ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಮುಗಿದ ನಂತರ ಹಿಂಸಾಚಾರ ಭುಗಿಲೆದ್ದಿದ್ದು, ಐವರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರನ್ನು ಬಂಧಿಸಲಾಗಿದೆ. ಟಿಎಂಸಿ ಅಧಿಕಾರ ಕಳೆದುಕೊಂಡ ಹಿನ್ನೆಲೆಯಲ್ಲಿ, ಈ ಹಿಂದೆ ಅವರ ಹಿಡಿತದಲ್ಲಿದ್ದ ಮೀನುಗಾರಿಕೆ ಕೆರೆಗಳ ನಿಯಂತ್ರಣಕ್ಕಾಗಿ ಸಂಘರ್ಷಗಳು ನಡೆಯುತ್ತಿವೆ.

  • 2.50 ಲಕ್ಷ ಹೆಕ್ಟೇರ್‌ ಕೆರೆಗಳಲ್ಲಿ ಮೀನು ಸಾಕಾಣಿಕೆ ದೊಡ್ಡ ಆದಾಯದ ಮೂಲ
  • ಚುನಾವಣೆ ಬಳಿಕ ಭುಗಿಲೆದ್ದ ಹಿಂಸೆ । 5 ಸಾವು, 200 ಕೇಸು, 400 ಜನರ ಸೆರೆ

ಕೋಲ್ಕತಾ: ಪಶ್ಚಿಮ ಬಂಗಾಳ ಚುನಾವಣೆ ಮುಗಿದ ಬೆನ್ನಲ್ಲೇ ರಾಜ್ಯ ಭಾರೀ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ. ಹಿಂದಿನ ಟಿಎಂಸಿ ಆಡಳಿತದಲ್ಲಿ ಶೋಷಣೆಗೊಳಗಾದವರೆಲ್ಲ ಈಗ ಅವರ ವಿರುದ್ಧ ತಿರುಗಿಬಿದ್ದಿದ್ದು, ಕಳೆದ 48 ಗಂಟೆಗಳಲ್ಲಿ, ಸಂಭಾವ್ಯ ಸಿಎಂ ಸುವೇಂದು ಆಪ್ತ ಸಹಾಯಕ ಚಂದ್ರನಾಥ್‌ ರಥ್‌ ಸೇರಿದಂತೆ 5 ಜನ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ಮತ್ತೊಂದೆಡೆ ರಾಜ್ಯದಲ್ಲಿ ಕೆರೆಗಳ ಮೇಲಿನ ನಿಯಂತ್ರಣಕ್ಕಾಗಿ ಕಾದಾಟ ಶುರುವಾಗಿದೆ.

‘ಮೇ 4ರಂದು ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ರಾಜ್ಯಾದ್ಯಂತ ಸುಮಾರು 400 ಜನರನ್ನು ಬಂಧಿಸಲಾಗಿದೆ. 1000ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. 200 ಎಫ್‌ಐಆರ್‌ಗಳು ದಾಖಲಾಗಿವೆ’ ಎಂದು ಹಂಗಾಮಿ ಪೊಲೀಸ್ ಮಹಾನಿರ್ದೇಶಕ ಸಿದ್ಧನಾಥ್ ಗುಪ್ತಾ ಬುಧವಾರ ಹೇಳಿದ್ದಾರೆ.

2021ರ ವಿಧಾನಸಭೆ ಚುನಾವಣೆ ವೇಳೆ 1900 ಹಿಂಸಾಚಾರ ಪ್ರಕರಣ ನಡೆದು 29 ಮಂದಿ ಸಾವನ್ನಪ್ಪಿದ್ದರು. 345 ಜನರ ಬಂಧನವಾಗಿತ್ತು. ಈ ಭಾರಿ ಭದ್ರತೆ ಹೆಚ್ಚಿದ್ದ ಕಾರಣ ಹಿಂಸೆ, ಸಾವು, ನೋವಿನಲ್ಲಿ ಇಳಿಕೆ ಕಂಡುಬಂದಿದೆ.

ಕೆರೆಗಾಗಿ ಹೊಡೆದಾಟ:

ಮೀನುಗಾರಿಕೆ ಬಂಗಾಳಿಗರ ಆದಾಯದ ಮೂಲಗಳಲ್ಲಿ ಒಂದಾಗಿರುವ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಸಾವಿರಾರು ಭೇರಿ (ಕೆರೆ) ನಿರ್ಮಿಸಲಾಗಿದೆ. ಇವು 2.6 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ವಿಸ್ತರಿಸಿವೆ. ಕಳೆದ 15 ವರ್ಷಗಳಿಂದ ರಾಜ್ಯದಲ್ಲಿ ಟಿಎಂಸಿ ಆಡಳಿತ ಇದ್ದಕಾರಣ, ಅವುಗಳ ನಿಯಂತ್ರಣವು ಸಂಪೂರ್ಣವಾಗಿ ಟಿಎಂಸಿ ಕಡೆಯವರ ಕೈಲಿತ್ತು ಹಾಗೂ ಬೇರಾರಿಗೂ ಅವುಗಳ ಬಳಕೆಗೆ ಅವಕಾಶ ಇರಲಿಲ್ಲ. ಇದೀಗ ಪಕ್ಷವು ಅಧಿಕಾರ ಕಳೆದುಕೊಳ್ಳುತ್ತಿದ್ದಂತೆ ಆ ಕೊಳಗಳನ್ನು ಸಾರ್ವಜನಿಕರಿಗೆ ಮುಕ್ತ ಮಾಡಬೇಕೆಂಬ ಆಗ್ರಹ ಜೋರಾಗಿದೆ. ಇದೇ ವಿಷಯಕ್ಕೆ ಸಂದೇಶ್‌ ಖಾಲಿಯಲ್ಲಿ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಸಂಘರ್ಷ ನಡೆದು, ಆ ವೇಳೆ ನಡೆದ ಗುಂಡಿನ ಚಕಮಕಿಯಿಂದಾಗಿ ಐವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು.

ಕಾರ್ಯಕರ್ತರಿಗೆ ಬಿಜೆಪಿ ಎಚ್ಚರಿಕೆ:

ಟಿಎಂಸಿ ಕಾರ್ಯಕರ್ತರ ಮೇಲೆ ಬಿಜೆಪಿಯವರು ಹಲ್ಲೆ ನಡೆಸುತ್ತಿದ್ದಾರೆ ಎಂಬ ಆರೋಪಗಳ ನಡುವೆಯೇ, ‘ಯಾರಾದರೂ ಇಂತಹ ಕೃತ್ಯದಲ್ಲಿ ಭಾಗಿಯಾಗಿದ್ದು ಕಂಡುಬಂದಲ್ಲಿ ಅವರನ್ನು ಪಕ್ಷದಿಂದ ತೆಗೆದುಹಾಕಲಾಗುವುದು’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಮೀಕ್‌ ಭಟ್ಟಾಚಾರ್ಯ ಎಚ್ಚರಿಸಿದ್ದಾರೆ.