Kavali Meghana: ಸಂದರ್ಶನ ಮಂಡಳಿಯ ಸದಸ್ಯರಲ್ಲೇ ಒಬ್ಬರು 'AI ಸಾಧನ'ವಾಗಿದ್ದರೆ ಪತ್ತೆ ಹಚ್ಚುವುದು ಹೇಗೆ? ಮೊದಲ ಪ್ರಯತ್ನದಲ್ಲೇ UPSC 83ನೇ ರ‍್ಯಾಂಕ್ ಪಡೆದ ಕಾವಲಿ ಮೇಘನಾ ಅವರಿಗೆ ಎದುರಾದ ಅಚ್ಚರಿಯ ಪ್ರಶ್ನೆ ಮತ್ತು ಅವರ ತರ್ಕಬದ್ಧ ಉತ್ತರದ ಸ್ಟೋರಿ ಇಲ್ಲಿದೆ.

ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಕೇವಲ ಪುಸ್ತಕದ ಜ್ಞಾನ ಇದ್ದರೆ ಸಾಲದು. ಸಮಯಸ್ಫೂರ್ತಿ, ಸಮಯಕ್ಕೆ ತಕ್ಕ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ವಿಶ್ಲೇಷಣಾತ್ಮಕ ಚಿಂತನೆ ಹಾಗೂ ಒತ್ತಡದಲ್ಲೂ ಶಾಂತವಾಗಿ ಉತ್ತರಿಸುವುದು ಅತ್ಯಗತ್ಯ. UPSC ಸಂದರ್ಶನದಲ್ಲಿ ಅಭ್ಯರ್ಥಿಗಳ ವ್ಯಕ್ತಿತ್ವವನ್ನು ಅಳೆಯಲು ಅನಿರೀಕ್ಷಿತ ಸನ್ನಿವೇಶಗಳನ್ನು ಸೃಷ್ಟಿಸಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅಂತಹದ್ದೇ ಒಂದು ಪ್ರಶ್ನೆಗೆ 2020ರ UPSC ಪರೀಕ್ಷೆಯಲ್ಲಿ 83ನೇ ರ‍್ಯಾಂಕ್ ಪಡೆದ ಕಾವಲಿ ಮೇಘನಾ ನೀಡಿದ ಉತ್ತರ ಈಗ ಚರ್ಚೆಯಲ್ಲಿದೆ.

ಮೇಘನಾ ಉತ್ತರಿಸಿದ್ರಾ?

ದೃಷ್ಟಿ IAS ನಡೆಸಿದ ಅಣಕು ಸಂದರ್ಶನದಲ್ಲಿ ಮೇಘನಾ ಅವರಿಗೆ ವಿಭಿನ್ನ ಪ್ರಶ್ನೆಯೊಂದು ಎದುರಾಯಿತು. ಸಾಮಾನ್ಯವಾಗಿ ವಿದ್ಯಾರ್ಹತೆ, ಹವ್ಯಾಸ ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಕೇಳುವ ಬದಲು, ಸಂದರ್ಶಕರು ಒಂದು ಕಾಲ್ಪನಿಕ ಸನ್ನಿವೇಶವನ್ನು ನೀಡಿದರು. "ನಿಮ್ಮ ಮಂಡಳಿಯ ಸದಸ್ಯರಲ್ಲಿ ಒಬ್ಬರು ಕೃತಕ ಬುದ್ಧಿಮತ್ತೆ (AI) ಸಾಧನವಾಗಿದ್ದರೆ, ಇದುವರೆಗಿನ ಸಂಭಾಷಣೆಯ ಆಧಾರದ ಮೇಲೆ ಅವರನ್ನು ಗುರುತಿಸಬಲ್ಲಿರಾ?" ಎಂದು ಕೇಳಿದರು. ತಕ್ಷಣವೇ ಪ್ರತಿಕ್ರಿಯಿಸಿದ ಮೇಘನಾ, "ಹೌದು ಸರ್, ಇದೊಂದು ಟ್ಯೂರಿಂಗ್ ಟೆಸ್ಟ್" ಎಂದರು. ಮುಂದುವರಿದು ಆ AI ಸದಸ್ಯ ಯಾರೆಂದು ಕೇಳಿದಾಗ, ಅವರು ಒಬ್ಬ ಸದಸ್ಯರನ್ನು ಸೂಚಿಸಿದರು.

