ನೀಟ್ ಪೇಪರ್ ಸೋರಿಕೆ ಖಂಡಿಸಿ 20 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರನ್ನು ತೀವ್ರ ನಿಶ್ಯಕ್ತಿಯಿಂದಾಗಿ ದೆಹಲಿಯ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ನವದೆಹಲಿ (ಜು.18): ನೀಟ್ (NEET) ಪೇಪರ್ ಸೋರಿಕೆ ಪ್ರಕರಣವನ್ನು ಖಂಡಿಸಿ ಹಾಗೂ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಕಳೆದ 20 ದಿನಗಳಿಂದ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಖ್ಯಾತ ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರನ್ನು ದೆಹಲಿ ಪೊಲೀಸರು ಶನಿವಾರ ಬೆಳಿಗ್ಗೆ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ತೀವ್ರ ನಿಶ್ಯಕ್ತಿಯಿಂದ ಬಳಲುತ್ತಿದ್ದರೂ ವಾಂಗ್ಚುಕ್ ಅವರು ತಮ್ಮ ಉಪವಾಸ ಮುಷ್ಕರವನ್ನು ಹಿಂಪಡೆಯಲು ಹಾಗೂ ವೈದ್ಯಕೀಯ ಚಿಕಿತ್ಸೆ ಪಡೆಯಲು ನಿರಾಕರಿಸಿದ್ದಾರೆ.
ಸಫ್ದರ್‌ಜಂಗ್ ಆಸ್ಪತ್ರೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಪ್ರಕಾರ, 20 ದಿನಗಳಿಂದ ಘನ ಆಹಾರ ಸೇವಿಸದ ಕಾರಣ ತೀವ್ರ ನಿಶ್ಯಕ್ತಿಗೆ ಒಳಗಾಗಿದ್ದ ಸೋನಮ್ ವಾಂಗ್ಚುಕ್ ಅವರನ್ನು ಜು.18ರ ಬೆಳಿಗ್ಗೆ 7:40 ಕ್ಕೆ ವಿಎಂಎಂಸಿ ಮತ್ತು ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಗೆ ಕರೆತಂದಾಗ ಅವರು ಪ್ರಜ್ಞಾವಸ್ಥೆಯಲ್ಲಿದ್ದರು ಮತ್ತು ಅವರ ನಾಡಿಮಿಡಿತ, ರಕ್ತದೊತ್ತಡ (BP) ಹಾಗೂ ಆಮ್ಲಜನಕದ ಮಟ್ಟ (Oxygen Level) ಸ್ಥಿರವಾಗಿತ್ತು. ಆದರೆ, ಅವರ ದೇಹದಲ್ಲಿ ತೀವ್ರ ನಿರ್ಜಲೀಕರಣ ಅಂದರೆ ನೀರಿನ ಅಂಶದ ಕೊರತೆ ಕಂಡುಬಂದಿದೆ.
ರಕ್ತದ ಸಕ್ಕರೆ ಮಟ್ಟ 78 mg/dl; ಕುಸಿದ ಪೊಟ್ಯಾಸಿಯಮ್ ಅಂಶ
ವೈದ್ಯಕೀಯ ತಪಾಸಣೆಯ ವೇಳೆ ವಾಂಗ್ಚುಕ್ ಅವರ ರಕ್ತದ ಸಕ್ಕರೆ ಮಟ್ಟ (Blood Sugar) 78 mg/dl ಇರುವುದು ಪತ್ತೆಯಾಗಿದೆ. ರಕ್ತದ ಪರೀಕ್ಷೆಯಲ್ಲಿ ಪೊಟ್ಯಾಸಿಯಮ್ ಮಟ್ಟ ಗಣನೀಯವಾಗಿ ಕುಸಿದಿರುವುದು ಕಂಡುಬಂದಿದ್ದು, ದೇಹದಲ್ಲಿ ಆಮ್ಲ-ಕ್ಷಾರ ಅಸಮತೋಲನದ (Acid-Base Imbalance) ಲಕ್ಷಣಗಳು ಗೋಚರಿಸಿವೆ. ಇದರೊಂದಿಗೆ, ದಾಖಲಾತಿ ಸಮಯದಲ್ಲಿ ಮೂತ್ರ ಪರೀಕ್ಷೆಯಲ್ಲಿ ಕೀಟೋನ್ಸ್ (Ketones) ಮಟ್ಟ 1+ ಇದ್ದದ್ದು, ಮಧ್ಯಾಹ್ನ 1 ಗಂಟೆಯ ಹೊತ್ತಿಗೆ 3+ ಗೆ ಏರಿಕೆಯಾಗಿದೆ. ಹೀಗಾಗಿ ವೈದ್ಯರು ಅವರಿಗೆ ತಕ್ಷಣವೇ IV ಫ್ಲೂಯಿಡ್ಸ್ (ನರಗಳ ಮೂಲಕ ದ್ರವ ನೀಡಿಕೆ), ಒಆರ್‌ಎಸ್ (ORS) ಮತ್ತು ಅಗತ್ಯ ಔಷಧಿಗಳನ್ನು ತೆಗೆದುಕೊಳ್ಳಲು ಸೂಚಿಸಿದ್ದಾರಾದರೂ, ವಾಂಗ್ಚುಕ್ ಇವೆಲ್ಲವನ್ನೂ ಕಟ್ಟುನಿಟ್ಟಾಗಿ ನಿರಾಕರಿಸಿದ್ದಾರೆ. ವೈದ್ಯರ ತಂಡ ಅವರ ಆರೋಗ್ಯದ ಮೇಲೆ ನಿರಂತರ ನಿಗಾ ಇರಿಸಿದೆ.
