Asianet Suvarna News Asianet Suvarna News

ಜೋಶಿಮಠ ಮುಳುಗಡೆಗೆ ಕಾರಣವಾಯ್ತಾ ಎನ್‌ಟಿಪಿಸಿ ಯೋಜನೆ?

ಉತ್ತರಾಖಂಡದ ಜೋಶಿಮಠ ನಗರ ಮುಳುಗಡೆಯಾಗುತ್ತಿದೆ. 600ಕ್ಕೂ ಹೆಚ್ಚು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಜನರನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗುತ್ತಿದೆ. ಜೋಶಿಮಠದ ಕುಸಿತಕ್ಕೆ ಎನ್‌ಟಿಪಿಸಿಯ ಜಲವಿದ್ಯುತ್ ಯೋಜನೆಯೇ ಕಾರಣ. ಆದರೆ, ಭೂಮಿ ಮುಳುಗಡೆಗೂ ಯೋಜನೆಗೂ ಯಾವುದೇ ಸಂಬಂಧವಿಲ್ಲ ಎಂದು ಎನ್ ಟಿಪಿಸಿ ಹೇಳಿದೆ.

Joshimath city of Uttarakhand is sinking NTPC hydro project is the reason san
Author
First Published Jan 9, 2023, 1:06 PM IST

ನವದೆಹಲಿ (ಡಿ. 9): ಒಡೆದು ಹೋಗಿರುವ ಗೋಡೆಗಳು... ನೆಲದ ಮೇಲೆ ಅಗಲವಾದ ಬಿರುಕುಗಳು... ಮುಳುಗುತ್ತಿರುವ ಮನೆಗಳು...ಹಿಮಾಲಯದ ಪರ್ವತಗಳನ್ನು ಏರಬಯಸುವ ಟ್ರೆಕ್ಕರ್‌ಗಳಿಗೆ ಹೆಬ್ಬಾಗಿಲಾಗಿದ್ದ ಜೋಶಿಮಠದ ಇತ್ತೀಚಿನ ದೃಶ್ಯಗಳಿವು. ಜೋಶಿಮಠ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಪ್ರಮುಖ ನಗರ. ಕಳೆದ ಕೆಲವು ದಿನಗಳಿಂದ ಇಲ್ಲಿನ ನಿವಾಸಿಗಳು ಮನೆಗಳು ಇದ್ದಕ್ಕಿದ್ದಂತೆ ಕುಸಿದು ಬೀಳುತ್ತಿರುವ ಬಗ್ಗೆ ಜನರು ದೂರು ನೀಡುತ್ತಿದ್ದಾರೆ. ಇಲ್ಲಿಯವರೆಗೆ 600ಕ್ಕೂ ಅಧಿಕ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದಾಗಿ ವರದಿಯಾಗಿದ್ದು, ಮೂರು ಸಾವಿರಕ್ಕೂ ಹೆಚ್ಚು ಜನರಿಗೆ ತಮ್ಮ ತಮ್ಮ ಮನೆಗಳನ್ನು ತೊರರೆಯುವಂತೆ ಸರ್ಕಾರ ಸೂಚನೆ ನೀಡಿದೆ. ಈ ಜನರು ತಮ್ಮ ಮನೆಗಳನ್ನು ತೊರೆದು ಪರಿಹಾರ ಶಿಬಿರಗಳಲ್ಲಿ ಅಥವಾ ಇತರ ನಗರಗಳಲ್ಲಿ ನೆಲೆಸಿರುವ ತಮ್ಮ ಸಂಬಂಧಿಕರೊಂದಿಗೆ ವಾಸಿಸಬೇಕಾಗಿದೆ. ಜೋಶಿಮಠದಲ್ಲಿ ಒಟ್ಟು ನಾಲ್ಕೂವರೆ ಸಾವಿರ ಕಟ್ಟಡಗಳಿದ್ದು, ಈ ಪೈಕಿ 610 ಕಟ್ಟಡಗಳಲ್ಲಿ ದೊಡ್ಡ ಬಿರುಕು ಬಿಟ್ಟಿದ್ದು, ಇನ್ನು ವಾಸಿಸಲು ಸುರಕ್ಷಿತವಲ್ಲ ಎಂದು ಚಮೋಲಿಯ ಡಿಎಂ ಹಿಮಾಂಶು ಖುರಾನಾ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಎನ್‌ಡಿಆರ್‌ಎಫ್‌ ತಂಡದೊಂದಿಗೆ ಸಿಎಂ ಧಾಮಿ ಸಭೆ: ಭೂಕುಸಿತ ಪ್ರದೇಶ ಎಂದು ಅಧಿಕೃತವಾಗಿ ಘೋಷಣೆಯಾದ ಬೆನ್ನಲ್ಲಿಯೇ ಉತ್ತರಾಖಂಡದ ಜೋಶಿಮಠದಲ್ಲಿ ರಕ್ಷಣಾ ಕಾರ್ಯಾಚರಣೆ ಚುರುಕಾಗಿದೆ. ಎನ್ ಡಿ ಆರ್ ಎಫ್ ತಂಡದೊಂದಿಗೆ ಉತ್ತರಾಖಂಡ ಸಿಎಂ ಪುಷ್ಕರ್‌ ಸಿಂಗ್‌ ಧಾಮಿ ಸಭೆ ನಡೆಸಿದ್ದು, ರಕ್ಷಣಾ ಕಾರ್ಯಾಚರಣೆ ಬಗ್ಗೆ ಸಮಾಲೋಚನೆ ಮಾಡಿದ್ದಾರೆ. ಸದ್ಯ ಎನ್ ಡಿ ಆರ್ ಎಫ್ ಹಾಗೂ ಎಸ್ ಡಿ ಆರ್ ಎಫ್ ತಂಡ ಸ್ಥಳದಲ್ಲೇ ಬೀಡು ಬಿಟ್ಟಿದೆ. ಜೋಶಿಮಠದ ಸುತ್ತಮುತ್ತಲಿನ ಪ್ರದೇಶದಲ್ಲಿ ನಿರ್ಮಾಣ ಕಾಮಗಾರಿಗೆ ನಿಷೇಧ ಹೇರಲಾಗಿದೆ. ಈ ಕುರಿತಾಗಿ ಚಮೋಲಿ ಜಿಲ್ಲಾಡಳಿತ ಪ್ರಕಟಣೆ ನೀಡಿದೆ. ಜೋಶಿಮಠ ಪ್ರದೇಶವನ್ನು ಈಗಾಗಲೇ ದುರಂತ ಪೀಡಿತ ಘೋಷಣೆ ಮಾಡಲಾಗಿದೆ.

