ಸೋನಿಯಾ ಆತ್ಮಚರಿತ್ರೇಲಿ ಕರ್ನಾಟಕ ಭೇಟಿಯ ಸ್ಮರಣೆ ಮಾಡಿದ್ದಾರೆ. ಚಿಕ್ಕಮಗಳೂರಲ್ಲಿ ಇಂದಿರಾಗೆ ರಾಜಕೀಯ ಮರುಜನ್ಮ ಕಥೆ. ಲಾಠಿ ಹಿಡಿದು ಜನ ಅಡ್ಡಗಟ್ಟಿದ್ದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಬಳ್ಳಾರಿ ಚುನಾವಣೇಲಿ ಸೋನಿಯಾ V/S ಸುಷ್ಮಾ ಅವರ ರಾಜಕೀಯ ಅಧ್ಯಾಯ. ಪಕ್ಷ ವಿಭಜನೆಗೆ ಕಾರಣವಾದ ಬೆಂಗಳೂರು ಸಭೆ ಉಲ್ಲೇಖ

ನವದೆಹಲಿ: ಮಂಗಳವಾರ ಬಿಡುಗಡೆಯಾದ ಕಾಂಗ್ರೆಸ್‌ ಕಾಯಕಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ‘ಬಿಲಾಂಗಿಂಗ್‌- ದ ಜರ್ನಿ ಆಫ್‌ ಲವ್‌’ನಲ್ಲಿ ಕರ್ನಾಟಕದ ಗಾಂಧೀ- ನೆಹರೂ ಕುಟುಂಬದ ರಾಜಕೀಯ, ಚುನಾವಣಾ ಹೋರಾಟ, ಖರ್ಗೆ ಅವರ ಸಂಕಷ್ಟಮಯ ಬದುಕು, ಕಬಿನಿ ನದಿ ತೀರದಲ್ಲಿ ಕಳೆದ ಸುಂದರ ಕ್ಷಣಗಳ ಬಗ್ಗೆ ಮೆಲುಕು ಹಾಕಲಾಗಿದೆ.

ಚಿಕ್ಕಮಗಳೂರಲ್ಲಿ ಇಂದಿರಾಗೆ ರಾಜಕೀಯ ಮರುಜನ್ಮ ಕಥೆ, ಲಾಠಿ ಹಿಡಿದು ಜನ ಅಡ್ಡಗಟ್ಟಿದ್ದ ಬಗ್ಗೆಯೂ ಪ್ರಸ್ತಾಪ

ತುರ್ತುಸ್ಥಿತಿಯ ಬಳಿಕ ಪರಾಜಯ ಅನುಭವಿಸಿದ್ದ ಇಂದಿರಾ ಗಾಂಧಿ ಅವರು ಮತ್ತೆ ರಾಜಕೀಯವಾಗಿ ಪುಟಿದೇಳಲು ನೆರವಾದ 1978ರ ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆಯನ್ನು ಸೋನಿಯಾ ತಮ್ಮ ಪುಸ್ತಕದಲ್ಲಿ ಸ್ಮರಿಸಿದ್ದಾರೆ. ಈ ಚುನಾವಣಾ ಪ್ರಚಾರದ ವೇಳೆ ಶ್ರೀಕಾಂತ್ ವರ್ಮಾ ನೀಡಿದ ''''ಏಕ್ ಶೇರ್ನಿ, ಸೌ ಲಂಗೂರ್, ಚಿಕ್ಕಮಗಳೂರು, ಚಿಕ್ಕಮಗಳೂರು'''' ಎಂಬ ಘೋಷಣೆ ಜನಪ್ರಿಯವಾಗಿತ್ತು. ಈ ಪ್ರವಾಸದ ವೇಳೆ ಒಂದು ಕಡೆ ರಸ್ತೆ ತಿರುವಿನಲ್ಲಿ ವಿಪಕ್ಷದ ಕಾರ್ಯಕರ್ತರು ತಮ್ಮ ವಾಹನವನ್ನು ತಡೆದು, ಲಾಠಿಗಳಿಂದ ಹಲ್ಲೆ ನಡೆಸಲು ಯತ್ನಿಸಿದ ಉದ್ವಿಗ್ನ ಘಟನೆಯನ್ನೂ ಸೋನಿಯಾ ಅವರು ದಾಖಲಿಸಿದ್ದಾರೆ.

