ವಾಟ್ಸಾಪ್‌ನ ಹೊಸ ಯೂಸರ್‌ನೇಮ್ ಸೌಲಭ್ಯಕ್ಕೆ ಕೇಂದ್ರ ಸರ್ಕಾರವು ತಡೆ ನೀಡಿದೆ. ಈ ವೈಶಿಷ್ಟ್ಯವು ಬಳಕೆದಾರರ ಗುರುತನ್ನು ಮೊಬೈಲ್ ಸಂಖ್ಯೆಯಿಂದ ಮೆಟಾ-ನಿಯಂತ್ರಿತ ಹೆಸರಿಗೆ ಬದಲಾಯಿಸುತ್ತದೆ, ಇದು ಸುರಕ್ಷತೆ, ವಂಚನೆ ಮತ್ತು ಡೇಟಾ ಏಕಸ್ವಾಮ್ಯದ ಬಗ್ಗೆ ಗಂಭೀರ ಕಳವಳ ಮೂಡಿಸಿದೆ ಎಂದು ಲೇಖಕರು ವಾದಿಸುತ್ತಾರೆ. 

ರಾಜೀವ್‌ ಚಂದ್ರಶೇಖರ್‌,

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೇಂದ್ರದ ಮಾಜಿ ಸಚಿವ, ಕೇರಳ ಬಿಜೆಪಿ ಘಟಕದ ರಾಜ್ಯಾಧ್ಯಕ್ಷ

ಜು.29ರಂದು ಮೆಟಾ ಸಂಸ್ಥೆಯು ವಾಟ್ಸಾಪ್‌ನಲ್ಲಿ ಬಳಕೆದಾರರಿಗೆ ಹೊಸದಾಗಿ ಯೂಸರ್‌ನೇಮ್‌ ಸೌಲಭ್ಯ ಪರಿಚಯಿಸಲು ಆರಂಭಿಸಿತು. ಈ ಸೌಲಭ್ಯವು ಯಾರು ಬೇಕಾದರೂ ತಮ್ಮ ಮೊಬೈಲ್‌ ಸಂಖ್ಯೆ ಹಂಚಿಕೊಳ್ಳದೆಯೇ ವಾಟ್ಸಾಪ್‌ನಲ್ಲಿ ಇನ್ನೊಬ್ಬರನ್ನು ಹುಡುಕುವ ಅಥವಾ ಸಂದೇಶವನ್ನು ರವಾನಿಸುವ ಅವಕಾಶ ಮಾಡಿಕೊಡುತ್ತದೆ. ಇದಾಗಿ 48 ಗಂಟೆಯೊಳಗೆ ನಮ್ಮ ಸರ್ಕಾರ ಈ ಸೌಲಭ್ಯವನ್ನು ತಡೆಹಿಡಿಯುವಂತೆ ಆದೇಶ ನೀಡಿತು. ಜತೆಗೆ ಮೂರು ದಿನದೊಳಗೆ ಈ ಕುರಿತು ವಿವರಣೆ ನೀಡುವಂತೆಯೂ ಮೆಟಾಗೆ ಸೂಚಿಸಿತು.

ಇದು ಸರಿಯಾದ ನಿರ್ಧಾರವಾಗಿದ್ದು, ನಾನು ಇದನ್ನು ಬೆಂಬಲಿಸುತ್ತೇನೆ. 60 ಕೋಟಿ ಭಾರತೀಯರು ತಮ್ಮ ಜೀವನದ ಹೆಚ್ಚಿನ ಅವಧಿಯನ್ನು ಈ ವಾಟ್ಸಾಪ್‌ ಆ್ಯಪ್‌ನಲ್ಲಿ ಕಳೆಯುತ್ತಾರೆ. ಹಾಗಿರುವಾಗ ಅವರ ಸಂದೇಶಗಳನ್ನು ರವಾನಿಸುವ ಪ್ಲ್ಯಾಟ್‌ಫಾರ್ಮ್‌ ರಾತ್ರೋರಾತ್ರಿ ಗುರುತಿನ ಅರ್ಥವನ್ನೇ ಬದಲಾಯಿಸಲು ಹೊರಟಾಗ ಭಾರತಕ್ಕೆ ಕೇವಲ ಮಾಹಿತಿ ನೀಡಿದರಷ್ಟೇ ಸಾಲದು, ಭಾರತದ ಜತೆಗೆ ಸಮಾಲೋಚನೆಯನ್ನೂ ನಡೆಸಬೇಕಾಗಿದ್ದು ಅತ್ಯಗತ್ಯ.

