YouTuber mohammad aamir: ಆಕ್ಷೇಪಾರ್ಹ ವಿಡಿಯೋಗಳನ್ನು ಹಂಚಿಕೊಂಡ ಆರೋಪದ ಮೇಲೆ ಯುಟ್ಯೂಬರ್ ಮೊಹಮ್ಮದ್ ಆಮೀರ್‌ನನ್ನು ಬಂಧಿಸಲಾಗಿದೆ. ಸಂತರು ಮತ್ತು ದೇವತೆಗಳ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ ಆರೋಪದ ಮೇಲೆ ಪೊಲೀಸರು ಆತನ ವಿರುದ್ಧ ಕ್ರಮ ಕೈಗೊಂಡಿದ್ದಾರೆ. 

ಲಕ್ನೋ: ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಮತ್ತು ನಿಂದನೀಯ ಕಂಟೆಂಟ್ ಒಳಗೊಂಡಿರುವ ವಿಡಿಯೋ ಹಂಚಿಕೊಳ್ಳುತ್ತಿದ್ದ ಖ್ಯಾತ ಯುಟ್ಯೂಬರ್ ಮೊಹಮ್ಮದ್ ಆಮೀರ್ ಎಂಬಾತನನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಜುಲೈ 25ರಂದು ಆಮೀರ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಯುಪಿ ಪೊಲೀಸರು ಮಾಹಿತಿ ನೀಡಿದ್ದಾರೆ. ಸೋಶಿಯಲ್ ಮೀಡಯಾದಲ್ಲಿ ಆಕ್ಷೇಪಾರ್ಹ ಸಂದೇಶಗಳನ್ನು ಹರಡುವ ಮೂಲಕ ಸಮಾಜದ ಸ್ವಾಸ್ಥ್ಯ ಕದಡುವ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳ ವಿರುದ್ಧ ತ್ತರ ಪ್ರದೇಶದ ಮೊರಾದಾಬಾದ್ ಪೊಲೀಸರು ಕಠಿಣ ಕ್ರಮಗಳನ್ನು ಜರುಗಿಸುತ್ತಿದ್ದಾರೆ.

ಸಂತರು ಮತ್ತು ದೇವತೆಗಳ ಬಗ್ಗೆ ಆಕ್ಷೇಪಾರ್ಹ ಕಮೆಂಟ್‌ ಮಾಡ್ತಿದ್ದ ಯುಟ್ಯೂಬರ್

ಬಂಧಿತ ಯುಟ್ಯೂಬರ್ ಮೊಹಮ್ಮದ್ ಆಮೀರ್ ಮೊರಾದಾಬಾದ್‌ನ ಪಕ್ಬರಾ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾಗಿದ್ದಾನೆ ಎಂದು ವರದಿಯಾಗಿದೆ. ಟಿಆರ್‌ಟಿ ಹೆಸರಿನ ಯುಟ್ಯೂಬ್ ಚಾನೆಲ್ ಹೊಂದಿರುವ ಮೊಹಮ್ಮದ್ ಆಮೀರ್, ಸಂತರು ಮತ್ತು ದೇವತೆಗಳ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್‌ ಮಾಡುತ್ತಿದ್ದನು. ಈ ಮೂಲಕ ಸಮಾಜದಲ್ಲಿ ದ್ವೇಷ ಹರಡುವ ಕೆಲಸ ಮಾಡುತ್ತಿದ್ದ ಎಂಬ ಆರೋಪಗಳು ಮೊಹಮ್ಮದ್ ಆಮೀರ್ ಕೇಳಿ ಬಂದಿದ್ದವು.

ಅಮನ್ ಠಾಕೂರ್ ಎಂಬವರು ಸಮಾಜದ ಸ್ವಾಸ್ತ್ಯ ಕದಡುತ್ತಿರುವ ಯುಟ್ಯೂಬರ್ ಮೊಹಮ್ಮದ್ ಆಮೀರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದ್ದರು. ಹಾಗೆಯೇ ಮೊಹಮ್ಮದ್ ಅಮೀರ್‌ನ ವಿಡಿಯೋಗಳನ್ನು ಅಮನ್ ಠಾಕೂರ್ ಪೊಲೀಸರ ಗಮನಕ್ಕೆ ತಂದಿದ್ದರು. ಮೊಹಮ್ಮದ್ ಆಮೀರ್ ಯುಟ್ಯೂಬ್‌ನಲ್ಲಿ 5.8 ಮಿಲಿಯನ್ ಸಬ್‌ಸ್ಕ್ರೈಬರ್ ಹೊಂದಿದ್ದಾರೆ.

