ತಮಿಳುನಾಡಿಗೆ ಶಿಕ್ಷಣ ನಿಧಿ ಬಿಡುಗಡೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಂಸದ ಶಶಿಕಾಂತ್ ಸೆಂಥಿಲ್ ತಮ್ಮ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ನಾಯಕರು ಮತ್ತು ತಮಿಳುನಾಡು ಸಿಎಂ ಮನವಿಯ ಮೇರೆಗೆ ಈ ನಿರ್ಧಾರ ಕೈಗೊಂಡಿದ್ದಾರೆ.
ಚೆನ್ನೈ (ಸೆ.2): ಧರ್ಮಸ್ಥಳ ಕೇಸ್‌ನಲ್ಲಿ ಪ್ರಮುಖವಾಗಿ ಕೇಳಿಬಂದಿದ್ದ ದಕ್ಷಿಣ ಕನ್ನಡದ ಮಾಜಿ ಡಿಸಿ ಹಾಗೂ ಹಾಲಿ ಸಂಸದ ಸಸಿಕಾಂತ್ ಸೆಂಥಿಲ್ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹಕ್ಕೆ ವಿರಾಮ ಬಿದ್ದಿದೆ. ತಮಿಳುನಾಡು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಸೆಲ್ವಪೆರುಂಥಗೈ ಅವರು ರಾಹುಲ್ ಗಾಂಧಿಯವರ ರಾಷ್ಟ್ರವ್ಯಾಪಿ 'ವೋಟ್ ಚೋರಿ' ಅಭಿಯಾನದಿಂದ ಗಮನವನ್ನು ಬೇರೆಡೆ ಸೆಳೆಯುವ ಸಾಧ್ಯತೆ ಇರೋದರಿಂದ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವಂತೆ ಸೆಂಥಿಲ್ ಅವರನ್ನು ಒತ್ತಾಯಿಸಿದರು. ಇದರ ಭಾಗವಾಗಿ, ತಮ್ಮ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳುತ್ತಿರುವುದಾಗಿ ಯು-ಟರ್ನ್ ಹೊಡೆದಿದ್ದಾರೆ.
ನಿಧಿ ಬಿಡುಗಡೆಗೆ ಆಗ್ರಹಿಸಿ ಸತ್ಯಾಗ್ರಹ
ತಮಿಳುನಾಡಿಗೆ ಸಮಗ್ರ ಶಿಕ್ಷಾ ಅಭಿಯಾನ (ಎಸ್‌ಎಸ್‌ಎ) ನಿಧಿಯನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದ ತಿರುವಲ್ಲೂರು ಸಂಸದ ಶಶಿಕಾಂತ್ ಸೆಂಥಿಲ್, ಸೆಪ್ಟೆಂಬರ್ 1 ರ ಸೋಮವಾರ ರಾತ್ರಿ ತಮ್ಮ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಕೊನೆಗೊಳಿಸುತ್ತಿರುವುದಾಗಿ ಘೋಷಿಸಿದರು.
ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಇಂಡಿಯಾ ಒಕ್ಕೂಟದ ನಾಯಕರ ಮನವಿಯ ಮೇರೆಗೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದ ಕಾಂಗ್ರೆಸ್ ಸಂಸದರ ಉಪವಾಸವನ್ನು ಹಿಂತೆಗೆದುಕೊಳ್ಳಲಾಯಿತು. ತಮಿಳುನಾಡು ಕಾಂಗ್ರೆಸ್ ಸಮಿತಿ (ಟಿಎನ್‌ಸಿಸಿ) ಅಧ್ಯಕ್ಷ ಕೆ. ಸೆಲ್ವಪೆರುಂಥಗೈ ಅವರು ರಾಹುಲ್ ಗಾಂಧಿಯವರ ರಾಷ್ಟ್ರವ್ಯಾಪಿ 'ವೋಟ್ ಚೋರಿ' ಅಭಿಯಾನದಿಂದ ಗಮನವನ್ನು ಬೇರೆಡೆ ಸೆಳೆಯುವ ಸಾಧ್ಯತೆ ಇರುವುದರಿಂದ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದರು.
