ಸೋನಿಯಾ ಗಾಂಧಿ ತಮ್ಮ ಆತ್ಮಚರಿತ್ರೆಯಲ್ಲಿ 1984ರ ಸಿಖ್ ದಂಗೆ ಬಗ್ಗೆ ಬರೆದಿರುವ ವಿಷಯ ದಿಲ್ಲಿಯ ಸಿಖ್ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಗಂಜ್ ಗುರುದ್ವಾರದಲ್ಲಿ ಸೋನಿಯಾ ಆತ್ಮಕತೆಯನ್ನು ಸಿಖ್ ದಂಗೆ ಸಂತ್ರಸ್ತರು ಸುಟ್ಟು ಹಾಕಿದ್ದಾರೆ.
ನವದೆಹಲಿ: ಸೋನಿಯಾ ಗಾಂಧಿ ತಮ್ಮ ಆತ್ಮಚರಿತ್ರೆಯಲ್ಲಿ 1984 ಸಿಖ್ ವಿರೋಧಿ ದಂಗೆ ವಿಷಯದಲ್ಲಿ ‘ತಮ್ಮ ಪತಿ ರಾಜೀವ್ ಅವರು ಕಾರಣರಲ್ಲ. ತಮ್ಮ ಅತ್ತೆ ಇಂದಿರಾ ಹ*ತ್ಯೆ ಹೊರತಾಗಿಯೂ ‘ತಮ್ಮ ಪತಿ ರಾಜೀವ್ ಗಾಂಧಿಯವರ ಹೃದಯದಲ್ಲಿ ಯಾವುದೇ ಧರ್ಮಾಂಧತೆ ಅಥವಾ ದ್ವೇಷ ಇರಲಿಲ್ಲ. ಆದರೆ ಆಡಳಿತ ವಿಫಲವಾದ ಇತಿಹಾಸದ ಒಂದು ಕ್ಷಣಕ್ಕೆ ಅವರನ್ನು ತಳ್ಳಲಾಯಿತು, ಇದು ಅನಾಗರಿಕತೆಗೆ ದಾರಿ ಮಾಡಿಕೊಟ್ಟಿತು’ ಎಂದು ಪ್ರಸ್ತಾಪಿಸಿದ್ದಕ್ಕೆ ದಿಲ್ಲಿಯ ಸಿಖ್ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ. ಪುಸ್ತಕದಲ್ಲಿನ ಸೋನಿಯಾ ಹೇಳಿಕೆ ವಿರೋಧಿಸಿ ಗುರುವಾರ ಇಲ್ಲಿನ ರಕಬ್ ಗಂಜ್ ಗುರುದ್ವಾರದಲ್ಲಿ ಸಿಖ್ ವಿರೋಧಿ ಗಲಭೆಯ ಸಂತ್ರಸ್ತರ ಕುಟುಂಬಗಳು ಮತ್ತು ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ (ಡಿಎಸ್ಜಿಎಂಸಿ) ಸದಸ್ಯರು ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆಯ ಪ್ರತಿಯನ್ನು ಸುಟ್ಟು ಪ್ರತಿಭಟನೆ ನಡೆಸಿದ್ದಾರೆ.
ಸೋನಿಯಾ ಪುಸ್ತಕ ಆಧರಿಸಿ ತೆಲುಗು ಚಿತ್ರದ ಘೋಷಣೆ!
