ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಹುಲಿಯ ಚರ್ಮ, ಉಗುರು ಮತ್ತು ಹಲ್ಲುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಏಳು ಜನರ ಗ್ಯಾಂಗನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರಿಗೆ ಕರ್ನಾಟಕದ ಬೇಟೆಗಾರರೊಂದಿಗೆ ಸಂಪರ್ಕವಿರುವ ಶಂಕೆ ವ್ಯಕ್ತವಾಗಿದೆ.
ಹುಲಿ ಚರ್ಮ, ಉಗುರು ಮಾರಾಟಕ್ಕೆ ಯತ್ನಿಸಿದ ಖದೀಮರ ಬಂಧನ
ಕೇರಳ:ವನ್ಯಜೀವಿಗಳ ಬೇಟೆಯಾಡಿ ಅವುಗಳ ಚರ್ಮ, ಉಗುರು, ಮಾಂಸ ಕಳ್ಳಸಾಗಣೆ ಹಾಗೂ ಮಾರಾಟ ಮಾಡುತ್ತಿದ್ದ ಖದೀಮರ ಗ್ಯಾಂಗೊಂದನ್ನು ಕೇರಳ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ. ಅರಣ್ಯ ಅಧಿಕಾರಿಗಳು ಏಳು ಸದಸ್ಯರ ಗ್ಯಾಂಗ್ ಅನ್ನು ಬಂಧಿಸಿ ಅವರ ಬಳಿ ಇದ್ದ ಹುಲಿ ಚರ್ಮ, ಉಗುರುಗಳು ಮತ್ತು ಹಲ್ಲುಗಳನ್ನು ವಶಪಡಿಸಿಕೊಂಡಿದ್ದಾರೆ. ಹುಲಿ ದೇಹದ ಭಾಗಗಳನ್ನು ಮಾರಾಟ ಮಾಡುವ ಗ್ಯಾಂಗ್‌ನ ಯತ್ನದ ಬಗ್ಗೆ ಅರಣ್ಯ ಸಿಬ್ಬಂದಿಗೆ ರಹಸ್ಯ ಗುಪ್ತಚರ ಮಾಹಿತಿಯ ನಂತರ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಈ 7 ಜನರನ್ನು ಕಂಬಿ ಹಿಂದೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶುಕ್ರವಾರ ರಾತ್ರಿ ದೊರೆತ ಸುಳಿವಿನ ಮೇರೆಗೆ ಅರಣ್ಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಕಣ್ಣೂರು ಜಿಲ್ಲೆಯ ತಲಶ್ಶೇರಿ ತಾಲೂಕಿನ ಕತಿರೂರಿನಲ್ಲಿರುವ ಶಾಲೆಯ ಬಳಿ ಮೂವರು ಶಂಕಿತರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಮೊದಲು ಬಂಧಿಸಲ್ಪಟ್ಟವರು ಎರುವಟ್ಟಿ ಮೂಲದ ಅಶ್ವಿನ್ ಮತ್ತು ಚೆರುವಾಂಚೇರಿಯ ಮೂಲದ ಸಂದೇಶ್ ಮತ್ತು ಬಾಲನ್. ಇವರಿಂದ ನಾವು ಹುಲಿ ಚರ್ಮ, ಉಗುರುಗಳು ಮತ್ತು ಹಲ್ಲುಗಳನ್ನು ವಶಪಡಿಸಿಕೊಂಡಿದ್ದೇವೆ. ಅವರು ಈ ವಸ್ತುಗಳನ್ನು ಮಾರಾಟ ಮಾಡಲು ಸ್ಥಳಕ್ಕೆ ಬಂದಿದ್ದರು ಎಂದು ಕೊಟ್ಟಿಯೂರಿನ ಅರಣ್ಯ ವಲಯ ಅರಣ್ಯ ಅಧಿಕಾರಿ ನಿತಿನ್‌ರಾಜ್ ಟಿ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಪ್ರಾಥಮಿಕ ವಿಚಾರಣೆಯ ಸಮಯದಲ್ಲಿ ಪಡೆದ ಮಾಹಿತಿಯ ಆಧಾರದ ಮೇಲೆ, ಅರಣ್ಯ ಅಧಿಕಾರಿಗಳು ಇನ್ನೂ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಕಲ್ಲಿಕಂಡಿಯ ಶರತ್ ಕೆಕೆ, ಮಾಂಗಡ್‌ನ ರಾಜೀಶ್, ಚೆರುವಾಂಚೇರಿಯ ವಿಥುಲ್ ಮತ್ತು ಮಲಾಲ್‌ನ ರಾಖಿಲ್ ಬಂಧಿತ ಅರೋಪಿಗಳು. ಬಂಧಿತರಿಂದ ಹುಲಿಯ ದೇಹದ ಭಾಗಗಳನ್ನು ಸಾಗಿಸಲು ಬಳಸಲಾಗ್ತಿತ್ತು ಎನ್ನಲಾದ ಇನ್ನೋವಾ ಕಾರು ಮತ್ತು ಕಾರ್ಯಾಚರಣೆಯ ಸಮಯದಲ್ಲಿ ಬಳಸಲಾದ ಸ್ಕೂಟರ್ ಅನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಬಂಧಿತರಿಂದವಶಪಡಿಸಿಕೊಂಡ ವಸ್ತುಗಳನ್ನು ವೈದ್ಯರು ಪರೀಕ್ಷಿಸಿದ್ದು, ಅವು ಹುಲಿಗೆ ಸೇರಿವೆ ಎಂಬುದನ್ನು ದೃಢಪಡಿಸಿದ್ದಾರೆ.