ಆ ಸದಸ್ಯರು ಟ್ಯೂರಿಂಗ್ ಪರೀಕ್ಷೆಯಲ್ಲಿ ಏಕೆ ವಿಫಲರಾದರು ಎಂದು ಕೇಳಿದಾಗ, ಮೇಘನಾ ತಮ್ಮ ವೀಕ್ಷಣೆಯನ್ನು ವಿವರಿಸಿದರು. "ಅವರು ಕೇವಲ ವಾಸ್ತವಿಕ ಪ್ರಶ್ನೆಗಳನ್ನು ಕೇಳಿದರು. ಒಂದು ಯಂತ್ರವು ಸುಲಭವಾಗಿ ಅರ್ಥಮಾಡಿಕೊಳ್ಳಬಲ್ಲ ಪ್ರಶ್ನೆಗಳನ್ನಷ್ಟೇ ಕೇಳಿದರೇ ಹೊರತು, ನನ್ನ ಅಭಿಪ್ರಾಯಗಳ ಮೇಲೆ ಹೆಚ್ಚು ಗಮನಹರಿಸಲಿಲ್ಲ. ಹೀಗಾಗಿ ಅವರು AI ಆಗಿರಬಹುದು ಎನಿಸಿತು" ಎಂದರು.

ಮರು ಪ್ರಶ್ನೆ ಹಾಕಿದ ಸಂದರ್ಶಕರು

ಇದಕ್ಕೆ ತೃಪ್ತರಾಗದ ಸಂದರ್ಶಕರು, "ನಿಮ್ಮ ಈ ನಿರ್ಧಾರವು ನಿಷ್ಪಕ್ಷಪಾತವಾಗಿದೆಯೇ ಅಥವಾ ತುಲನಾತ್ಮಕವಾಗಿದೆಯೇ?" ಎಂದು ಮರುಪ್ರಶ್ನೆ ಹಾಕಿದರು. ಇದಕ್ಕೆ ಜಾಣ್ಮೆಯಿಂದ ಉತ್ತರಿಸಿದ ಮೇಘನಾ, "ಸರ್, ಇದು ತುಲನಾತ್ಮಕ (ಹೋಲಿಕೆ ಆಧಾರಿತ) ನಿರ್ಧಾರ. ನಿಷ್ಪಕ್ಷಪಾತವಾಗಿ ಹೇಳುವುದಾದರೆ ಯಾರೂ ಯಂತ್ರದಂತೆ ಪ್ರಶ್ನೆ ಕೇಳಲಿಲ್ಲ. ಆದರೆ ಹೋಲಿಸಿ ಒಬ್ಬರನ್ನು ಆಯ್ಕೆ ಮಾಡಬೇಕೆಂದರೆ ನಾನು ಅವರನ್ನು ಸೂಚಿಸುತ್ತೇನೆ" ಎಂದರು. ತಮ್ಮ ಅಭಿಪ್ರಾಯವನ್ನು ಸಂಪೂರ್ಣ ಸತ್ಯವೆನ್ನದೆ, ಹೋಲಿಕೆಯ ನಿರ್ಧಾರವೆಂದು ಸ್ಪಷ್ಟಪಡಿಸಿದರು.

ಟ್ಯೂರಿಂಗ್ ಟೆಸ್ಟ್ ಎಂದರೇನು?

