ಗಣರಾಜ್ಯೋತ್ಸವದ ಧ್ವಜಾರೋಹಣದ ವೇಳೆ ಐಎಎಸ್ ಅಧಿಕಾರಿ ಟೀನಾ ದಾಬಿ ಅವರು ತಪ್ಪಾದ ದಿಕ್ಕಿಗೆ ಸೆಲ್ಯೂಟ್ ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆ. ಈ ವೀಡಿಯೋ ವೈರಲ್ ಆಗಿದ್ದು, ಪರ ವಿರೋಧ ನೆಟ್ಟಿಗರು ಚರ್ಚಿಸುತ್ತಿದ್ದಾರೆ.

ಸಾಮಾನ್ಯವಾಗಿ ಶಾಲೆಗಳಲ್ಲಿ ಸ್ವಾತಂತ್ರ ದಿನಾಚರಣೆಯಾಗಲಿ ಗಣರಾಜ್ಯೋತ್ಸವವಾಗಲಿ ಧ್ವಜಾರೋಹಣದ ವೇಳೆ ಸಣ್ಣಪುಟ್ಟ ಎಡವಟ್ಟುಗಳು ಆಗಾಗ ಆಗುತ್ತಿರುತ್ತವೆ. ಧ್ವಜ ಉಲ್ಟಾ ಕಟ್ಟಿರುವುದು ಎಷ್ಟು ಎಳೆದರು ಧ್ವಜ ಬಿಚ್ಚಿಕೊಳ್ಳದೇ ಇರುವುದು ಈ ರೀತಿಯ ತೊಂದರೆಗಳು ಆಗುತ್ತಿರುತ್ತವೆ. ಆದರೆ ದೊಡ್ಡದೊಡ್ಡ ಅಧಿಕಾರಿಗಳು ತಪ್ಪು ಮಾಡಿದಾಗ ಅದು ಸಣ್ಣದಾದರೂ ದೊಡ್ಡದಾಗಿ ಹೈಲೈಟ್ ಆಗುತ್ತಿರುತ್ತದೆ. ಹಾಗೆಯೇ ಇಲ್ಲಿ ಹಿರಿಯ ಐಎಎಸ್ ಅಧಿಕಾರಿ ಟೀನಾ ದಾಬಿ ಅವರು ಮಾಡಿದ ಸಣ್ಣ ತಪ್ಪೊಂದರ ವೀಡಿಯೋ ವೈರಲ್‌ ಆಗಿ ಈಗ ಅವರು ಸಖತ್ ಟ್ರೋಲ್ ಆಗುತ್ತಿದ್ದಾರೆ.

