ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೆಹಲಿಯ ಆಟೋ ಚಾಲಕರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸಿದರು. ಬೆಲೆ ಏರಿಕೆಯಂತಹ ಸಂಕಷ್ಟಗಳ ಬಗ್ಗೆ ಚರ್ಚಿಸಿ, ಅವರೊಂದಿಗೆ ಭೋಜನ ಸವಿದು, ಸಂಸತ್ತಿನಲ್ಲಿ ಅವರ ಪರವಾಗಿ ಧ್ವನಿ ಎತ್ತುವುದಾಗಿ ಭರವಸೆ ನೀಡಿದರು.
ನವದೆಹಲಿ (ಮೇ.29): ಸದಾ ಜನಸಾಮಾನ್ಯರೊಂದಿಗೆ ಬೆರೆತು ಅವರ ಸಮಸ್ಯೆಗಳನ್ನು ಆಲಿಸುವ ವಿಶಿಷ್ಟ ಶೈಲಿಯ ರಾಜಕಾರಣದ ಮೂಲಕ ಗಮನ ಸೆಳೆಯುವ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ, ಶುಕ್ರವಾರ ದೆಹಲಿಯಲ್ಲಿ ಆಟೋ ರಿಕ್ಷಾ ಚಾಲಕರನ್ನು ಭೇಟಿಯಾಗಿ ಎಲ್ಲರ ಗಮನಸೆಳೆದಿದ್ದಾರೆ. ದೆಹಲಿಯ ಬೆಂಗಾಲಿ ಮಾರ್ಕೆಟ್ ಪ್ರದೇಶದ ತೋಡರಮಲ್ ಪಾರ್ಕ್‌ನಲ್ಲಿ ಆಟೋ ಚಾಲಕರನ್ನು ಭೇಟಿ ಮಾಡಿದ ಅವರು, ಚಾಲಕರ ಯೂನಿಫಾರ್ಮ್ ಧರಿಸಿ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಅಷ್ಟೇ ಅಲ್ಲದೇ, ಅವರ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸುವುದಾಗಿ ಭರವಸೆ ನೀಡಿದ್ದಾರೆ.
ದಿನೇ ದಿನೇ ಹೆಚ್ಚುತ್ತಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆ ಜೀವನ ನಡೆಸುವುದು ಹೇಗೆ ಕಷ್ಟಕರವಾಗಿದೆ ಎಂಬ ಆಟೋ ಚಾಲಕರ ಅಳಲನ್ನು ರಾಹುಲ್ ಗಾಂಧಿ ಪ್ರೀತಿಯಿಂದ ಆಲಿಸಿದರು. ಇದೇ ವೇಳೆ ಚಾಲಕರೊಂದಿಗೆ ಮಧ್ಯಾಹ್ನದ ಸರಳ ಭೋಜನವನ್ನು ಹಂಚಿಕೊಂಡ ರಾಹುಲ್, ಅವರ ದೈನಂದಿನ ಜೀವನದ ಏಳು-ಬೀಳುಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು. ಸಂವಾದ ಮುಗಿದ ಬಳಿಕ ಅವರು ಅಲ್ಲಿಂದ ಸಾಮಾನ್ಯ ಪ್ರಯಾಣಿಕನಂತೆ ಆಟೋ ರಿಕ್ಷಾದಲ್ಲೇ ಕುಳಿತು ಹೊರಟಿದ್ದು ವಿಶೇಷವಾಗಿತ್ತು.
"ನಮ್ಮೊಂದಿಗೆ ಬೇಳೆ-ರೊಟ್ಟಿ ತಿಂದರು": ಆಟೋ ಚಾಲಕ ರಮೇಶ್ ಪ್ರಸಾದ್ ಭಾವುಕ
ರಾಹುಲ್ ಗಾಂಧಿ ಅವರೊಂದಿಗಿನ ಭೇಟಿಯ ಬಗ್ಗೆ ಮಾತನಾಡಿದ ಆಟೋ ಚಾಲಕ ರಮೇಶ್ ಪ್ರಸಾದ್, "ನಾವು ರಾಹುಲ್ ಗಾಂಧಿ ಅವರೊಂದಿಗೆ ಮುಕ್ತವಾಗಿ ಮಾತನಾಡಿದೆವು. ಸದ್ಯದ ಮಾರುಕಟ್ಟೆಯಲ್ಲಿ ನಮ್ಮ ವ್ಯಾಪಾರ ಎಷ್ಟು ಮಂದಗತಿಯಲ್ಲಿ ಸಾಗುತ್ತಿದೆ ಎಂಬುದನ್ನು ಅವರಿಗೆ ವಿವರಿಸಿದೆವು. ಅವರು ಕೇವಲ ಉದ್ಯೋಗದ ಬಗ್ಗೆ ಮಾತ್ರವಲ್ಲದೆ, ನನ್ನ ಮಕ್ಕಳ ಶಿಕ್ಷಣ ಹೇಗಿದೆ? ದೈನಂದಿನ ಸಂಪಾದನೆ ಮತ್ತು ಊಟದ ಖರ್ಚನ್ನು ಹೇಗೆ ನಿಭಾಯಿಸುತ್ತೀರಿ? ಎಂದೆಲ್ಲಾ ಅತ್ಯಂತ ಆಪ್ತವಾಗಿ ವಿಚಾರಿಸಿದರು. ನಂತರ ನಾವೆಲ್ಲರೂ ಜೊತೆಯಾಗಿ ಬೇಳೆ (ದಾಲ್), ರೊಟ್ಟಿ ಮತ್ತು ಪಲ್ಯದ ಸರಳ ಊಟವನ್ನು ಸವಿದೆವು," ಎಂದು ಭಾವುಕರಾಗಿ ಹಂಚಿಕೊಂಡಿದ್ದಾರೆ.
ನಿಮ್ಮ ಪರವಾಗಿ ಪ್ರಧಾನಿ ಮೋದಿಯವರನ್ನು ಸಂಸತ್ತಿನಲ್ಲಿ ಪ್ರಶ್ನಿಸುವೆ
ಮತ್ತೊಬ್ಬ ಆಟೋ ಚಾಲಕ ಅರಿಂದರ್ ಕುಮಾರ್ ಶಾ ಮಾತನಾಡಿ, "ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರದ ಹೊರೆ, ಅದರಲ್ಲೂ ವಿಶೇಷವಾಗಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಗ್ಯಾಸ್ (ಸಿಎನ್‌ಜಿ/ಇಂಧನ) ಬೆಲೆಯಿಂದಾಗಿ ನಮಗೆ ಜೀವನ ನಡೆಸುವುದು ಎಷ್ಟು ದುಸ್ತರವಾಗಿದೆ ಎಂಬುದನ್ನು ಕಾಂಗ್ರೆಸ್ ನಾಯಕರಿಗೆ ಮನವರಿಕೆ ಮಾಡಿಕೊಟ್ಟೆವು. ನಮ್ಮೆಲ್ಲಾ ಕಷ್ಟಗಳನ್ನು ಆಲಿಸಿದ ರಾಹುಲ್ ಗಾಂಧಿ ಜಿ ಅವರು ಆಟೋ ಚಾಲಕರಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ಅಷ್ಟೇ ಅಲ್ಲದೆ, ನಿಮ್ಮ ಈ ಎಲ್ಲಾ ಕುಂದುಕೊರತೆಗಳನ್ನು ಸಂಸತ್ತಿನಲ್ಲಿ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಪ್ರಸ್ತಾಪಿಸಿ ನ್ಯಾಯ ಕೇಳುವುದಾಗಿ ಮಾತು ಕೊಟ್ಟಿದ್ದಾರೆ. ಸಂವಾದದ ಬಳಿಕ ನಾವೆಲ್ಲರೂ ಜೊತೆಯಾಗಿ ರೊಟ್ಟಿ ಮತ್ತು ಬಿಹಾರಿ ಶೈಲಿಯ ಆಲೂಗಡ್ಡೆ ಸಬ್ಜಿಯನ್ನು ತಿಂದೆವು," ಎಂದು ವಿವರಿಸಿದ್ದಾರೆ.


