ಜೆನ್ ಝಿಗಳ ಹೆಚ್ಚುತ್ತಿರುವ ಪ್ರಭಾವದಿಂದಾಗಿ ಪ್ರಧಾನಿ ಮೋದಿ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥರು ಯುವಕರತ್ತ ಗಮನ ಹರಿಸುತ್ತಿದ್ದಾರೆ ಎಂದು ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ ಹೇಳಿದ್ದಾರೆ. ಇದೇ ವೇಳೆ, ಪ್ರಧಾನಿ ಮೋದಿ ಅವರ ವಿಡಿಯೋ ಡಿಲೀಟ್ ಮಾಡಿದ್ದಕ್ಕೆ ಸಂಸದೀಯ ಸಮಿತಿಯ ಗಡುವಿನ ನಂತರ ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ ಕ್ಷಮೆಯಾಚಿಸಿದೆ.
ಛತ್ರಪತಿ ಸಂಭಾಜಿ ನಗರ : ‘ಪ್ರಧಾನಿ ನರೇಂದ್ರ ಮೋದಿ ಅವರು ನಡುರಾತ್ರಿ ಸೆಲ್ಫಿ ವಿಡಿಯೋ ಮಾಡಿದ್ದಕ್ಕೆ ಹಾಗೂ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಯುವಕರೊಂದಿಗೆ ಸಂವಾದ ನಡೆಸಲು ಮುಂದಾಗಿರುವುದಕ್ಕೆ, ವೃದ್ಧಿಸುತ್ತಿರುವ ಜೆನ್ ಝಿಗಳ ಪ್ರಭಾವವೇ ಕಾರಣ’ ಎಂದು ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ ಹೇಳಿದ್ದಾರೆ.
‘ಜೆನ್-ಝಿಗಳು ಈ ದೇಶದ ಭವಿಷ್ಯ. ಅವರನ್ನು ನಿರ್ಲಕ್ಷಿಸಲಾಗದು ಎಂಬುದನ್ನು ಮನಗಾಣಲು ರಾಜಕೀಯ ಹಾಗೂ ಸಾಮಾಜಿಕ ನಾಯಕರು ತಡ ಮಾಡಿದರು. ಆದರೆ ಕೊನೆಗೂ ಅರ್ಥ ಮಾಡಿಕೊಂಡಿದ್ದಾರೆ. 70-80 ವರ್ಷದವರು ಜೆನ್-ಝಿಗಳನ್ನು ಪ್ರತಿನಿಧಿಸುವುದಿಲ್ಲ ಹಾಗೂ ಅವರಿಗಾಗಿ ಏನೂ ಮಾಡುವುದಿಲ್ಲ’ ಎಂದ ದೀಪ್ಕೆ, ದೇಶದ ಭವಿಷ್ಯದ ಬಗ್ಗೆ ಮಾತನಾಡಲು ಯುವಕರಿಗೆ ಅವಕಾಶ ಕೊಡಬೇಕು ಎಂದು ಅಭಿಪ್ರಾಯಪಟ್ಟರು.
ಸಿಜೆಪಿ ಕೋರ್ ಕಮಿಟಿ ಸಭೆ ಬಳಿಕ ಅದರ ಪಕ್ಷದ ಭವಿಷ್ಯದ ಬಗ್ಗೆ ಮಾತನಾಡಿದ ದೀಪ್ಕೆ, ‘ದೇಶಕ್ಕೀಗ ಒತ್ತಡದ ಗುಂಪುಗಳ ಅಗತ್ಯವಿದೆ. ಆ ಕೆಲಸವನ್ನು ನಾವು ಮಾಡುತ್ತೇವೆ. ರಾಜಕೀಯ ವ್ಯವಸ್ಥೆ, ನ್ಯಾಯಾಂಗ, ಮಾಧ್ಯಮ ಮತ್ತು ಚುನಾವಣಾ ಆಯೋಗದ ಮೇಲೆ ಜನರ ವಿಶ್ವಾಸ ತಗ್ಗುತ್ತಿದೆ. ಇವುಗಳಲ್ಲಿ ಹೊಣೆಗಾರಿಕೆ ಮತ್ತು ವಿಶ್ವಾಸಾರ್ಹತೆಯನ್ನು ಪುನಃ ಸ್ಥಾಪಿಸಲು ಶ್ರಮಿಸುತ್ತೇವೆ’ ಎಂದರು.