ಗಣರಾಜ್ಯೋತ್ಸವ ವೇಳೆ ಮಾಡಿದ ಸಣ್ಣ ತಪ್ಪಿನಿಂದ ಮತ್ತೆ ಟ್ರೋಲ್ ಆದ ಟೀನಾ ದಾಬಿ

ನಿನ್ನೆ ದೇಶದೆಲ್ಲೆಡೆ ಗಣರಾಜ್ಯೋತ್ಸವ ಆಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಾಯ್ತು. ಹಾಗೆಯೇ ರಾಜಸ್ಥಾನದ ಬರ್ಮೇರ್‌ನ ಜಿಲ್ಲಾಧಿಕಾರಿಗಳ ಕಚೇರಿಯಲ್ಲೂ ಧ್ವಜಾರೋಹಣ ಕಾರ್ಯಕ್ರಮಗಳು ನಡೆದವು. ಆದರೆ ಈ ಸಮಯದಲ್ಲಿ ಐಎಎಸ್ ಅಧಿಕಾರಿ ಟೀನಾ ದಾಬಿ ಮಾಡಿದ ಸಣ್ಣ ಎಡವಟ್ಟಿನಿಂದಾಗಿ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಈಗ ಟ್ರೋಲ್ ಮಾಡಲಾಗುತ್ತಿದೆ. ಐಎಎಸ್ ಅಧಿಕಾರಿಯಾಗಿ ಧ್ವಜರೋಹಣದ ನಂತರ ಹೇಗೆ ಸೆಲ್ಯೂಟ್ ಹೊಡಿಬೇಕು ಅನ್ನೊದು ಗೊತ್ತಿಲ್ವೇ ಎಂದು ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡ ಈ ವಿಡಿಯೋದಲ್ಲಿ ಬಾರ್ಮರ್‌ನ ಜಿಲ್ಲಾ ಕಲೆಕ್ಟರೇಟ್ ಆವರಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದಾಬಿ ತ್ರಿವರ್ಣ ಧ್ವಜ ಹಾರಿಸುತ್ತಿರುವುದನ್ನು ತೋರಿಸಲಾಗಿದೆ. ಕೆಲವು ಕ್ಷಣಗಳ ನಂತರ, ಅವರು ರಾಷ್ಟ್ರಧ್ವಜದಿಂದ ದೂರ ಸರಿದು ವಿರುದ್ಧ ದಿಕ್ಕಿನಲ್ಲಿ ಸೆಲ್ಯೂಟ್ ಮಾಡಿದ್ದಾರೆ.ಆದರೆ ಸ್ಥಳದಲ್ಲಿದ್ದ ಅಧಿಕಾರಿಯೊಬ್ಬರು ತಕ್ಷಣ ಅವರಿಗೆ ಮಾರ್ಗದರ್ಶನ ನೀಡಿದ್ದು, ಕೂಡಲೇ ತಮ್ಮ ತಪ್ಪನ್ನು ಸರಿಪಡಿಸಿಕೊಂಡ ಅವರು ತಕ್ಷಣ ತಮ್ಮ ಸ್ಥಾನವನ್ನು ಸರಿಪಡಿಸಿಕೊಂಡು ರಾಷ್ಟ್ರಧ್ವಜಕ್ಕೆ ಸೆಲ್ಯೂಟ್ ಮಾಡಿದರು.

ಕೆಲ ಸೆಕೆಂಡ್‌ಗಳಲ್ಲಿ ಈ ಘಟನೆ ನಡೆದಿದ್ದರೂ ಈ ಕ್ಲಿಪ್‌ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ವೈರಲ್ ಆಗಿದೆ. ಅನೇಕರು ಅವರನ್ನು ಟೀಕಿಸಲು ಶುರು ಮಾಡಿದರೆ ಇನ್ನೂ ಅನೇಕರು ಅವರನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದರು. ಕೆಲವು ಸೋಶಿಯಲ್ ಮೀಡಿಯಾ ಬಳಕೆದಾರರು ಈ ಕ್ಷಣವನ್ನು ಉದ್ಘಾಟನೆ ಸಮಾರಂಭದ ಸಮಯದಲ್ಲಿ ನಡೆದ ಶಿಷ್ಟಾಚಾರದ ದೋಷ ಎಂದು ಬಣ್ಣಿಸಿದರೆ, ಇನ್ನು ಕೆಲವರು ಇದು ನೇರ ಸಾರ್ವಜನಿಕ ಕಾರ್ಯಕ್ರಮದ ಸಮಯದಲ್ಲಿ ಸಂಭವಿಸಿದ ಸಣ್ಣ ಮತ್ತು ಅರ್ಥವಾಗುವಂತಹ ಲೋಪ ಎಂದು ವಾದಿಸಿದರು.

ಈ ವಿಡಿಯೋ ವೈರಲ್ ಆಗ್ತಿದ್ದಂತೆ ಗೂಗಲ್‌ನಲ್ಲಿ ಜನ ಟೀನಾ ದಾಬಿ ಹೆಸರಿನಲ್ಲಿ ಹುಡುಕಾಟ ಆರಂಭಿಸಿದ್ದರಿಂದ ಗೂಗಲ್ ಸರ್ಚ್‌ನಲ್ಲಿ ಟೀನಾ ದಾಬಿ ಟ್ರೆಂಡಿಂಗ್ ಆದರು. ಅನೇಕ ಬಳಕೆದಾರರು ರಾಷ್ಟ್ರೀಯ ಸಮಾರಂಭಗಳಲ್ಲಿ ಹಿರಿಯ ನಾಗರಿಕ ಸೇವೆಯ ಅಧಿಕಾರಿಗಳ ಮೇಲೆ ಇರಿಸಲಾಗುವ ನಿರೀಕ್ಷೆಗಳ ಬಗ್ಗೆ ಮಾತನಾಡಿದರು. ಓರ್ವ ಅಧಿಕಾರಿಯಾಗಿ ಟೀನಾ ದಾಬಿ ಅವರ ಅನುಭವವನ್ನು ಗಮನಿಸಿದರ ಇಂತಹ ತಪ್ಪು ಹೇಗೆ ನಡೆಯಲು ಸಾಧ್ಯ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಅವರೇನು ಇದೇ ಮೊದಲ ಬಾರಿಗೆ ಧ್ವಜಾರೋಹಣ ಮಾಡ್ತಿರುವುದೇ? ಇಷ್ಟು ವರ್ಷಗಳ ಕಾಲ ಧ್ವಜಾರೋಹಣ ಮಾಡಿದವರಿಗೆ ಯಾವ ಕಡೆ ತಿರುಗಿ ರಾಷ್ಟ್ರಧ್ವಜಕ್ಕೆ ಸೆಲ್ಯೂಟ್ ಮಾಡಬೇಕು ಅನ್ನೋದು ಗೊತ್ತಿಲ್ಲವೆ? ಉನ್ನತ ದರ್ಜೆಯ ಅಧಿಕಾರಿಗೆ ಸೈನಿಕರು ಹೇಳಿಕೊಡಬೇಕೆ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. 2015ರ ಯುಪಿಎಸ್‌ಸಿ ಟಾಪರ್ ಆಗಿರುವ ಐಎಎಸ್ ಟೀನಾ ದಾಬಿ, ಪ್ರಸ್ತುತ ರಾಜಸ್ಥಾನದ ಬಾರ್ಮರ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಅವರು 2015 ರಲ್ಲಿ ಯುಪಿಎಸ್‌ಸಿ ಟಾಪರ್ ಆಗಿರುವ ಐಎಎಸ್ ಅಧಿಕಾರಿ. ಇವರಿಗೆ ರಿಪಬ್ಲಿಕ್‌ಡೇ ದಿನದಂದು ರೀಲ್ ಮಾಡುವುದು ಗೊತ್ತು ಮತ್ತು ರಾಷ್ಟ್ರಧ್ವಜವನ್ನು ಹಾರಿಸುವುದು ಹೇಗೆಂದು ತಿಳಿದಿಲ್ಲ. ನೀವು ಯುಪಿಎಸ್‌ಸಿ ಪರೀಕ್ಷೆಯಲ್ಲಿ ರಿಸರ್ವೇಷನ್‌ನಿಂದ ಟಾಪರ್ ಆದಾಗ ಇಂತದೆಲ್ಲಾ ನಡೆಯುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇವರು ರೀಲ್ಸ್ ಮಾಡುವ ಐಎಎಸ್ ಅಧಿಕಾರಿ ಟೀನಾ ದಾಬಿ, ಮೂಲಭೂತ ಧ್ವಜಾರೋಹಣದಲ್ಲಿ ಯಾರಿಗೆ ನಮಸ್ಕರಿಸಬೇಕೆಂದು ತಿಳಿದಿಲ್ಲ ಏಕೆಂದರೆ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದ ದಿನದಂದೇ ಇವರ ನಿಜವಾದ ಸಾಧನೆ ಕೊನೆಗೊಂಡಿತು ಎಂದು ಮತ್ತೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆದರೂ ಸಣ್ಣದೊಂದು ತಪ್ಪಿಗೆ ಅವರನ್ನು ಇಷ್ಟೊಂದು ಟ್ರೋಲ್ ಮಾಡುವುದು ಸರಿಯಲ್ಲ ಎಂದು ಅವರ ಬೆಂಬಲಿಗರು ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಅವರು ತಪ್ಪು ತಿಳಿದ ತಕ್ಷಣವೇ ತಮ್ಮನ್ನು ತಾವು ಸರಿಪಡಿಸಿಕೊಂಡಿದ್ದಾರೆ ಅವರನ್ನು ಬದುಕಲು ಬಿಡಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಮೊದಲ ರಾತ್ರಿಗೂ ಮೊದಲೇ ಮಗುವಿಗೆ ಜನ್ಮ ನೀಡಿದ ವಧು

