ಕರ್ನಾಟಕದ ಗೃಹಲಕ್ಷ್ಮೀ ಮಾದರಿಯ ಗ್ಯಾರಂಟಿ ಯೋಜನೆಗಳನ್ನು ಪ್ರಧಾನಿಗಳ ಆರ್ಥಿಕ ಸಲಹಾ ಸಮಿತಿ ಶ್ಲಾಘಿಸಿದೆ. ಈ ಯೋಜನೆಗಳಿಂದ ಮಹಿಳೆಯರ ಕುಟುಂಬಗಳಲ್ಲಿ ಉಳಿತಾಯ ಮತ್ತು ಬಳಕೆ ಹೆಚ್ಚಾಗಿದ್ದು, ಹಣದುಬ್ಬರಕ್ಕೆ ಅನುಗುಣವಾಗಿ ಮೊತ್ತವನ್ನು ಪರಿಷ್ಕರಿಸಬೇಕು ಎಂದು ತನ್ನ ಕಾರ್ಯಪತ್ರದಲ್ಲಿ ಸಮಿತಿ ಶಿಫಾರಸು ಮಾಡಿದೆ.

ನವದೆಹಲಿ: ಮಹಿಳೆಯರ ಬ್ಯಾಂಕ್‌ ಖಾತೆಗೆ ಪ್ರತಿ ತಿಂಗಳು ತಲಾ 2000 ರು. ನೀಡುವ ಕರ್ನಾಟಕ ಸರ್ಕಾರದ ಗೃಹಲಕ್ಷ್ಮೀ ರೀತಿಯಲ್ಲಿ ದೇಶದ 15ಕ್ಕೂ ಹೆಚ್ಚು ರಾಜ್ಯಗಳಲ್ಲಿ ಜಾರಿಯಾಗಿರುವ ಗ್ಯಾರಂಟಿ ಯೋಜನೆಗಳಿಂದಾಗಿ, ಫಲಾನುಭವಿಗಳ ಕುಟುಂಬದಲ್ಲಿ ಉಳಿತಾಯ ಮತ್ತು ಬಳಕೆ ಎರಡೂ ಹೆಚ್ಚಾಗಿದೆ. ಆದರೆ ವೆಚ್ಚ ಮತ್ತು ಹಣದುಬ್ಬರ ಹೆಚ್ಚಿದಂತೆ ಕಾಲಕಾಲಕ್ಕೆ ಹೀಗೆ ನೀಡುವ ಹಣವನ್ನೂ ಪರಿಷ್ಕರಣೆ ಮಾಡಬೇಕು ಎಂದು ಪ್ರಧಾನಿಗಳ ಆರ್ಥಿಕ ಸಲಹಾ ಸಮಿತಿ ತನ್ನ ಇತ್ತೀಚಿನ ಕಾರ್ಯಪತ್ರದಲ್ಲಿ ಪ್ರಸ್ತಾಪಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕರ್ನಾಟಕ ಬಜೆಟ್‌ನಲ್ಲಿ 28600 ಕೋಟಿ ರು. ನಿಗದಿ

ವಿಶೇಷವೆಂದರೆ ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಸರ್ಕಾರ ವಾರ್ಷಿಕ 36000 ಕೋಟಿ ರು.ನಿಗದಿ ಮಾಡಿದ್ದನ್ನು ಬಿಟ್ಟರೆ, ಯೋಜನೆ ದೀರ್ಘ ಕಾಲದಿಂದ ಜಾರಿಯಲ್ಲಿರುವ ರಾಜ್ಯಗಳ ಪೈಕಿ ಕರ್ನಾಟಕವೇ ಮಹಿಳೆಯರಿಗೆ ಹಣ ವಿತರಣೆಯಲ್ಲಿ ಮೊದಲ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಯೋಜನೆ ಜಾರಿಗೆಂದೇ ಬಜೆಟ್‌ನಲ್ಲಿ 28600 ಕೋಟಿ ರು. ನಿಗದಿ ಮಾಡಲಾಗಿದೆ ಎಂದು ಸಮಿತಿ ಹೇಳಿದೆ.

ಜೊತೆಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ 15ಕ್ಕೂ ಹೆಚ್ಚು ರಾಜ್ಯಗಳಲ್ಲಿ ಯೋಜನೆ ಜಾರಿಯಾಗಿದ್ದು, 12 ಕೋಟಿ ಮಹಿಳೆಯರಿಗೆ 1.7 ಲಕ್ಷ ಕೋಟಿ ರು. ಹಣ ವಿನಿಯೋಗಿಸಲಾಗುತ್ತಿದೆ ಎಂದು ವರದಿ ಹೇಳಿದೆ.

2023-26ರ ನಡುವೆ ಯೋಜನೆ ವ್ಯಾಪ್ತಿ ವಿಸ್ತರಿಸಲ್ಪಟ್ಟ ರಾಜ್ಯಗಳ ಸಂಖ್ಯೆಯಲ್ಲಿ 5 ಪಟ್ಟು ಹೆಚ್ಚಳವಾಗಿದೆ. ಇದು ಅಭಿವೃದ್ಧಿ ಆರ್ಥಿಕತೆ ಮತ್ತು ರಾಜಕೀಯ ಆರ್ಥಿಕತೆಯ ಸಮ್ಮಿಲನಕ್ಕೆ ಉದಾಹರಣೆಯಾಗಿ ಹೊರಹೊಮ್ಮಿದೆ. ಜೊತೆಗೆ ಮಹಿಳೆಯರ ಕೈಗೆ ನೇರವಾಗಿ ಹಣ ನೀಡುವುದು ಪ್ರತಿ ಕುಟುಂಬದ ಕಲ್ಯಾಣ, ಹೆಚ್ಚಿನ ಹಣಕಾಸು ಒಳಗೊಳ್ಳುವಿಕೆ, ಲಿಂಗಾಧಾರಿತ ಆರ್ಥಿಕ ಒಳಗೊಳ್ಳುವಿಕೆಗೆ ಅತ್ಯಂತ ಪರಿಣಾಮಕಾರಿ ಮತ್ತು ಕಡಿಮೆ ವೆಚ್ಚದ ಸಾಧನ ಎಂಬುದು ಸಾಬೀತಾಗಿದೆ ಎಂದು ವರದಿ ಹೇಳಿದೆ.

ವರದಿಯಲ್ಲಿ ಏನಿದೆ?:

1. ಈ ಯೋಜನೆ ಪರಿಣಾಮ ಫಲಾನುಭವಿಗಳ ಕುಟುಂಬದ ಉಳಿತಾಯ ಮತ್ತು ಬಳಕೆ ಎರಡರಲ್ಲೂ ಏರಿಕೆ ಕಂಡುಬಂದಿದೆ.

2. ಕುಟುಂಬ ವೆಚ್ಚ, ಹಣದುಬ್ಬರಕ್ಕೆ ಅನುಗುಣವಾಗಿ ಕಾಲಕಾಲಕ್ಕೆ ಮಹಿಳೆಯರಿಗೆ ನೀಡುವ ಹಣದ ಮೊತ್ತ ಪರಿಷ್ಕರಿಸಬೇಕು.

3. ಮಹಾರಾಷ್ಟ್ರ, ಒಡಿಶಾದಲ್ಲಿ ಯೋಜನೆ ಬಳಿಕ ಕುಟುಂಬದ ವೆಚ್ಚದಲ್ಲಿ ಕ್ರಮವಾಗಿ ಶೇ.46, ಶೇ.28 ಏರಿಕೆ ಕಂಡುಬಂದಿದೆ.

4. ಯೋಜನೆಯನ್ನು ಕುಟುಂಬಗಳ ಸಾಮರ್ಥ್ಯ ವೃದ್ಧಿ, ಡಿಜಿಟಲ್‌ ಸಾಕ್ಷರತೆ, ಸ್ವಸಹಾಯ ಸಂಘಗಳ ಜೊತೆ ಜೋಡಿಸಬೇಕು.

5. ಕುಟುಂಬಗಳಲ್ಲಿ ಧನಾತ್ಮಕ ಬದಲಾವಣೆಗೆ, ಆರ್ಥಿಕ ಪರಿಸ್ಥಿತಿ ಸುಧಾರಣೆಗೆ, ಬಾಹ್ಯಪಾವತಿ ಅವಲಂಬನೆ ಕಡಿಮೆ ಮಾಡಿದೆ.