ಹಾಗೆಂದು, ತಾತ್ಕಾಲಿಕ ತಡೆ ಒಂದು ನೀತಿಯಾಗಬಾರದು. ನಾವು ಈ ಮೂರು ದಿನಗಳಲ್ಲಿ, ಮುಂದಿನ ವಾರಗಳಲ್ಲಿ ಏನು ಮಾಡುತ್ತೇವೆ? ಯಾವ ರೀತಿ ವಾಟ್ಸಾಪ್‌ ಅನ್ನು ಭಾರತದಲ್ಲಿ ನಿಯಂತ್ರಿಸುತ್ತೇವೆ ಎಂಬುದು ಈಗ ಮುಖ್ಯವಾಗುತ್ತದೆ. ನನ್ನ ಪ್ರಕಾರ ಈ ಯೂಸರ್‌ ನೇಮ್‌ ವೈಶಿಷ್ಟ್ಯ ಅಂದರೆ ಏನು? ಏನಲ್ಲ? ಹಾಗೂ ಭಾರತದಲ್ಲಿ ಒಂದೇ ಒಂದು ಯೂಸರ್‌ನೇಮ್‌ ಲೈವ್‌ ಆಗುವ ಮೊದಲು ಸರ್ಕಾರ ಏನೆಲ್ಲ ಬೇಡಿಕೆ ಇಡಬೇಕು ಎಂಬುದನ್ನು ನಾನಿಲ್ಲಿ ಹೇಳುತ್ತೇನೆ.

ಮೆಟಾ ನಿಜವಾಗಿ ಮಾಡಿದ್ದೇನು?

ಉತ್ಪನ್ನದ ತಾಂತ್ರಿಕ ಭಾಷೆಯನ್ನು ಬದಿಗಿಟ್ಟು ನೋಡಿದರೆ ಈ ಬದಲಾವಣೆ ತುಂಬಾ ಸರಳ. 17 ವರ್ಷಗಳ ಕಾಲ ನಮ್ಮ ವಾಟ್ಸಾಪ್‌ ಗುರುತು ನಮ್ಮ ಮೊಬೈಲ್‌ ನಂಬರ್‌ ಅಷ್ಟೇ ಆಗಿತ್ತು. ಈ ಗುರುತು ಭಾರತೀಯ ನಿಯಂತ್ರಣ ಕ್ರಮಗಳಡಿ ನೀಡಲಾದ, ಯಾವುದೇ ಆಪರೇಟರ್‌ಗಳಿಗೆ ಪೋರ್ಟೆಬಲ್ ಮತ್ತು ಯಾವುದೇ ಪ್ರತಿಸ್ಪರ್ಧಿ ಆ್ಯಪ್‌ನಲ್ಲಿ ಬಳಸಬಹುದಾದ ಗುರುತಾಗಿತ್ತು. ಆದರೆ, ಈ ವಾರದಿಂದ ನಮ್ಮ ಗುರುತು ಹ್ಯಾಂಡಲ್‌(ಹೆಸರು)ಗಷ್ಟೇ ಸೀಮಿತವಾಗುತ್ತದೆ. ಇದನ್ನು ಮೆಟಾ ನೀಡುತ್ತದೆ, ಇದನ್ನು ನಿಯಂತ್ರಿಸುವುದೂ ಮೆಟಾ ಸಂಸ್ಥೆ. ಅದೇ ರೀತಿ ಈ ಗುರುತಿಗೆ ಮೆಟಾದ ಗೋಡೆಗಳ ಹೊರಗೆ ಯಾವುದೇ ಅರ್ಥವೂ ಇಲ್ಲ.

ಮೆಟಾ ಜತೆಗೆ ಸರ್ಕಾರ ನಡೆಸುವ ಮಾತುಕತೆಯು ಈ ಎರಡು ಸತ್ಯಗಳನ್ನು ಆಧರಿಸಿರಬೇಕು. ಮೊದಲನೆಯದು, ಮೊಬೈಲ್‌ ನಂಬರ್‌ ನಾಪತ್ತೆಯಾಗಬಾರದು. ನೋಂದಣಿಗೆ ಮೊಬೈಲ್‌ ನಂಬರ್‌ ಕಡ್ಡಾಯವಾಗಬೇಕು ಮತ್ತು ಈ ಸಂಖ್ಯೆ ಮೆಟಾ ಸರ್ವರ್‌ನಲ್ಲಿ ಉಳಿಯಬೇಕು. ಈ ಮೂಲಕ ಯಾರೊಬ್ಬರೂ ವಾಟ್ಸಾಪ್‌ನಲ್ಲಿ ತನ್ನನ್ನು ತಾನು ಅನಾಮಧೇಯ ಎಂದು ಕಲ್ಪಿಸಿಕೊಳ್ಳಬಾರದು. ಯಾಕೆಂದರೆ ಇದು ಸತ್ಯ ಅಲ್ಲ. ನಮ್ಮ ಏಜೆನ್ಸಿಗಳಿಗೆ ಕಾನೂನುಬದ್ಧವಾಗಿ ಡೇಟಾಗಳ ಹಕ್ಕುಪಡೆಯುವ ಅಧಿಕಾರ ಹಿಂದಿನಂತೆಯೇ ಮುಂದುವರಿಯುತ್ತದೆ.

