ಇಂದೋರ್‌ನ ಉದ್ಯಮಿ ರಾಜಾ ರಘುವಂಶಿ ಕೊಲೆ ಪ್ರಕರಣದಲ್ಲಿ ಆತನ ಪತ್ನಿ ಸೋನಮ್ ಸೇರಿದಂತೆ 5 ಆರೋಪಿಗಳನ್ನು ಬಂಧಿಸಲಾಗಿದೆ. ಸೋನಮ್ ಸಹೋದರ ಗೋವಿಂದ್, ರಾಜಾ ಕುಟುಂಬವನ್ನು ಭೇಟಿ ಮಾಡಿ, ಸೋನಮ್‌ಳ ಕೃತ್ಯಕ್ಕೆ ತನ್ನ ನಾಚಿಕೆ ಮತ್ತು ಕೋಪ ವ್ಯಕ್ತಪಡಿಸಿದ್ದಾರೆ. 

ನವದೆಹಲಿ (ಜೂ.11): ಇಂದೋರ್‌ನ ಉದ್ಯಮಿ ರಾಜಾ ರಘುವಂಶಿ ಕೊಲೆ ಪ್ರಕರಣದಲ್ಲಿ, ಆತನ ಪತ್ನಿ ಸೋನಮ್ ಸೇರಿದಂತೆ 5 ಆರೋಪಿಗಳನ್ನು ಶಿಲ್ಲಾಂಗ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ನಡುವೆ ಸೋನಮ್ ಅವರ ಸಹೋದರ ಗೋವಿಂದ್, ಇಂದೋರ್‌ನಲ್ಲಿರುವ ರಾಜಾ ರಘುವಂಶಿ ಕುಟುಂಬವನ್ನು ಭೇಟಿ ಮಾಡಲು ಇದ್ದಕ್ಕಿದ್ದಂತೆ ಆಗಮಿಸಿದರು. ಗೋವಿಂದ್ ಅವರು ರಾಜಾ ಅವರ ತಾಯಿಗೆ ಕರೆ ಮಾಡಿ ತಾವು ಆ ಕುಟುಂಬದ ಭಾಗವಲ್ಲ ಎಂದು ಹೇಳಿದರು.

ರಾಜಾ ಅವರ ತಾಯಿ ಉಮಾ ದೇವಿ ಅವರೊಂದಿಗಿನ ಮಾತುಕತೆ ವೇಳೆ ಗೋವಿಂದ್ ತಮ್ಮ ಸಹೋದರಿ ಸೋನಮ್‌ ಅವರ ಕೃತ್ಯದ ಬಗ್ಗೆ ತಮ್ಮ ನಾಚಿಕೆ ಮತ್ತು ಕೋಪವನ್ನು ವ್ಯಕ್ತಪಡಿಸಿದ್ದಾರೆ. ಈ ಪ್ರಕರಣವನ್ನು ತಾವೇ ಹೋರಾಡುವುದಾಗಿ ಮತ್ತು ತಮ್ಮ ಕೊಲೆಗಾರ ಸಹೋದರಿಯನ್ನು ಗಲ್ಲಿಗೇರಿಸುವುದಾಗಿ ಅವರು ಹೇಳಿದರು.

ಪೊಲೀಸರು ಆಕೆಯನ್ನು ಭೇಟಿಯಾಗಲು ಬಿಡುತ್ತಿಲ್ಲ ಎಂದು ಗೋವಿಂದ್ ಉಮಾದೇವಿಗೆ ಹೇಳಿದ್ದಾರೆ. ಉತ್ತರ ಪ್ರದೇಶದ ಗಾಜಿಪುರದಲ್ಲಿ ಸೋನಮ್ ಅವರನ್ನು ಕೇವಲ ಎರಡು ನಿಮಿಷಗಳ ಕಾಲ ಭೇಟಿಯಾಗಲು ಸಾಧ್ಯವಾಯಿತು ಎಂದು ಗೋವಿಂದ್‌ ತಿಳಿಸಿದ್ದಾರೆ. ಈ ಮಧ್ಯೆ, ಗೋವಿಂದ್ ತಮ್ಮ ಸಹೋದರಿ ಸೋನಮ್ ಅವರಿಗೆ, "ಈ ಕೊಲೆಯಲ್ಲಿ ನಿನ್ನ ಕೈವಾಡವಿದೆಯೇ?" ಎಂದು ಕೇಳಿದ್ದಾಗಿ ಹೇಳಿದ್ದಾರೆ. ಇದಕ್ಕೆ ಉತ್ತರಿಸಲು ಸೋನಮ್‌ ಮೊದಲು ನಿರಾಕರಿಸಿದ್ದರು. ಆದರೆ ಗೋವಿಂದ್ ಒತ್ತಡ ಹೇರಿದ ಬಳಿಕ ಹಾಗೂ ಮೂವರು ಕಾಂಟ್ರಾಕ್ಟ್‌ ಕಿಲ್ಲರ್‌ಗಳಾದ ಆಕಾಶ್ ರಜಪೂತ್, ವಿಶಾಲ್ ಅಲಿಯಾಸ್ ವಿಕ್ಕಿ ಠಾಕೂರ್ ಮತ್ತು ಆನಂದ್ ಕುರ್ಮಿ ​​ಮತ್ತು ರಾಜ್ ಕುಶ್ವಾಹ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದಾಗ, ಸೋನಮ್‌ಗೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲು ಕೂಡ ಸಾಧ್ಯವಾಗಲಿಲ್ಲ ಎಂದಿದ್ದಾರೆ.

