ಪಶ್ಚಿಮ ಬಂಗಾಳದಲ್ಲಿ 15 ವರ್ಷಗಳ ಮಮತಾ ಬ್ಯಾನರ್ಜಿ ಆಡಳಿತ ಅಂತ್ಯಗೊಂಡಿದ್ದು, ಬಿಜೆಪಿ 207 ಸ್ಥಾನಗಳೊಂದಿಗೆ ಅಧಿಕಾರಕ್ಕೇರಿದೆ. ಒಂದು ಕಾಲದಲ್ಲಿ ದೀದಿಯ ಬಲಗೈ ಬಂಟನಾಗಿದ್ದ ಸುವೇಂದು ಅಧಿಕಾರಿ, ಇದೀಗ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

15 ವರ್ಷಗಳ ಮಮತಾ ಬ್ಯಾನರ್ಜಿ ಹಿಡಿತದಿಂದ ಪಶ್ಚಿಮ ಬಂಗಾಳ ಮುಕ್ತವಾಗಿದೆ. 207 ಸೀಟ್‌ಗಳನ್ನು ಗೆಲ್ಲುವ ಮೂಲಕ ಬಿಜೆಪಿಯ ಗೆಲುವಿನೊಂದಿಗೆ ಕಾಂಗ್ರೆಸ್​​ ಕಾರ್ಯಕರ್ತರೂ ಸೇರಿ, ಹಿಂದೂಗಳೆಲ್ಲರೂ ಭಾರಿ ವಿಜಯೋತ್ಸವ ಆಚರಿಸಿದ್ದಾರೆ. ತಮ್ಮ ಸ್ಥಾನವನ್ನೂ ಉಳಿಸಿಕೊಳ್ಳಲಾಗದ ಮಮತಾಗೆ ಭಾರಿ ಮುಖಭಂಗವಾಗಿದೆ. ಇದರ ನಡುವೆಯೇ, ಈ ಹತಾಶೆ ಎಷ್ಟರಮಟ್ಟಿಗೆ ಹೋಗಿದೆ ಎಂದರೆ ದೀದಿ ವಿರುದ್ಧ ಗೆದ್ದ ಈಗ ಸಿಎಂ ಆಗಿ ಅಧಿಕಾರ ಸ್ವೀಕರಿಸಿರುವ ಸುವೇಂದು ಅಧಿಕಾರಿ ಅವರ ಪಿಎಯನ್ನೇ ಹ*ತ್ಯೆ ಮಾಡಲಾಗಿದೆ. ಇವೆಲ್ಲವುಗಳ ನಡುವೆಯೇ ಸುವೇಂದು ಅಧಿಕಾರಿ ಇಂದು ಅಧಿಕಾರದ ಗದ್ದುಗೆ ಏರಿದ್ದಾರೆ. ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

Add Asianetnews Kannada as a Preferred SourcegooglePreferred

ಪಶ್ಚಿಮ ಬಂಗಾಳದಲ್ಲಿ ಒಂದು ಕಾಲದಲ್ಲಿ ದೀದಿ ಬಲಗೈ ಬಂಟ ಎಂದೇ ಫೇಮಸ್ ಆಗಿದ್ದ ಸುವೇಂದು ಅಧಿಕಾರಿ ಪಶ್ಚಿಮ ಬಂಗಾಳದ ಚುಕ್ಕಾಣಿ ಹಿಡಿಯುವ ಮೂಲಕ ಗುರುವಾಗಿದ್ದ ಮಮತಾ ಔಟ್‌ ಆಗಿದ್ದ, ಶಿಷ್ಯ ಇನ್‌ ಆಗಿದ್ದಾರೆ. ಹಿಂದೊಮ್ಮೆ ಟಿಎಂಸಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಗದ್ದುಗೆ ಏರಲು ಕಾರಣರಾಗಿದ್ದ ಸುವೇಂದು ಅವರು, ಇಂದು ಆ ಗದ್ದುಗೆ ಏರಿದ್ದಾರೆ. 2020ರ ಸುಮಾರಿಗೆ, ಪಕ್ಷದಲ್ಲಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಅವರ ಪ್ರಭಾವ ಹೆಚ್ಚಾಗಿದ್ದರಿಂದ ಸುವೇಂದು ಅಧಿಕಾರಿ ಅಸಮಾಧಾನಗೊಂಡಿದ್ದರು. ನಾಯಕತ್ವದೊಂದಿಗಿನ ಭಿನ್ನಾಭಿಪ್ರಾಯ ಮತ್ತು ಪಕ್ಷದಲ್ಲಿ ತಮ್ಮ ಸ್ಥಾನಮಾನ ಕಡಿಮೆಯಾಗುತ್ತಿದೆ ಎಂಬ ಭಾವನೆಯಿಂದಾಗಿ, ಅವರು 2020ರ ಡಿಸೆಂಬರ್‌ನಲ್ಲಿ ಟಿಎಂಸಿ ತೊರೆದು ಬಿಜೆಪಿಗೆ ಸೇರಿದರು. ಬಿಜೆಪಿ ಸೇರಿದ ನಂತರ, ಅವರು 2021ರ ಚುನಾವಣೆಯಲ್ಲಿ ನಂದಿಗ್ರಾಮ ಕ್ಷೇತ್ರದಿಂದ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿ, ಬಿಜೆಪಿಯ ಬಲಿಷ್ಠ ನಾಯಕರಾಗಿ ಹೊರಹೊಮ್ಮಿದರು.