ಎರಡನೆಯದಾಗಿ, ವಾಟ್ಸಾಪ್‌ ಅನ್ನು ಅವಲಂಬಿಸಿಕೊಂಡು ವ್ಯವಹಾರ ನಡೆಸುತ್ತಿರುವ ಭಾರತದ ಲಕ್ಷಾಂತರ ಉದ್ಯಮಗಳಿಗೆ ಸಂಬಂಧಿಸಿದ್ದು. ಮೆಟಾವು ಗ್ರಾಹಕರ ಮೊಬೈಲ್ ನಂಬರ್‌ ಬದಲು ತಾನು ಸೃಷ್ಟಿಸುವ, ತಾನು ನಿಯಂತ್ರಿಸುವ ಗುರುತು ನೀಡುತ್ತದೆ. ಕಿರಾಣಿ ಅಂಗಡಿಗಳು, ಬೋಟಿಕ್‌ಗಳು, ಬ್ಯಾಂಕ್‌ ಮತ್ತು ನಮ್ಮ ಬೆಳೆಯುತ್ತಿರುವ ಡಿ2ಸಿ ಬ್ರ್ಯಾಂಡ್‌ಗಳು ಹಾಗೂ ಸಣ್ಣ ಮತ್ತು ಅತೀ ಸಣ್ಣ ಉದ್ಯಮಗಳು ತಮ್ಮ ಗ್ರಾಹಕರನ್ನು ಮೆಟಾದ ಪರಿಸರ ವ್ಯವಸ್ಥೆಯ ಒಳಗೆ ಕೆಲಸ ಮಾಡುವ ಮತ್ತು ಮೆಟಾದ ಷರತ್ತಿಗೊಳಪಡುವ ಕೋಡ್‌ ವರ್ಡ್‌ನಲ್ಲಿ ಮಾತ್ರ ಗುರುತಿಸಲಾಗುತ್ತದೆ.

ಮೊದಲ ಕಳಕಳಿ ಬಳಕೆದಾರ

ಅಂತರ್ಜಾಲವು ಸುರಕ್ಷಿತ ಮತ್ತು ಎಲ್ಲಾ ಡಿಜಿಟಲ್‌ ನಾಗರಿಕರ ಪಾಲಿಗೆ ವಿಶ್ವಾಸಾರ್ಹವಾಗಿರಬೇಕು ಎಂದು ನಾನು ಹಿಂದಿನಿಂದಲೂ ವಾದಿಸುತ್ತಲೇ ಬಂದಿದ್ದೇನೆ. ಇನ್ನು ಸುರಕ್ಷತೆ ವಿಚಾರ ಬಂದಾಗ ವಾಟ್ಸಾಪ್‌ ಯಾವುದೇ ಮುಂಜಾಗ್ರತೆ ಇಲ್ಲದೆ ಪರಿಚಯಿಸಲಾದ ಈ ಫೀಚರ್‌ ಆರಂಭದಲ್ಲೇ ವಿಫಲವಾಗುತ್ತದೆ.

ಈ ಫೀಚರ್‌ ಪರಿಚಯಿಸಿದ ಒಂದೇ ದಿನದಲ್ಲಿ ‘rbi_verify’, ‘indiamodi’ and ‘ambanijio’ನಂಥ ಯೂಸರ್‌ನೇಮ್‌ಗಳು ಯಾರಿಗೆ ಬೇಕಿದ್ದರೂ ಲಭ್ಯವಾಗಬಹುದಾಗಿತ್ತು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಡಿಜಿಟಲ್‌ ಅರೆಸ್ಟ್‌, ನಕಲಿ ಬ್ಯಾಂಕ್‌ ಅಧಿಕಾರಿಗಳು ಮತ್ತು ಸೈಬರ್‌ ವಂಚಕರ ಜಾಲದಿಂದ ಈಗಾಗಲೇ ನರಳುತ್ತಿರುವ ದೇಶದ ಪಾಲಿಗೆ ಇದರಿಂದಾಗುವ ಪರಿಣಾಮ ಯೋಚಿಸಿ ನೋಡಿ. 10 ಸಂಖ್ಯೆಗಳ ಮೊಬೈಲ್‌ ಸಂಖ್ಯೆಯು ಯಾವುದೇ ಅಧಿಕಾರವನ್ನು ಪ್ರತಿಪಾದಿಸುವುದಿಲ್ಲ, ಆದರೆ, ‘rbi_verify’, ‘indiamodi’ and ‘ambanijio’ನಂಥ ಯೂಸರ್‌ನೇಮ್‌ಗಳು ಪರೋಕ್ಷವಾಗಿ ಒಂದು ಸಂಸ್ಥೆ ಅಥವಾ ವ್ಯಕ್ತಿ ಎಂಬ ರೀತಿಯ ಅಧಿಕಾರವನ್ನು ಪ್ರತಿಪಾದಿಸುತ್ತದೆ.

