Top News Today: ರಾಜ್ಯದಲ್ಲಿ ಮತ್ತೆ ಸಿಎಂ ಬದಲಾವಣೆ ಕೂಗು , 10 ಲಕ್ಷ ಹೆಕ್ಟೇರ್ ಬೆಳೆ ಹಾನಿಗೆ ಜಂಟಿ ಸಮೀಕ್ಷೆ ನಂತರ ಪರಿಹಾರ, ಕೇಂದ್ರ ಸರ್ಕಾರದಿಂದ ಗೋಧಿ ಸೇರಿ 6 ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ, ಮೊಬೈಲ್ ಇಎಂಐ ಪಾವತಿಸದಿದ್ದರೆ ಫೋನ್ ಲಾಕ್‌ಗೆ ಆರ್‌ಬಿಐ ಚಿಂತನೆ ಸೇರಿದಂತೆ ಇಂದಿನ ಟಾಪ್ ಸುದ್ದಿಗಳು.
ರಾಜ್ಯದಲ್ಲಿ 10 ಲಕ್ಷ ಹೆಕ್ಟೇರ್ ಬೆಳೆ ಹಾನಿ, ಜಂಟಿ ಸಮೀಕ್ಷೆ ನಂತರ ಪರಿಹಾರ: ಸಿಎಂ ಸಿದ್ದರಾಮಯ್ಯ
ಹೆಚ್ಚಿನ ಮಳೆ ಇರುವುದರಿಂದ ಬೆಳೆ ಹಾನಿಯ ಜಂಟಿ ಸಮೀಕ್ಷೆ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಜಂಟಿ ಸಮೀಕ್ಷೆಯ ನಂತರ ಬೆಳೆ ಹಾನಿಯಾದ ಎಲ್ಲಾ 10 ಲಕ್ಷ ಹೆಕ್ಟೇರ್‌ಗೂ ಬೆಳೆ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ದಸರಾ ವಿಜಯದಶಮಿ ಮೆರವಣಿಗೆಗೆಯಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವರ್ಷ ರಾಜ್ಯದೆಲ್ಲೆಡೆ ಉತ್ತಮ ಮಳೆಯಾಗಿದೆ. ಎಲ್ಲಾ ಜಲಾಶಯಗಳು ತುಂಬಿ, ಉತ್ತಮ ಬೆಳೆಯೂ ಆಗುತ್ತಿದೆ ಎಂದರು. ಆದರೆ, ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಅತಿವೃಷ್ಠಿಯಿಂದ ರಾಜ್ಯದಲ್ಲಿ ಸುಮಾರು 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ಸಂಭವಿಸಿದೆ.
ಮೊಬೈಲ್‌ನ ಇಎಂಐ ಕಟ್ಟದೇ ಇದ್ದರೆ ಇನ್ನು ಫೋನ್ ಲಾಕ್?
ಸಾಲದ ಮಾಸಿಕ ಕಂತುಗಳನ್ನು ದೀರ್ಘಕಾಲ ಬಾಕಿ ಉಳಿಸಿಕೊಂಡರೆ ಬೈಕ್ ಮತ್ತು ಕಾರನ್ನು ಸಾಲ ನೀಡಿದ ಕಂಪನಿಗಳು ಜಪ್ತಿ ಮಾಡಿದಂತೆ ಇನ್ನು ಮುಂದೆ ಮೊಬೈಲ್ ಕೂಡಾ ಡಿಜಿಟಲೀ ಜಪ್ತಿಯಾಗಲಿದೆ. ಹೌದು. ಇಂಥಹ ಒಂದು ಕ್ರಮ ಕೈಗೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ ಚಿಂತನೆ ನಡೆಸಿದೆ. ಮೊಬೈಲ್ ಅನ್ನು ಸಾಲ ಮಾಡಿ ಖರೀದಿ ಮಾಡಿ ಅದರ ಪ್ರತಿ ತಿಂಗಳ ಕಂತು (ಇಎಂಐ) ಸರಿಯಾಗಿ ಪಾವತಿ ಮಾಡದೇ ಇದ್ದಲ್ಲಿ ಅದನ್ನು ಲಾಕ್ ಮಾಡಲು ಆರ್‌ಬಿಐ ಚಿಂತನೆ ನಡೆಸಿದೆ.