ಬ್ರಿಟಿಷ್ ಗಣಿತಜ್ಞ ಮತ್ತು ಕಂಪ್ಯೂಟರ್ ವಿಜ್ಞಾನಿ ಅಲನ್ ಟ್ಯೂರಿಂಗ್ ಪ್ರತಿಪಾದಿಸಿದ ಈ ಪರೀಕ್ಷೆಯು, ಒಂದು ಯಂತ್ರವು ಮನುಷ್ಯನಂತೆ ಸಂಭಾಷಿಸಬಲ್ಲದೇ ಹಾಗೂ ಮಾತನಾಡುವ ವ್ಯಕ್ತಿ ಅದು ಮನುಷ್ಯನೋ ಯಂತ್ರವೋ ಎಂದು ಗುರುತಿಸಬಲ್ಲನೇ ಎಂಬುದನ್ನು ಅಳೆಯುತ್ತದೆ. ಸಂದರ್ಶನದಲ್ಲಿ ಅಭ್ಯರ್ಥಿಯ ವೀಕ್ಷಣಾ ಸಾಮರ್ಥ್ಯ, ತಾರ್ಕಿಕ ಚಿಂತನೆ ಮತ್ತು ನಿರ್ಧಾರ ಸಮರ್ಥಿಸುವ ಬಗೆಯನ್ನು ಪರೀಕ್ಷಿಸಲು ಇದನ್ನು ಬಳಸಲಾಯಿತು.

ಅಭ್ಯರ್ಥಿಗಳಿಗೆ ಪಾಠ

ಕೇವಲ ಅಭಿಪ್ರಾಯವನ್ನು ವ್ಯಕ್ತಪಡಿಸುವುದಷ್ಟೇ ಅಲ್ಲ, ಅದರ ಹಿಂದಿನ ಕಾರಣಗಳನ್ನು ವಿವರಿಸುವುದು ಹಾಗೂ ನಮ್ಮ ನಿರ್ಧಾರದ ಮಿತಿಗಳನ್ನು ಒಪ್ಪಿಕೊಳ್ಳುವುದು ಮುಖ್ಯ ಎಂಬುದನ್ನು ಮೇಘನಾ ಅವರ ಉತ್ತರ ಸಾರುತ್ತದೆ. UPSC ಸಂದರ್ಶನದಲ್ಲಿ ಪುಸ್ತಕದ ಜ್ಞಾನದೊಂದಿಗೆ ವೀಕ್ಷಣಾ ಶಕ್ತಿ, ಆತ್ಮವಿಶ್ವಾಸ ಮತ್ತು ಸಮಯಸ್ಫೂರ್ತಿಯೂ ಅತ್ಯಗತ್ಯ ಎಂಬುದಕ್ಕೆ ಈ ಸಂಭಾಷಣೆ ಉತ್ತಮ ನಿದರ್ಶನವಾಗಿದೆ.

ಯಾರು ಈ ಕಾವಲಿ ಮೇಘನಾ?

ವಿಕಾರಾಬಾದ್ ಜಿಲ್ಲೆಯ ಮರ್ಪಲ್ಲಿ ಗ್ರಾಮದವರಾದ ಮೇಘನಾ, ಹೈದರಾಬಾದ್‌ನಲ್ಲಿ ಶಾಲಾ-ಕಾಲೇಜು ಶಿಕ್ಷಣ ಮುಗಿಸಿ, ಎನ್‌ಐಟಿ (NIT) ವಾರಂಗಲ್‌ನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ (ಬಿ.ಟೆಕ್) ಹಾಗೂ IIM ಲಕ್ನೋದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬೆಂಗಳೂರಿನ ಐಟಿಸಿ (ITC) ಲಿಮಿಟೆಡ್‌ನಲ್ಲಿ ಅಸಿಸ್ಟೆಂಟ್ ಮಾರ್ಕೆಟಿಂಗ್ ಮ್ಯಾನೇಜರ್ ಹುದ್ದೆಗೆ ರಾಜೀನಾಮೆ ನೀಡಿ, ಸಮಾಜಸೇವೆಯ ಕನಸಿನೊಂದಿಗೆ ಸಿವಿಲ್ ಸರ್ವೀಸಸ್‌ಗೆ ತಯಾರಿ ಆರಂಭಿಸಿದರು. ಕೋವಿಡ್ ಸಂದರ್ಭದಲ್ಲಿ ಮನೆಯಲ್ಲೇ ಸ್ವಯಂ ಅಧ್ಯಯನ ನಡೆಸಿ, ಸಮಾಜಶಾಸ್ತ್ರ (Sociology) ಐಚ್ಛಿಕ ವಿಷಯದೊಂದಿಗೆ ಮೊದಲ ಪ್ರಯತ್ನದಲ್ಲೇ 83ನೇ ರ‍್ಯಾಂಕ್ ಗಳಿಸಿದರು.