ಬಳ್ಳಾರಿ ಚುನಾವಣೇಲಿ ಸೋನಿಯಾ V/S ಸುಷ್ಮಾ

1999ರಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಅವರ ಎದುರಾಳಿಯಾಗಿ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಇದ್ದರು. ಕನ್ನಡದಲ್ಲೇ ಪ್ರಚಾರ ನಡೆಸಿದ್ದ ಸುಷ್ಮಾ ಅವರು ಆ ಚುನಾವಣೆಯನ್ನು ''''ದೇಸಿ ಬೇಟಿ'''' (ಸ್ಥಳೀಯ ಮಗಳು) ಮತ್ತು ''''ವಿದೇಶಿ ಬಹು'''' (ವಿದೇಶಿ ಸೊಸೆ) ನಡುವಿನ ಸ್ಪರ್ಧೆಯಾಗಿ ಬಿಂಬಿಸಿದ್ದರು. ಆ ಅಧ್ಯಾಯಕ್ಕೂ ಬಿಲಾಂಗಿಂಗ್‌ನಲ್ಲಿ ಜಾಗ ಸಿಕ್ಕಿದೆ. ಅಂತಿಮವಾಗಿ ಈ ಚುನಾವಣೆಯಲ್ಲಿ ಸೋನಿಯಾರಿಗೇ ಜಯವಾಗಿತ್ತು.

ಪಕ್ಷ ವಿಭಜನೆಗೆ ಕಾರಣವಾದ ಬೆಂಗಳೂರು ಸಭೆ ಉಲ್ಲೇಖ

1969ರಲ್ಲಿ ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧಿವೇಶನದ ಬಗ್ಗೆಯೂ ಸೋನಿಯಾ ವಿವರಿಸಿದ್ದಾರೆ. ತಮ್ಮ ಅತ್ತೆಯಾದ ಇಂದಿರಾ ಗಾಂಧಿ ಮತ್ತು ಕಾಂಗ್ರೆಸ್‌ನ ಪ್ರಭಾವಿ ನಾಯಕರ ಗುಂಪಾದ ''''ಸಿಂಡಿಕೇಟ್'''' ನಡುವಿನ ಭಿನ್ನಾಭಿಪ್ರಾಯ, ರಾಷ್ಟ್ರಪತಿ ಚುನಾವಣೆಯಲ್ಲಿ ವಿ.ವಿ. ಗಿರಿ ಅವರಿಗೆ ಇಂದಿರಾ ಬೆಂಬಲ ನೀಡಿದ್ದು ಹಾಗೂ ಅಂತಿಮವಾಗಿ ಕಾಂಗ್ರೆಸ್ ಪಕ್ಷ ವಿಭಜನೆಯಾದ ಬೆಳವಣಿಗೆಗಳನ್ನು ಪುಸ್ತಕದಲ್ಲಿ ದಾಖಲಿಸಲಾಗಿದೆ.

ಕಬಿನಿ ದಡದಲ್ಲಿ ರಾಹುಲ್‌ ಜತೆ ಆತ್ಮೀಯ ಸಂವಾದ

ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಕರ್ನಾಟಕದ ಮೂಲಕ ಸಾಗಿದ ವೇಳೆ ಸಿಕ್ಕಿ ಸ್ವಲ್ಪ ವಿರಾಮದ ಅವಧಿಯಲ್ಲಿ ಕಬಿನಿ ನದಿ ತೀರದಲ್ಲಿ ಪುತ್ರ ರಾಹುಲ್ ಜತೆ ನಡೆಸಿದ ಆತ್ಮೀಯ ಮಾತುಕತೆಗಳ ನೆನಪುಗಳನ್ನು ''''ಕಬಿನಿ ಡೈರೀಸ್'''' ಎಂಬ ಅಧ್ಯಾಯದಲ್ಲಿ ಸೋನಿಯಾ ಹಂಚಿಕೊಂಡಿದ್ದಾರೆ.

ಖರ್ಗೆ ಕುಟುಂಬದ ನೋವಿನ ಅಧ್ಯಾಯದ ಬಗ್ಗೆ ಮೆಲುಕು

1987-88ರ ಬರಗಾಲದಿಂದ ಕರ್ನಾಟಕದ ರೈತರು ಎದುರಿಸಿದ ಸಂಕಷ್ಟ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬದುಕಿನ ದುರಂತದ ಘಟನೆಗಳನ್ನು ಸೋನಿಯಾ ಪ್ರಸ್ತಾಪಿಸಿದ್ದಾರೆ. ಅಲ್ಲದೆ ಖರ್ಗೆ ಪಕ್ಷದ ಅಧ್ಯಕ್ಷರಾದ ಬಳಿಕ ತಾವು ದೊಡ್ಡ ಹೊರೆಯಿಂದ ಮುಕ್ತರಾಗಿದ್ದಾಗಿ ಖರ್ಗೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.