ಅಪರಿಚಿತರಿಗೆ ಪತ್ತೆ ಹಚ್ಚಲಸಾಧ್ಯವಾದ ಸಿಮ್‌ ಬಳಸದೆಯೇ ಅನಾಮಿಕರಾಗಿ ಸಂದೇಶ ಕಳುಹಿಸುವ ಸಾಮರ್ಥ್ಯವನ್ನು ಇದರೊಂದಿಗೆ ಜತೆಗೂಡಿಸಿದರೆ ನಾವು ವಂಚನೆಯ ಉದ್ಯಮಕ್ಕೆ ಅಗ್ಗದ ಮತ್ತು ಹೆಚ್ಚು ಪ್ರಭಾವಶಾಲಿಯಾದ ಅಸ್ತ್ರ ನೀಡಿದಂತಾಗುತ್ತದೆ. ಇದರ ನೇರ ಗುರಿ ಹೊಸ, ಅಂತರ್ಜಾಲವನ್ನು ಹೆಚ್ಚು ನಂಬುವ ಬಳಕೆದಾರರು, ನಮ್ಮ ಪೋಷಕರು, ನಮ್ಮ ಮೊದಲ ತಲೆಮಾರಿನ ಬಳಕೆದಾರರು, ಡಿಜಿಟಲ್ ಇಂಡಿಯಾದ ಭಾಗವಾಗಿ ಕಳೆದೊಂದು ದಶಕದಲ್ಲಿ ಆನ್‌ಲೈನ್‌ ಜಗತ್ತಿಗೆ ಕಾಲಿಟ್ಟ ಕೋಟ್ಯಂತರ ಮಂದಿಯೇ ಆಗಿರಲಿದ್ದಾರೆ.

ಮೇಲ್ನೋಟಕ್ಕೆ ಯೂಸರ್‌ ನೇಮ್‌ ವೈಶಿಷ್ಟ್ಯವು ಬಳಕೆದಾರರ ಗೌಪ್ಯತೆ ಕಾಪಾಡುವ ಉದ್ದೇಶದಂತೆ ಕಂಡರೂ ನಿಜಾರ್ಥದಲ್ಲಿ ನೋಡಿದರೆ ಇದು ಭಾರತದ ಅತಿದೊಡ್ಡ ಡಿಜಿಟಲ್‌ ಬಳಕೆದಾರರ ಮಾರುಕಟ್ಟೆ ಮೇಲೆ ಹಿಡಿತ ಸಾಧಿಸುವ ಮೆಟಾದ ವಾಣಿಜ್ಯ ತಂತ್ರಗಾರಿಕೆಯೇ ಆಗಿದೆ.

----------------------

ಇದು ಒಂದು ರೀತಿಯಲ್ಲಿ ಮೆಟಾದ ‘ಫ್ರೀ ಬೇಸಿಕ್ಸ್‌ ಮತ್ತು ಇಂಟರ್ನೆಟ್‌.ಆರ್ಗ್‌ ಪ್ರೋಗ್ರಾಂ’ನ ರೀತಿಯದ್ದೇ ತಂತ್ರ. 10 ವರ್ಷದ ಹಿಂದೆ ಈ ಯೋಜನೆಯನ್ನು ಪ್ರಧಾನಿ ಮೋದಿ ಅವರ ಸರ್ಕಾರವೇ ಬ್ರೇಕ್‌ ಹಾಕಿತ್ತು. ಇದೀಗ ಅದೇ ರೀತಿಯ ಮತ್ತೊಂದು ರೀತಿಯ ಪ್ರಯತ್ನ ನಡೆಯುತ್ತಿದೆ.

ಈ ಪ್ರಯತ್ನವು ಮೆಟಾದ ಬೃಹತ್‌ ಡೇಟಾ ಸಂಗ್ರಹ ಕಾರ್ಯಕ್ರಮಕ್ಕೆ ಅನುಕೂಲ ಮಾಡಿಕೊಡುತ್ತದೆಯೇ ಹೊರತು ಭಾರತದ ಬಳಕೆದಾರರಿಗಲ್ಲ. ಇದರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಗ್ರಾಹಕರನ್ನು ಸೆಳೆಯುವುದರಿಂದ ಹಿಡಿದು ಅವರ ಜತೆಗೆ ವ್ಯವಹಾರ ಹಾಗೂ ಅವರನ್ನು ಉಳಿಸಿಕೊಳ್ಳುವುದು ಎಲ್ಲವೂ ನಮ್ಮ ನವೋದ್ಯಮಗಳಿಗೆ ದುಬಾರಿಯಾಗಲಿದೆ.

--------------

ಕಳ್ಳಾಟ: ನಿಮ್ಮ ಗುರುತಿನ ಮಾಲೀಕ ಯಾರು?

