Asianet Suvarna News Asianet Suvarna News

ಪ್ರತಿ ವರ್ಷ ಜೋಶಿಮಠ 6.5 ಸೆ.ಮೀ. ಕುಸಿತ: ಚಂಬಾದಲ್ಲೂ ಭೂಮಿ ಬಿರುಕು, ಕುಸಿತ ಭೀತಿ

ಪ್ರತಿ ವರ್ಷ ಜೋಶಿಮಠ 6.5 ಸೆ.ಮೀ ಕುಸಿಯುತ್ತಿದೆ ಎಂದು ಡೆಹ್ರಾಡೂನ್‌ ಮೂಲದ ಸಂಸ್ಥೆ ಅಧ್ಯಯನ ನಡೆಸಿದೆ. ಉಪಗ್ರಹ ಚಿತ್ರಗಳನ್ನು ಆಧರಿಸಿ ವರದಿ ಬಿಡುಗಡೆ ಮಾಡಿದೆ. 

uttarakhand joshimath surrounding areas sink by 2 5 inch every year finds study ash
Author
First Published Jan 12, 2023, 9:45 AM IST

ನವದೆಹಲಿ: ಭೂಕುಸಿತಕ್ಕೆ ತುತ್ತಾಗಿರುವ ಉತ್ತರಾಖಂಡದ ಜೋಶಿಮಠ ಹಾಗೂ ಅದರ ಸುತ್ತಮುತ್ತಲ ಪ್ರದೇಶಗಳು ಪ್ರತಿವರ್ಷ ಅಂದಾಜು 6.5 ಸೆ.ಮೀನಷ್ಟು ಕುಸಿತ ಕಾಣುತ್ತಿವೆ ಎಂದು ಡೆಹ್ರಾಡೂನ್‌ ಮೂಲದ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ರಿಮೋಟ್‌ ಸೆನ್ಸಿಂಗ್‌ನ ವರದಿ ತಿಳಿಸಿದೆ. ಇದಕ್ಕಾಗಿ ಈ ಸಂಸ್ಥೆ ಕಳೆದ 2 ವರ್ಷಗಳ ಉಪಗ್ರಹ ಚಿತ್ರಗಳನ್ನು ಆಧರಿಸಿ ಅಧ್ಯಯನ ನಡೆಸಿದೆ. 

ಇದಕ್ಕಾಗಿ 2020ರಿಂದ 2022ರವರೆಗಿನ ಉಪಗ್ರಹ ಚಿತ್ರಗಳನ್ನು (Satellite Images) ಅಧ್ಯಯನ (Study) ಮಾಡಲಾಗಿದೆ. ಕುಸಿತ ಕಂಡಿರುವ ಪ್ರದೇಶಗಳನ್ನು ಕೆಂಪು ಚುಕ್ಕಿಗಳಿಂದ ಗುರುತಿಸಲಾಗಿದ್ದು, ಇದು ಕೇವಲ ಜೋಶಿಮಠ (Joshimath) ನಗರಕ್ಕಷ್ಟೇ ಸೀಮಿತವಾಗಿಲ್ಲ. ಸಂಪೂರ್ಣವಾಗಿ ಕಣಿವೆಯನ್ನು ಆವರಿಸಿದೆ. ಈ ಪ್ರದೇಶಗಳು ಪ್ರತಿವರ್ಷ 6.5 ಸೆ.ಮೀ., ಅಥವಾ 2.5 ಇಂಚು ಕುಸಿತ ಕಂಡಿವೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಇದನ್ನು ಓದಿ: ಜೋಶಿಮಠದಲ್ಲಿ ಮತ್ತೆ 68 ಮನೆಗಳು ಬಿರುಕು: ಊರು ಬಿಡಲು ನಿವಾಸಿಗಳ ಹಿಂದೇಟು; 4000 ಜನರು ಶಿಫ್ಟ್

ಭೂಕುಸಿತ (Landslide) ಅಪಾಯಕ್ಕೆ ಸಿಲುಕಿರುವ ಉತ್ತರಾಖಂಡದ (Uttarakhand) ಜೋಶಿಮಠ ಹಾಗೂ ಅದರ ಸುತ್ತಲಿನ ಪ್ರದೇಶಗಳು ಪ್ರತಿವರ್ಷ 6.5 ಸೆಂ.ಮೀ.ನಷ್ಟು ಕುಸಿಯುತ್ತಿವೆ ಎಂದು ಡೆಹ್ರಾಡೂನ್‌ನ ಭಾರತೀಯ ಸೂಕ್ಷ್ಮ ಸಂವೇದಿ ಸಂಸ್ಥೆಯ ವರದಿ ತಿಳಿಸಿರುವುದು ಆತಂಕ ಹೆಚ್ಚಿಸಿದೆ.

