ಕಾಡಿನ ರಾಜ ಎಂದು ಹೆಸರಾಗಿರುವ ಸಿಂಹ ಧೈರ್ಯಕ್ಕೆ ಹೆಸರುವಾಸಿ ಆದರೆ ಇಲ್ಲೊಂದು ಕಡೆ ಬೀದಿನಾಯಿಗಳೆಲ್ಲಾ ಸೇರಿ ನಾಡಿಗೆ ಬಂದ ಕಾಡಿನ ರಾಜನನ್ನು ಕಾಡಿಗಟ್ಟಿರುವ ವಿಡಿಯೋವೊಂದು ವೈರಲ್ (Viral Video) ಆಗಿದೆ.
ಗುಜರಾತ್: ನಾವು ಪಕ್ಕಾ ಲೋಕಲ್ ಗುರು ಎಂದು ಯಾರಾದರೂ ಹೇಳುವುದನ್ನು ನೀವು ಆಗಾಗ ಕೇಳುತ್ತಿರುತ್ತೀರಿ. ಏನೋ ಸಾಧನೆ ಮಾಡಿ ಎಷ್ಟೋ ಎತ್ತರಕ್ಕೆ ಬೆಳೆದರೂ ನಿಮಗೆ ನಿಮ್ಮ ಲೋಕಲ್ ಅಂದ್ರೆ ನೀವು ಹುಟ್ಟಿ ಬೆಳೆದ ಜಾಗದಲ್ಲಿ ನಿಮಗೆ ನಿಮ್ಮದೇ ಒಂದು ಸ್ನೇಹಿತರ ಬಳಗ, ಆ ಊರಿನಲ್ಲೊಂದು ಹಿಡಿತ ಇದ್ದರೆ ನಿಮ್ಮ ಗತ್ತೇ ಬೇರೆ. ಆ ಊರಿನಲ್ಲಿ ನಿಮ್ಮ ಆ ಗತ್ತಿನ ಮುಂದೆ ದೊಡ್ಡ ದೊಡ್ಡವರು ಸಾಮಾನ್ಯರೆನಿಸುತ್ತಾರೆ. ಇದು ನೀವು ಹುಟ್ಟಿ ಬೆಳೆದ ಪ್ರದೇಶದಲ್ಲಿ ನಿಮಗಿರುವ ತಾಕತ್ತು. ಇದೇ ಕಾರಣಕ್ಕೆ ಒಂದು ಊರಿನಲ್ಲಿ ಪರವೂರಿನವರು ಬಂದು ಪೌರುಷ ತೋರಿಸಲು ಆಗುವುದಿಲ್ಲ. ತೋರಿಸಿದರೆ ಆಟ ನಡೆಯುವುದಿಲ್ಲ. ಇದು ಕೇವಲ ಮನುಷ್ಯರಲ್ಲಿ ಮಾತ್ರ ಅಲ್ಲ, ಪ್ರಾಣಿಗಳಲ್ಲೂ ಈ ಬೌಂಡರಿ ವಾರ್ ಇದೆ. ಪಕ್ಕದ ಗಲ್ಲಿಯ ಶ್ವಾನವೊಂದು ನಿಮ್ಮ ಏರಿಯಾಗೆ ಬಂದ್ರೆ ನಿಮ್ ಏರಿಯಾದ ನಾಯಿಗಳು ಸುಮ್ಮನೇ ಕೂರಲು ಸಾಧ್ಯವೇ ಇಲ್ಲ. ಅದನ್ನು ಅಟ್ಟಾಡಿಸಿ ಕಚ್ಚಿ ಓಡಿಸಿ ಬಿಡುತ್ತವೆ. ಈ ಬೌಂಡರಿಗಾಗಿಯೇ ಶ್ವಾನಗಳು ಅಲ್ಲಲ್ಲಿ ಮೂತ್ರ ಹುಯ್ಯುತ್ತವೆ. ಇದೆಲ್ಲಾ ಕತೆ ಈಗ್ಯಾಕೆ ಅಂತೀರಾ ಅದಕ್ಕೂ ಕಾರಣ ಇದೆ.
