ಬ್ಯಾಂಕ್ ಖಾತೆಗಳಲ್ಲಿ ಕನಿಷ್ಠ ಹಣ ನಿರ್ವಹಣೆ ಮಾಡದಿದ್ದರೆ ದಂಡ ವಿಧಿಸಲಾಗುತ್ತದೆ. ಮಾಸಿಕ ಸರಾಸರಿ ಬ್ಯಾಲೆನ್ಸ್ (MAB) ಲೆಕ್ಕಾಚಾರ ಹೇಗೆ? ದಂಡ ತಪ್ಪಿಸಲು ಸಲಹೆಗಳೇನು?

Bank Minimum Balance Charges: ಭಾರತದಲ್ಲಿರುವ ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳು (Government and Private Banks) ತಮ್ಮ ಗ್ರಾಹಕರಿಗೆ ಖಾತೆಯಲ್ಲಿ ಕನಿಷ್ಠ ಹಣ ನಿರ್ವಹಣೆ ( maintain a minimum balance) ಮಾಡುವಂತೆ ಸಲಹೆ ನೀಡುತ್ತದೆ. ಕನಿಷ್ಠ ಹಣ ನಿರ್ವಹಣೆ ಬ್ಯಾಂಕ್‌ಗಳಿಂದ ಬ್ಯಾಂಕ್‌ಗಳಿಗೆ ಬೇರೆ ಬೇರೆಯಾಗಿರುತ್ತವೆ. ಅಕೌಂಟ್‌ನಲ್ಲಿ ಮಿನಿಮಮ್ ಬ್ಯಾಲೆನ್ಸ್ ಮೇಂಟೈನ್ ಮಾಡದಿದ್ರೆ ಬ್ಯಾಂಕ್‌ಗಳು ದಂಡವನ್ನು (Penalties) ವಿಧಿಸುತ್ತವೆ. ದಂಡದಿಂದ ಪಾರಾಗಲು ಗ್ರಾಹಕರು ತಮ್ಮ ಖಾತೆಯಲ್ಲಿ ಬ್ಯಾಂಕ್ ಸೂಚಿಸಿದ ಕನಿಷ್ಠ ಹಣ ನಿರ್ವಹಣೆ ಮಾಡೋದು ಕಡ್ಡಾಯವಾಗುತ್ತದೆ. ಮಾಸಿಕ ಸರಾಸರಿ ಬ್ಯಾಲೆನ್ಸ್ (MAB-Monthly Average Balance) ಅನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಮತ್ತು ಅದನ್ನು ನಿರ್ವಹಿಸದಿದ್ದರೆ ಹೇಗೆ ದಂಡ ವಿಧಿಸಲಾಗುತ್ತೆ ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಮಾಸಿಕ ಸರಾಸರಿ ಬ್ಯಾಲೆನ್ಸ್ (MAB) ಎಂದರೇನು?

ಮಾಸಿಕ ಸರಾಸರಿ ಬ್ಯಾಲೆನ್ಸ್ (MAB) ಅಂದ್ರೆ ಒಂದು ತಿಂಗಳ ಅವಧಿಯಲ್ಲಿ ಬ್ಯಾಂಕ್ ಖಾತೆಯಲ್ಲಿ ನಿರ್ವಹಿಸಲಾಗುವ ಸರಾಸರಿ ಬ್ಯಾಲೆನ್ಸ್. ಇದನ್ನು ತಿಂಗಳಿನ ಪ್ರತಿ ದಿನದ ಮುಕ್ತಾಯದ ಬ್ಯಾಲೆನ್ಸ್ ಅನ್ನು ಒಟ್ಟುಗೂಡಿಸಿ ಮತ್ತು ಅದನ್ನು ತಿಂಗಳಿನ ದಿನಗಳ ಸಂಖ್ಯೆಯಿಂದ ಭಾಗಿಸುವ ಮೂಲಕ ಲೆಕ್ಕಹಾಕಲಾಗುತ್ತದೆ.

ಮಾಸಿಕ ಸರಾಸರಿ ಬ್ಯಾಲೆನ್ಸ್ ಹೇಗೆ ಲೆಕ್ಕ ಹಾಕಲಾಗುತ್ತೆ?

ಉದಾಹರಣೆಗೆ ನಿಮ್ಮ ಉಳಿತಾಯ ಖಾತೆಯಲ್ಲಿ (Savings account) ಒಂದು ತಿಂಗಳ ಅವಧಿಯಲ್ಲಿ ಈ ರೀತಿಯಾಗಿದೆ ಎಂದು ಭಾವಿಸೋಣ

Day 1-10: ₹10,000

Day 11-20: ₹8,000

Day 21-30: ₹12,000

MAB ಅನ್ನು ಲೆಕ್ಕಹಾಕಲು ಬ್ಯಾಂಕ್ ಪ್ರತಿ ದಿನದ ಒಟ್ಟು ಬ್ಯಾಲೆನ್ಸ್ ಅನ್ನು ಸೇರಿಸುತ್ತದೆ

(₹10,000 x 10) + (₹8,000 x 10) + (₹12,000 x 10) = ₹100,000 + ₹80,000 + ₹120,000 = ₹300,000