ಪಕ್ಬಾಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಪಕ್ಬಾಡಾ ಪ್ರದೇಶದ ನಿವಾಸಿ ಮೊಹಮ್ಮದ್ ಆಮೀರ್ ಓರ್ವ ಯುಟ್ಯೂಬರ್ ಆಗಿದ್ದು, ಆತನ ವಿರುದ್ಧ ಪಕ್ಬಾಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮೊಹಮ್ಮದ್ ಆಮೀರ್ ಟಿಆರ್‌ಟಿ ಯೂಟ್ಯೂಬ್ ಚಾನೆಲ್ ಹೊಂದಿದ್ದಾನೆ. ಈ ಪ್ಲಾಟ್‌ಫಾರಂ ಮೂಲಕ ಅಶ್ಲೀಲ, ಸಮಾಜವಿರೋಧಿ ಮತ್ತು ಅಸಭ್ಯ, ಪ್ರಚಾರದ ವಿಷಯವನ್ನು ಪ್ರಸಾರ ಮಾಡಿದ ಆರೋಪ ಮೊಹಮ್ಮದ್ ಆಮೀರ್ ಮೇಲಿದೆ. ಈ ಆರೋಪಗಳ ಸಂಬಂಧ ಪಕ್ಬಾಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ಅನ್ವಯ ಮೊಹಮ್ಮದ್ ಆಮೀರ್‌ನನ್ನು ಬಂಧಿಸಲಾಗಿದೆ ಎಂದು ಮೊರಾದಾಬಾದ್ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಪೊಲೀಸರಿಂದ ವಿಡಿಯೋಗಳ ಪರಿಶೀಲನೆ

ಸದ್ಯ ಬಂಧನಕ್ಕೊಳಗಾಗಿರುವ ಮೊಹಮ್ಮದ್ ಆಮೀರ್ ಅಪ್ಲೋಡ್ ಮಾಡಿದ ವಿಡಿಯೋಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ವಿಡಿಯೋಗಳ ಸತ್ಯಾಸತ್ಯತೆಯನ್ನು ಸಹ ಪರಿಶೀಲಿಸಲಾಗುತ್ತಿದೆ. ಪ್ರಕರಣ ಸಂಬಂಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಉತ್ತರ ಪ್ರದೇಶದ ಸಂಭಾಲ್ ಪೊಲೀಸರು ಇನ್‌ಸ್ಟಾಗ್ರಾಮ್‌ನಲ್ಲಿ ಅಶ್ಲೀಲ ಮತ್ತು ಆಕ್ಷೇಪಾರ್ಹ ವಿಷಯವನ್ನು ಪೋಸ್ಟ್ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದರು. ಉತ್ತರ ಪ್ರದೇಶ ಪೊಲೀಸರ ಈ ಕ್ರಮವು ಇಂಟರ್ನೆಟ್‌ನಲ್ಲಿ ದ್ವೇಷಪೂರಿತ ವಿಷಯವನ್ನು ಪೋಸ್ಟ್ ಮಾಡುವವರಿಗೆ ಒಂದು ಎಚ್ಚರಿಕೆಯಾಗಿದೆ.

ಹಿಂಸಾಚಾರವನ್ನು ಪ್ರಚೋದಿಸುವ ಸಾಧ್ಯತೆ

ಬಿಜೆಪಿ ಸಂಸದ ನಿಶಿಕಾಂತ್ ದುಬೆ ನೇತೃತ್ವದ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನದ ಸ್ಥಾಯಿ ಸಮಿತಿಯು ದೇಶದಲ್ಲಿನ ಕೆಲವು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಮತ್ತು ಪ್ರಭಾವಿಗಳ ಚಟುವಟಿಕೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ವರದಿಗಳ ಪ್ರಕಾರ, ಈ ಘಟಕಗಳು ದೇಶದ ಹಿತಾಸಕ್ತಿಗಳ ವಿರುದ್ಧ ಕೆಲಸ ಮಾಡುತ್ತಿರುವಂತೆ ಕಂಡುಬರುತ್ತಿದೆ. ಇದು ಹಿಂಸಾಚಾರವನ್ನು ಪ್ರಚೋದಿಸುವ ಸಾಧ್ಯತೆಯಿದೆ ಎಂದು ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿದೆ.

ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ನಿಯಮದಡಿಯಲ್ಲಿ ಕ್ರಮಕ್ಕೆ ಆಗ್ರಹಿಸಿದೆ. ಐಟಿ ಕಾಯ್ದೆ 2000 ಮತ್ತು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2021 ರ ಅಡಿಯಲ್ಲಿ ಭಾರತ ವಿರೋಧಿ ಸೋಶಿಯಲ್ ಮೀಡಿಯಾ ಹಾಗೂ ಇನ್‌ಫ್ಲುಯೆನ್ಸರ್ ವಿರುದ್ಧ ಕ್ರಮಕ್ಕೆ ನಿಷೇಧಿಸಲು ತೆಗೆದುಕೊಂಡ ಚಿಂತನಶೀಲ ಕ್ರಮದ ವಿವರಗಳನ್ನು" ಸಮಿತಿ ಕೋರಿದೆ. ಮೇ 8 ರೊಳಗೆ ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸುವಂತೆ ಎರಡೂ ಸಚಿವಾಲಯಗಳ ಕಾರ್ಯದರ್ಶಿಗಳಿಗೆ ಪತ್ರವನ್ನು ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.