ಜೋಶಿಮಠ ಮುಳುಗುತ್ತಿರುವುದೇಕೆ: ಈ ಎಲ್ಲದರ ನಡುವೆ ಜೋಶಿಮಠ ಮುಳುಗಿತ್ತಿರಲು ಕಾರಣವೇನು ಎನ್ನುವುದರ ಬಗ್ಗೆ ಚರ್ಚೆ ಆರಂಭವಾಗಿದೆ. ಸ್ಥಳೀಯ ಜನರು ಎನ್‌ಟಿಪಿಎಸ್‌ನ ಜಲವಿದ್ಯುತ್‌ ಯೋಜನೆಯೇ ಇದಕ್ಕೆ ಕಾರಣ ಎಂದು ಹೇಳುತ್ತಿದ್ದಾರೆ. ಎನ್‌ಟಿಪಿಸಿಯ ಜಲವಿದ್ಯುತ್ ಯೋಜನೆಗಾಗಿ ಸುರಂಗಗಳನ್ನು ತೋಡಲಾಗಿದ್ದು, ಇದರಿಂದ ನಗರ ಮುಳುಗಡೆಯಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ, ಎನ್‌ಟಿಪಿಸಿ ಈ ಎಲ್ಲ ವಿಷಯಗಳನ್ನು ತಿರಸ್ಕರಿಸಿದೆ.

