Islam To Hindu: ಇಬ್ಬರು ಮುಸ್ಲಿಂ ಮಹಿಳೆಯರು ಸನಾತನ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ವೈದಿಕ ಸಂಪ್ರದಾಯದಂತೆ ಹೋಮ ಹವನ ನೆರವೇರಿಸಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.
ನವದೆಹಲಿ: ರಾಜಧಾನಿ ದೆಹಲಿ ಪಕ್ಕದಲ್ಲಿರುವ ಗಾಜಿಯಾಬಾದ್ ನಗರದಲ್ಲಿ ಇಬ್ಬರು ಮುಸ್ಲಿಂ ಮಹಿಳೆಯರು ಸಂಪ್ರದಾಯಬದ್ಧವಾಗಿ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ. ಸನಾತನ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವ ಮೂಲಕ ಇಬ್ಬರು ಮಹಿಳೆಯರು ಹೊಸ ಜೀವನ ಆರಂಭಿಸಿದ್ದಾರೆ. ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಬಳಿಕ ಸೋನಿಯಾ ಖಾನ್, ಈಗ ಸೋನಿಯಾ ಚೌಧರಿ ಆಗಿದ್ದಾರೆ. ಮತ್ತೋರ್ವ ಮಹಿಳೆ ಖುಷ್ಬೂ ಖಾನ್ ತಮ್ಮ ಹೆಸರನ್ನು ಖುಷ್ಬೂ ಸಾಹೋ ಎಂದು ಬದಲಿಸಿಕೊಂಡಿದ್ದಾರೆ. .
ಸನಾತನ ಧರ್ಮವನ್ನು ಅಳವಡಿಸಿಕೊಂಡ ಸೋನಿಯಾ ಮತ್ತು ಖುಷ್ಬೂ
ಹೋಮ ಹವನ ಮತ್ತು ವೇದ ಪಠಣಗಳ ಅಧ್ಯಯನ ನಡೆಸುವ ಮೂಲಕ ಮತಾಂತರ ಕಾರ್ಯ ನಡೆದಿದೆ. ಮುಸ್ಲಿಂ ಧರ್ಮದಲ್ಲಿ ದೌರ್ಜನ್ಯಗಳಿಂದ ಬೇಸತ್ತು ಹಿಂದೂ ಧರ್ಮಕ್ಕೆ ಮತಾಂತರ ಆಗಿರೋದಾಗಿ ಸೋನಿಯಾ ಮತ್ತು ಖುಷ್ಬೂ ಹೇಳಿಕೊಂಡಿದ್ದಾರೆ. ಹಿಂದೂ ರಕ್ಷಾ ದಳದ ರಾಷ್ಟ್ರೀಯ ಅಧ್ಯಕ್ಷರ ನೇತೃತ್ವದಲ್ಲಿ ಈ ಮತಾಂತರ ಕಾರ್ಯಕ್ರಮ ನಡೆದಿದೆ.
ವೈದಿಕ ಸಂಪ್ರದಾಯದ ಪ್ರಕಾರ ಹಿಂದೂ ದೀಕ್ಷೆ
ಗಾಜಿಯಾಬಾದ್‌ನ ರಾಜ್‌ಬಾಗ್ ಕಾಲೋನಿಯಲ್ಲಿರುವ ದೇವಾಲಯ ಸಂಕೀರ್ಣದಲ್ಲಿ ಮಹಿಳೆಯರು ಮತಾಂತರಗೊಂಡಿದ್ದಾರೆ. ವೈದಿಕ ಸಂಪ್ರದಾಯದ ಪ್ರಕಾರ ಹವನ ಯಜ್ಞ ನಡೆಸಿದ ಸೋನಿಯಾ ಮತ್ತು ಖುಷ್ಬೂ ಸನಾತನ ಧರ್ಮದ ದೀಕ್ಷೆ ಪಡೆದುಕೊಂಡರು. ಈ ಕುರಿತು ಮಾತನಾಡಿರುವ ಹಿಂದೂ ರಕ್ಷಾ ದಳದ ರಾಷ್ಟ್ರೀಯ ಅಧ್ಯಕ್ಷೆ ಪಿಂಕಿ ಚೌಧರಿ, ಇದು ಬಲವಂತದ ಮತಾಂತರ ಅಲ್ಲ. ಇಬ್ಬರು ಸ್ವಯಿಚ್ಛೆಯಿಂದಲೇ ಹಿಂದೂ ಧರ್ಮವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇಬ್ಬರೂ ಸಹೋದರಿಯರು ತಮ್ಮ ಸ್ವಂತ ಇಚ್ಛೆಯಿಂದ ಸನಾತನ ಧರ್ಮವನ್ನು ಸ್ವೀಕರಿಸಿದ್ದಾರೆ. ನಾವು ಮಾರ್ಗದರ್ಶನ ನೀಡಿದ್ದೇವೆ ಮತ್ತು ಧಾರ್ಮಿಕ ಆಚರಣೆಗಳನ್ನು ಪೂರ್ಣಗೊಳಿಸಿದ್ದೇವೆ ಎಂದು ಹೇಳಿದ್ದಾರೆ.