ವಂಚನೆಗಳ ಆರೋಪಗಳನ್ನು ಬದಿಗಿಟ್ಟು ನೋಡುವುದಾದರೆ ವಾಟ್ಸಾಪ್‌ ಒಂದು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುವ ನವೋದ್ಯಮವೇನೂ ಅಲ್ಲ, ಬದಲಾಗಿ ನಮ್ಮ ನ್ಯಾಯಾಲಯಗಳೇ ಖಚಿತಪಡಿಸಿದಂತೆ ಪ್ರಭಾವಶಾಲಿ ಕಂಪನಿಯಾಗಿದೆ. ದೇಶದಲ್ಲಿ ಹೆಚ್ಚಿನ ಜನ ಈ ಆ್ಯಪ್ ಅನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಅವರಿಗೆ ಈ ಆ್ಯಪ್‌ನಿಂದ ಹೊರಹೋಗುವುದು ಅಷ್ಟು ಸುಲಭವೂ ಅಲ್ಲ. ಯಾವಾಗ ಈ ದೈತ್ಯ ಪ್ಲಾಟ್‌ಫಾರ್ಮ್‌ ಗ್ರಾಹಕರ ಗುರುತನ್ನು ಪೋರ್ಟೆಬಲ್‌ ನಂಬರ್‌ನಿಂದ ಖಾಸಗಿ ಸ್ವಾಮ್ಯಕ್ಕೆ ಬದಲಾಯಿಸುತ್ತದೆಯೋ ಆಗ ಅದು ಅನುಕೂಲಕರ ವೈಶಿಷ್ಟ್ಯ ಆಗಿ ಉಳಿಯುವುದಿಲ್ಲ. ಬದಲಾಗಿ ಶತಕೋಟಿ ಭಾರತೀಯರ ಗುರುತಿನ ಮೇಲಿನ ಕಬಳಿಕೆಯಾಗುತ್ತದೆ.

ಇಲ್ಲಿನ ಲಾಕ್‌-ಇನ್‌ ಕಾರ್ಯವಿಧಾನವನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಸಿಗ್ನಲ್‌ನಿಂದ ಟೆಲಿಗ್ರಾಂ ಹೀಗೆ ನೀವು ಎಲ್ಲಿಗೆ ಹೋಗುತ್ತೀರೋ ಅಲ್ಲಿಗೆ ನಿಮ್ಮ ಜತೆಗೆ ನಿಮ್ಮ ಮೊಬೈಲ್‌ ನಂಬರ್‌ ಕೂಡಹೋಗುತ್ತದೆ. ಆದರೆ, ನಿಮ್ಮ ಯೂಸರ್‌ ನೇಮ್‌ ಆ ರೀತಿ ಹೋಗಲ್ಲ. ನೀವು ನಿಮ್ಮ ಯೂಸರ್‌ನೇಮ್‌ನಿಂದಷ್ಟೇ ಗುರುತಿಸಲ್ಪಡುತ್ತೀರಿ. ಆಗ ನೀವು ಆ ಪ್ಲಾಟ್‌ಫಾರ್ಮ್‌ ಅನ್ನು ಬಿಟ್ಟು ಹೋಗುವ ವೆಚ್ಚ ಹೆಚ್ಚಾಗುತ್ತದೆ. ಹೀಗೆ ಮೆಟಾ ನೀಡುವ ಹೊಸ ಗುರುತಿನ ಸುತ್ತ ಗ್ರಾಹಕರ ಜತೆಗಿನ ಸಂಬಂಧವನ್ನು ಮರುನಿರ್ಮಾಣ ಮಾಡುವ ಉದ್ಯಮಗಳು ಮುಂದೆ ಮೆಟಾದ ಜಾಗದಲ್ಲಿನ ಬಾಡಿಗೆದಾರನಾಗುತ್ತದೆ.

ವಾಟ್ಸಾಪ್‌, ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ನಲ್ಲಿ ಏಕರೂಪದ ಯೂಸರ್‌ನೇಮ್‌ನಿಂದಾಗಿ ವಿಶ್ವದ ಅತಿದೊಡ್ಡ ಡಿಜಿಟಲ್‌ ಪ್ರಜಾಪ್ರಭುತ್ವದ ಗುರುತು ಸದ್ದಿಲ್ಲದೆ ಅಮೆರಿಕದ ಕಾರ್ಪೊರೇಷನ್‌ನ ಕೈಗೆ ಹೋಗುತ್ತದೆ. ಭಾರತವು ಆಧಾರ್‌, ಯುಪಿಐ, ಡಿಜಿಲಾಕರ್‌ನಂಥ ಸಾರ್ವಜನಿಕ ಡಿಜಿಟಲ್ ಮೂಲಸೌಲಭ್ಯ ಸೃಷ್ಟಿಗೆ ದಶಕಗಳ ಕಾಲ ಕೆಲಸ ಮಾಡಿದೆ. ಯಾವುದೇ ಖಾಸಗಿ ಏಕಸ್ವಾಮ್ಯ ಕಂಪನಿಯು ಭಾರತೀಯರ ಬದುಕು ನಿಯಂತ್ರಿಸಬಾರದು ಎಂಬುದು ಇದರ ಹಿಂದಿನ ಉದ್ದೇಶವಾಗಿತ್ತು. ಹಾಗಾಗಿ ಇದೀಗ ನಾವು ನಮ್ಮ ನಿತ್ಯ ಸಂವಹನದ ಗುರುತನ್ನು ಬೇರೆಯವರಿಗೆ ಬಿಟ್ಟುಕೊಡಬಾರದು.