ತಪ್ಪುಗಳನ್ನು ಮಾಡುವುದು ಮಾನವ ಜೀವನದ ಸಹಜ ಭಾಗ. ಉನ್ನತ ಹುದ್ದೆಗಳಲ್ಲಿರುವ ಜನರು ಪರಿಪೂರ್ಣರಾಗಿರಬೇಕು ಎಂದು ನಾವು ಹೆಚ್ಚಾಗಿ ನಿರೀಕ್ಷಿಸುತ್ತೇವೆ. ಆದರೆ ದೊಡ್ಡ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ ಸಮಾರಂಭಗಳಲ್ಲಿ, ಸಣ್ಣ ಮಾನವ ತಪ್ಪುಗಳು ಸಂಭವಿಸಬಹುದು. ಬಾರ್ಮರ್ ಜಿಲ್ಲಾಧಿಕಾರಿ ಟೀನಾ ದಾಬಿ ಯುಪಿಎಸ್‌ಸಿ ಟಾಪರ್ ಆಗಿದ್ದು, ಬಲವಾದ ಸಾರ್ವಜನಿಕ ಇಮೇಜ್ ಹೊಂದಿದ್ದಾರೆ. ಅದಕ್ಕಾಗಿಯೇ ಸಣ್ಣ ತಪ್ಪುಗಳು ದೊಡ್ಡದಾಗಿದೆ ರಾಷ್ಟ್ರೀಯ ಕಾರ್ಯಕ್ರಮಗಳು ಭಾರೀ ಆಡಳಿತಾತ್ಮಕ ಒತ್ತಡ ಮತ್ತು ಜವಾಬ್ದಾರಿಯೊಂದಿಗೆ ಬರುತ್ತವೆ. ಸಮಯದ ನಿರ್ಬಂಧಗಳು ಮತ್ತು ಸನ್ನಿವೇಶಗಳಿಂದಾಗಿ, ಸಣ್ಣ ತಪ್ಪುಗಳು ಸಾಧ್ಯ. ನ್ಯೂನತೆಗಳನ್ನು ಎತ್ತಿ ತೋರಿಸಲು ಯಾರನ್ನಾದರೂ ಟ್ರೋಲ್ ಮಾಡುವುದು ಸಕಾರಾತ್ಮಕ ಮನಸ್ಥಿತಿಯನ್ನು ಪ್ರತಿಬಿಂಬಿಸುವುದಿಲ್ಲ ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ.

ಇದನ್ನೂ ಓದಿ: ಗಣರಾಜ್ಯೋತ್ಸವಕ್ಕಾಗಿ ಕುರ್ಚಿಗಳ ಸಾಗಿಸುತ್ತಿದ್ದ ವೇಳೆ ಆಟೋರಿಕ್ಷಾದಿಂದ ಬಿದ್ದು 8ನೇ ಕ್ಲಾಸ್ ಬಾಲಕಿ ಸಾವು