ಇದನ್ನೂ ಓದಿ: 50ನೇ ವಸಂತಕ್ಕೆ ಕಾಲಿರಿಸಿದ ಅಭಿಷೇಕ್ ಬಚ್ಚನ್: ಎಲ್ಲರ ಗಮನ ಸೆಳೆಯಿತು ಪತ್ನಿ ಐಶ್ ಮಾಡಿದ ವಿಶ್
ಹೆಚ್ಚಿನ ತನಿಖೆಯ ಭಾಗವಾಗಿ ನಾವು ಅವುಗಳನ್ನು ಡಿಎನ್ಎ ಪರೀಕ್ಷೆಗೆ ಕಳುಹಿಸಿದ್ದೇವೆ ಎಂದು ಕೊಟ್ಟಿಯೂರಿನ ವಲಯ ಅರಣ್ಯ ಅಧಿಕಾರಿ ನಿತಿನ್‌ರಾಜ್ ಹೇಳಿದ್ದಾರೆ. ಕೊಟ್ಟಿಯೂರು ರೇಂಜ್ ಆಫೀಸರ್ ನಿತಿನ್ ರಾಜ್ ನೇತೃತ್ವದ ತಂಡ ಮತ್ತು ಕಣ್ಣೂರು ಅರಣ್ಯ ವಿಜಿಲೆನ್ಸ್ ಘಟಕವು ಹಲವಾರು ಅರಣ್ಯ ಮತ್ತು ವಿಜಿಲೆನ್ಸ್ ಅಧಿಕಾರಿಗಳ ಸಹಭಾಗಿತ್ವದಲ್ಲಿ ಈ ಕಾರ್ಯಾಚರಣೆ ನಡೆಸಿದೆ. ಬಂಧಿತ ವ್ಯಕ್ತಿಗಳನ್ನು ಶನಿವಾರ ತಲಶ್ಶೇರಿಯ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಿ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ: ವಿಜಯಪುರದ ಮಂಗಳೂರಿನಲ್ಲಿ ರೆಡ್ ಬರ್ಡ್ ಪ್ರವೇಟ್ ಜೆಟ್ ಪತನ
ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ಕಸ್ಟಡಿಗೆ ನೀಡುವಂತೆ ಕೋರಿ ಶೀಘ್ರದಲ್ಲೇ ನ್ಯಾಯಾಲಯವನ್ನು ಸಂಪರ್ಕಿಸುವುದಾಗಿ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ವ್ಯಕ್ತಿಗಳು ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಬೇಟೆಗಾರರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ವಿಚಾರ ಇದುವರೆಗಿನ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಮತ್ತೊಬ್ಬ ಅರಣ್ಯ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ. ಇದರಿಂದಾಗಿ ಹುಲಿಯನ್ನು ಅಲ್ಲಿ ಬೇಟೆಯಾಡಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಆದಾಗ್ಯೂ, ಈ ತಂಡವು ಹುಲಿ ಚರ್ಮವನ್ನು ನೇರವಾಗಿ ಬೇಟೆಗಾರರಿಂದ ಖರೀದಿಸಿದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ.