ಹಿಂದೂ ಧರ್ಮಕ್ಕೆ ಬಂದ ನಂತರ ಶಾಂತಿ ಸಿಗ್ತಿದೆ: ಸೋನಿಯಾ ಚೌಧರಿ
ನಾನು ಸ್ವಯಂಪ್ರೇರಣೆಯಿಂದ ಸನಾತನ ಧರ್ಮವನ್ನು ಅಳವಡಿಸಿಕೊಂಡಿದ್ದೇನೆ. ಹಿಂದೂ ಧರ್ಮದ ಸಂಸ್ಕೃತಿ, ಜೀವನಶೈಲಿ ಮತ್ತು ನಂಬಿಕೆ ವ್ಯವಸ್ಥೆಯಿಂದ ನಾನು ತುಂಬಾ ಪ್ರಭಾವಿತಳಾಗಿದ್ದೇನೆ. ಹಿಂದೂ ಧರ್ಮ ಸ್ವೀಕರಿಸಿದ ಬಳಿಕ ನನಗೆ ಶಾಂತಿ ಸಿಗುತ್ತಿದೆ. ನನಗೆ ಮದುವೆಯಾಗಿ 8 ವರ್ಷಗಳಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಹಿಂದೂ ಧರ್ಮದಲ್ಲಿ ಹೆಣ್ಣುಮಕ್ಕಳನ್ನು ಪೂಜಿಸೋದು ನನನೆ ತುಂಬಾ ಇಷ್ಟ ಎಂದು ಮತಾಂತರಗೊಂಡ ಸೋನಿಯಾ ಚೌಧರಿ ಹೇಳುತ್ತಾರೆ.
ಹೊಸ ಗುರುತಿನೊಂದಿಗೆ ನನ್ನ ಮುಂದಿನ ಜೀವನ ಸಾಗಿಸುತ್ತೇನೆ: ಖುಷ್ಬೂ ಸಾಹೋ
ನಾನು ಯಾವುದೇ ಒತ್ತಡದಿಂದ ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಬಂದಿಲ್ಲ. ನಾನು ಈಗ ಹೊಸ ಗುರುತಿನೊಂದಿಗೆ ನನ್ನ ಮುಂದಿನ ಜೀವನ ಮುಂದುವರಿಸಲು ಬಯಸುತ್ತೇನೆ. ಹಿಂದೂ ಧರ್ಮದಲ್ಲಿ ಮಹಿಳೆಯರಿಗೆ ಸಿಗುವ ಗೌರವ ಬೇರೆ ಎಲ್ಲಿಯೂ ಸಿಗಲ್ಲ ಎಂದು ಖುಷ್ಬು ಸಾಹೋ ಹೇಳುತ್ತಾರೆ. ಖುಷ್ಬೂ ಈ ಮೊದಲು ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದರು. ಮುಸ್ಲಿಂ ವ್ಯಕ್ತಿಗೆ ವಿಚ್ಛೇದನ ನೀಡಿದ ಬಳಿಕ 5 ವರ್ಷಗಳ ಹಿಂದೆ ವಿಪಿನ್ ಸಾಹೋ ಎಂಬವರನ್ನು ಮದುವೆಯಾಗಿದ್ದಾರೆ. ಇದೀಗ ಅಧಿಕೃತವಾಗಿ ಹಿಂದೂ ಧರ್ಮವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕನ್ವರ್ ಯಾತ್ರೆಗೆ ತೆರಳಿದ್ದ ಯುವಕನ ಮೇಲೆ ಹಲ್ಲೆ
ಉತ್ತರ ಪ್ರದೇಶದ ಮೀರತ್ ಪಟ್ಟಣದ ಫಲವಾಡ್ ಪ್ರದೇಶದ ನಿವಾಸಿ 20 ವರ್ಷದ ಶಖೀರ್, ತನ್ನ ಹಿಂದೂ ಗೆಳೆಯರೊಂದಿಗೆ ಕನ್ವರ್ ಯಾತ್ರೆಯಲ್ಲಿ ಭಾಗಿಯಾಗಿದ್ದನು. ಯಾತ್ರೆಯಿಂದ ಹಿಂದಿರುಗಿದಾಗ ಕುಟುಂಬಸ್ಥರು ಮತ್ತು ತಮ್ಮ ಸಮುದಾಯದ ನೆರೆಹೊರೆಯವರು ಕೋಲುಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಶಖೀರ್ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಶಖೀರ್, ಶಿವನ ಆರಾಧಕನಾಗಿದ್ದಾನೆ. ಹಿಂದೂ ಧರ್ಮದಿಂದ ಪ್ರಭಾವಿತನಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