ಸರ್ಕಾರ ಏನು ನಿಯಂತ್ರಿಸಬೇಕು?

ಡಿಪಿಡಿಪಿ ಕಾಯ್ದೆ ಮತ್ತು ಐಟಿ ನಿಯಮಾವಳಿಗಳು ಇದೇ ಪರಿಸ್ಥಿತಿಗಾಗಿಯೇ ಅಸ್ತಿತ್ವದಲ್ಲಿವೆ. ಈ ಕಾಯ್ದೆ, ನಿಯಮಾವಳಿಗಳ ಉದ್ದೇಶ ನಾವೀನ್ಯತೆಯನ್ನು ತಡೆಯುವುದಲ್ಲ, ಬದಲಾಗಿ ಅದನ್ನು ಭಾರತೀಯ ಬಳಕೆದಾರರಿಗೆ ಉತ್ತರದಾಯಿಯನ್ನಾಗಿ ಮಾಡುವುದಾಗಿದೆ. ಇದೀಗ ಸರ್ಕಾರವು ಮೆಟಾಗೆ ಹಾಕಿರುವ ತಾತ್ಕಾಲಿಕ ತಡೆಯನ್ನು ದೃಢವಾದ ಮತ್ತು ಕಾಲಮಿತಿಯ ಷರತ್ತುಗಳಾಗಿ ಪರಿವರ್ತಿಸಬೇಕೆಂಬುದು ನನ್ನ ಆಗ್ರಹವಾಗಿದೆ. ಆ ಷರತ್ತುಗಳು..

1 ಸ್ವಯಂಆಗಿ ಸಂದೇಶ ಕಳುಹಿಸುವ ಬಾಟ್‌ ಹಾಗೂ ನಕಲು ಮುಕ್ತ ಸಂದೇಶಗಳಿಂದ ವಾಟ್ಸಾಪ್‌ ಮುಕ್ತವಾಗಿರಬೇಕು: ಈ ವೈಶಿಷ್ಟ ಬಿಡುಗಡೆಯಾಗುವ ಮೊದಲೇ ನಿಮ್ಮ ಡಿಜಿಟಲ್‌ ಹೆಸರನ್ನು ಸುರಕ್ಷಿತಗೊಳಿಸಬೇಕು. ಸರ್ಕಾರಿ ಸಂಸ್ಥೆಗಳು, ನಿಯಂತ್ರಕರು, ಬ್ಯಾಂಕ್ ಅಥವಾ ಪಾವತಿ ವ್ಯವಸ್ಥೆಯ ಹೆಸರನ್ನು ಬೇರೆಯವರಿಗೆ ನೀಡಬಾರದು. ಈ ಕುರಿತು ಆರಂಭದಲ್ಲೇ ಪರಿಶೀಲಿಸಬೇಕು. ಹೋಲಿಕೆಯ ಅಕ್ಷರಗಳನ್ನು ಪತ್ತೆಹಚ್ಚುವ ವ್ಯವಸ್ಥೆ ಇರಬೇಕು. ನಕಲಿ ಹೆಸರುಗಳನ್ನು ತಕ್ಷಣ ತೆಗೆದುಹಾಕುವ ವ್ಯವಸ್ಥೆ ರೂಪಿಸಬೇಕು.

2. ಸ್ವಯಂ ಸುರಕ್ಷೆ: ಅನಾಮಿಕ ವ್ಯಕ್ತಿಯಿಂದ ಬರುವ ಮೊದಲ ಸಂದೇಶವು ಎಚ್ಚರಿಕೆ ಮತ್ತು ನಿಬಂಧನೆಗಳೊಂದಿಗೆ ಸ್ವಯಂಘೋಷಿತವಾಗಿ ಪ್ರಕಟವಾಗಬೇಕು. ಈ ರೀತಿಯ ಸೌಲಭ್ಯಗಳನ್ನು ಸೆಟ್ಟಿಂಗ್‌ನೊಳಗೆ ಸೇರಿಸಬಾರದು. ಯಾಕೆಂದರೆ ಮೊದಲ ಬಾರಿಯ ಬಳಕೆದಾರರು ಇದನ್ನು ಪತ್ತೆಹಚ್ಚಲು ಸಾಧ್ಯವಿಲ್ಲ. ಒಂದೇ ಟ್ಯಾಪ್‌ನಲ್ಲಿ ವರದಿ ಮಾಡುವ ವ್ಯವಸ್ಥೆ ನೇರವಾಗಿ 1930 ಹೆಲ್ತ್‌ಲೈನ್‌ ಅನ್ನು ಸಂಪರ್ಕಿಸಬೇಕು.