ಏನಿದು ಯೋಜನೆ: 2002ರ ಡಿಸೆಂಬರ್‌ 31 ರಂದು ಎನ್‌ಟಿಪಿಎಸ್‌ ಜೊತೆ ಈ ಯೋಜನೆಗಾಗಿ ಮಾತುಕತೆ ಮಾಡಲಾಗಿತ್ತು. ರಾಷ್ಟ್ರೀಯ ಉಷ್ಣ ವಿದ್ಯುತ್‌ ನಿಗಮ ಹಾಗೂ ಉತ್ತರಾಖಂಡ ಸರ್ಕಾರದ ನಡುವೆ ನಡೆದಿದ್ದ ಈ ಮಾತುಕತೆಯೆಗ 2004ರ ಜೂನ್‌ 23ರಂದು ಅಧಿಕೃತ ಸಹಿ ಬಿದ್ದಿತ್ತು. ಚಮೋಲಿ ಜಿಲ್ಲೆಯ ಧೌಲಿಗಂಗಾ ನದಿಯಲ್ಲಿ ಜಲವಿದ್ಯುತ್ ಯೋಜನೆಯನ್ನು ನಿರ್ಮಿಸಲು ಒಪ್ಪಂದ ಇದಾಗಿತ್ತು. ಅದರ ಹೆಸರು- 'ತಪೋವನ ವಿಷ್ಣುಗಢ ಜಲವಿದ್ಯುತ್ ಸ್ಥಾವರ'. 2005ರ ಫೆಬ್ರವರಿ 14 ರಂದು ಅಂದಿನ ಇಂಧನ ಸಚಿವ ಪಿ.ಎಂ.ಸಯೀದ್ ಮತ್ತು ಉತ್ತರಾಖಂಡ ಮುಖ್ಯಮಂತ್ರಿ ಎನ್.ಡಿ.ತಿವಾರಿ ಇದರ ಅಡಿಗಲ್ಲು ಹಾಕಿದರು. ಈ ವಿದ್ಯುತ್ ಸ್ಥಾವರವನ್ನು ಅಲಕನಂದಾ ನದಿಯ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ ಮತ್ತು ತಲಾ 130 ಮೆಗಾವ್ಯಾಟ್‌ನ ನಾಲ್ಕು ಪೆಲ್ಟನ್ ಟರ್ಬೈನ್ ಜನರೇಟರ್‌ಗಳನ್ನು ಒಳಗೊಂಡಿದೆ. ಧೌಳಿಗಂಗಾ ನದಿಗೆ ಬ್ಯಾರೇಜ್ ಅನ್ನೂ ನಿರ್ಮಾಣ ಮಾಡಲಾಗುತ್ತಿದೆ. ಒಟ್ಟಾರೆಯಾಗಿ, ಈ ವಿದ್ಯುತ್ ಸ್ಥಾವರವು 520 ಮೆಗಾವ್ಯಾಟ್‌ ಜಲವಿದ್ಯುತ್ ಯೋಜನೆಯಾಗಿದೆ. ಇದರ ನಿರ್ಮಾಣದ ನಂತರ, ವಾರ್ಷಿಕವಾಗಿ 2.5 ಟೆರಾವಾಟ್ ಅವರ್ (TWh) ವಿದ್ಯುತ್ ಉತ್ಪಾದಿಸುವ ನಿರೀಕ್ಷೆಯಿದೆ. ಈ ಯೋಜನೆಯ ಅಂದಾಜು ವೆಚ್ಚ 2,978.5 ಕೋಟಿ ರೂಪಾಯಿ ಆಗಿದೆ.