ಜೋಶಿಮಠ ಕಟ್ಟಡ ತೆರವಿಗೆ ಪ್ರತಿಭಟನಾಕಾರರಿಂದ ತಡೆ
ಜೋಶಿಮಠ: ಜೋಶಿಮಠದಲ್ಲಿ ವಾಲಿಕೊಂಡಿರುವ ಕಟ್ಟಡಗಳ ತೆರವಿಗೆ ಸ್ಥಳೀಯರು ಅಡ್ಡಿ ಮಾಡಿದ್ದಾರೆ. ಹೀಗಾಗಿ ಬುಧವಾರ ನಿಗದಿಯಾಗಿದ್ದ ಎರಡು ಹೋಟೆಲ್‌ಗಳ ತೆರವು ಕಾರ್ಯಾಚರಣೆಯನ್ನು ಮುಂದೂಡಲಾಗಿದೆ. ಈ ನಡುವೆ ಭೂಕುಸಿತ ಸ್ಥಳದಲ್ಲಿ ಮಳೆಯಾಗುತ್ತಿರುವ ಕಾರಣ, ಭೂಕುಸಿತ ಅಪಾಯ ಮತ್ತಷ್ಟು ಹೆಚ್ಚಾಗಿದ್ದು ಜನರಲ್ಲಿ ಆತಂಕ ಮೂಡಿಸಿದೆ.

ಇದನ್ನೂ ಓದಿ: ಜೋಶಿಮಠ ಮುಳುಗಡೆಗೆ ಕಾರಣವಾಯ್ತಾ ಎನ್‌ಟಿಪಿಸಿ ಯೋಜನೆ?

ಸರ್ಕಾರ ಜೋಶಿಮಠದಲ್ಲಿ ಸಂಪೂರ್ಣ ವಾಲಿಕೊಂಡಿದ್ದ 2 ಹೋಟೆಲ್‌ಗಳ ತೆರವಿಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿತ್ತು. ಆದರೆ ತೆರವುಗೊಳಿಸುವ ಕಟ್ಟಡಕ್ಕೆ ಹೆಚ್ಚಿನ ಪರಿಹಾರ ನೀಡಬೇಕೆಂದು ನಿವಾಸಿಗಳು ಬೇಡಿಕೆ ಮುಂದಿಟ್ಟು, ಕಾರ್ಯಾಚರಣೆಗೆ ಅಡ್ಡಿ ಮಾಡಿದ್ದಾರೆ. ಆದರೆ ಸರ್ಕಾರ, ತೆರವಾಗುವ ಪ್ರತಿಮನೆಗೆ ತಲಾ 1.5 ಲಕ್ಷ ರು. ನೆರವಿನ ಭರವಸೆ ನೀಡಿದೆ. ಜೊತೆಗೆ ತಕ್ಷಣಕ್ಕೆ 2 ಹೋಟೆಲ್‌ ಬಿಟ್ಟು ಉಳಿದ ಯಾವ ಕಟ್ಟಡಗಳನ್ನೂ ತೆರವು ಮಾಡುವುದಿಲ್ಲ ಎಂದು ಹೇಳಿದೆ.

ಸದ್ಯ ನಗರದಲ್ಲಿ 723 ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಯಾವುದೇ ಮನೆಗಳನ್ನು ತೆರವು ಮಾಡಿಲ್ಲ. ಆದರೆ ಅಪಾಯದ ಸ್ಥಿತಿಯಲ್ಲಿರುವ ಮನೆಗಳ ಮೇಲೆ ಕೆಂಪು ಬಣ್ಣದಲ್ಲಿ ಗುರುತು ಹಾಕಲಾಗಿದೆ. ಗುರುತು ಹಾಕಲಾಗಿರುವ ಮನೆಗಳನ್ನು ಸಾಧ್ಯವಾದಷ್ಟು ಬೇಗ ಖಾಲಿ ಮಾಡುವಂತೆ ಅಲ್ಲಿನ ನಿವಾಸಿಗಳಿಗೆ ಸೂಚಿಸಲಾಗಿದೆ. ’ ಎಂದು ಮುಖ್ಯಮಂತ್ರಿಯ ಕಾರ್ಯದರ್ಶಿ ಮೀನಾಕ್ಷಿ ಸುಂದರಮ್‌ ಹೇಳಿದ್ದಾರೆ.