ನಂತರ, ಒಟ್ಟು ಮೊತ್ತವನ್ನು ತಿಂಗಳಿನ ದಿನಗಳ ಸಂಖ್ಯೆಯಿಂದ ಭಾಗಿಸಲಾಗುತ್ತದೆ. ಉದಾಹರಣೆಗೆ ಈ ತಿಂಗಳಿನಲ್ಲಿ 30 ದಿನಗಳಿವೆ ಎಂದು ಭಾವಿಸೋಣ. ಆಗ 3,00,000 ರೂ.ಯುನ್ನು ದಿನಗಳ ಸಂಖ್ಯೆ 30 ರಿಂದ ಭಾಗಾಕಾರ ಮಾಡಲಾಗುತ್ತದೆ.

₹300,000 ÷ 30 = ₹10,000

ಈ ಲೆಕ್ಕಾಚಾರದ ಪ್ರಕಾರ ನಿಮ್ಮ ಉಳಿತಾಯ ಖಾತೆಯ ಮಾಸಿಕ ಸರಾಸರಿ ಬ್ಯಾಲೆನ್ಸ್ 10,000 ರೂಪಾಯಿ ಆಗುತ್ತದೆ.

ಮಾಸಿಕ ಸರಾಸರಿ ಬ್ಯಾಲೆನ್ಸ್ ನಿರ್ವಹಿಸದಿದ್ರೆ ದಂಡ ಹಾಕ್ತಾರೆ! Penalties for not maintaining MAB

ಗ್ರಾಹಕರು ಮಾಸಿಕ ಸರಾಸರಿ ಬ್ಯಾಲೆನ್ಸ್ (MAB-Monthly Average Balance) ಮೇಂಟೈನ್ ಮಾಡದಿದ್ದರೆ ಬ್ಯಾಂಕ್‌ಗಳು ದಂಡ ವಿಧಿಸುತ್ತವೆ. ನಿಮ್ಮ ಖಾತೆಯಲ್ಲಿನ ಹಣವನ್ನು ದಂಡದ ರೂಪದಲ್ಲಿ ಕಡಿತಗೊಳಿಸಲಾಗುತ್ತದೆ. ಈ ದಂಡದ ಮೊತ್ತ ಸಾಮಾನ್ಯವಾಗಿ 3 ಅಂಕಿಯಲ್ಲಿರುತ್ತದೆ. MAB ಅವಶ್ಯಕತೆಯನ್ನು ಪೂರೈಸದ ಬಹು ಸಂದರ್ಭಗಳಲ್ಲಿ ಕೆಲವು ಬ್ಯಾಂಕುಗಳು ಹೆಚ್ಚಿನ ದಂಡವನ್ನು ವಿಧಿಸಬಹುದು. ಈ ದಂಡದಿಂದ ತಪ್ಪಿಸಿಕೊಳ್ಳಲು ನಿಗಧಿತ ಹಣವನ್ನು ಖಾತೆಯಲ್ಲಿ ಉಳಿಸಿಕೊಳ್ಳಬೇಕಾಗುತ್ತದೆ. ಯಾವುದೇ ಆಶ್ಚರ್ಯಗಳನ್ನು ತಪ್ಪಿಸಲು ಅವರ ನಿರ್ದಿಷ್ಟ MAB ಅವಶ್ಯಕತೆಗಳು ಮತ್ತು ದಂಡಗಳಿಗಾಗಿ ನಿಮ್ಮ ಬ್ಯಾಂಕ್‌ನೊಂದಿಗೆ ಪರಿಶೀಲಿಸುವುದು ಅತ್ಯಗತ್ಯವಾಗಿರುತ್ತದೆ.

MAB ದಂಡಗಳನ್ನು ತಪ್ಪಿಸಲು ಸಲಹೆಗಳು Tips to avoid MAB penalties

1. ಅಗತ್ಯವಿರುವ ಬ್ಯಾಲೆನ್ಸ್ ಅನ್ನು ನಿರ್ವಹಿಸಲು ಇತರ ಖಾತೆಗಳಿಂದ ಸ್ವಯಂಚಾಲಿತ ವರ್ಗಾವಣೆಗಳನ್ನು ಹೊಂದಿಸಿ.

2. ನಿಮ್ಮ ಖಾತೆಯ ಬ್ಯಾಲೆನ್ಸ್‌ಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಿ.

3. ಶೂನ್ಯ-ಬ್ಯಾಲೆನ್ಸ್ ಖಾತೆ (zero-balance account) ಅಥವಾ MAB ಅವಶ್ಯಕತೆಯಿಲ್ಲದ ಖಾತೆಯನ್ನು ಆಯ್ಕೆ ಮಾಡುವುದನ್ನು ಪರಿಗಣಿಸಿ.