Asianet Suvarna News Asianet Suvarna News

ಮುಳುಗುತ್ತಿರುವ ವಲಯ ಎಂದು ಘೋಷಣೆಯಾದ ಉತ್ತರಾಖಂಡ್‌ನ ಜೋಶಿಮಠ: 60ಕ್ಕೂ ಹೆಚ್ಚು ಕುಟುಂಬಗಳ ಸ್ಥಳಾಂತರ

ಈ ಹಿನ್ನೆಲೆ ಜೋಶಿಮಠವನ್ನು ಮುಳುಗುತ್ತಿರುವ ವಲಯ ಎಂದು ಘೋಷಿಸಲಾಗಿದೆ ಮತ್ತು ಮುಳುಗುತ್ತಿರುವ ಪಟ್ಟಣದಲ್ಲಿ ಹಾನಿಗೊಳಗಾದ ಮನೆಗಳಲ್ಲಿ ವಾಸಿಸುವ 60ಕ್ಕೂ ಹೆಚ್ಚು ಕುಟುಂಬಗಳನ್ನು ತಾತ್ಕಾಲಿಕ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

uttarakhands joshimath declared sinking zone over 60 families evacuated report ash
Author
First Published Jan 8, 2023, 10:41 PM IST

ಆದಿ ಜಗದ್ಗುರು ಶಂಕರಾಚಾರ್ಯರು (Shankaracharya) ಸ್ಥಾಪಿಸಿರುವ ಜ್ಯೋತಿಷ್‌ಪೀಠ ಇರುವ, ‘ಉತ್ತರ ಭಾರತದ ಶೃಂಗೇರಿ’ ಎನ್ನಬಹುದಾದ ಉತ್ತರಾಖಂಡದ (Uttarakhand) ಜೋಶಿಮಠಕ್ಕೆ (Joshimath) ಮುಳುಗುವ ಭೀತಿ ಎದುರಾಗಿದೆ. ಕ್ಷಣ ಕ್ಷಣಕ್ಕೂ ಭೂಮಿಯಲ್ಲಿ (Earth) ಬಿರುಕುಗಳು ಹೆಚ್ಚಾಗುತ್ತಿದ್ದು, ನಗರವನ್ನೇ ಭೂಮಿಯು ಸಮಾಧಿ ಮಾಡುವ ಭೀತಿ ಸೃಷ್ಟಿಯಾಗಿದೆ. ಇದರಿಂದ ನಗರದ 20 ಸಾವಿರ ಜನರು ನಿತ್ಯ ಪ್ರಾಣಭೀತಿಯಲ್ಲಿ ಕಾಲ ನೂಕುತ್ತಿದ್ದಾರೆ ಎಂದು ತಿಳಿದುಬಂದಿದೆ. 

ಈ ಹಿನ್ನೆಲೆ ಜೋಶಿಮಠವನ್ನು ಮುಳುಗುತ್ತಿರುವ ವಲಯ (Sinking Zone) ಎಂದು ಘೋಷಿಸಲಾಗಿದೆ ಮತ್ತು ಮುಳುಗುತ್ತಿರುವ ಪಟ್ಟಣದಲ್ಲಿ ಹಾನಿಗೊಳಗಾದ ಮನೆಗಳಲ್ಲಿ ವಾಸಿಸುವ 60ಕ್ಕೂ ಹೆಚ್ಚು ಕುಟುಂಬಗಳನ್ನು ತಾತ್ಕಾಲಿಕ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಅಲ್ಲದೆ, ಕನಿಷ್ಠ 90 ಕುಟುಂಬಗಳನ್ನು ಸ್ಥಳಾಂತರಿಸಬೇಕಾಗಿದೆ. ಸ್ಥಳೀಯ ಆಡಳಿತವು ಹಿಮಾಲಯ ಪಟ್ಟಣದಲ್ಲಿ ನಾಲ್ಕೈದು ಸ್ಥಳಗಳಲ್ಲಿ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿದೆ ಎಂದು ಗರ್ವಾಲ್ ಕಮಿಷನರ್ ಸುಶೀಲ್ ಕುಮಾರ್ ತಿಳಿಸಿದ್ದಾರೆ.

ಇದನ್ನು ಓದಿ: ಕುಸೀತಿದೆ ಉತ್ತರದ ಶೃಂಗೇರಿ ‘ಜೋಶಿಮಠ’: 600 ಕುಟುಂಬ ಸ್ಥಳಾಂತರ

ಈ ಮಧ್ಯೆ, ಚಮೋಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಹಿಮಾಂಶು ಖುರಾನಾ ಪೀಡಿತ ಪ್ರದೇಶದಲ್ಲಿ ಮನೆಯಿಂದ ಮನೆಗೆ ತೆರಳಿ ಹಾನಿಯ ಪ್ರಮಾಣವನ್ನು ನಿರ್ಣಯಿಸಿದರು ಮತ್ತು ಬಿರುಕು ಬಿಟ್ಟ ಮನೆಗಳಲ್ಲಿ ವಾಸಿಸುವ ಜನರಿಗೆ ಪರಿಹಾರ ಕೇಂದ್ರಗಳಿಗೆ ತೆರಳುವಂತೆ ಮನವಿ ಮಾಡಿದರು. ಇನ್ನು, ಗುರುವಾರದಿಂದ ಜೋಶಿಮಠದಲ್ಲಿ ಮೊಕ್ಕಾಂ ಹೂಡಿರುವ ಸುಶೀಲ್ ಕುಮಾರ್, ನೆಲಮಟ್ಟದಲ್ಲಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವ ಸಮಿತಿಯ ಮುಖ್ಯಸ್ಥರಾಗಿದ್ದಾರೆ.

ಜೋಶಿಮಠದಲ್ಲಿ ಒಟ್ಟು 4,500 ಕಟ್ಟಡಗಳಿದ್ದು, ಇವುಗಳಲ್ಲಿ 610 ಕಟ್ಟಡಗಳಲ್ಲಿ ದೊಡ್ಡ ಬಿರುಕುಗಳು ಉಂಟಾಗುತ್ತಿದ್ದು, ವಾಸಕ್ಕೆ ಯೋಗ್ಯವಾಗಿಲ್ಲ. ಹಾಗೂ, ಸಮೀಕ್ಷೆ ನಡೆಯುತ್ತಿದ್ದು, ಹಾನಿಗೊಳಗಾದ ಕಟ್ಟಡಗಳ ಸಂಖ್ಯೆ ಹೆಚ್ಚಾಗಬಹುದು ಎಂದೂ ಅವರು ಹೇಳಿದರು. ಇನ್ನು, ಜೋಶಿಮಠದ ನಾಲ್ಕೈದು ಸುರಕ್ಷಿತ ಸ್ಥಳಗಳಲ್ಲಿ ತಾತ್ಕಾಲಿಕ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕೆಲವು ಹೋಟೆಲ್‌ಗಳು, ಗುರುದ್ವಾರ ಮತ್ತು ಎರಡು ಅಂತರ ಕಾಲೇಜುಗಳು ಸೇರಿದಂತೆ ಇನ್ನೂ ಕೆಲವು ಕಟ್ಟಡಗಳನ್ನು ಸುಮಾರು 1,500 ಜನರಿಗೆ ವಸತಿ ಕಲ್ಪಿಸುವ ತಾತ್ಕಾಲಿಕ ಆಶ್ರಯಗಳಾಗಿ ಸೇವೆ ಸಲ್ಲಿಸಲು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದೂ ಅವರು ಹೇಳಿದರು.

ಇದನ್ನೂ ಓದಿ: ಆದಿ ಶಂಕರಾಚಾರ್ಯರಿಗೆ ಜ್ಞಾನೋದಯ ನೀಡಿದ ಸ್ಥಳದಲ್ಲಿ ಬಿರುಕು

ಇನ್ನು, ಸಂತ್ರಸ್ತ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವುದು ಪ್ರಸ್ತುತ ಆದ್ಯತೆಯಾಗಿದೆ ಎಂದೂ ಅವರು ಹೇಳಿದರು. ಪರಿಸ್ಥಿತಿಯನ್ನು ನಿಭಾಯಿಸಲು ದೀರ್ಘಾವಧಿಯ ಕ್ರಮಗಳನ್ನು ಪುನರ್‌ನಿರ್ಮಾಣದಿಂದ ಹಿಡಿದು ಮರುಹೊಂದಿಸುವವರೆಗೆ ಪರಿಶೋಧಿಸಲಾಗುತ್ತಿದೆ ಎಂದು ಸುಶೀಲ್‌ ಕುಮಾರ್ ಹೇಳಿದರು.

ಶನಿವಾರ ಜೋಶಿಮಠದಲ್ಲಿ ಸಂತ್ರಸ್ತ ಪ್ರದೇಶಗಳಿಗೆ ಭೇಟಿ ನೀಡಿದ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಹಿಂದಿರುಗಿದ ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು ಮತ್ತು ಪರಿಹಾರ ಕಾರ್ಯಾಚರಣೆಯನ್ನು ತ್ವರಿತಗೊಳಿಸಲು ನಿಯಮಗಳನ್ನು ಸಡಿಲಿಸುವಂತೆ ಕೇಳಿಕೊಂಡರು. ಹಾಗೆ, ಜೋಶಿಮಠದಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಪುಷ್ಕರ್‌ ಸಿಂಗ್ ಧಾಮಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು ಎಂದು ಮುಖ್ಯಮಂತ್ರಿ ಕಚೇರಿ (ಸಿಎಂಒ) ಅಧಿಕಾರಿಗಳು ತಿಳಿಸಿದ್ದಾರೆ. ಪಟ್ಟಣದಲ್ಲಿ ಭೂ ಕುಸಿತ ಮತ್ತು ನಿವಾಸಿಗಳ ಸುರಕ್ಷತೆ ಮತ್ತು ಪುನರ್ವಸತಿಗಾಗಿ ಇದುವರೆಗೆ ತೆಗೆದುಕೊಂಡ ಕ್ರಮಗಳ ಕುರಿತು ಪ್ರಧಾನಿ ಅಪ್‌ಡೇಟ್ಸ್‌ ಕೋರಿದ್ದಾರೆ ಎಂದೂ ಅವರು ಹೇಳಿದರು.

ಇದನ್ನೂ ಓದಿ: ಉತ್ತರಾಖಂಡದಲ್ಲಿ ಮತ್ತೆ ಹಿಮಸ್ಫೋಟ: ಗಂಗಾನದಿಯಲ್ಲಿ ಎರಡು ಅಡಿ ನೀರು ಏರಿಕೆ

Follow Us:
Download App:
  • android
  • ios