ನಟ ವಿಜಯ್ ಅವರ ಟಿವಿಕೆ ಪಕ್ಷವು ತಮಿಳುನಾಡು ರಾಜಕೀಯದಲ್ಲಿ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅವರ 'GOAT' ಸಿನಿಮಾದ ಕಾರಿನ ನಂಬರ್ ಪ್ಲೇಟ್ ಮತ್ತು ಸಹ-ನಟರು, ಜ್ಯೋತಿಷಿಗಳ ಭವಿಷ್ಯವಾಣಿಗಳು ಈ ಗೆಲುವನ್ನು ಮೊದಲೇ ಊಹಿಸಿದ್ದವು ಎಂಬ ಚರ್ಚೆ ಈಗ ವ್ಯಾಪಕವಾಗಿದೆ.

ಚೆನ್ನೈ (ಮೇ.6): ತಮಿಳುನಾಡು ರಾಜಕೀಯ ಅಖಾಡಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿರುವ ನಟ ವಿಜಯ್ ಅವರ ಟಿವಿಕೆ ಪಕ್ಷವು 234 ಕ್ಷೇತ್ರಗಳ ಪೈಕಿ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಅಸಾಧ್ಯವಾದುದನ್ನು ಸಾಧ್ಯವಾಗಿಸಿದೆ. ವಿಶೇಷವೆಂದರೆ, ವಿಜಯ್ ಅವರ ಈ ಗೆಲುವನ್ನು ಅವರ ಸಿನಿಮಾಗಳು ಹಾಗೂ ಆಪ್ತರು ಮೊದಲೇ ಊಹಿಸಿದ್ದರೇ ಎಂಬ ಚರ್ಚೆ ಈಗ ಶುರುವಾಗಿದೆ. ವಿಜಯ್ ಅಭಿನಯದ 'GOAT' (ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್) ಸಿನಿಮಾದ ದೃಶ್ಯವೊಂದು ಈಗ ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸುತ್ತಿದೆ. ಈ ದೃಶ್ಯದಲ್ಲಿ ವಿಜಯ್ ಓಡಿಸುತ್ತಿರುವ ಕಾರಿನ ನಂಬರ್ ಪ್ಲೇಟ್ ಮೇಲೆ "TN 07 CM 2026" ಎಂದು ಬರೆಯಲಾಗಿದೆ.

Add Asianetnews Kannada as a Preferred SourcegooglePreferred

2024ರ ಫೆಬ್ರವರಿಯಲ್ಲಿ ವಿಜಯ್‌ ತಮ್ಮ ಟಿವಿಕೆ ಪಕ್ಷವನ್ನು ಆರಂಭಿಸಿದ್ದರೆ, ಅದಾದ ಕೆಲವೇ ತಿಂಗಳಲ್ಲಿ ಅಂದರೆ, 2024ರ ಸೆಪ್ಟೆಂಬರ್‌ನಲ್ಲಿ ಗೋಟ್‌ ಸಿನಿಮಾ ಬಿಟುಗಡೆಯಾಗಿತ್ತು. ಈ ಚಿತ್ರದಲ್ಲಿ ತೋರಿಸಲಾದ ಈ ನಂಬರ್, "2026ರಲ್ಲಿ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿ (CM)" ಆಗಲಿದ್ದಾರೆ ಎಂಬ ಮುನ್ಸೂಚನೆಯಾಗಿತ್ತು ಎಂದು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಇದು ಕೇವಲ ಕಾಕತಾಳೀಯವೋ ಅಥವಾ ಉದ್ದೇಶಪೂರ್ವಕವೋ ಎಂಬ ಕುತೂಹಲ ಮೂಡಿದೆ.

ಇದೇ ಚಿತ್ರದಲ್ಲಿ ವಿಜಯ್ ಜೊತೆ ನಟಿಸಿದ್ದ ನಟ ಪ್ರೇಮ್‌ಗಿ ಅಮರೆನ್, 2026 ರಲ್ಲಿ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗುತ್ತಾರೆ ಎಂದು ಈ ಹಿಂದೆ ಭವಿಷ್ಯ ನುಡಿದಿದ್ದರು. 2024 ರಲ್ಲಿ ಅವರು 2026 ರಲ್ಲಿ ಅವರಿಗೆ ಮತ ಹಾಕುವುದಾಗಿ ಹೇಳಿದ್ದರು. ನಿರೀಕ್ಷಿಸಿ, ವಿಜಯ್ ಮುಖ್ಯಮಂತ್ರಿಯಾಗುತ್ತಾರೆ.

ನಟಿ ಪೂಜಾ ಹೆಗ್ಡೆ ಅವರ ವಿಡಿಯೋದಲ್ಲಿತ್ತು ಭವಿಷ್ಯ!

