ತಲೆಮರೆಸಿಕೊಂಡಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ, ತನ್ನ 'ಕೈಲಾಸ' ದ್ವೀಪದಿಂದ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ಚುನಾವಣಾ ಪ್ರದರ್ಶನಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾನೆ. ಈ  ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರು (ಮೇ.5): ತಲೆಮರೆಸಿಕೊಂಡಿರುವ ಸ್ವಯಂಘೋಷಿತ ಧರ್ಮಗುರು ನಿತ್ಯಾನಂದ, ತಮಿಳುನಾಡು ಚುನಾವಣಾ ಫಲಿತಾಂಶದ ನಂತರ ತನ್ನ ಸ್ವಯಂಘೋಷಿತ ದ್ವೀಪ ರಾಷ್ಟ್ರ 'ಕೈಲಾಸ'ದಿಂದ ವಿಜಯ್ ಮತ್ತು ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ಅಭಿನಂದನೆ ಸಲ್ಲಿಸಿದ್ದಾನೆ. ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಮಿಳಗ ವೆಟ್ರಿ ಕಳಗಂ ಪಕ್ಷವು ತೋರಿದ ಭರ್ಜರಿ ಪ್ರದರ್ಶನದ ಬೆನ್ನಲ್ಲೇ, ಅ*ತ್ಯಾಚಾ*ರ ಆರೋಪಿ ನಿತ್ಯಾನಂದ ಬಹಿರಂಗವಾಗಿ ನಟನಿಂದ ರಾಜಕಾರಣಿಯಾಗಿ ಬದಲಾದ ವಿಜಯ್‌ ಅವರನ್ನು ಅಭಿನಂದಿಸಿರುವುದು ಹೊಸ ಚರ್ಚೆಗೆ ಕಾರಣವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಿತ್ಯಾನಂದ ಹಾಕಿದ ಪೋಸ್ಟ್‌ನಲ್ಲಿ ಏನಿದೆ?

ತಾನು 'ಕೈಲಾಸ' ಎಂಬ ಮೈಕ್ರೋನೇಷನ್‌ನ ಮುಖ್ಯಸ್ಥ ಎಂದು ಹೇಳಿಕೊಳ್ಳುವ ನಿತ್ಯಾನಂದ, ಎಕ್ಸ್ (ಟ್ವಿಟರ್) ಪೋಸ್ಟ್‌ನಲ್ಲಿ ವಿಜಯ್ ಮತ್ತು ಅವರ ಪಕ್ಷವು ರಾಜ್ಯದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದಕ್ಕಾಗಿ "ಹೃತ್ಪೂರ್ವಕ ಅಭಿನಂದನೆಗಳನ್ನು" ಸಲ್ಲಿಸಿದ್ದಾನೆ. ಅತ್ಯಂತ ಔಪಚಾರಿಕ ಧಾಟಿಯಲ್ಲಿರುವ ಈ ಸಂದೇಶದಲ್ಲಿ, ತನ್ನ ಧಾರ್ಮಿಕ ಅಧಿಕಾರವನ್ನು ಉಲ್ಲೇಖಿಸಿರುವ ಆತ, ಹೊಸ ರಾಜಕೀಯ ನಾಯಕತ್ವದ ಅಡಿಯಲ್ಲಿ ತಮಿಳುನಾಡಿನ ಜನತೆಗೆ "ಸ್ಪಷ್ಟತೆ, ಶಕ್ತಿ ಮತ್ತು ಧಾರ್ಮಿಕ ನಾಯಕತ್ವ" ಸಿಗಲಿ ಎಂದು ಹಾರೈಸಿದ್ದಾನೆ.

ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಆನ್‌ಲೈನ್‌ನಲ್ಲಿ ಪರ-ವಿರೋಧದ ಪ್ರತಿಕ್ರಿಯೆಗಳ ಅಲೆ ಎದ್ದಿದೆ. ಕೆಲವು ಯೂಸರ್‌ಗಳು ಇದನ್ನು ಅನಗತ್ಯ ಮತ್ತು ಅಪ್ರಸ್ತುತ ಎಂದು ತಳ್ಳಿಹಾಕಿದರೆ, ಇನ್ನು ಕೆಲವರು ಪ್ರಮುಖ ರಾಜಕೀಯ ಬೆಳವಣಿಗೆಯ ಬಗ್ಗೆ ಇಂತಹ ವಿವಾದಾತ್ಮಕ ವ್ಯಕ್ತಿ ಪ್ರತಿಕ್ರಿಯಿಸಿರುವುದು ಪಕ್ಷದ ವರ್ಚಸ್ಸಿನ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನೊಂದಿಗೆ ಸುದೀರ್ಘ ಮತ್ತು ವಿವಾದಾತ್ಮಕ ಸಂಬಂಧ ಹೊಂದಿರುವ ನಿತ್ಯಾನಂದ, ಈ ಬೆಳವಣಿಗೆಯ ಮೂಲಕ ಮತ್ತೊಮ್ಮೆ ಸಾರ್ವಜನಿಕ ಚರ್ಚೆಯ ಮುನ್ನೆಲೆಗೆ ಬಂದಿದ್ದಾನೆ.