‌ಗಳಲ್ಲೇ ತಮ್ಮ ಕರಿಯರ್ ಕಳೆದಿದ್ದರು. ಅದರಲ್ಲಿಯೂ ಇವರ ಕೊನೇ ಕೆಲಸದಲ್ಲಿ ಸಿಕ್ಕಾಪಟ್ಟೆ ರಾಜಕೀಯ, ಟಾಕ್ಸಿಕ್‌ ಜಾಗ, ದಿನಕ್ಕೆ 14 ಗಂಟೆ ಕೆಲಸ ಮಾಡಿ, ಆರೋಗ್ಯ ಹಾಳಾಗಿತ್ತು. ನಿದ್ದೆ ಇಲ್ಲದೆ ಆರೋಗ್ಯ ಸಂಪೂರ್ಣ ಹಾಳಾಗಿತ್ತು. ಶುಗರ್‌ ಕಾಯಿಲೆ, ಬಿಪಿ ಸಮಸ್ಯೆ ಬಂದಿತ್ತು. 2023 ರಿಂದ ಅವರು ಆರೋಗ್ಯದ ಕಡೆಗೆ ಗಮನ ಕೊಡಲು ಆರಂಭಿಸಿದ್ದರು.

6.5 ಕೋಟಿ ರೂ ಹೂಡಿಕೆ ಮಾಡಿದ್ದು ಹೇಗೆ?

2018ರಿಂದ ಎಸ್‌ಐಪಿ (SIP) ಮೂಲಕ ಅವರು ಹಣ ಹೂಡಿಕೆ ಮಾಡಲು ಶುರು ಮಾಡಿದರು. ಇದಕ್ಕೆ ಅವರು ಹಣಕಾಸು ಸಲಹೆಗಾರರ ಸಹಾಯ ಪಡೆದರು. ಕೆಲಸ ಮಾಡುತ್ತಿದ್ದ ಕಂಪನಿಯು ಮಾರಾಟವಾದಾಗ, ಇಸೋಪ್ (ESOP) ಮೂಲಕ ಇವರಿಗೆ ₹1.4 ಕೋಟಿ ಸಿಕ್ಕಿತ್ತು. ಈ ಹಣವನ್ನು ಖರ್ಚು ಮಾಡದೆ ಹೂಡಿಕೆ ಮಾಡಿದರು. ಏಪ್ರಿಲ್ 2026 ರಲ್ಲಿ ಇವರ ಹೂಡಿಕೆ ₹6.5 ಕೋಟಿ ರೂಪಾಯಿ ಆಯ್ತು. ಒಳ್ಳೆಯ ನಗರದಲ್ಲಿ ಸ್ವಂತ ಮನೆ ಹೊಂದಿರೋ ಇವರ ಕುಟುಂಬದ ವಾರ್ಷಿಕ ಖರ್ಚು 14 ಲಕ್ಷ ರೂಪಾಯಿ ಅಷ್ಟೇ.

ಕಲಿತ ಪಾಠಗಳು

ಕೆಲಸ ಬಿಟ್ಟ ಮೂರು ತಿಂಗಳಲ್ಲಿ ಇವರ ಆರೋಗ್ಯ ಸುಧಾರಿಸಿದೆ. ಈಗ ಇವರು ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯುತ್ತ, ಧ್ಯಾನ, ಓಪನ್ ಸೋರ್ಸ್ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಆರಂಭದಲ್ಲೇ ನಿವೃತ್ತಿಯ ಗುರಿ ಹೊಂದಿರಿ, ಸಂಬಳದ ಬಗ್ಗೆ ಚೌಕಾಸಿ ಮಾಡಿ, ಆಡಂಬರದ ಜೀವನಶೈಲಿಗೆ ಮಾರುಹೋಗಬೇಡಿ.