ಇಲ್ಲೊಂದು ಕಡೆ ಇದೇ ಕಾರಣಕ್ಕೆ ಸಿಂಹವೊಂದನ್ನು ಬೀದಿನಾಯಿಗಳು (Stray Dog) ಕಾಡಿಗಟ್ಟಿವೆ. ಕಾಡಿನ ರಾಜ ಎಂದು ಹೆಸರಾಗಿರುವ ಸಿಂಹ ಧೈರ್ಯಕ್ಕೆ ಹೆಸರುವಾಸಿ ಆದರೆ ಇಲ್ಲೊಂದು ಕಡೆ ಬೀದಿನಾಯಿಗಳೆಲ್ಲಾ ಸೇರಿ ನಾಡಿಗೆ ಬಂದ ಕಾಡಿನ ರಾಜನನ್ನು ಕಾಡಿಗಟ್ಟಿರುವ ವಿಡಿಯೋವೊಂದು ವೈರಲ್ (Viral Video) ಆಗಿದೆ. ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಸುಶಾಂತ್ ನಂದಾ (Sushanth Nanda) ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಗುಜರಾತ್‌ನ ಬೀದಿಯೊಂದರಲ್ಲಿ ಸಿಂಹವೊಂದು ಓಡಾಡಿದೆ ಇದನ್ನು ನೋಡಿದ ಬೀದಿನಾಯಿಗಳು ಸ್ವಲ್ಪವೂ ಹೆದರದೇ ಸಿಂಹವನ್ನು ಅಟ್ಟಿಸಿಕೊಂಡು ಹೋಗಿವೆ. ಬೀದಿನಾಯಿಯನ್ನು ನೋಡಿ ಸಿಂಹ ಓಡುತ್ತಿರುವ ವಿಡಿಯೋ ವೈರಲ್ ಆಗಿದೆ.
3 ಸಿಂಹಗಳನ್ನು ವಾಕಿಂಗ್ ಕರೆದುಕೊಂಡು ಹೊರಟ ಮಹಿಳೆ: ಬೆಚ್ಚಿಬಿದ್ದ ನೆಟ್ಟಿಗರು..!
ಇದನ್ನು ನೋಡಿದ ಅನೇಕರು ಹಲವು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ನಾಯಿಗಳನ್ನು ನೋಡಿ ಸಿಂಹ ಹಸುಗಳ ಹಿಂಡಿನತ್ತ ಓಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ 8 ಸಾವಿರಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಒಬ್ಬರು ಬಳಕೆದಾರರು ಕಾಮೆಂಟ್ ಮಾಡಿದ್ದು, ಆದರೂ ಇಲ್ಲಿ ಶ್ವಾನಗಳು ಬುದ್ಧಿವಂತಿಕೆ ತೋರಿವೆ. ಸಿಂಹಗಳಿಂದ ಸುರಕ್ಷಿತ ಅಂತರ ಕಾಯ್ದುಕೊಂಡಿವೆ ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು ಒಗ್ಗಟ್ಟಿನಲ್ಲಿ ಬಲವಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇದು ಬೀದಿಯ ರಾಜ ಹಾಗೂ ಕಾಡಿನ ರಾಜನ ನಡುವಿನ ಹೋರಾಟ ಎಂದು ಮತ್ತೊಬ್ಬರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.
ಕಣ್ಣೀರು ತರಿಸುತ್ತಿದೆ ಕಾಡಿನ ರಾಜನ ದುಸ್ಥಿತಿ: ತಿನ್ನಲು ಆಹಾರವಿಲ್ಲದೇ ಅಸ್ಥಿಪಂಜರದಂತಾದ ಸಿಂಹಗಳು