3. ಡೇಟಾ ಕೊಯ್ಲು ನಿಲ್ಲಿಸಿ: ನಂಬರ್‌ ಸಂಪರ್ಕ, ವ್ಯವಹಾರದ ಐಡಿ, ಹುಡುಕಾಟಗಳನ್ನು ಕೇವಲ ಸೇವೆ ಮತ್ತು ಭದ್ರತೆಗಷ್ಟೇ ಬಳಸಬೇಕು. ಜಾಹೀರಾತು ಅಥವಾ ಅನ್ಯ ಉದ್ದೇಶಕ್ಕಲ್ಲ. ಡೇಟಾದಿಂದ ಹಣ ಮಾಡಲು ಬಯಸಿದರೆ, ಈ ಕುರಿತು ಸ್ಪಷ್ಟವಾಗಿ ಭಾರತೀಯ ಭಾಷೆಯಲ್ಲಿ ಬಳಕೆದಾರನ ಅನುಮತಿ ಪಡೆಯಬೇಕು.

4. ಸುರಕ್ಷತೆಯನ್ನು ದುರ್ಬಲಗೊಳಿಸಬಾರದು:

ಕಾನೂನುಬದ್ಧವಾಗಿ ಟ್ರ್ಯಾಕ್‌ ಮಾಡುವ ಅವಕಾಶ ಉಳಿಸಿಕೊಳ್ಳಬೇಕು. ಯೂಸರ್‌ನೇಮ್‌ ಜತೆಗಿನ ಮೊಬೈಲ್‌ ನಂಬರ್‌ ಸಂಪರ್ಕದ ಮಾಹಿತಿ ಮತ್ತು ಅದರ ಇತಿಹಾಸ ಕಾನೂನುಬದ್ಧವಾಗಿ ಕೇಳಿದಾಗ ತನಿಖಾ ಸಂಸ್ಥೆಗಳಿಗೆ ನೀಡಬೇಕು. ಈ ಯಾವ ಬೇಡಿಕೆಗಳೂ ಗೂಢಲಿಪೀಕರಣದ ಸಂದೇಶಗಳನ್ನು ಬದಲಾಯಿಸಲು ಹೋಗುವುದಿಲ್ಲ.

5. ಮಾರುಕಟ್ಟೆ ಏಕಸ್ವಾಮ್ಯ ಮತ್ತು ಕೇಂದ್ರೀಕರಣದ ಅಪಾಯ ತಡೆಯಬೇಕು: ಇಂಡಿಯನ್‌ ಕಾಂಪಿಟೀಷನ್‌ ಕಮಿಷನ್‌(ಸಿಸಿಐ) ಅನ್ನು ಈ ವಿಚಾರದಲ್ಲಿ ಮೈದಾನಕ್ಕಿಳಿಸಬೇಕು. ಮೆಟಾ ನೀಡುವ ಯೂಸರ್‌ನೇಮ್‌ಗಳ ಮೇಲೆ ಜನ ಮತ್ತು ವ್ಯವಹಾರಗಳು ಹೆಚ್ಚಾಗಿ ಅವಲಂಬಿಸುವುದು ಸ್ಪರ್ಧಾತ್ಮಕಯೆ ಪ್ರಶ್ನೆ ಹುಟ್ಟಿಗೆ ಕಾರಣವಾಗುತ್ತದೆ.

ಇದನ್ನು ಆರಂಭದಲ್ಲೇ ಸಿಸಿಐ ಮುಂದೆ ತರಬೇಕು. ಲಾಕ್-ಇನ್ ಪೂರ್ಣಗೊಂಡ ನಂತರ ಅಲ್ಲ. ಗುರುತಿನ ಪೋರ್ಟೆಬಿಲಿಟಿಯನ್ನು ಕಡ್ಡಾಯವಾಗಿ ಡಿಜಿಟಲ್‌ ಸ್ಪರ್ಧಾತ್ಮಕತೆಯ ನಿಯಮಗಳಡಿ ಸೇರಿಸಬೇಕು. ನಮ್ಮ ಯೂಸರ್‌ನೇಮ್‌ ಸಂಪರ್ಕಗಳು, ವ್ಯವಹಾರ ಸಂಬಂಧಗಳನ್ನು ಮೆಟಾದಿಂದ ಬೇರೆ ಆ್ಯಪ್‌ಗೆ ವರ್ಗಾಯಿಸುವ ಹಕ್ಕು ಇರಬೇಕು.

