ಬೆಂಗಳೂರಿನಲ್ಲಿ ಉದ್ಯೋಗ ಸಂದರ್ಶನದ ಫಲಿತಾಂಶ ಸಿಗದಿದ್ದಕ್ಕೆ ಕೋಪಗೊಂಡ 24 ವರ್ಷದ ಯುವಕನೊಬ್ಬ, ಹೆಚ್‌ಆರ್ ಸಿಬ್ಬಂದಿಗೆ ವಾಟ್ಸಪ್ ಮತ್ತು ಇ-ಮೇಲ್ ಮೂಲಕ ಅಶ್ಲೀಲ ಸಂದೇಶ ಹಾಗೂ ಕೊಲೆ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ದೊಮ್ಮಲೂರಿನ ಕಂಪನಿಯ ಉದ್ಯೋಗಿ ದೂರು ನೀಡಿದ್ದು, ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ.

ಬೆಂಗಳೂರು: 24 ವರ್ಷದ ಉದ್ಯೋಗಕಾಂಕ್ಷಿಯೋರ್ವ ಹೆಚ್‌ಆರ್ ಸಿಬ್ಬಂದಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಯುವಕ ಹೆಚ್‌ಆರ್ ಸಿಬ್ಬಂದಿಗೆ ವಾಟ್ಸಪ್ ಮತ್ತು ಇ-ಮೇಲ್ ಮೂಲಕ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಹೆಚ್‌ ಆರ್ ಸಿಬ್ಬಂದಿ ಆರೋಪಿಸಿದ್ದಾರೆ. ಬೆಂಗಳೂರಿನ ದೊಮ್ಮಲೂರಿನಲ್ಲಿರುವ (Domlur Bengaluru) ಬೇಕರ್ ಟಿಲ್ಲಿ ಒನ್ ಇಂಡಿಯಾ ಎಲ್‌ಎಲ್‌ಪಿಯ (Baker Tilly One India LLP) ಎಂಪ್ಲಾಯ್ ರಿಲೇಶನ್ಸ್ ಮ್ಯಾನೇಜರ್ ಈ ಸಂಬಂಧ ದೂರು ದಾಖಲಿಸಿದ್ದಾರೆ.

ಏನಿದು ಪ್ರಕರಣ?

2026ರ ಏಪ್ರಿಲ್‌ನಲ್ಲಿ ಪ್ರಾಜೆಕ್ಟ್ ಸೀನಿಯರ್ ಮ್ಯಾನೇಜರ್-ಕನ್ಸಲ್ಟಿಂಗ್ ಹುದ್ದೆಗೆ ಅರ್ಜಿ ಅಹ್ವಾನಿಸಿತ್ತು. ಜಾನ್ ಕಿಂಗ್ಸಿಲಿ ನಾಡರ್ ಎಂಬಾತ ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಿದ್ದನು. ಜೂನ್‌ನಲ್ಲಿ ನಡೆದ ವರ್ಚುವಲ್ ಸಂದರ್ಶನಕ್ಕೆ ನಾಡರ್ ಹಾಜರಾಗಿದ್ದನು. ಹಲವು ಸುತ್ತುಗಳಲ್ಲಿ ನಡೆದ ಸಂದರ್ಶನದಲ್ಲಿ ನಾಡರ್ ಭಾಗಿಯಾಗಿದ್ದನು.

ಜುಲೈ 2ರಂದು ತನ್ನ ಸಂದರ್ಶನದ ಫಲಿತಾಂಶಕ್ಕಾಗಿ ಹೆಚ್‌ಆರ್ ಸಿಬ್ಬಂದಿಯನ್ನು ಸಂಪರ್ಕಿಸಲು ನಾಡರ್ ಪ್ರಯತ್ನಿಸಿದ್ದಾನೆ. ಆದ್ರೆ ಕಂಪನಿಯ ನೇಮಕಾತಿ ತಂಡ ನಾಡರ್ ಕರೆಯನ್ನು ಸ್ವೀಕರಿಸಿಲ್ಲ. ತನ್ನ ಕಾಲ್‌ಗೆ ಸ್ಪಂದನೆ ಸಿಗದಿದ್ದಾಗ ಹೆಚ್‌ಆರ್ ಸಿಬ್ಬಂದಿಗೆ ವಾಟ್ಸಪ್ ಮೂಲಕ ಅಶ್ಲೀಲ ಸಂದೇಶ ಮತ್ತು ವಾಯ್ಸ್ ನೋಟ್ ಕಳುಹಿಸಲು ಆರಂಭಿಸಿದ್ದಾನೆ. ಇದರಿಂದ ಸಿಬ್ಬಂದಿ ನಾಡರ್ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದಾರೆ.

ಇದನ್ನೂ ಓದಿ: ಇಂದು ಅವರು ನಾಳೆ ನಾನು? ಕಂಪನಿಯ ಲೇಆಫ್ ಕರಾಳ ಸತ್ಯ ಬಿಚ್ಚಿಟ್ಟ ಐಟಿ ಉದ್ಯೋಗಿ!

ಸಾಲು ಸಾಲು ಮೇಲ್ ಕಳುಹಿಸಿರುವ ಯುವಕ

ಇಷ್ಟಕ್ಕೆ ಸುಮ್ಮನಾಗದ ನಾಡರ್, ಸಿಬ್ಬಂದಿಯ ಮೇಲ್ ಐಡಿಗೆ ನಿಂದನೆಯ ಮೇಲ್‌ಗಳನ್ನು ಕಳುಹಿಸಲು ಆರಂಭಿಸಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಇದೀಗ ಅರ್ಜಿದಾರನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: "ನಿಮ್ಮ ಸಂಬಳವನ್ನು ಸದ್ದಿಲ್ಲದೆ ಖಾಲಿ ಮಾಡುತ್ತಿವೆ ಈ 5 ವೆಚ್ಚಗಳು" ಬೆಂಗಳೂರು ವ್ಯಕ್ತಿಯ ವೈರಲ್ ಪೋಸ್ಟ್