ರಾಷ್ಟ್ರ ರಾಜಧಾನಿಯಲ್ಲಿ ಘೋರ ದುರಂತ ಸಂಭವಿಸಿದೆ. 6 ಅಂತಸ್ತಿನ ಕಟ್ಟಡವೊಂದು ಕುಸಿದು ಬಿದ್ದಿದ್ದು, 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಇವತ್ತು ಭಾನುವಾರ ಹಿನ್ನೆಲೆಯಲ್ಲಿ ತುಂಬಾ ವಿದ್ಯಾರ್ಥಿಗಳು ಪಿಜೆಯಲ್ಲೇ ಇದ್ದರು.

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ನೈಋತ್ಯ ಭಾಗದ ಸತ್ಯ ನಿಕೇತನ್ ಪ್ರದೇಶದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡವೊಂದು ಹಠಾತ್ ಕುಸಿದು ಬಿದ್ದಿದೆ. ಈ ಭೀಕರ ಘಟನೆಯಲ್ಲಿ ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯ ಚುರುಕಿನಿಂದ ಸಾಗಿದೆ.

ಕುಸಿದ ಕಟ್ಟಡವು 'ಹಾಸ್ಟೆಲ್ ಡೇಜ್' (Hostel Daze) ಹೆಸರಿನ ಪುರುಷರ ಪೇಯಿಂಗ್ ಗೆಸ್ಟ್ (PG) ಆಗಿತ್ತು. ಇದರಲ್ಲಿ ಸುಮಾರು 75 ಹಾಸಿಗೆಗಳ ವ್ಯವಸ್ಥೆಯಿತ್ತು. ದೆಹಲಿ ವಿಶ್ವವಿದ್ಯಾಲಯದ ದಕ್ಷಿಣ ಕ್ಯಾಂಪಸ್ ಸಮೀಪವಿರುವ ಈ ಪ್ರದೇಶದಲ್ಲಿ ನೂರಾರು ವಿದ್ಯಾರ್ಥಿಗಳು ವಾಸಿಸುತ್ತಿದ್ದಾರೆ. ಘಟನೆ ನಡೆದಾಗ ಸುಮಾರು 50 ವಿದ್ಯಾರ್ಥಿಗಳು ಕಟ್ಟಡದ ಒಳಗಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಇಂದು ಭಾನುವಾರವಾದ್ದರಿಂದ ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ಕೊಠಡಿಗಳಲ್ಲೇ ಇದ್ದರು ಎನ್ನಲಾಗಿದೆ. ಅವಶೇಷಗಳ ಅಡಿಯಿಂದ ರಕ್ಷಣೆಗಾಗಿ ವಿದ್ಯಾರ್ಥಿಗಳ ಕಿರುಚಾಟ ಕೇಳಿಬರುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ 12 ವಾಹನಗಳು, ಆಂಬ್ಯುಲೆನ್ಸ್ ಮತ್ತು ವಿಪತ್ತು ನಿರ್ವಹಣಾ ತಂಡಗಳು (NDRF) ಧಾವಿಸಿವೆ. ಇದುವರೆಗೆ ಆರು ಜನರನ್ನು ರಕ್ಷಿಸಲಾಗಿದ್ದು, ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಜೆಸಿಬಿ ಮತ್ತು ಇತರ ಯಂತ್ರಗಳ ಮೂಲಕ ಸಿಮೆಂಟ್ ಸ್ಲ್ಯಾಬ್‌ಗಳನ್ನು ಸರಿಸಲಾಗುತ್ತಿದೆ. ಸ್ಥಳದಲ್ಲಿ ಜನಜಂಗುಳಿಯನ್ನು ನಿಯಂತ್ರಿಸಲು ಗಲಭೆ ನಿಯಂತ್ರಣಾ ಪಡೆಗಳನ್ನು (Riot-control teams) ನಿಯೋಜಿಸಲಾಗಿದೆ.

ಮುಖ್ಯಮಂತ್ರಿ ಮತ್ತು ಶಾಸಕರ ಭೇಟಿ

ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ರೇಖಾ ಗುಪ್ತಾ, ರಕ್ಷಣಾ ಕಾರ್ಯವನ್ನು ಯುದ್ಧೋಪಾದಿಯಲ್ಲಿ ನಡೆಸಲು ಸೂಚಿಸಿದ್ದಾರೆ. ಪಕ್ಕದ ಕಟ್ಟಡವನ್ನೂ ಮುನ್ನೆಚ್ಚರಿಕಾ ಕ್ರಮವಾಗಿ ತೆರವುಗೊಳಿಸಲಾಗಿದೆ. ಪ್ರತಿಯೊಬ್ಬರನ್ನು ಸುರಕ್ಷಿತವಾಗಿ ರಕ್ಷಿಸುವುದು ನಮ್ಮ ಮೊದಲ ಆದ್ಯತೆ ಎಂದು ಅವರು ತಿಳಿಸಿದ್ದಾರೆ. ಸ್ಥಳೀಯ ಶಾಸಕ ಅನಿಲ್ ಶರ್ಮಾ ಕೂಡ ಸ್ಥಳದಲ್ಲಿದ್ದು, ರಕ್ಷಣಾ ಕಾರ್ಯದ ಉಸ್ತುವಾರಿ ವಹಿಸಿದ್ದಾರೆ.