ಪ್ರತಿಭಟನೆಯ ಎರಡನೇ ದಿನದಂದು ಶಶಿಕಾಂತ್ ಅವರ ಆರೋಗ್ಯ ಹದಗೆಟ್ಟಿತು, ವೈದ್ಯರು ಅವರ ರಕ್ತದೊತ್ತಡದಲ್ಲಿ ಏರಿಕೆಯನ್ನು ಗಮನಿಸಿದರು. ಅವರನ್ನು ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ವೈದ್ಯಕೀಯ ನಿಗಾದಲ್ಲಿ ಇರಿಸಲಾಯಿತು.
ಆಗಸ್ಟ್ 30 ರಿಂದ ಉಪವಾಸ ಸತ್ಯಾಗ್ರಹ
ತಮಿಳುನಾಡಿಗೆ ಕೇಂದ್ರ ಸರ್ಕಾರ ನೀಡಬೇಕಾದ ಹಣವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಅವರು ಆಗಸ್ಟ್ 30, ಶುಕ್ರವಾರ ಉಪವಾಸ ಆರಂಭಿಸಿದ್ದರು. ಬಿಜೆಪಿ ನೇತೃತ್ವದ ಸರ್ಕಾರವು ಎಸ್‌ಎಸ್‌ಎ ಅಡಿಯಲ್ಲಿ 2,152 ಕೋಟಿ ರೂ.ಗಳನ್ನು ತಡೆಹಿಡಿದಿದೆ ಎಂದು ಆರೋಪಿಸಿದ ಸಸಿಕಾಂತ್, ಈ ವಿಳಂಬವು ರಾಜ್ಯದ 43 ಲಕ್ಷ ವಿದ್ಯಾರ್ಥಿಗಳು ಮತ್ತು 2.2 ಲಕ್ಷ ಶಿಕ್ಷಕರ ಭವಿಷ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ಹೇಳಿದರು.
"ಈ ಹೋರಾಟವು ನನಗೆ ಈ ಸಮಸ್ಯೆಯ ಗಂಭೀರತೆಯನ್ನು ಜನರ ಮುಂದೆ ಎತ್ತಿ ತೋರಿಸುವ ಅವಕಾಶವನ್ನು ನೀಡಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕುಗಳಿಗಾಗಿ ಹೋರಾಟವನ್ನು ಹೆಚ್ಚಿನ ಹುರುಪಿನಿಂದ ಮುಂದುವರಿಸಲು, ಎಲ್ಲರ ಮನವಿಗಳನ್ನು ಗೌರವಿಸಿ ನಾನು ನನ್ನ ಉಪವಾಸ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಕೊನೆಗೊಳಿಸುತ್ತಿದ್ದೇನೆ" ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಮಿಳುನಾಡು ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಅನ್ನು ಅಳವಡಿಸಿಕೊಳ್ಳದ ಹೊರತು ಕೇಂದ್ರ ಸರ್ಕಾರವು 2,151.59 ಕೋಟಿ ರೂ.ಗಳ ಶಿಕ್ಷಣ ನಿಧಿಯನ್ನು ಬಿಡುಗಡೆ ಮಾಡಲು ನಿರಾಕರಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಸಂಸದರು ಉಪವಾಸ ಸತ್ಯಾಗ್ರಹ ನಡೆಸಿದರು. ರಾಜ್ಯವು NEP ಅನ್ನು ಬಲವಾಗಿ ತಿರಸ್ಕರಿಸಿದೆ, ಹಿಂದಿಯನ್ನು ಉತ್ತೇಜಿಸುವ ಪ್ರಯತ್ನವೆಂದು ಹಲವರು ಪರಿಗಣಿಸುವ ತ್ರಿಭಾಷಾ ಸೂತ್ರದ ಹೇರಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

