ಭಾರತದ ಮಹತ್ವಾಕಾಂಕ್ಷೆಯ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆ ವಿಳಂಬಕ್ಕೆ ಭಾರತೀಯ ಅಧಿಕಾರಿಗಳೇ ಕಾರಣ ಎಂದು ಜಪಾನ್‌ನ ಮಾಜಿ ಸಚಿವರು ಆರೋಪಿಸಿದ್ದಾರೆ. ಈ ಆರೋಪವನ್ನು ತಳ್ಳಿಹಾಕಿರುವ ಭಾರತ ಸರ್ಕಾರ, ಯೋಜನೆ ಉತ್ತಮ ಪ್ರಗತಿಯಲ್ಲಿದೆ ಮತ್ತು 2027ರ ಆಗಸ್ಟ್ 15 ರಂದು ಮೊದಲ ಹಂತದ ರೈಲು ಸಂಚಾರ ಆರಂಭವಾಗಲಿದೆ ಎಂದು ಸ್ಪಷ್ಟಪಡಿಸಿದೆ.
ಟೋಕ್ಯೊ/ನವದೆಹಲಿ: ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ "ಮುಂಬೈ-ಅಹಮದಾಬಾದ್ ಬುಲೆಟ್ ರೈಲು" (Mumbai-Ahmedabad Bullet Train) ಯೋಜನೆ ವಿಳಂಬವಾಗಲು ಭಾರತದ ಸಚಿವರು ಮತ್ತು ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಸ್ವಹಿತಾಸಕ್ತಿಗಳೇ ಕಾರಣ ಎಂದು ಜಪಾನ್‌ನ ಮಾಜಿ ಸಚಿವರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಜಪಾನ್ ಮಾಜಿ ಸಚಿವರ ಈ ಹೇಳಿಕೆ ಈಗ ಜಾಗತಿಕ ಮಟ್ಟದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಆದರೆ, ಭಾರತ ಸರ್ಕಾರವು ಈ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದು, ಯೋಜನೆ ಅತ್ಯಂತ ವೇಗವಾಗಿ ಪ್ರಗತಿ ಕಾಣುತ್ತಿದೆ ಎಂದು ಸ್ಪಷ್ಟಪಡಿಸಿದೆ.
ಜಪಾನ್ ಮಾಜಿ ನ್ಯಾಯ ಸಚಿವ ಹಿಡೆಕಿ ಮಕಿಹಾರಾ ಮಾಡಿದ ಆರೋಪವೇನು?
ಜಪಾನ್ ಸಹಯೋಗದೊಂದಿಗೆ 2017ರಲ್ಲಿ ಆರಂಭವಾದ ಭಾರತದ ಮೊದಲ ಹೈ-ಸ್ಪೀಡ್ ರೈಲು (HSR) ಯೋಜನೆಗೆ ಸಂಬಂಧಿಸಿದಂತೆ ಜಪಾನ್‌ನ ಮಾಜಿ ನ್ಯಾಯ ಸಚಿವ ಹಿಡೆಕಿ ಮಕಿಹಾರಾ ಅವರು ಸಾಮಾಜಿಕ ಜಾಲತಾಣ 'ಎಕ್ಸ್' (X) ನಲ್ಲಿ ಸರಣಿ ಪೋಸ್ಟ್‌ಗಳನ್ನು ಹಾಕುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.
"ಬುಲೆಟ್ ರೈಲು ಯೋಜನೆ ವಿಳಂಬಕ್ಕೆ ಜಪಾನ್ ಯಾವುದೇ ರೀತಿಯಲ್ಲೂ ಹೊಣೆಯಲ್ಲ. ನಾನು ಒಳಗೊಂಡಿದ್ದ ಭಾರತದ ಈ 'ಶಿಂಕನ್ಸೆನ್' (Shinkansen) ಯೋಜನೆ ಸಂಪೂರ್ಣವಾಗಿ ಭಾರತದ ಸಚಿವರು ಮತ್ತು ಅಧಿಕಾರಿಗಳ ಅಜಾಗರೂಕತೆ ಹಾಗೂ ಬೇಜವಾಬ್ದಾರಿತನದಿಂದ ತಡವಾಯಿತು. ಭಾರತೀಯ ಅಧಿಕಾರಿಗಳು ಪದೇ ಪದೇ ಭರವಸೆಗಳನ್ನು ನೀಡಿದರಾದರೂ, ಅವುಗಳನ್ನು ಜಾರಿಗೊಳಿಸಲಿಲ್ಲ. ಈ ದುರವಸ್ಥೆಗೆ ನೇರವಾಗಿ ಸಂಬಂಧಪಟ್ಟ ಸಚಿವರೇ ಕಾರಣ. ಇದರೊಂದಿಗೆ ಮೂಲ ಶಿಂಕನ್ಸೆನ್ ಮಾದರಿಯಲ್ಲಿ ಭಾರತವು ಬದಲಾವಣೆಗಳನ್ನು ಮಾಡುತ್ತಿದ್ದು, ಇದು ಉಭಯ ದೇಶಗಳ ಸಹಭಾಗಿತ್ವಕ್ಕೆ ತೊಡಕಾಗಬಹುದು," ಎಂದು ಮಕಿಹಾರಾ ನೇರವಾಗಿ ಆರೋಪಿಸಿದ್ದಾರೆ.
"ಅದು ಅವರ ವೈಯಕ್ತಿಕ ಅಭಿಪ್ರಾಯ, ವಾಸ್ತವ ಬೇರೆಯೇ ಇದೆ" - ಭಾರತದ ಪ್ರತ್ಯುತ್ತರ
ಜಪಾನ್ ಮಾಜಿ ಸಚಿವರ ಈ ಆರೋಪಗಳಿಗೆ ಭಾರತದ ವಿದೇಶಾಂಗ ವ್ಯವಹಾರಗಳ ಇಲಾಖೆಯ ವಕ್ತಾರರಾದ ರಣಧೀರ್ ಜೈಸ್ವಾಲ್ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಜಪಾನ್ ನಾಯಕರ ಪೋಸ್ಟ್ ಅನ್ನು ನಾವು ಗಮನಿಸಿದ್ದೇವೆ ಎಂದ ಅವರು, ಇದು ವಾಸ್ತವಾಂಶಗಳಿಂದ ದೂರವಾಗಿದೆ ಎಂದಿದ್ದಾರೆ.
ಅದು ಕೇವಲ ಅವರ ವೈಯಕ್ತಿಕ ಅಭಿಪ್ರಾಯವಾಗಿದೆಯೇ ಹೊರತು ಅದರಲ್ಲಿ ಯಾವುದೇ ವಾಸ್ತವಾಂಶಗಳಿಲ್ಲ. ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆ ಸದ್ಯ ಅತ್ಯುತ್ತಮವಾಗಿ ಕಾರ್ಯಾನುಷ್ಠಾನಗೊಳ್ಳುತ್ತಿದ್ದು, ಉತ್ತಮ ಪ್ರಗತಿ ಕಾಣುತ್ತಿದೆ. ಜಪಾನ್ ದೇಶವು ಭಾರತಕ್ಕೆ ಪೂರೈಸಲಿರುವ ಅತ್ಯಾಧುನಿಕ 'ಇ20' (E20) ಶ್ರೇಣಿಯ ಬುಲೆಟ್ ರೈಲುಗಳು ಪ್ರಸ್ತುತ ಅಭಿವೃದ್ಧಿ ಹಾಗೂ ಉತ್ಪಾದನಾ ಹಂತದಲ್ಲಿದ್ದು, ತಾಂತ್ರಿಕ ಕಾರಣಗಳಿಂದಾಗಿ ಅವು 2030ರ ಹೊತ್ತಿಗೆ ಭಾರತಕ್ಕೆ ಲಭ್ಯವಾಗಲಿವೆ ಎಂದು ರಣಧೀರ್ ಜೈಸ್ವಾಲ್ ಸ್ಪಷ್ಟನೆ ನೀಡಿದ್ದಾರೆ.
ಆಗಸ್ಟ್ 15, 2027 ಕ್ಕೆ ಮೊದಲ ಹಂತದ ಚಾಲನೆ: ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭರವಸೆ
ಯೋಜನೆಯ ಪ್ರಗತಿಯ ಕುರಿತು ದೇಶದ ಜನತೆಗೆ ಮಾಹಿತಿ ನೀಡಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಬುಲೆಟ್ ರೈಲು ಯೋಜನೆಯ ಮೊದಲ ಹಂತವು ಆಗಸ್ಟ್ 15, 2027 ರಂದು ಅಧಿಕೃತವಾಗಿ ಚಾಲನೆಗೊಳ್ಳಲಿದೆ ಎಂದು ಪ್ರಕಟಿಸಿದ್ದಾರೆ.
ಗುಜರಾತ್‌ನ ಸೂರತ್‌ನಿಂದ ಬಿಲಿಮೊರಾ (Surat-Bilimora Section) ನಡುವಿನ ಮಾರ್ಗದಲ್ಲಿ ಮೊದಲ ಹಂತದ ರೈಲು ಸಂಚಾರ ಆರಂಭವಾಗಲಿದ್ದು, ಆ ಬಳಿಕ ಹಂತ ಹಂತವಾಗಿ ಇಡೀ ಮುಂಬೈ-ಅಹಮದಾಬಾದ್ ಕಾರಿಡಾರ್‌ನಲ್ಲಿ ಪೂರ್ಣಪ್ರಮಾಣದಲ್ಲಿ ಬುಲೆಟ್ ರೈಲು ಓಡಲಿದೆ ಎಂದು ರೈಲ್ವೆ ಸಚಿವಾಲಯ ವಿಶ್ವಾಸ ವ್ಯಕ್ತಪಡಿಸಿದೆ. ಜಪಾನ್ ರಾಜತಾಂತ್ರಿಕರ ಹೇಳಿಕೆಗಳ ನಡುವೆಯೂ ಭಾರತವು ತನ್ನ ನಿಗದಿತ ಗಡುವಿನೊಳಗೆ ಯೋಜನೆಯನ್ನು ಮುಗಿಸಲು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ.