'ನಾನು ಆಕೆಯನ್ನು ಬಾಲ್ಯದಿಂದಲೂ ನೋಡುತ್ತಿದ್ದೇನೆ. ಆಕೆ ನನ್ನನ್ನು ನೋಡಿದ ರೀತಿಯಿಂದಲೇ ಆಕೆ ಕೊಲೆಯಲ್ಲಿ ಭಾಗಿಯಾಗಿದ್ದಾಳೆ ಎಂದು ನನಗೆ ತಿಳಿಯಿತು' ಎಂದು ಗೋವಿಂದ್ ಹೇಳಿದ್ದಾರೆ. ಈ ಹಂತದಲ್ಲಿ ನನಗೆ ಕೋಪ ಬಂದು ಆಕೆಯ ಕೆನ್ನೆಗೆ ಬಾರಿಸಲು ಪ್ರಯತ್ನಿಸಿದೆ. ಆದರೆ, ಪೊಲೀಸರು ನನ್ನನ್ನು ತಡೆದರು ಎಂದು ಗೋವಿಂದ್‌ ತಿಳಿಸಿದ್ದಾರೆ.

ರಾಜಾ ತಾಯಿಯ ಹೇಳಿಕೆ

Scroll to load tweet…

"ಗೋವಿಂದ್‌ಗೆ ಆತನ ಸಹೋದರಿಯ ಕೃತ್ಯದಿಂದ ತುಂಬಾ ಬೇಸರವಾಗಿದೆ ಮತ್ತು ಕೋಪಗೊಂಡಿದ್ದಾನೆ. ಸೋನಮ್‌ಗೆ ಶಿಕ್ಷೆಯಾಗುವಂತೆ ಮಾಡಲು ಎಲ್ಲಾ ರೀತಿಯಲ್ಲೂ ಸಹಾಯ ಮಾಡುವುದಾಗಿ ತಿಳಿಸಿದ್ದಾನೆ' ಎಂದು ರಾಜಾ ರಘುವಂಶಿ ತಾಯಿ ಉಮಾ ದೇವಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ಗೋವಿಂದ್ ಮಂಗಳವಾರ ಇಂದೋರ್ ತಲುಪಿ ನೇರವಾಗಿ ನಮ್ಮ ಮನೆಗೆ ಬಂದಿದ್ದರು ಎಂದು ಉಮಾದೇವಿ ಹೇಳಿದ್ದಾರೆ. "ಗೋವಿಂದನಿಗೆ ಪಿತೂರಿಯ ಬಗ್ಗೆ ತಿಳಿದಿರಲಿಲ್ಲವಾದ್ದರಿಂದ ನಾವು ಆತನನ್ನು ಕ್ಷಮಿಸಿದ್ದೇವೆ. ಈಗ ನಾವೆಲ್ಲರೂ ಒಟ್ಟಾಗಿ ಸೋನಮ್ ಮತ್ತು ಇತರ ಕೊಲೆಗಾರರಿಗೆ ಶಿಕ್ಷೆ ಆಗುವಂತೆ ಮಾಡಬೇಕು" ಎಂದು ಹೇಳಿದ್ದಾರೆ. ರಾಜಾ ಅವರ ಕುಟುಂಬದೊಂದಿಗೆ ನ್ಯಾಯಕ್ಕಾಗಿ ಹೋರಾಡುವುದಾಗಿ ಗೋವಿಂದ್ ಭರವಸೆ ನೀಡಿದರು.

ಕೊಲೆ ಮತ್ತು ಪಿತೂರಿ

ಮೇಘಾಲಯ ಪೊಲೀಸರ ಪ್ರಕಾರ 'ಆಪರೇಷನ್ ಹನಿಮೂನ್' ನಲ್ಲಿ ಮೇ 23 ರಂದು ಶಿಲ್ಲಾಂಗ್‌ನ ಸೊಹ್ರಾದಲ್ಲಿ ಸೋನಮ್ ರಾಜಾನನ್ನು ಕೊಲ್ಲಲು ಸಂಚು ರೂಪಿಸಿದ್ದಳು ಎಂದಿದ್ದಾರೆ. ಆಕೆ ತನ್ನ ಪ್ರಿಯಕರ ರಾಜ್ ಕುಶ್ವಾಹ ಮತ್ತು ಮೂವರು ಹಂತಕರೊಂದಿಗೆ ರಾಜಾನನ್ನು ಏಕಾಂತ ಸ್ಥಳಕ್ಕೆ ಕರೆದೊಯ್ದು ಕೊಲೆ ಮಾಡಿದ್ದಳು. ಪೊಲೀಸರಿಗೆ 42 ಸಿಸಿಟಿವಿ ದೃಶ್ಯಾವಳಿಗಳು, ರಕ್ತಸಿಕ್ತ ಜಾಕೆಟ್ ಮತ್ತು ಸೋನಮ್‌ನ ರೇನ್‌ಕೋಟ್‌ನಂತಹ ಪುರಾವೆಗಳು ಸಿಕ್ಕವು. ಸೋನಮ್ ಜೂನ್ 9 ರಂದು ಗಾಜಿಪುರದಲ್ಲಿ ಪೊಲೀಸರಿಗೆ ಶರಣಾಗಿದ್ದಳು.

ಕುಟುಂಬ ಮತ್ತು ಸಮಾಜದ ಬೇಡಿಕೆ

ಇಂದೋರ್‌ನಲ್ಲಿ ಮೃತ ರಾಜಾ ರಘುವಂಶಿ ಕುಟುಂಬ ಮತ್ತು ರಘುವಂಶಿ ಸಮುದಾಯವು ಸೋನಮ್ ಮತ್ತು ಇತರ ಆರೋಪಿಗಳಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸುತ್ತಿದೆ. ಗೋವಿಂದ್ ಕೂಡ ಕೊಲೆಗಾರರಿಗೆ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ. ಪೊಲೀಸರು ಈ ಪಿತೂರಿಯನ್ನು ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ.