ಧರ್ಮಸ್ಥಳ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ.ಆರೋಪಗಳು, ತನಿಖೆ,ವಿವಾದಗಳ ಬೆನ್ನಲ್ಲೇ ಇದೀಗ ಧರ್ಮಸ್ಥಳ ಪ್ರಕರಣ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ತಲುಪಿದೆ. ಈ ಮೂಲಕ ತಮಿಳುನಾಡು ರಾಜಕಾರಣಿಯ ಷಡ್ಯಂತ್ರ ಬಯಲಾಗುತ್ತಾ? 

ಉಡುಪಿ (ಆ.19) ಧರ್ಮಸ್ಥಳ ಪ್ರರಕರಣದ ಎಸ್‌ಐಟಿ ತನಿಖೆ ಹಲವು ಸ್ಫೋಟಕ ಮಾಹಿತಿಗಳನ್ನು ಕಲೆ ಹಾಕಿದೆ. ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂಬ ದೂರಿನ ಅಡಿ ಎಸ್ಐಟಿ ಅಧಿಕಾರಿಗಳು ಉತ್ಖನನ ಮಾಡಿದ್ದಾರೆ. ಆದರೆ 17 ಗುಂಡಿ ಅಗೆದರೂ ದೂರುದಾರ ಹೇಳಿದಂತೆ ಕಳೇಬರ ಸಿಕ್ಕಿಲ್ಲ. ಇತ್ತ ಎಸ್ಐಟಿಯ ಶವ ಶೋಧ ಕಾರ್ಯಕ್ಕೆ ಸರ್ಕಾರ ತಾತ್ಕಾಲಿಕ ಬ್ರೇಕ್ ಹಾಕಿದೆ. ಮತ್ತೊಂದೆಡೆ ಧರ್ಮಸ್ಥಳ ವಿರುದ್ದ ಸುಳ್ಳು ಆರೋಪ, ಸೋಶಿಯಲ್ ಮೀಡಿಯಾ ಮೂಲಕ ಅಪಪ್ರಚಾರ ನಡೆಯುತ್ತಿದೆ. ಇದನ್ನು ತಡೆಯಲು ಸರ್ಕಾರ ಮುಂದಾಗಬೇಕು ಎಂದು ವಿಪಕ್ಷಗಳು ಆಗ್ರಹಿಸಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಧರ್ಮಸ್ಥಳ ಪ್ರಕರಣ ಇದೀಗ ಕೇಂದ್ರ ಗೃಹ ಸಚಿವ ಅಂಗಣಕ್ಕೆ ತಲುಪಿದೆ.

ದೇವಸ್ಥಾನ ವಿರುದ್ದ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಗಳ ಇಡಿ ತನಿಖೆಗೆ ಮನವಿ

ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಧರ್ಮಸ್ಥಳ ಪ್ರಕರಣ ಕುರಿತು ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ದೇವಸ್ಥಾನ ವಿರುದ್ಧ, ಧರ್ಮಸ್ಥಳ ವಿರುದ್ಧ, ಧರ್ಮಾಧಿಕಾರಿ ವಿರುದ್ದ ಷಡ್ಯಂತ್ರ ನಡೆಯುತ್ತಿದೆ. ಮಂಜುನಾಥ ಸ್ವಾಮಿ ದೇವಸ್ಥಾನದ ಪಾವಿತ್ರತೆಯನ್ನು ಕಳಂಕಗೊಳಿಸುವ ಹುನ್ನಾರ ನಡೆಯುತ್ತಿದೆ. ವ್ಯವಸ್ಥಿತ ಷಡ್ಯಂತ್ರದಿಂದ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಹಾಗೂ ಧಾರ್ಮಿಕ ಕ್ಷೇತ್ರಗಳ ಮೇಲೆ ಅಪನಂಬಿಕೆ ಬರುವಂತೆ ಮಾಡಲಾಗುತ್ತಿದೆ ಎಂದು ಕೋಟಾ ಶ್ರೀನಿವಾಸ ಪೂಜಾರಿ ಪತ್ರ ಬರೆದಿದ್ದಾರೆ. ಹೀಗಾಗಿ ಈ ಪ್ರಕರಣದವನ್ನು ಇಡಿಗೆ ಒಪ್ಪಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಮಂಜುನಾಥ ದೇವಸ್ಥಾನ ವಿರುದ್ದ ಸಂಚು, ಕೆಲ ಗುಂಪುಗಳ ಷಡ್ಯಂತ್ರ

