ಕಳೆದ ಮೂರು ವರ್ಷಗಳಲ್ಲಿ, ಸಾರ್ವಜನಿಕ ವಲಯದ ಬ್ಯಾಂಕುಗಳು ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದ ಗ್ರಾಹಕರಿಂದ ಸುಮಾರು 8,000 ಕೋಟಿ ರೂ. ದಂಡ ವಸೂಲಿ ಮಾಡಿವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಅತಿ ಹೆಚ್ಚು ದಂಡ ಸಂಗ್ರಹಿಸಿದ್ದು, ಎಸ್‌ಎಂಎಸ್ ಸೇವೆಗಳಿಗಾಗಿಯೂ ಬ್ಯಾಂಕುಗಳು ಸಾವಿರಾರು ಕೋಟಿ ಶುಲ್ಕ ವಿಧಿಸಿವೆ.

ನವದೆಹಲಿ (ಫೆ.10): ಸಾಮಾನ್ಯ ಜನರಿಗೆ ಬ್ಯಾಂಕಿಂಗ್ ಸೇವೆ ಹತ್ತಿರವಾಗಬೇಕು ಎಂಬ ಆಶಯದ ನಡುವೆಯೇ, ಕಳೆದ ಮೂರು ವರ್ಷಗಳಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳು ಗ್ರಾಹಕರಿಂದ ಭಾರೀ ಪ್ರಮಾಣದ ದಂಡ ವಸೂಲಿ ಮಾಡಿರುವುದು ಬೆಳಕಿಗೆ ಬಂದಿದೆ. ಉಳಿತಾಯ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ (Minimum Balance) ಕಾಯ್ದುಕೊಳ್ಳದ ಕಾರಣಕ್ಕೆ ದೇಶದ 12 ಪ್ರಮುಖ ಬ್ಯಾಂಕುಗಳು ಬರೋಬ್ಬರಿ 8,000 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿವೆ.

Add Asianetnews Kannada as a Preferred SourcegooglePreferred

ದಂಡ ವಸೂಲಿಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಂಬರ್ 1

ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿದ ಅಂಕಿಅಂಶಗಳ ಪ್ರಕಾರ, ಕನಿಷ್ಠ ಬ್ಯಾಲೆನ್ಸ್ ದಂಡ ವಸೂಲಿ ಮಾಡುವಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಅಗ್ರಸ್ಥಾನದಲ್ಲಿದೆ. ಈ ಬ್ಯಾಂಕ್ ಒಂದೇ ಕಳೆದ ಮೂರು ವರ್ಷಗಳಲ್ಲಿ ಗ್ರಾಹಕರಿಂದ 1,500 ಕೋಟಿ ರೂಪಾಯಿಗಳನ್ನು ದಂಡದ ರೂಪದಲ್ಲಿ ಪಡೆದಿದೆ. ಇದು ಸಾರ್ವಜನಿಕ ವಲಯದ ಬ್ಯಾಂಕುಗಳ ಪೈಕಿ ಅತಿ ಹೆಚ್ಚಿನ ವಸೂಲಿಯಾಗಿದೆ.

ಇತರೆ ಪ್ರಮುಖ ಬ್ಯಾಂಕುಗಳ ಅಂಕಿಅಂಶ

ಪಿಎನ್‌ಬಿ ನಂತರದ ಸ್ಥಾನಗಳಲ್ಲಿ ದೊಡ್ಡ ಬ್ಯಾಂಕುಗಳೇ ಕಾಣಿಸಿಕೊಂಡಿವೆ. ಬ್ಯಾಂಕ್ ಆಫ್ ಬರೋಡಾ 1,272 ಕೋಟಿ ರೂ. ವಸೂಲಿ ಮಾಡಿದ್ದರೆ, ಇಂಡಿಯನ್ ಬ್ಯಾಂಕ್ 1,166 ಕೋಟಿ ರೂ.ಗಳನ್ನು ದಂಡದ ರೂಪದಲ್ಲಿ ಪಡೆದಿದೆ. ಕರ್ನಾಟಕ ಮೂಲದ ಕೆನರಾ ಬ್ಯಾಂಕ್ 1,027 ಕೋಟಿ ರೂ. ಹಾಗೂ ದೇಶದ ಅತಿದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 932 ಕೋಟಿ ರೂ.ಗಳಷ್ಟು ಶುಲ್ಕವನ್ನು ಗ್ರಾಹಕರಿಂದ ಕಲೆ ಹಾಕಿವೆ.

SMS ಸೇವೆಗೂ ಕತ್ತರಿ: 3,388 ಕೋಟಿ ರೂ. ಶುಲ್ಕ

ಕೇವಲ ಕನಿಷ್ಠ ಬ್ಯಾಲೆನ್ಸ್ ಮಾತ್ರವಲ್ಲದೆ, ಬ್ಯಾಂಕುಗಳು ನೀಡುವ ಎಸ್‌ಎಂಎಸ್ (SMS) ಅಲರ್ಟ್ ಸೌಲಭ್ಯಕ್ಕೂ ಗ್ರಾಹಕರು ಭಾರೀ ಬೆಲೆ ತೆತ್ತಿದ್ದಾರೆ. ಎಸ್‌ಬಿಐ ಹೊರತುಪಡಿಸಿ ಉಳಿದ ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕುಗಳು ಒಟ್ಟಾಗಿ ಕಳೆದ ಮೂರು ವರ್ಷಗಳಲ್ಲಿ ಎಸ್‌ಎಂಎಸ್ ಸೌಲಭ್ಯಕ್ಕಾಗಿ ಗ್ರಾಹಕರಿಂದ 3,388 ಕೋಟಿ ರೂಪಾಯಿಗಳನ್ನು ವಸೂಲಿ ಮಾಡಿವೆ ಎಂದು ಸರ್ಕಾರ ಮಾಹಿತಿ ನೀಡಿದೆ.

YouTube video player