ಒಪ್ಪಿಗೆಯಿಲ್ಲದೆ ಚಿಕಿತ್ಸೆ ನೀಡದಂತೆ ಪತ್ನಿಯ ಪಟ್ಟು
ಮತ್ತೊಂದೆಡೆ, ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಅವರು, ತಮ್ಮ ಪತಿಯ ಒಪ್ಪಿಗೆಯಿಲ್ಲದೆ ಆಸ್ಪತ್ರೆಯವರು ಯಾವುದೇ ರೀತಿಯ ವೈದ್ಯಕೀಯ ಚಿಕಿತ್ಸೆ ನೀಡಬಾರದು ಎಂದು ಒತ್ತಾಯಿಸಿದ್ದಾರೆ. "ಅವರು ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿದ್ದಾರೆ. ನನ್ನ ಅಥವಾ ಅವರ ಸಮ್ಮತಿಯಿಲ್ಲದೆ ಯಾವುದೇ ಚಿಕಿತ್ಸೆಯನ್ನು ಪ್ರಾರಂಭಿಸಬಾರದು ಎಂದು ನಾನು ಸ್ಪಷ್ಟಪಡಿಸುತ್ತೇನೆ. ಒಂದು ವೇಳೆ ಅವರಿಗೆ ಏನಾದರೂ ತೊಂದರೆಯಾದರೆ ಅದಕ್ಕೆ ಎಲ್ಲರನ್ನೂ ಜವಾಬ್ದಾರರನ್ನಾಗಿ ಮಾಡಬೇಕಾಗುತ್ತದೆ" ಎಂದು ಎಚ್ಚರಿಸಿದ್ದಾರೆ.
ವೈದ್ಯಕೀಯ ವರದಿ ನೀಡದ ಆಸ್ಪತ್ರೆ; ಪತ್ನಿ ಆಕ್ರೋಶ
ಒಂದು ದಿನದ ಹಿಂದೆ ವಾಂಗ್ಚುಕ್ ಅವರ ಪೊಟ್ಯಾಸಿಯಮ್ ಮಟ್ಟ 4.3 ರಷ್ಟಿದ್ದು, ಎಲ್ಲವೂ ಸಾಮಾನ್ಯ ಹಂತದಲ್ಲಿತ್ತು ಎಂದು ತಿಳಿಸಿದ ಗೀತಾಂಜಲಿ, ಈಗ ದಿಢೀರನೆ ಆಸ್ಪತ್ರೆಯ ವೈದ್ಯರು ಪೊಟ್ಯಾಸಿಯಮ್ ಮಟ್ಟ 2.9 ಕ್ಕೆ ಕುಸಿದಿದ್ದು ಇದು ಜೀವಕ್ಕೆ ಅಪಾಯಕಾರಿ ಎಂದು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. "ನಾವು ಪದೇ ಪದೇ ವಿನಂತಿಸಿದರೂ ಆಸ್ಪತ್ರೆಯವರು ಮೆಡಿಕಲ್ ರಿಪೋರ್ಟ್ ಪ್ರತಿಯನ್ನು ನಮಗೆ ನೀಡುತ್ತಿಲ್ಲ, ಕೇವಲ ತೋರಿಸುತ್ತಿದ್ದಾರೆ. ಈ ಪಾರದರ್ಶಕತೆಯ ಕೊರತೆಯಿಂದಾಗಿ ನನಗೆ ಆಸ್ಪತ್ರೆಯ ಮೇಲಿನ ನಂಬಿಕೆ ಕಡಿಮೆಯಾಗುತ್ತಿದೆ" ಎಂದು ಅವರು ದೂರಿದ್ದಾರೆ.
ಯಾವುದೇ ಚಿಕಿತ್ಸೆಗೆ ಅನುಮತಿ ನೀಡುವ ಮುನ್ನ ಬೇರೊಂದು ಸ್ವತಂತ್ರ ಪ್ರಯೋಗಾಲಯದಿಂದ (Independent Lab) ಮತ್ತೊಮ್ಮೆ ಆರೋಗ್ಯ ತಪಾಸಣೆ ನಡೆಸಲು ಕುಟುಂಬಸ್ಥರು ಬಯಸಿದ್ದಾರೆ. ಸೋನಮ್ ವಾಂಗ್ಚುಕ್ ಅವರು ಸದ್ಯಕ್ಕೆ ಆರಾಮವಾಗಿದ್ದಾರೆ ಮತ್ತು ಶೀಘ್ರದಲ್ಲೇ ಅವರನ್ನು ತಮಗೆ ನಂಬಿಕೆಯಿರುವ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸುವುದಾಗಿ ಪತ್ನಿ ತಿಳಿಸಿದ್ದಾರೆ. ಈ ಸಂಬಂಧ ಸಫ್ದರ್‌ಜಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಗೆ (Medical Superintendent) ಗೀತಾಂಜಲಿ ಅವರು ಎರಡು ಪತ್ರಗಳನ್ನು ಬರೆದಿದ್ದು, ತಮ್ಮ ಅನುಮತಿಯಿಲ್ಲದೆ ಯಾವುದೇ ಓರಲ್ ಅಥವಾ ಇಂಟ್ರಾವೀನಸ್ ಔಷಧಿ ಅಥವಾ ದ್ರವವನ್ನು ನೀಡಬಾರದು ಮತ್ತು ಎಲ್ಲಾ ವೈದ್ಯಕೀಯ ವರದಿಗಳ ನಕಲು ಪ್ರತಿಯನ್ನು ತಮಗೆ ಒದಗಿಸಬೇಕು ಎಂದು ಅಧಿಕೃತವಾಗಿ ಒತ್ತಾಯಿಸಿದ್ದಾರೆ.