ರಾಜ್ಯದಲ್ಲಿ ಈಗ ಮತ್ತೆ ಸಿಎಂ ಬದಲಾವಣೆ ಕೂಗು
ರಾಜ್ಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ಬಗ್ಗೆ ಯಾರೂ ಮಾತಾಡಬಾರದು ಎಂದು ಇತ್ತೀಚೆಗೆ ಕಾಂಗ್ರೆಸ್ ಹೈಕಮಾಂಡ್ ಫರ್ಮಾನು ಹೊರಡಿಸಿತ್ತು. ಈಗ ಮತ್ತೆ ಸಿಎಂ ಬದಲಾವಣೆ ಕೂಗು ಎದ್ದಿದೆ. ಕೆಲವು ಕಾಂಗ್ರೆಸ್ ಶಾಸಕರು ಹಾಗೂ ಪಕ್ಷದ ಮುಖಂಡರು ‘ಡಿಕೆಶಿ ಸಿಎಂ ಆಗುವುದು ನಿಶ್ಚಿತ’ ಎಂದು ಹೇಳಿದ್ದಾರೆ. ಆದರೆ ಈ ಸಾಧ್ಯತೆಯನ್ನು ಖುದ್ದು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ತಳ್ಳಿಹಾಕಿದ್ದಾರೆ. ಇಂಥ ಹೇಳಿಕೆಯನ್ನು ಯಾರೂ ನೀಡಬಾರದು ಎಂದಿರುವ ಡಿಕೆಶಿ, ಈ ಹೇಳಿಕೆ ನೀಡಿದವರಿಗೆ ನೋಟಿಸ್ ಕೂಡ ಜಾರಿ ಮಾಡಿದ್ದಾರೆ.
ಪಿಒಕೆನಲ್ಲಿ ದಂಗೆಯೆದ್ದ 12 ಜನರ ನರಮೇಧ
ತಾರತಮ್ಯ ಖಂಡಿಸಿ ಪಾಕಿಸ್ತಾನ ಸರ್ಕಾರದ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಜನ ದಂಗೆ ಎದ್ದಿದ್ದು, ಅನಿರ್ದಿಷ್ಟಾವಧಿ ಪ್ರತಿಭಟನೆ 4ನೇ ದಿನ ಪೂರೈಸಿದೆ. ಈ ನಡುವೆ ಪ್ರತಿಭಟನೆ ಹತ್ತಿಕ್ಕಲು ಪಾಕ್ ಸರ್ಕಾರ ಲಾಠಿಚಾರ್ಜ್, ಗೋಲಿಬಾರ್‌ನಂಥ ದಾಳಿಯಂಥ ದಮನಕಾರಿ ನೀತಿ ಪ್ರದರ್ಶಿಸುತ್ತಿದ್ದು, ಪೊಲೀಸರು ಮತ್ತು ಸೇನೆಯ ಗುಂಡಿನ ದಾಳಿಗೆ ಗುರುವಾರ ಒಂದೇ 12 ದಿನ ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ. ಇದರೊಂದಿಗೆ ಕಳೆದ 4 ದಿನಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 14ಕ್ಕೆ ಏರಿದೆ.
ಗೋಧಿ ಸೇರಿ 6 ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ ಸರ್ಕಾರ
ದಸರಾ ಖುಷಿಯಲ್ಲಿದ್ದ ರೈತರಿಗೆ ಕೇಂದ್ರ ಶುಭ ಸುದ್ದಿಯೊಂದನ್ನು ನೀಡಿದ್ದು, 2026-27ನೇ ಸಾಲಿನ ಆರ್ಥಿಕ ವರ್ಷಕ್ಕೆ ಅನ್ವಯವಾಗುವಂತೆ ಗೋಧಿಯ ಕನಿಷ್ಠ ಬೆಂಬಲ ಬೆಲೆ 160 ರು. ಹೆಚ್ಚಿಸಿ 2585 ರು.ಗೆ ಏರಿಕೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯನ್ನು ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ 6 ರಬಿ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ.
ಆಫ್ಘನ್ ತಾಲಿಬಾನ್ ಸರ್ಕಾರದ ವಿದೇಶಾಂಗ ಸಚಿವ ಭಾರತಕ್ಕೆ!
ಮಹತ್ವದ ಬೆಳವಣಿಗೆಯೊಂದರಲ್ಲಿ ಆಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಖಿ ಭಾರತ ಪ್ರವಾಸಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತನ್ನ ಅನುಮೋದನೆ ನೀಡಿದೆ. ಭಾರತದ ಮನವಿ ಮೇರೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಈ ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ. ವಿಶೇಷವೆಂದರೆ ಭಾರತದ ಇಂಥದ್ದೇ ಪ್ರಸ್ತಾಪವನ್ನು ಭದ್ರತಾ ಮಂಡಳಿ ತಿರಸ್ಕರಿಸಿತ್ತು.
