ಕಳೆದ ಮೂರು ವರ್ಷಗಳಿಂದ ಶಿವ ಭಕ್ತನಾಗಿರುವ ಮುಸ್ಲಿಂ ಯುವಕ ಈ ಬಾರಿ ಹಿಂದೂ ಗೆಳೆಯನೊಂದಿಗೆ 101 ಲೀಟರ್ ಗಂಗಾಜಲ ಹೊತ್ತುಕೊಂಡು ಕನ್ವರ್ ಯಾತ್ರೆಯಲ್ಲಿ ಭಾಗಿಯಾಗಿದ್ದನು. ಸದ್ಯ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ನವದೆಹಲಿ: ಭಾತರದ ಉತ್ತರ ಭಾಗದಲ್ಲಿ ಹಿಂದೂಗಳು ಕನ್ವರ್ ಯಾತ್ರೆಯಲ್ಲಿ (kanwar yatra 2025) ಭಾಗಿಯಾಗುತ್ತಾರೆ. 101 ಲೀಟರ್ ಗಂಗಾಜಲವನ್ನು ತೆಗೆದುಕೊಂಡು ಹೋಗಿ ಶಿವನಿಗೆ (Lord Shiva) ಜಲಾಭಿಷೇಕ ಮಾಡಲಾಗುತ್ತದೆ. ಇದೇ ರೀತಿ ಹಿಂದೂ ಗೆಳೆಯನೊಂದಿಗೆ ಮುಸ್ಲಿಂ ಯುವಕ (Muslim Youth) ಸಹ ಕನ್ವರ್ ಯಾತ್ರೆಯಲ್ಲಿ ಭಾಗಿಯಾಗಿದ್ದನು. ಕನ್ವರ್ ಯಾತ್ರೆ ಮುಗಿಸಿಕೊಂಡು ಮನೆಗೆ ಹಿಂದಿರುಗಿದ ಯುವಕನಿಗೆ ಬಿಗ್ ಶಾಕ್ ಎದುರಾಗಿತ್ತು. ಕಳೆದ ಮೂರು ವರ್ಷಗಳಿಂದ ಈ ಮುಸ್ಲಿಂ ಯುವಕ ಶಿವನ ಆರಾಧಕನಾಗಿದ್ದು, ಭವಿಷ್ಯದಲ್ಲಿ ಹಿಂದೂ (Hindu) ಧರ್ಮವನ್ನು ಅಳವಡಿಸಿಕೊಳ್ಳುವ ಬಯಕೆಯನ್ನು ಹೊಂದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಉತ್ತರ ಪ್ರದೇಶದ ಮೀರತ್ ಪಟ್ಟಣದ ಫಲವಾಡ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 20 ವರ್ಷದ ಯುವಕ ಶಖೀರ್, ಈ ಬಾರಿ ಕನ್ವರ್ ಯಾತ್ರೆಯಲ್ಲಿ ಭಾಗಿಯಾಗಿದ್ದನು. ಶ್ರಾವಣ ಮಾಸದ ಹಿನ್ನೆಲೆ ಶಖೀರ್, ತನ್ನ ಹಿಂದೂ ಗೆಳೆಯರೊಂದಿಗೆ ಹರಿದ್ವಾರದಿಂದ 101 ಲೀಟರ್ ಗಂಗಾಜಲವನ್ನು ಹೊತ್ತುಕೊಂಡು ಕನ್ವರ್ ಯಾತ್ರೆ ಪೂರ್ಣಗೊಳಿಸಿದ್ದಾನೆ. ಯಾತ್ರೆಯಿಂದ ಮನೆಗೆ ಹಿಂದಿರುಗಿದಾಗ ಶಖೀರ್‌ಗೆ ಬಿಗ್ ಶಾಕ್ ಎದುರಾಗಿದೆ.
ಕುಟುಂಬಸ್ಥರಿಂದ ಶಕೀರ್ ಮೇಲೆ ಹಲ್ಲೆ ಆರೋಪ
ಕನ್ವರ್ ಯಾತ್ರೆ ಪೂರ್ಣಗೊಳಿಸಿ ಬಂದ ಶಖೀರ್ ಮೇಲೆ ಕುಟುಂಬಸ್ಥರು ಕೋಲುಗಳಿಂದ ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ. ವೃತ್ತಿಯಲ್ಲಿ ಕಾರ್ಮಿಕನಾಗಿರುವ ಶಖೀರ್ ಮೂರು ವರ್ಷಗಳಿಂದ ಹಿಂದೂ ಧರ್ಮದತ್ತ ಆಕರ್ಷಿತನಾಗಿದ್ದಾನೆ. ಈ ಬಾರಿಯ ಕನ್ವರ್ ಯಾತ್ರೆ ವೇಳೆ ಶಖೀರ್‌ನನ್ನು ಸನ್ಮಾನಿಸಲಾಗಿತ್ತು. ಖತೌಲಿಯಲ್ಲಿ ನಡೆದ ಸೇವಾ ಶಿಬಿರದಲ್ಲಿಯೂ ಶಖೀರ್‌ನನ್ನು ಭಕ್ತಾದಿಗಳು ಸನ್ಮಾನಿಸಿ ಗೌರವಿಸಲಾಗಿತ್ತು.
ಶಖೀರ್ ನಡೆಗೆ ಕುಟುಂಬಸ್ಥರು ಮತ್ತು ನೆರೆಹೊರೆಯವರಿಂದ ತೀವ್ರ ವಿರೋಧ
ಶಖೀರ್ ಕನ್ವರ್ ಯಾತ್ರೆಯಲ್ಲಿ ಭಾಗಿಯಾಗಿದ್ದು ಸ್ಥಳೀಯವಾಗಿ ವೈರಲ್ ಆಗಿತ್ತು. ಶಖೀರ್ ಹಿಂದಿರುಗಿ ಬರುತ್ತಿದ್ದಂತೆ ಹಿಂದೂ ಧರ್ಮದ ನಂಬಿಕೆ ಮತ್ತು ಆಚರಣೆಯನ್ನು ಕೈ ಬಿಡುವಂತೆ ಕುಟುಂಸ್ಥರು, ನೆರೆಹೊರೆಯವರು ಹೇಳಿದ್ದಾರೆ. ಧಾರ್ಮಿಕ ಆಚರಣೆ ಬಿಡಲು ಒಪ್ಪದಿದ್ದಾಗ ನೆರೆಹೊರೆಯವರ ಜೊತೆ ಸೇರಿ ಕುಟುಂಬಸ್ಥರು ತನ್ನ ಮೇಲೆ ಕೋಲುಗಳಿಂದ ಹಲ್ಲೆ ಮಾಡಲು ಮುಂದಾಗಿದ್ದರು ಎಂದು ಶಖೀರ್ ಹೇಳಿದ್ದಾನೆ. ಪೋಷಕರು ಶಿವನ ಪೂಜೆ ನಿಲ್ಲಿಸುವಂತೆ ಬೆದರಿಕೆ ಹಾಕಿದ್ದಾರೆ. ಒಂದು ವೇಳೆ ಪೊಲೀಸರಿಂದ ತನಗೆ ರಕ್ಷಣೆ ಸಿಗದಿದ್ರೆ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ಯೋಚಿಸುತ್ತಿರೋದಾಗಿ ಶಖೀರ್ ಹೇಳಿಕೆ ನೀಡಿದ್ದಾನೆ.
ತನ್ನ ಮೇಲೆ ಹಲ್ಲೆಯ ಕುರಿತು ಶಖೀರ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾನೆ. ದೂರು ದಾಖಲಿಸಿಕೊಂಡ ಫಲವಾಡ ಠಾಣೆಯ ಪೊಲೀಸರು, ಶಖೀರ್ ನಿವಾಸಕ್ಕೆ ತೆರಳಿ ಕುಟುಂಬಸ್ಥರು ಮತ್ತು ಸ್ಥಳೀಯ ನಿವಾಸಿಗಳ ಹೇಳಿಕೆಯನ್ನು ದಾಖಲಿಸಿಕೊಳ್ಳತ್ತಿದ್ದಾರೆ. ಶಖೀರ್ ಮತ್ತು ಪೋಷಕರು ಇಬ್ಬರ ಹೇಳಿಕೆ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಈ ವಿಷಯದ ಬಗ್ಗೆ ಪೊಲೀಸರು ಏನು ಹೇಳಿದ್ದಾರೆ?
ಈ ಕುರಿತು ಮೀರತ್‌ನ ಗ್ರಾಮೀಣ ಎಸ್‌ಪಿ ರಾಕೇಶ್ ಕುಮಾರ್ ಮಾಹಿತಿ ನೀಡಿದ್ದು, ಫಲವಾಡ ಪ್ರದೇಶದಲ್ಲಿ ವಿವಿಧ ಮುದಾಯಗಳಿಗೆ ಸೇರಿದ ಇಬ್ಬರು ಯುವಕರು ಒಟ್ಟಾಗಿ ಕನ್ವರ್ ಯಾತ್ರೆಯಲ್ಲಿ ಭಾಗವಹಿಸಿದ್ದರು. ನಂತರ ಶಿವರಾತ್ರಿಯಂದು ಜಲಭಿಷೇಕ ಮಾಡಿದ್ದರು. ಕನ್ವರ್ ಯಾತ್ರೆಯಲ್ಲಿ ಭಾಗಿಯಾಗಿದ್ದಕ್ಕೆ ಮುಸ್ಲಿಂ ಯುವಕನಿಗೆ ಆತನ ಕುಟುಂಬದವರು ಛೀಮಾರಿ ಹಾಕಿದ್ದಾರೆ ಎಂದು ಹೇಳಿದ್ದಾರೆ.
ಈ ವಿಷಯದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮಧ್ಯಪ್ರವೇಶಿಸಿ ತನಿಖೆ ನಡೆಸುತ್ತಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಕನ್ವರ್ ಯಾತ್ರೆಯಲ್ಲಿ ಭಾಗಿಯಾದ ಮುಸ್ಲಿಂ ಯುವಕ ಕುಟುಂಬಸ್ಥರ ಜೊತೆಯಲ್ಲಿದ್ದಾನೆ ಎಂದು ಎಸ್‌ಪಿ ರಾಕೇಶ್ ಹೇಳಿದ್ದಾರೆ.
