Cockroach janata party (ಸಿಜೆಪಿ) ನೇತೃತ್ವದ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದ ತನಿಖೆ ನಡೆಸುತ್ತಿರುವ ಸಮಿತಿಯ ರಚನೆಗೆ ಆಕ್ಷೇಪ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿಯನ್ನು 'Mysterious' ಎಂದು ಕರೆದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಿರೋಧ

ತನಿಖಾ ಸಮಿತಿ ರಚನೆಗೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿ

ಇತ್ತೀಚೆಗೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಶಿಕ್ಷಣ ಸಚಿವರ ರಾಜೀನಾಮೆಗೆ ಒತ್ತಾಯಿಸಿ ದೆಹಲಿಯ ಜಂತರ್‌ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರ ದೌರ್ಜನ್ಯ ಮತ್ತು ಪ್ರತಿಭಟನಾಕಾರರ ಹಿಂಸಾಚಾರದ ಆರೋಪಗಳ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ರಚಿಸಿದ್ದ ಉನ್ನತ ಮಟ್ಟದ ಸಮಿತಿಯ ರಚನೆಗೆ ಆಕ್ಷೇಪ ವ್ಯಕ್ತಪಡಿಸಿ ಮಂಗಳವಾರ ಸುಪ್ರೀಂ ಕೋರ್ಟ್ ಅರ್ಜಿ ಸಲ್ಲಿಸಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರಿದ್ದ ಪೀಠದ ಮುಂದೆ ಅರ್ಜಿದಾರರ ಪರ ವಕೀಲರು ಈ ವಿಷಯವನ್ನು ಪ್ರಸ್ತಾಪಿಸಿ, ಅರ್ಜಿಯನ್ನು ವಿಚಾರಣೆಗೆ ಲಿಸ್ಟ್ ಮಾಡುವಂತೆ ಕೋರಿದರು. ಆದರೆ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ಅರ್ಜಿಯನ್ನು ವಿರೋಧಿಸಿದರು. ಇದೊಂದು 'It's Mysterious' ಅರ್ಜಿ ಎಂದು ಅವರು ಹೇಳಿದರು. ಸಮಿತಿಗೆ ಬೇರೆ ಹೆಸರುಗಳನ್ನು ಸೇರಿಸಲು ಅರ್ಜಿದಾರರು ಸೂಚಿಸಿದ್ದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದರು.

ಸಮಿತಿಯನ್ನು ಪುನಾರಚಿಸಬೇಕು ಮತ್ತು ಒಬ್ಬ ಸಚಿವರ ವಿರುದ್ಧ ತನಿಖೆ ನಡೆಸಬೇಕು ಎಂಬುದು ಇವರ ಬೇಡಿಕೆ. ಇಂಥಾ ನ್ಯಾಯಾಧೀಶರೇ ಸಮಿತಿ ಮುಖ್ಯಸ್ಥರಾಗಬೇಕು ಎಂದೆಲ್ಲಾ ಹೆಸರುಗಳನ್ನು ಕೊಟ್ಟಿದ್ದಾರೆ ಎಂದು ಮೆಹ್ತಾ ಹೇಳಿದರು. 'ಇದು ರಾಜಕೀಯ ವೇದಿಕೆಯಲ್ಲ. ಇಲ್ಲಿ ಬೇರೆಯೇ ಏನೋ ನಡೆಯುತ್ತಿದೆ' ಎಂದು ಅವರು ಪೀಠಕ್ಕೆ ತಿಳಿಸಿದರು.

ಕೆಲವು ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, ತಾವು ಕೇವಲ ಅರ್ಜಿಯನ್ನು ವಿಚಾರಣೆಗೆ ಲಿಸ್ಟ್ ಮಾಡಲು ಮಾತ್ರ ಕೇಳುತ್ತಿರುವುದಾಗಿ ಸ್ಪಷ್ಟಪಡಿಸಿದರು.

ಕೋರ್ಟ್ ಮೇಲ್ವಿಚಾರಣೆಯ ಭರವಸೆ

ಈ ರೀತಿ ಹೆಸರುಗಳನ್ನು ಪ್ರಸ್ತಾಪಿಸುವುದನ್ನು ನ್ಯಾಯಾಲಯ ಒಪ್ಪುವುದಿಲ್ಲ ಎಂದು ಸಿಜೆಐ ಹೇಳಿದರು. ಮುಖ್ಯ ಪ್ರಕರಣದ ಜೊತೆಯಲ್ಲೇ ಈ ಅರ್ಜಿಯನ್ನೂ ವಿಚಾರಣೆಗೆ ತೆಗೆದುಕೊಳ್ಳುವುದಾಗಿ ಅವರು ಸೂಚಿಸಿದರು.