ಆದಿ ಶಂಕರಾಚಾರ್ಯರಿಗೆ ಜ್ಞಾನೋದಯ ನೀಡಿದ ಸ್ಥಳದಲ್ಲಿ ಬಿರುಕು

ಸರ್ಕಾರ ಪಾಠ ಕಲಿತಿಲ್ಲ: 2013 ರ ಕೇದಾರನಾಥ ಪ್ರವಾಹ ಮತ್ತು 2021 ರ ರಿಷಿ ಗಂಗಾ ಪ್ರವಾಹದಿಂದ ಸರ್ಕಾರವು ಪಾಠ ಕಲಿತಿಲ್ಲ ಎಂದು ಎಚ್‌ಎನ್‌ಬಿ ಗರ್ವಾಲ್ ವಿಶ್ವವಿದ್ಯಾಲಯದ ಭೂವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ವೈ.ಪಿ.ಸುಂದ್ರಿಯಾಲ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಉತ್ತರಾಖಂಡದ ಹೆಚ್ಚಿನ ಪ್ರದೇಶಗಳು ಭೂಕಂಪ ಪೀಡಿತವಾಗಿವೆ. 'ಸೆಂಟ್ರಲ್ ಹಿಮಾಲಯ' ಪುಸ್ತಕವನ್ನು ಉಲ್ಲೇಖಿಸಿದ ಅವರು, ಜೋಶಿಮಠವು ಭೂಕುಸಿತದಿಂದ ಹೊರಹೊಮ್ಮಿರುವ ಅವಶೇಷಗಳ ಮೇಲೆ ನೆಲೆಗೊಂಡಿದೆ ಎಂದು ಹೇಳಿದರು. 1971ರಲ್ಲಿಯೂ ಕೆಲವು ಮನೆಗಳು ಬಿರುಕು ಬಿಟ್ಟಿದ್ದವು. ಆ ಸಮಯದಲ್ಲಿಯೂ ಹೆಚ್ಚು ಹೆಚ್ಚು ಗಿಡಗಳನ್ನು ನೆಡುವ ಅವಶ್ಯಕತೆಯಿದೆ, ಜೋಶಿಮಠದಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳು ಆಗಬಾರದು ಎಂದು ಹೇಳಲಾಗಿತ್ತು. ಆದರೆ ಇವೆಲ್ಲವೂ ಸರ್ಕಾರ ಪಾಲನೆ ಮಾಡಿಲ್ಲ ಎಂದಿದ್ದಾರೆ. ಜೋಶಿಮಠದ ಪ್ರಸ್ತುತ ಬಿಕ್ಕಟ್ಟು ಮನುಷ್ಯ ನಿರ್ಮಿತ ಎಂದು ಸುಂದ್ರಿಯಾಲ್‌ ಹೇಳಿದ್ದಾರೆ. ಜೋಶಿಮಠದಲ್ಲಿ ಜನಸಂಖ್ಯೆಯು ಹಲವಾರು ಪಟ್ಟು ಹೆಚ್ಚಾಗಿದೆ, ಇದರಿಂದಾಗಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚುತ್ತಿದೆ. ಇದಲ್ಲದೇ ಅನಿಯಂತ್ರಿತ ರೀತಿಯಲ್ಲಿ ಮೂಲಸೌಕರ್ಯಗಳನ್ನು ಹೆಚ್ಚಿಸಲಾಗುತ್ತಿದೆ. ಇವೆಲ್ಲವೂ ಈಗಿನ ಪರಿಸ್ಥಿತಿಗೆ ಕಾರಣ ಎಂದಿದ್ದಾರೆ. 

ಮುಳುಗುತ್ತಿರುವ ವಲಯ ಎಂದು ಘೋಷಣೆಯಾದ ಉತ್ತರಾಖಂಡ್‌ನ ಜೋಶಿಮಠ: 60ಕ್ಕೂ ಹೆಚ್ಚು ಕುಟುಂಬಗಳ ಸ್ಥಳಾಂತರ

1976 ರಲ್ಲಿ, ಮಿಶ್ರಾ ಆಯೋಗದ ವರದಿ ಬಂದಿತ್ತು. ಅದರಲ್ಲಿ ಜೋಶಿಮಠದ ಬೇರುಗಳನ್ನು ಅಲುಗಾಡಿಸುವುದು ಅಪಾಯಕಾರಿ ಎಂದು ಹೇಳಿತ್ತು. ಇದು ಭೂಕುಸಿತದ ಕಲ್ಲುಗಳ ಮೇಲೆ ನಿರ್ಮಾಣವಾಗಿರುವ ಪಟ್ಟಣ. ಹಿಮನದಿಗಳು ಕರಗಿದ ನಂತರ ಉಳಿಯುವ ಅವಶೇಷಗಳ ಮೇಲೆ ನಿರ್ಮಾಣವಾಗಿರುವ ಪಟ್ಟಣ ಜೋಶಿಮಠ ಹಾಗಾಗಿ ಇದರ ಮೇಲೆ ಅಭಿವೃದ್ಧಿ ಅಪಾಯಕಾರಿ ಎನ್ನಲಾಗಿತ್ತು.

Follow Us:
Download App:
  • android
  • ios