ಹೈದರಾಬಾದ್: ಮಂಗಳವಾರ ಬಿಡುಗಡೆಯಾದ ಸೋನಿಯಾ ಗಾಂಧಿ ಅವರ ಆತ್ಮಕತೆ ಆಧರಿಸಿ ಚಲನಚಿತ್ರ ನಿರ್ಮಿಸುವುದಾಗಿ ತೆಲಂಗಾಣ ಕಾಂಗ್ರೆಸ್ ಘಟಕದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ಟಿ ಜಯಪ್ರಕಾಶ್ ರೆಡ್ಡಿ ಅಲಿಯಾಸ್ ಜಗ್ಗಾ ರೆಡ್ಡಿ ಘೋಷಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಗ್ಗಾ ರೆಡ್ಡಿ, ‘ಸೋನಿಯಾ ಅವರ ಪುಸ್ತಕವನ್ನು ಆಧರಿಸಿ ನಾವು ಚಿತ್ರವನ್ನು ನಿರ್ಮಿಸಲು ನಿರ್ಧರಿಸಿದ್ದೇವೆ. ಅದನ್ನು ತೆಲುಗು, ಹಿಂದಿ ಮತ್ತು ಇತರ ಎಲ್ಲಾ ಭಾಷೆಗಳಲ್ಲಿ ಮಾಡಲು ನಾವು ಯೋಚಿಸಿದ್ದೇವೆ. ಚಿತ್ರದ ಪ್ರಾರಂಭಿಕ ಹಂತದ ಕೆಲಸಗಳ ಮೇಲೆ ನಿಗಾ ಇಡಲು 50 ಜನರ ತಂಡ ರಚಿಸಲಾಗಿದೆ. ಚಿತ್ರ ನಿರ್ಮಾಣಕ್ಕೆ ಪಕ್ಷದ ಎಲ್ಲಾ ಕಾರ್ಯಕರ್ತರಿಂದ ಉದಾರವಾಗಿ ದೇಣಿಗೆ ಸಂಗ್ರಹಿಸಲಾಗುವುದು. ದೆಹಲಿ ಮತ್ತು ರಾಜೀವ್ ಗಾಂಧಿ ಹತ್ಯೆಯಾದ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ಮುಂದಿನ ತಿಂಗಳು 9 ಸೋನಿಯಾರ ಜನ್ಮ ದಿನವಾಗಿದ್ದು, ಅಂದು ಸಿನಿಮಾಗೆ ಸಂಬಂಧಿಸಿದಂತೆ ಕಾರ್ಯಕ್ರಮ ನಡೆಯಲಿದೆ. 2028ರ ಡಿ.9ರಂದು ಸಿನಿಮಾ ತೆರೆಗೆ ಬರಲಿದೆ ಎಂದು ಮಾಹಿತಿ ನೀಡಿದ್ದಾರೆ. ಈ ನಡುವೆ ಚಿತ್ರ ಘೋಷಣೆ ಬೆನ್ನಲ್ಲೇ ಸಂಗಾರೆಡ್ಡಿ ಕ್ಷೇತ್ರದ ಕಾಂಗ್ರೆಸ್ ಸಂಚಾಲಕ ಜೂಲಕಂಟಿ ಆಂಜನೇಯಲು 2 ಕೋಟಿ ರು. ದೇಣಿಗೆ ಘೋಷಿಸಿದ್ದಾರೆ.
ಸೋನಿಯಾ ರಾಜಕೀಯ ವೈರಿ ಮೋದಿ ಬಗ್ಗೆ ಮೆಚ್ಚುಗೆ
ರಾಜಕೀಯವಾಗಿ ಮತ್ತು ಸೈದ್ಧಾಂತಿಕವಾಗಿ ತಾವು ಕಟುವಾಗಿ ಟೀಕಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಸೋನಿಯಾ ಗಾಂಧಿ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಹಲವು ಟೀಕೆಗಳ ಜೊತೆಜೊತೆಗೆ ಮೆಚ್ಚುಗೆಯ ಮಾತುಗಳನ್ನೂ ಆಡಿದ್ದಾರೆ.
ಮಂಗಳವಾರ ಬಿಡುಗಡೆಯಾದ, ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ನಲ್ಲಿ, ಸಂಸತ್ತಿನ ಅವರಣದಲ್ಲಿ ಮೋದಿ ಅವರೊಂದಿಗೆ ತಮ್ಮ ಮುಖಾಮುಖಿ, ಮೋದಿ ಅವರ ಜತೆಗಿನ ಲಘು ಮಾತುಕತೆ, ಹೆಚ್ಚೇನು ಆಪ್ತವಲ್ಲದ ಸಂಬಂಧಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕಲ್ಪನೆಯ ಭಾರತಕ್ಕಾಗಿ ಹೋರಾಡುತ್ತಿದ್ದಾರೆ ಮತ್ತು ನಾನು ನನ್ನದೇ ಕಲ್ಪನೆಯ ಭಾರತಕ್ಕಾಗಿ ಹೋರಾಡುತ್ತಿದ್ದೇನೆ. ಆದರೆ ಅವರ ಆಪ್ತರು ಹೇಳಿದಷ್ಟು ಮೋದಿ ಅವರ ಆರಂಭಿಕ ಜೀವನ ಕಷ್ಟಕರವಾಗಿಲ್ಲದೇ ಇದ್ದರೂ, ಅವರು ಅವಕಾಶವಿಲ್ಲದ ಈ ಜಗತ್ತಿನಲ್ಲಿ, ಆರ್ಎಸ್ಎಸ್ನೊಳಗೆ ಸಾಕಷ್ಟು ಶ್ರಮವಹಿಸಿ ಅಧಿಕಾರಕ್ಕೆ ಏರಿದ್ದಾರೆ’ ಎಂದು ಸೋನಿಯಾ ಬಣ್ಣಿಸಿದ್ದಾರೆ.