ಕೆಲವು ಅರ್ಜಿದಾರರನ್ನು ಪ್ರತಿನಿಧಿಸುತ್ತಿರುವ ವಕೀಲ ಪ್ರಶಾಂತ್ ಭೂಷಣ್, ಶಂಕರನಾರಾಯಣನ್ ಅವರ ಮನವಿಯನ್ನು ಬೆಂಬಲಿಸಿದರು. ಇದು ಇತರ ಅರ್ಜಿದಾರರ ಕಳವಳವೂ ಆಗಿದೆ ಎಂದು ಅವರು ಹೇಳಿದರು. ಸಮಿತಿಯ ರಚನೆ ಮತ್ತು ಕಾರ್ಯನಿರ್ವಹಣೆಯ ಬಗ್ಗೆ ಅರ್ಜಿದಾರರಿಗೆ ಕೆಲವು 'ತಪ್ಪು ತಿಳುವಳಿಕೆಗಳು' ಇವೆ ಎಂದು ಅವರು ವಾದಿಸಿದರು.

ಆಗ ಪ್ರತಿಕ್ರಿಯಿಸಿದ ಸಿಜೆಐ, 'ಅತ್ಯುತ್ತಮ ವ್ಯಕ್ತಿಗಳನ್ನೇ ನ್ಯಾಯಾಲಯವು ಸಮಿತಿಗೆ ಆಯ್ಕೆ ಮಾಡಿದೆ' ಎಂದು ಹೇಳಿದರು. ಸಮಿತಿಯು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಮತ್ತು ಎಲ್ಲಾ ಸಂಬಂಧಪಟ್ಟವರ ಸಹಾಯದೊಂದಿಗೆ ಕಾರ್ಯನಿರ್ವಹಿಸುತ್ತದೆ ಎಂದು ಸಿಜೆಐ ಅರ್ಜಿದಾರರಿಗೆ ಭರವಸೆ ನೀಡಿದರು. 'ಯಾರೇ ಕೆಲಸ ಮಾಡಿದರೂ, ಅವರು ನಮ್ಮ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡುತ್ತಾರೆ. ನಾವು ಇನ್ನೂ ಪ್ರಕರಣವನ್ನು ಮುಗಿಸಿಲ್ಲ. ನೀವೆಲ್ಲರೂ ಸಮಿತಿಗೆ ಸಹಾಯ ಮಾಡಲು ಇದ್ದೀರಿ. ಮೊದಲು ಅವರು ಕೆಲಸ ಮಾಡಲಿ, ನೋಡೋಣ' ಎಂದು ಸಿಜೆಐ ಹೇಳಿದರು.

ಉನ್ನತ ಮಟ್ಟದ ತಜ್ಞರ ಸಮಿತಿ (HPEC) ಬಗ್ಗೆ

ವಿದ್ಯಾರ್ಥಿ ಪ್ರತಿಭಟನೆಗಳ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಪೊಲೀಸ್ ದೌರ್ಜನ್ಯದ ಬಗ್ಗೆ ಸತ್ಯಶೋಧನೆ ನಡೆಸಲು ಸುಪ್ರೀಂ ಕೋರ್ಟ್ ಆಗಸ್ಟ್ 20 ರಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್. ಸುಭಾಷ್ ರೆಡ್ಡಿ ನೇತೃತ್ವದಲ್ಲಿ ಐದು ಸದಸ್ಯರ ಉನ್ನತ ಮಟ್ಟದ ತಜ್ಞರ ಸಮಿತಿಯನ್ನು (HPEC) ರಚಿಸಿತ್ತು. ಈ ಸಮಿತಿಯಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ರವಿಶಂಕರ್ ಝಾ, ದೆಹಲಿ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಶಾಲಿಂದರ್ ಕೌರ್, ಸಿಬಿಐನ ಮಾಜಿ ನಿರ್ದೇಶಕ ರಿಷಿ ಕುಮಾರ್ ಶುಕ್ಲಾ ಮತ್ತು ಮೇಘಾಲಯದ ಮಾಜಿ ಡಿಜಿಪಿ ಎಲ್.ಆರ್. ಬಿಷ್ಣೋಯ್ ಸದಸ್ಯರಾಗಿದ್ದಾರೆ.

ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರತಿಭಟನಾಕಾರರು ಮತ್ತು ಪೊಲೀಸ್ ಅಧಿಕಾರಿಗಳು ಎತ್ತಿರುವ ವಿವಿಧ ದೂರುಗಳನ್ನು ಈ ಸಮಿತಿ ಪರಿಶೀಲಿಸಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪೊಲೀಸರ ಮಿತಿಮೀರಿದ ಬಲಪ್ರಯೋಗ, ಪ್ರತಿಭಟನಾಕಾರರ ಹಿಂಸಾಚಾರ ಮತ್ತು ಮಹಿಳಾ ಪ್ರತಿಭಟನಾಕಾರರಿಗೆ ಕಿರುಕುಳ ಹಾಗೂ ಲೈಂಗಿಕ ದೌರ್ಜನ್ಯದ ಆರೋಪಗಳಿಗೆ ಸಮಿತಿಯು ಆದ್ಯತೆ ನೀಡಬೇಕು ಎಂದು ಪೀಠ ತಿಳಿಸಿದೆ.

ಪ್ರತಿಭಟನೆ ವೇಳೆ ಗಾಯಗೊಂಡ ಪೊಲೀಸ್ ಸಿಬ್ಬಂದಿ ಮತ್ತು ಪ್ರತಿಭಟನಾಕಾರರು ಸೇರಿದಂತೆ ಎಲ್ಲರಿಗೂ ಮಧ್ಯಂತರ ಪರಿಹಾರ ನೀಡಬೇಕೇ ಎಂಬುದನ್ನು ಪರಿಶೀಲಿಸಲು ಸಮಿತಿಗೆ ಅನುಮತಿ ನೀಡಲಾಗಿದೆ.

ಸಮಿತಿಯ ಕೆಲಸ ಕೇವಲ ಒಂದು ಬಾರಿಯ ತನಿಖೆಗೆ ಸೀಮಿತವಾಗಿಲ್ಲ. ನ್ಯಾಯಾಲಯವು ಪರಿಸ್ಥಿತಿಯನ್ನು ಅವಲೋಕಿಸಿ ಅಗತ್ಯ ನಿರ್ದೇಶನಗಳನ್ನು ನೀಡಲು ಅನುಕೂಲವಾಗುವಂತೆ, ಸಮಿತಿಯು ನಿಯತಕಾಲಿಕವಾಗಿ ಮಧ್ಯಂತರ ವರದಿಗಳನ್ನು ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.

ಪ್ರತಿಭಟನೆಯ ಸಿಸಿಟಿವಿ ರೆಕಾರ್ಡಿಂಗ್‌ಗಳು ಮತ್ತು ಪೊಲೀಸ್ ಹಾಗೂ ಭದ್ರತಾ ಸಿಬ್ಬಂದಿಯ ಬಾಡಿ-ಕ್ಯಾಮೆರಾ ದೃಶ್ಯಾವಳಿಗಳನ್ನು ಸಂರಕ್ಷಿಸಲು ಈ ಹಿಂದೆ ನೀಡಿದ್ದ ಆದೇಶದಂತೆ, ಅವುಗಳನ್ನು ಪರಿಶೀಲನೆಗಾಗಿ ಸಮಿತಿಗೆ ಹಸ್ತಾಂತರಿಸುವಂತೆ ಪೀಠ ನಿರ್ದೇಶನ ನೀಡಿದೆ ಇದೇ ವೇಳೆ HPEC ರಚನೆಯಿಂದಾಗಿ, ನಿಯಮ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಇಲಾಖಾ ಅಥವಾ ಶಿಸ್ತು ಕ್ರಮಗಳನ್ನು ತೆಗೆದುಕೊಳ್ಳಲು ಪೊಲೀಸ್ ಅಥವಾ ಇತರ ಭದ್ರತಾ ಅಧಿಕಾರಿಗಳಿಗೆ ಯಾವುದೇ ಅಡ್ಡಿಯಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ನೀಟ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳಿಗೆ ಸಂಬಂಧಿಸಿದಂತೆ ದೆಹಲಿಯ ಜಂತರ್ ಮಂತರ್, ಬಿಹಾರ ಮತ್ತು ದೇಶದ ಇತರ ಭಾಗಗಳಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ನಡೆದ ಪೊಲೀಸ್ ದೌರ್ಜನ್ಯಕ್ಕೆ ಸಂಬಂಧಿಸಿದ ಹಲವು ಅರ್ಜಿಗಳ ವಿಚಾರಣೆ ವೇಳೆ ಈ ಆದೇಶ ಬಂದಿದೆ.