ಸುವೇಂದು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಬಿಜೆಪಿ ಸರ್ಕಾರದ ಮೊದಲ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಬಾಂಗ್ಲಾ ಗಡಿಗೆ ಬೇಲಿ ನಿರ್ಮಿಸಲು ಭೂಮಿ ಹಸ್ತಾಂತರ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿ ಮತ್ತು ಆಯುಷ್ಮಾನ್ ಭಾರತ್ ಸೇರಿದಂತೆ ಹಲವು ಕೇಂದ್ರ ಯೋಜನೆಗಳಿಗೆ ಅನುಮೋದನೆ 

  • ಬಾಂಗ್ಲಾ ಗಡಿಗೆ ಬೇಲಿ, ಶಕ್ತಿ ಸ್ಕೀಂಗೆ ಸುವೇಂದು ಅಸ್ತು
  • -ಅಕ್ರಮ ನುಸುಳುವಿಕೆಗೆ ಕಡಿವಾಣ ಹಾಕಲು ಕ್ರಮ
  • -ಆಯುಷ್ಮಾನ್‌ ಭಾರತ್‌, ಜನಗಣತಿಗೆ ಅನುಮೋದನೆ
  • -ಬಿಜೆಪಿ ಸರ್ಕಾರದ ಮೊದಲ ಸಂಪುಟ ಸಭೆ ನಿರ್ಣಯ

ಕೋಲ್ಕತಾ (ಮೇ.12): ಬಾಂಗ್ಲಾದಿಂದ ಅಕ್ರಮ ಗಡಿ ನುಸುಳುವಿಕೆ ತಡೆಯನ್ನು ತನ್ನ ಪ್ರಮುಖ ಚುನಾವಣಾ ವಿಷಯಗಳ ಪೈಕಿ ಒಂದಾಗಿ ಮಾಡಿದ್ದ ಪಶ್ಚಿಮ ಬಂಗಾಳ ಬಿಜೆಪಿ, ತನ್ನ ಮೊದಲ ಸಂಪುಟ ಸಭೆಯಲ್ಲೇ ಗಡಿಯನ್ನು ಮತ್ತಷ್ಟು ಬಿಗಿಗೊಳಿಸುವ ಸಲುವಾಗಿ ಸೇನೆಗೆ ಜಾಗ ಹಸ್ತಾಂತರ ಮಾಡುವ ಮಹತ್ವದ ನಿರ್ಧಾರ ಕೈಗೊಂಡಿದೆ.

ಬಿಜೆಪಿ ಮೊದಲ ಸಂಪುಟ ಸಭೆಯಲ್ಲೇ ಮಹತ್ವದ ನಿರ್ಧಾರ

ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಸೋಮವಾರ ಇಲ್ಲಿ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಗಡಿ ನಿರ್ಮಾಣಕ್ಕೆ ಅಗತ್ಯವಾದ ಭೂಮಿಯನ್ನು 45 ದಿನಗಳ ಒಳಗೆ ಬಿಎಸ್‌ಎಫ್‌ಗೆ, ಜೂನ್‌ 1ರಿಂದ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ, ಕೇಂದ್ರದ ಹಲವು ಯೋಜನೆಗಳ ವ್ಯಾಪ್ತಿಗೆ ಸೇರುವ ಪ್ರಸ್ತಾವಗಳಿಗೆ ಅನುಮೋದನೆ ನೀಡಲಾಯಿತು.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುವೇಂದು, ‘ಗಡಿ ಜಿಲ್ಲೆಗಳಲ್ಲಿ ಜನಸಂಖ್ಯಾಶಾಸ್ತ್ರ (ಡೆಮಾಗ್ರಫಿ) ನಿರಂತರವಾಗಿ ಬದಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಗಡಿಯಲ್ಲಿ ಬೇಲಿಗಳನ್ನು ನಿರ್ಮಿಸಲು ಬಿಎಸ್‌ಎಫ್‌ಗೆ ಅಗತ್ಯವಾದ ಭೂಮಿಯನ್ನು ಹಸ್ತಾಂತರಿಸುವ ಪ್ರಕ್ರಿಯೆಗೆ ನಮ್ಮ ಸಚಿವ ಸಂಪುಟ ಅನುಮೋದನೆ ನೀಡಿದೆ. ಮುಂದಿನ 45 ದಿನಗಳಲ್ಲಿ ಭೂ ವರ್ಗಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ರಾಜ್ಯದ ಭೂ ಮತ್ತು ಭೂ ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗೆ ಸೂಚಿಸಲಾಗಿದೆ’ ಎಂದರು.

ಜನಗಣತಿ, ಆಯುಷ್ಮಾನ್‌ಗೆ ಅಸ್ತು:

ಉಳಿದಂತೆ ಆಯುಷ್ಮಾನ್‌ ಭಾರತ್‌ ಯೋಜನೆ ಜಾರಿ, ಜನಗಣತಿ ಆರಂಭ, ಪಿಎಂ ಜನ ಆರೋಗ್ಯ ಯೋಜನೆ, ಪಿಎಂ ಫಸಲ್‌ ಬಿಮಾ ಯೋಜನೆ, ಪಿಎಂ ಶ್ರೀ, ಪಿಎಂ ವಿಶ್ವಕರ್ಮ ಯೋಜನೆ ವ್ಯಾಪ್ತಿಗೆ ಸೇರ್ಪಡೆ, ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ತಕ್ಷಣದ ಅನುಷ್ಠಾನ, ಹಿಂದಿನ ವರ್ಷಗಳಲ್ಲಿ ನೇಮಕಾತಿ ಅವಕಾಶ ತಪ್ಪಿಸಿಕೊಂಡ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ, ಐಎಎಸ್, ಐಪಿಎಸ್ ಮತ್ತು ಡಬ್ಲ್ಯೂಬಿಪಿಎಸ್ ಅಧಿಕಾರಿಗಳನ್ನು ತರಬೇತಿಗಾಗಿ ಇತರ ರಾಜ್ಯಗಳಿಗೆ ಕಳುಹಿಸಲು ಅವಕಾಶ ನೀಡುವ ಹಿಂದಿನ ನೀತಿಯನ್ನು ರದ್ದುಗೊಳಿಸಲಾಗಿದೆ.

ಭೂಮಿಗೆ ವಿರೋಧ:

ಹಿಂದಿನ ಟಿಎಂಸಿ ಸರ್ಕಾರದ ಅವಧಿಯಲ್ಲಿ ಗಡಿಯಲ್ಲಿ ಬೇಲಿ ನಿರ್ಮಿಸಲು ಅಗತ್ಯ ಭೂಮಿ ಹಸ್ತಾಂತರಕ್ಕೆ ಮುಖ್ಯಮಂತ್ರಿ ಮಮತಾ ಷರತ್ತು ಒಡ್ಡಿದ್ದರು. ಹೀಗಾಗಿ ಗಡಿಯಲ್ಲಿ ಬೇಲಿ ನಿರ್ಮಾಣಕ್ಕೆ ಅಡ್ಡಿಯಾಗಿತ್ತು.