ಮಂಜುನಾಥ ಸ್ವಾಮಿ ದೇಗುಲದ ವಿರುದ್ದ ಸಂಚು ನಡೆಸಿದ್ದಾರೆ. ಕೆಲ ಗುಂಪುಗಳು ಇದರ ಹಿಂದೆ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕ ರಾಜ್ಯದ ಉಪ ಮುಖ್ಯಮಂತ್ರಿಗಳು ದೇವಸ್ಥಾನದ ವಿರುದ್ಧ ಸಂಚು ನಡೆಯುತ್ತಿದೆ ಎಂದು ಸಾರ್ವಜನಿಕವಾಗಿ ತಿಳಿಸಿದ್ದಾರೆ. ಇತ್ತ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಎಡಪಂತೀಯ ಸಂಘಟನೆಗಳ ಒತ್ತಾಯದ ಮೇರೆಗೆ ಎಸ್ಐಟಿ ರಚಿಸಲಾಗಿದೆ ಎಂದು ಹೇಳಿದ್ದಾರೆ.ಕರ್ನಾಟಕ ಸರಕಾರವು ದೂರುದಾರನ ಮಾತುಗಳಿಗೆ ತಲೆಬಾಗಿದಂತಾಗಿದೆ. ಇದರಿಂದ ಭಕ್ತರ ಮನಸ್ಸು ತಲ್ಲಣಗೊಂಡಿದೆ ಎಂದು ಕೋಟಾ ಶ್ರೀನಿವಾಸ ಪೂಜಾರಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ತಮಿಳುನಾಡು ರಾಜಕಾರಣಿ ಪಾತ್ರ

ಧರ್ಮಸ್ಥಳ ವಿರುದ್ದ ನಡೆಯುತ್ತಿರುವ ವ್ಯವಸ್ಥಿತ ಷಡ್ಯಂತ್ರದಲ್ಲಿ ತಮಿಳುನಾಡಿನ ರಾಜಕಾರಣಿ ಪಾತ್ರವಿದೆ ಎಂಬ ವರದಿಗಳು ಮಾಧ್ಯಮಗಳಲ್ಲಿ ಬರುತ್ತಿದೆ. ಹಿಂದುಗಳ ನಂಬಿಕೆಯನ್ನು ದುರ್ಬಲಗೊಳಿಸಲು ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೇರಲಾಗಿದೆ.

ಒಬ್ಬ ಮುಸ್ಲಿಂ ಯೂಟ್ಯೂಬರ್, ಧರ್ಮಸ್ಥಳ ದೇವಾಸ್ಥಾನವನ್ನು ಅವಮಾನಗೊಳಿಸುತ್ತಿದ್ದಾನೆ. ಅವರ ಸಹಚರರು ವಿದೇಶಿ ನಿಧಿಯನ್ನು ಸ್ವೀಕರಿಸುವ ಬಗ್ಗೆ ಸುದ್ದಿ ಹರಡಿದೆ. ಹೀಗಾಗಿ ಈ ಪ್ರಕರಣವನ್ನು ಇಡಿ ತನಿಖೆಗೆ ಒಪ್ಪಿಸಬೇಕು. ಈ ಅಪಪ್ರಚಾರದ ಹಿಂದೆ ಷಡ್ಯಂತ್ರ ಬಯಲು ಮಾಡಬೇಕು ಎಂದು ಪೂಜಾರಿ ಪತ್ರದಲ್ಲಿ ಆಗ್ರಹಿಸಿದ್ದಾರೆ.

ವಿದೇಶಿ ಹಣಕಾಸು ನೆರವು ತನಿಖೆ ಮಾಡಿ

ಧರ್ಮಸ್ಥಳ ಕ್ಷೇತ್ರವನ್ನು ವಿರೋಧಿಸುವ ವ್ಯಕ್ತಿಗಳು ಸ್ವೀಕರಿಸಿದ ವಿದೇಶಿ ಹಣಕಾಸು ನೆರವು, ಹಣದ ಮೂಲವನ್ನು ತನಿಖೆ ಮಾಡಬೇಕು. ಇಲ್ಲಿ ಹಲವು ಗಂಪುಗಳು ಕೆಲಸ ಮಾಡಿದೆ. ಹಿಂದೂ ಧಾರ್ಮಿಕ ಕ್ಷೇತ್ರವನ್ನು ಟಾರ್ಗೆಟ್ ಮಾಡಿ ಆರೋಪ, ಅಪಪ್ರಚಾರ ಮಾಡಲಾಗುತ್ತಿದೆ. ಹೀಗಾಗಿ ವಿದೇಶಿ ಹಣಕಾಸಿನ ಕುರಿತು ಇಡಿ ತನಿಖೆಗೆ ಕೇಂದ್ರ ಗೃಹಸಚಿವರು ಆದೇಶ ನೀಡಬೇಕು ಎಂದು ಮನವಿ ಮಾಡುತ್ತಿದ್ದೇನೆ. ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ಪೂಜಾರಿ ಆಗ್ರಹಿಸಿದ್ದಾರೆ.