ಮೋದಿ ವಿಡಿಯೋ ಡಿಲೀಟ್ ಪ್ರಕರಣ, ಮೆಟಾ ಕ್ಷಮೆಯಾಚನೆ
ನವದೆಹಲಿ: ಇತ್ತೀಚಿನ ದೆಹಲಿ ವಿದ್ಯಾರ್ಥಿ ಪ್ರತಿಭಟನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ವಿಡಿಯೋವೊಂದನ್ನು ಫೇಸ್‌ಬುಕ್‌ನಿಂದ ಕೆಲಕಾಲ ತೆಗೆದು ಹಾಕಿದ ಪ್ರಕರಣ ಸಂಬಂಧ ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ ಕ್ಷಮೆಯಾಚಿಸಿದೆ. ಅಲ್ಲದೆ ಮೆಟಾ ಒಡೆತನದ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಡೀಪ್‌ಫೇಕ್ ವಿಡಿಯೋ ಮತ್ತು ಮಕ್ಕಳ ದುರ್ಬಳಕೆ ವಿಡಿಯೋ, ಕೆಲವೊಂದು ಕೆಲವೊಂದು ಮಾಹಿತಿಗಳನ್ನು ಹೆಚ್ಚು ಹೆಚ್ಚು ಪ್ರಸಾರ ಮಾಡಲು ಭಾರೀ ಹಣ ಪಡೆದ ಪ್ರಕರಣಗಳ ಬಗ್ಗೆಯೂ ಅದು ಕ್ಷಮೆ ಯಾಚಿಸಿದೆ. ಮೇಲ್ಕಂಡ ಬೆಳವಣಿಗೆಗಳ ಬಗ್ಗೆ ಜುಕರ್‌ಬರ್ಗ್ 3 ದಿನಗಳಲ್ಲಿ ಬೇಷರತ್ತಾಗಿ ಕ್ಷಮೆಯಾಚಿಸಬೇಕೆಂದು ಸಂಸದೀಯ ಸ್ಥಾಯಿ ಸಮಿತಿ ಬುಧವಾರ ಗಡುವು ವಿಧಿಸಿತ್ತು. ಅದರ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ.
ಸರ್ಕಾರದ ಸಮನ್ಸ್ ಹಿನ್ನೆಲೆಯಲ್ಲಿ ಅಮೆರಿಕದಿಂದ ತುರ್ತಾಗಿ ಬುಧವಾರ ಬೆಳಗ್ಗೆ ಭಾರತಕ್ಕೆ ಆಗಮಿಸಿದ್ದ ಮೆಟಾದ ಜಾಗತಿಕ ವ್ಯವಹಾರಗಳ ಮುಖ್ಯಸ್ಥ ಜೋಯಲ್ ಕಾಪ್ಲಾನ್ ನೇತೃತ್ವದ ತಂಡವು ಮೊದಲಿಗೆ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಸ್. ಕೃಷ್ಣನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು. ಬಳಿಕ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿತು. ಈ ವೇಳೆ ಮೋದಿ ಪೋಸ್ಟ್ ರದ್ದು ಮಾಡಿದ್ದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮೆಟಾದ ಪರವಾಗಿ ಲಿಖಿತ ಸ್ವರೂಪದಲ್ಲಿ ಕ್ಷಮೆ ಯಾಚಿಸಿ, ಬೆಳವಣಿಗೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾಗಿ ಕಾಪ್ಲಾನ್ ಮಾಹಿತಿ ನೀಡಿದರು. ಆದರೆ ಹೆಸರು ಹೇಳಬಯಸದ ಕೇಂದ್ರ ಸರ್ಕಾರದ ಮೂಲಗಳು, ಸ್ವತಃ ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಅವರೇ ಕ್ಷಮೆಯಾಚಿಸಿದ್ದಾರೆ ಎಂದು ತಿಳಿಸಿವೆ.
ಎರಡು ದಿನಗಳ ಹಿಂದೆ ಭಾರತದಲ್ಲಿ ಮೆಟಾ ಅಧಿಕಾರಿಗಳು ಸಂಸದೀಯ ಸ್ಥಾಯಿ ಸಮಿತಿ ಸದಸ್ಯರ ಮುಂದೆ ಹಾಜರಾಗಿ ಮೋದಿ ವಿಡಿಯೋ ರದ್ದಾಗಿದ್ದು ತಾಂತ್ರಿಕ ತೊಂದರೆಯಿಂದಾಗಿ. ಈ ಕುರಿತು ಕ್ಷಮೆ ಯಾಚಿಸಲು ಸಿದ್ಧ ಎಂದು ಹೇಳಿದ್ದರು. ಆದರೆ ಇದಕ್ಕೆ ಒಪ್ಪದ ಸಮಿತಿ, ಮೆಟಾ ಭಾರತದಿಂದ ಸಾವಿರಾರು ಕೋಟಿ ರು. ಆದಾಯ ಸಂಗ್ರಹಿಸುತ್ತಿದೆ. ಆದರೆ ಇಲ್ಲಿನ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಹೀಗಾಗಿ ಘಟನೆಯ ಹೊಣೆಯನ್ನು ಮೆಟಾ ಹೊರಬೇಕು ಮತ್ತು ಸ್ವತಃ ಜುಕರ್‌ಬರ್ಗ್ ಅವರೇ ಈ ಕುರಿತು ಕ್ಷಮೆ ಯಾಚಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ಕ್ರಮ ಎದುರಿಸಲು ಸಿದ್ಧರಾಗಬೇಕು ಎಂದು ಎಚ್ಚರಿಸಿತ್ತು.