ಇದರ ನಡುವೆಎ ವಿಜಯ್ ಅವರ ಮುಂಬರುವ ಚಿತ್ರ 'ಜನ ನಾಯಗನ್' ಸೆಟ್‌ನ ವಿಡಿಯೋವೊಂದು ಈಗ ಹರಿದಾಡುತ್ತಿದೆ. ಇದರಲ್ಲಿ ನಟಿ ಪೂಜಾ ಹೆಗ್ಡೆ ಅಲ್ಲಿನ ವೈಟ್‌ಬೋರ್ಡ್ ಮೇಲೆ ಬರೆದಿದ್ದ "Who Will Win the Election?" (ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ?) ಎಂಬ ಪ್ರಶ್ನೆಯನ್ನು ತೋರಿಸಿ, ಕ್ಯಾಮೆರಾವನ್ನು ಹಿಂದೆ ನಿಂತಿದ್ದ ವಿಜಯ್ ಕಡೆಗೆ ತಿರುಗಿಸುತ್ತಾರೆ. ಆಗ ವಿಜಯ್ ನಾಚಿಕೆಯಿಂದ ನಗುತ್ತಾ ಮುಖ ಮುಚ್ಚಿಕೊಳ್ಳುತ್ತಾರೆ. "ನಾನು ಮೊದಲೇ ಗೆಲುವನ್ನು ಊಹಿಸಿದ್ದೆ" ಎಂದು ಪೂಜಾ ಈಗ ಈ ವಿಡಿಯೋ ಹಂಚಿಕೊಂಡಿದ್ದಾರೆ.

ಜ್ಯೋತಿಷ್ಯದ 'ಸುನಾಮಿ' ಭವಿಷ್ಯ ನಿಜವಾಯ್ತಾ?

ಖ್ಯಾತ ಜ್ಯೋತಿಷಿ ಮತ್ತು ರಾಜಕೀಯ ಸಲಹೆಗಾರ ರಾಧನ್ ಪಂಡಿತ್ ಅವರು ವಿಜಯ್ ಗೆಲುವಿನ ಬಗ್ಗೆ ಮೊದಲೇ ಭವಿಷ್ಯ ನುಡಿದಿದ್ದರು. ವಿಜಯ್ ಅವರ ಆಧ್ಯಾತ್ಮಿಕ ಗುರುವೆಂದೇ ಕರೆಯಲ್ಪಡುವ ಇವರು, ದಳಪತಿಯ ಜಾತಕವು ತಮಿಳುನಾಡು ರಾಜಕೀಯದಲ್ಲಿ 'ಸುನಾಮಿ' ಎಬ್ಬಿಸಲಿದೆ ಎಂದು ಹೇಳಿದ್ದರು. ಈ ಹಿಂದೆ ಜಯಲಲಿತಾ ಅವರಿಗೂ ಆಧ್ಯಾತ್ಮಿಕ ಮಾರ್ಗದರ್ಶಿಯಾಗಿದ್ದ ರಾಧನ್ ಪಂಡಿತ್, ವಿಜಯ್ ಅವರ ಪಕ್ಷದ ಹೆಸರು ಅವರ ಜನ್ಮಕುಂಡಲಿಗೆ ಪೂರಕವಾಗಿದೆ ಎಂದು ವಿಶ್ಲೇಷಿಸಿದ್ದರು.

ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಟಿವಿಕೆ

ಕೇವಲ ಎರಡು ವರ್ಷಗಳ ಹಿಂದೆ ಆರಂಭವಾದ ಟಿವಿಕೆ ಪಕ್ಷವು ಡಿಎಂಕೆ (59) ಮತ್ತು ಎಐಎಡಿಎಂಕೆ (47) ಎರಡನ್ನೂ ಹಿಂದಿಕ್ಕಿ 108 ಸ್ಥಾನಗಳನ್ನು ಗೆದ್ದುಕೊಂಡಿದೆ. ಬಹುಮತಕ್ಕೆ ಕೇವಲ 10 ಸ್ಥಾನಗಳ ಕೊರತೆಯಿದ್ದು, ಡಿಎಂಕೆ ಮೈತ್ರಿಕೂಟದಲ್ಲಿರುವ ಕಾಂಗ್ರೆಸ್ (5), ಸಿಪಿಐ, ಸಿಪಿಐ(ಎಂ) ಮತ್ತು ವಿಸಿಕೆ (ತಲಾ 2) ಪಕ್ಷಗಳು ವಿಜಯ್‌ಗೆ ಬೆಂಬಲ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ವಿಜಯ್ ಅವರು ತಿರುಚಿರಾಪಳ್ಳಿ (ಪೂರ್ವ) ಮತ್ತು ಪೆರಂಬೂರ್ ಎರಡೂ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದಾರೆ.