SIR ವಿಶೇಷ ಮತಪಟ್ಟಿ ಪರಿಷ್ಕರಣೆಗೆ (ಎಸ್‌ಐಆರ್) ಯಾವುದೇ ಅಡ್ಡಿ ಉಂಟಾಗಲು ಬಿಡುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಈ ಪ್ರಕ್ರಿಯೆಯನ್ನು ವಿರೋಧಿಸಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಕಾನೂನು ಹೋರಾಟಕ್ಕೆ ಇದರಿಂದ ಹಿನ್ನಡೆಯಾಗಿದೆ.
ಪಿಟಿಐ ನವದೆಹಲಿ (ಫೆ.10): ವಿಶೇಷ ಮತಪಟ್ಟಿ ಪರಿಷ್ಕರಣೆಗೆ (ಎಸ್‌ಐಆರ್) ವಿರುದ್ಧ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಕಾನೂನು ಸಮರ ಸಾರಿರುವ ಹೊತ್ತಿನಲ್ಲಿ, ‘ಈ ಪ್ರಕ್ರಿಯೆಗೆ ಯಾವುದೇ ಅಡಚಣೆಯಾಗಲು ಬಿಡುವುದಿಲ್ಲ. ಎಲ್ಲ ರಾಜ್ಯಗಳೂ ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಸುಪ್ರೀಂಕೋರ್ಟ್ ಹೇಳಿದೆ. ಈ ಮೂಲಕ ಮಮತಾ ಹಾಗೂ ಇತರ ಎಸ್ಐಆರ್ ವಿರೋಧಿಗಳಿಗೆ ಕೋರ್ಟ್ ಹೋರಾಟದಲ್ಲಿ ಹಿನ್ನಡೆ ಆಗಿದೆ.
ಎಸ್‌ಐಆರ್‌ಗೆ ಅಡ್ಡಿ ಉಂಟಾಗಲು ಬಿಡುವುದಿಲ್ಲ
ಎಸ್‌ಐಆರ್ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸಿಜೆಐ ನ್ಯಾ। ಸೂರ್ಯಕಾಂತ್, ನ್ಯಾ। ಎನ್.ವಿ. ಅಂಜಾರಿಯಾ, ಜಯಮಾಲ್ಯ ಬಾಗ್ಚಿ ಅವರ ತ್ರಿಸದಸ್ಯ ಪೀಠ, ‘ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ಆದೇಶ ಅಥವಾ ಸ್ಪಷ್ಟನೆಗಳು ಅಗತ್ಯವಿದ್ದಲ್ಲಿ ಅವುಗಳನ್ನು ಒದಗಿಸುತ್ತೇವೆ. ಆದರೆ ಎಸ್‌ಐಆರ್‌ಗೆ ಅಡ್ಡಿ ಉಂಟಾಗಲು ಬಿಡುವುದಿಲ್ಲ. ಇದನ್ನು ಎಲ್ಲಾ ರಾಜ್ಯಗಳು ಅರ್ಥಮಾಡಿಕೊಳ್ಳಬೇಕು’ ಎಂದಿತು.
ಸುಪ್ರೀಂ ಹೇಳಿದ್ದೇನು?
ಇದೇ ವೇಳೆ, ‘ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿದ 8,505 ಗ್ರೂಪ್ ಬಿ ನೌಕರರ ಪಟ್ಟಿಯನ್ನು ನಾವು ಪರಿಗಣಿಸಿದ್ದು, ಅವರಿಗೆ ತರಬೇತಿ ನೀಡಿ ಎಸ್‌ಐಆರ್‌ಗೆ ಬಳಸಿಕೊಳ್ಳಬಹುದು’ ಎಂದು ಸೂಚಿಸಿತು. ಜತೆಗೆ, ಮತಪಟ್ಟಿ ಪರಿಷ್ಕರಣೆಯ ಅಂತಿಮ ನಿರ್ಧಾರವನ್ನು ಅಧಿಕಾರಿಗಳೇ ತೆಗೆದುಕೊಳ್ಳುತ್ತಾರೆ ಎಂದು ಕೋರ್ಟ್ ಹೇಳಿತು.