6 ಎಲ್ಲಾ ಪ್ಲಾಟ್‌ಫಾರ್ಮ್‌ಗೆ ಏಕರೂಪದ ನಿಯಮ ರೂಪಿಸಿ:

ವಾಟ್ಸಾಪ್‌ ಮಾತ್ರವಲ್ಲ, ಈ ನಿಯಮಾವಳಿಗಳು ಯಾವೆಲ್ಲ ಪ್ಲಾಟ್‌ಫಾರ್ಮ್‌ಗಳು ಯೂಸರ್‌ನೇಮ್‌ ನೀಡುತ್ತದೆಯೋ ಅವೆಲ್ಲಕ್ಕೂ ಅನ್ವಯವಾಗುವಂತೆ ನೋಡಿಕೊಳ್ಳಿ. ಅಂದರೆ ವಾಟ್ಸಾಪ್‌ ಮಾತ್ರವಲ್ಲ, ಸಿಗ್ನಲ್‌, ಅರಾಟ್ಟೈ ಇತರೆ ಮೆಸೇಜಿಂಗ್‌ ಪ್ಲಾಟ್‌ಫಾರ್ಮ್‌ಗಳನ್ನೂ ಇದರಡಿ ತನ್ನಿ. ಎಲ್ಲಾ ಆ್ಯಪ್‌ಗಳಿಗೆ ಒಂದೇ ನಿಯಮ ಜಾರಿ ಮಾಡುವುದರಿಂದ ನಮ್ಮ ನಿಯಂತ್ರಣ ಕ್ರಮಗಳು ಕೋರ್ಟಲ್ಲಿ ಗಟ್ಟಿಯಾಗಿ ನಿಲ್ಲುವಂತೆ ಮಾಡುತ್ತವೆ.

7. ಸಂವಹನ ಒಟಿಟಿ ಸೇವೆಗಳ ನಿಯಂತ್ರಣ ಮರುವಿಮರ್ಶೆಗೊಳಪಡಿಸಿ: ಸ್ಪ್ಯಾಮ್‌ ವಿರೋಧಿ ಮತ್ತು ಅನಪೇಕ್ಷಿತ ವಾಣಿಜ್ಯ ಸಂದೇಶಗಳ ನಿಯಂತ್ರಣದ ಅಡಿಯಲ್ಲಿ ಒಟಿಟಿ ಸಂವಹನ ಸೇವೆಗಳನ್ನು ತರಲು ಟ್ರಾಯ್‌ಗೆ ನಿರ್ದೇಶಿಸಿ. ಈ ಮೂಲಕ ವಂಚನೆ ಹಾಗೂ ಸ್ಪ್ಯಾಮ್‌ಗಳನ್ನು ತಡೆಯಿರಿ.

ಭಾರತವು ಮೆಟಾ, ಎಐ ಸೇರಿ ಯಾರೊಬ್ಬರ ಬೀಟಾ ಪರೀಕ್ಷೆಯ ಪ್ರಯೋಗಶಾಲೆ ಅಲ್ಲ:

ನಾನು ಹಲವು ವರ್ಷಗಳಿಂದ ಹೇಳುತ್ತಲೇ ಬಂದಿದ್ದೇನೆ, ಅದೇನೆಂದರೆ ದೈತ್ಯತಂತ್ರಜ್ಞಾನ ಕಂಪನಿಗಳು ಭಾರತವನ್ನು ಲಾಭಕ್ಕಾಗಿನ ಮಾರುಕಟ್ಟೆಯಾಗಿ ನೋಡುವ ಮತ್ತು ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕಾಲ ಹೋಗಿದೆ. ಹಾಗಂತ ನಾವು ಆವಿಷ್ಕಾರದ ವಿರೋಧಿಗಳಲ್ಲ, ಬೇರೆಯವರು ಕಾಗದದ ಮೇಲಷ್ಟೇ ಯೋಜನೆ ರೂಪಿಸುತ್ತಿರುವಾಗ ನಾವು ವಿಶ್ವದ ಮಹತ್ವಾಂಕ್ಷೆಯ ಡಿಜಿಟಲ್‌ ಸಾರ್ವಜನಿಕ ಮೂಲಸೌಲಭ್ಯ ರೂಪಿಸಿದ್ದೇವೆ. ಕಾನೂನು ಉಲ್ಲಂಘಿಸುವವರು ಶಿಕ್ಷೆಯಿಂದ ಪಾರಾಗುವುದನ್ನಷ್ಟೇ ನಾವು ವಿರೋಧಿಸುತ್ತೇವೆ.

ಹೀಗಾಗಿ ಮೆಟಾಗಿ ನಮ್ಮ ಸಂದೇಶ ಸರಳವಾಗಿದೆ. 60 ಕೋಟಿ ಭಾರತೀಯರು ನಿಮ್ಮ ಹೊಸ ವೈಶಿಷ್ಟಗಳನ್ನು ಬಿಡುಗಡೆ ಮಾಡುವ ಮಾರುಕಟ್ಟೆ ಸರಕಲ್ಲ. ಬದಲಾಗಿ ಇವರೆಲ್ಲ ಡಿಜಿಟಲ್‌ ಗಣರಾಜ್ಯದ ನಾಗರಿಕರು. ಅದೇ ರೀತಿ ಅವರ ಸುರಕ್ಷತೆ ಮತ್ತು ಖಾಸಗಿತನ ಹಾಗೂ ಗುರುತಿಗೆ ಸಂಬಂಧಿಸಿ ಭಾರತವಷ್ಟೇ ನಿಯಮಗಳನ್ನು ರೂಪಿಸಲಿದೆಯೇ ಹೊರತು ಬೇರೆಯವರು ಅಲ್ಲ.