ಇದನ್ನೂ ಓದಿ: ಮುಳುಗುತ್ತಿರುವ ವಲಯ ಎಂದು ಘೋಷಣೆಯಾದ ಉತ್ತರಾಖಂಡ್‌ನ ಜೋಶಿಮಠ: 60ಕ್ಕೂ ಹೆಚ್ಚು ಕುಟುಂಬಗಳ ಸ್ಥಳಾಂತರ

ಆತಂಕ ಹೆಚ್ಚಿಸಿದ ಮಳೆ: ಉತ್ತರಾಖಂಡದಲ್ಲಿ ಆರಂಭವಾಗಿರುವ ಮಳೆ ಹಾಗೂ ಭಾರಿ ಹಿಮಪಾತ ಭೂ ಕುಸಿತದ ಆತಂಕವನ್ನು ಮತ್ತಷ್ಟು ಹೆಚ್ಚು ಮಾಡಿದೆ. ಒಂದು ವೇಳೆ ಮಳೆ ಹೆಚ್ಚಾದರೆ ಭೂಕುಸಿತವೂ ಹೆಚ್ಚಾಗಲಿದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಈಗಾಗಲೇ ಮನೆಗಳು ಬಿರುಕು ಬಿಟ್ಟಿರುವುದರಿಂದ ತೆರವು ಕಾರ್ಯಾಚರಣೆಗೆ ಬುಲ್ಡೋಜರ್‌ ಮುಂತಾದ ಭಾರಿ ವಾಹನ ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ.

ಚಂಬಾದಲ್ಲೂ ಭೂಮಿ ಬಿರುಕು, ಕುಸಿತ ಭೀತಿ
ಚಮೋಲಿ: ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ ಹಾಗೂ ಕರ್ಣಪ್ರಯಾಗದಲ್ಲಿ ದಿನೇ ದಿನೇ ಭೂಕುಸಿತ ಹೆಚ್ಚುತ್ತಿರುವ ನಡುವೆಯೇ ನೆರೆಯ ತೆಹ್ರೀ ಜಿಲ್ಲೆಯಲ್ಲೂ ಭೂಕುಸಿತದ ಪರಿಣಾಮ ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಹೀಗಾಗಿ ಸುಮಾರು 10,000 ಜನಸಂಖ್ಯೆ ಹೊಂದಿರುವ ನಗರದ ನಿವಾಸಿಗಳಲ್ಲಿ ಆತಂಕ ಕಾಣಿಸಿಕೊಂಡಿದೆ.
ತೆಹ್ರಿ ಸರೋವರದ ಪಕ್ಕದ ಗ್ರಾಮಗಳಲ್ಲಿ ಭೂಕುಸಿತ ಉಂಟಾಗುತ್ತಿದೆ. ಸರ್ವಋತು ಯೋಜನೆಯಡಿ ಚಂಬಾದಲ್ಲಿ 440.ಮೀ ಉದ್ದದ ಸುರಂಗ ನಿರ್ಮಿಸಲಾಗಿದ್ದು ಇದುವೇ ಬಿರುಕುಗಳಿಗೆ ಪ್ರಮುಖ ಕಾರಣ ಎನ್ನಲಾಗಿದೆ.

ಇದನ್ನೂ ಓದಿ: ಜೋಶಿಮಠದಲ್ಲಿ ಎರಡು ಐಷಾರಾಮಿ ಹೋಟೆಲ್‌ ನೆಲಸಮ, ತುರ್ತು ವಿಚಾರಣೆ ನಿರಾಕರಿಸಿದ ಸುಪ್ರೀಂ ಕೋರ್ಟ್‌!

‘ಸುರಂಗ ನಿರ್ಮಾಣ ಪ್ರಾರಂಭವಾದಾಗಿನಿಂದಲೇ ಬಿರುಕುಗಳು ಕಾಣಿಸಿಕೊಳ್ಳುತ್ತಿವೆ. ಈ ಬಗ್ಗೆ ಹಲವಾರು ಸಮೀಕ್ಷೆಗಳು ನಡೆದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ’ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೇ ಜೋಶಿಮಠದಲ್ಲಿ ಕೈಗೊಳ್ಳುತ್ತಿರುವ ಕ್ರಮಗಳನ್ನು ಇಲ್ಲೂ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Follow Us:
Download App:
  • android
  • ios