ಪ್ರಮಾಣ ವಚನ ಸ್ವೀಕಾರ

ಇಂದು ನಡೆದ ಕಾರ್ಯಕ್ರಮದಲ್ಲಿ, ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸುವೇಂದು ಅಧಿಕಾರಿ ಅವರಿಗೆ ರಾಜ್ಯಪಾಲ ಆರ್.ಎನ್. ರವಿ ಪ್ರಮಾಣ ವಚನ ಬೋಧಿಸಿದರು, ಜೊತೆಗೆ ಸಚಿವ ಸಂಪುಟಕ್ಕೆ ಸೇರಿದ ಐದು ಶಾಸಕರಾದ ದಿಲೀಪ್ ಘೋಷ್, ಅಗ್ನಿಮಿತ್ರ ಪಾಲ್, ಅಶೋಕ್ ಕೀರ್ತಾನಿಯಾ, ಕ್ಷುದಿರಾಮ್ ತುಡು ಮತ್ತು ನಿಸಿತ್ ಪ್ರಾಮಾಣಿಕ್ ಪ್ರಮಾಣ ವಚನ ಸ್ವೀಕಾರ ಮಾಡಿದರು. ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ಮೋದಿ, ಕೇಂದ್ರ ಸರ್ಕಾರದ ಸಚಿವರು ಮತ್ತು ಇತರ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ NDA ಯ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.

98 ವರ್ಷದ ವೃದ್ಧ

ಇಂದು ನಡೆದ ಕಾರ್ಯಕ್ರಮದಲ್ಲಿ ಗಮನ ಸೆಳೆದದ್ದು 98 ವರ್ಷದ ವೃದ್ಧ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಧಾನಿ ಮೋದಿ ಅವರು ಇವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದದ್ದು ಭಾರಿ ಸುದ್ದಿಯಾಗುತ್ತಿದೆ. ಅಷ್ಟಕ್ಕೂ ಇವರು ಮಖನ್ಲಾಲ್ ಸರ್ಕಾರ್. ಮಖನ್‌ಲಾಲ್ ಸರ್ಕಾರ್ ಅವರು ಪಶ್ಚಿಮ ಬಂಗಾಳದ ಬಿಜೆಪಿ ಪಕ್ಷದ 97-98 ವರ್ಷದ ಅತ್ಯಂತ ಹಿರಿಯ ಮತ್ತು ನಿಷ್ಠಾವಂತ ಕಾರ್ಯಕರ್ತರು. ಮಖನ್ಲಾಲ್ ಸರ್ಕಾರ್ ಅವರು ಸ್ವಾತಂತ್ರ್ಯಾನಂತರದ ಭಾರತದಲ್ಲಿ ರಾಷ್ಟ್ರೀಯತಾವಾದಿ ಚಳವಳಿಗೆ ಸಂಬಂಧಿಸಿದ ಆರಂಭಿಕ ತಳಮಟ್ಟದ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಜನಸಂಘದ ಕಾಲದಿಂದಲೂ ಬಿಜೆಪಿಗಾಗಿ ಕೆಲಸ ಮಾಡುತ್ತಿರುವ ಇವರು, ಬಂಗಾಳದಲ್ಲಿ ಬಿಜೆಪಿ ನೆಲೆ ಕಂಡುಕೊಳ್ಳಲು ದಶಕಗಳ ಕಾಲ ಶ್ರಮಿಸಿದವರು.ಇವರನ್ನು ಪಕ್ಷದ 'ಹಳೆ ಸಿಂಹ' ಎಂದು ಕರೆಯಲಾಗುತ್ತದೆ.

ಎಕ್ಸ್ ಖಾತೆಯಲ್ಲಿ ಅನ್​ಫಾಲೋ?

ಕೋಲ್ಕತ್ತಾ ಪೊಲೀಸರ ಅಧಿಕೃತ ‘ಎಕ್ಸ್’ ಖಾತೆಯಲ್ಲೊಂದು ಬದಲಾವಣೆ ನಡೆದಿದೆ. ಈ ಡಿಜಿಟಲ್ ಬದಲಾವಣೆಯನ್ನು ಹಲವರು ರಾಜಕೀಯ ಸಂದೇಶವೆಂದು ನೋಡುತ್ತಿದ್ದಾರೆ. ಮೊದಲು ಈ ಖಾತೆಯು ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತೃಣಮೂಲ ಕಾಂಗ್ರೆಸ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಸೇರಿದಂತೆ ಕೆಲ ಪ್ರಮುಖ ಟಿಎಂಸಿ ನಾಯಕರನ್ನು ಫಾಲೋ ಮಾಡುತ್ತಿತ್ತು. ಈಗ ಆ ಖಾತೆಯಿಂದ ಅವರುಗಳನ್ನು ಅನ್‌ಫಾಲೋ ಮಾಡಲಾಗಿದೆ ಎಂದು ವರದಿಯಾಗಿದೆ.