ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು 'ನಳಂದ ಸಾಹಿತ್ಯ ಉತ್ಸವ'ದಲ್ಲಿ ಭಾಗವಹಿಸಿ, ನಳಂದ ವಿಶ್ವವಿದ್ಯಾಲಯದ ಇತಿಹಾಸದ ಕುರಿತು ಭಾವನಾತ್ಮಕ ಕವಿತೆ ಬರೆದಿದ್ದಾರೆ. ತಮ್ಮ ಕವಿತೆಯಲ್ಲಿ ನಳಂದದ ವಿನಾಶ ಮತ್ತು ಪುನರುತ್ಥಾನವನ್ನು ಉಲ್ಲೇಖಿಸಿದ ಅವರು, ಬಿಹಾರದ ಅಭಿವೃದ್ಧಿಯನ್ನು ಶ್ಲಾಘಿಸಿದ್ದಾರೆ.

ಬಿಹಾರ (ಡಿ.25): ಕಾಂಗ್ರೆಸ್ ಹಿರಿಯ ನಾಯಕ ಮತ್ತು ಖ್ಯಾತ ಸಾಹಿತಿ ಶಶಿ ತರೂರ್ ಅವರು ಇತ್ತೀಚೆಗೆ ಬಿಹಾರದ ಸಾಂಸ್ಕೃತಿಕ ನಗರಿ ರಾಜಗೀರ್‌ನಲ್ಲಿ ನಡೆದ 'ನಳಂದ ಸಾಹಿತ್ಯ ಉತ್ಸವ'ದಲ್ಲಿ ಭಾಗವಹಿಸಿದ್ದರು. ಈ ಭೇಟಿಯ ವೇಳೆ ನಳಂದ ವಿಶ್ವವಿದ್ಯಾಲಯದ ಭವ್ಯ ಇತಿಹಾಸ ಮತ್ತು ಪ್ರಸ್ತುತ ಬದಲಾವಣೆಗಳನ್ನು ಕಂಡು ಮಾರುಹೋದ ಅವರು, ಈ ಪ್ರಾಚೀನ ಜ್ಞಾನ ದೇಗುಲದ ಕುರಿತು ಭಾವನಾತ್ಮಕ ಕವಿತೆಯೊಂದನ್ನು ಬರೆದು ಹಂಚಿಕೊಂಡಿದ್ದಾರೆ.

ನಳಂದದ ವೈಭವ ಸಾರಿದ ಕವಿತೆ

ನಳಂದ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ನಂತರ ಬುಧವಾರ (ಡಿಸೆಂಬರ್ 24) ಶಶಿ ತರೂರ್ ಅವರು ತಮ್ಮ 'X' ಖಾತೆಯಲ್ಲಿ ಕವಿತೆಯೊಂದನ್ನು ಹಂಚಿಕೊಂಡಿದ್ದಾರೆ. 'ನಳಂದ! ನಮ್ಮ ಇತಿಹಾಸ ಅತ್ಯಂತ ಅದ್ಭುತವಾದುದು. ಇಲ್ಲಿಗೆ ವಿಶ್ವದ ಮೂಲೆ ಮೂಲೆಯಿಂದ ಕವಿಗಳು, ಬರಹಗಾರರು ಮತ್ತು ತತ್ವಜ್ಞಾನಿಗಳು ಜ್ಞಾನ ಅರಸಿ ಬರುತ್ತಿದ್ದರು. ಬೌದ್ಧ ಅನುಯಾಯಿಗಳು ಇಲ್ಲಿ ಶಾಂತಿ ಮತ್ತು ಪ್ರೀತಿಯ ಪಾಠ ಕಲಿಸುತ್ತಿದ್ದರು' ಎಂದು ಅವರು ಬಣ್ಣಿಸಿದ್ದಾರೆ.

ಇತಿಹಾಸ ಎಂದಿಗೂ ಅಳಿಯದು ಎಂಬ ಸಂದೇಶ

ತಮ್ಮ ಕವಿತೆಯಲ್ಲಿ ನಳಂದದ ವಿನಾಶ ಮತ್ತು ಪುನರುತ್ಥಾನದ ಬಗ್ಗೆ ಉಲ್ಲೇಖಿಸಿರುವ ಅವರು, 'ಕೆಲವು ಪುಸ್ತಕಗಳನ್ನು ಸುಟ್ಟು ಹಾಕುವುದರಿಂದ ಇತಿಹಾಸ ಎಂದಿಗೂ ಸಾಯುವುದಿಲ್ಲ. ಜ್ಞಾನದ ನದಿ ಎಂಟನೇ ಶತಮಾನದವರೆಗೂ ಇಲ್ಲಿ ನಿರಂತರವಾಗಿ ಹರಿಯುತ್ತಿತ್ತು. ನಾವು ಬಿದ್ದ ನಂತರವೂ ಹೇಗೆ ಮೇಲೆ ಏರಬಲ್ಲೆವು ಎಂಬುದನ್ನು ನಳಂದ ಇಡೀ ಜಗತ್ತಿಗೆ ತೋರಿಸಿಕೊಟ್ಟಿದೆ' ಎಂದು ಮಾರ್ಮಿಕವಾಗಿ ಬರೆದಿದ್ದಾರೆ. ಅಲ್ಲದೆ, ಸಾಯುವವರು ಸಾಮಾನ್ಯ ಜನರೇ ಹೊರತು ವಿಶೇಷ ಸಾಧನೆಯ ಇತಿಹಾಸವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರಾಜಕೀಯ ವಿವಾದಕ್ಕೆ ತರೂರ್ ಸ್ಪಷ್ಟನೆ

ನಳಂದ ವಿಶ್ವವಿದ್ಯಾಲಯದ ಪುನರ್ನಿರ್ಮಾಣ ಮತ್ತು ಬಿಹಾರದ ಇತ್ತೀಚಿನ ಮೂಲಸೌಕರ್ಯಗಳನ್ನು ಶ್ಲಾಘಿಸಿದ್ದಕ್ಕಾಗಿ ತರೂರ್ ಅವರು ರಾಜಕೀಯ ಟೀಕೆಗಳನ್ನು ಎದುರಿಸಬೇಕಾಯಿತು. ಅವರು ಎನ್‌ಡಿಎ ಸರ್ಕಾರವನ್ನು ಹೊಗಳುತ್ತಿದ್ದಾರೆ ಎಂಬ ಚರ್ಚೆಗಳು ಆರಂಭವಾದಾಗ ಪ್ರತಿಕ್ರಿಯಿಸಿದ ಅವರು, 'ನಾನು ಬಿಹಾರದ ಅಭಿವೃದ್ಧಿ ಮತ್ತು ಐತಿಹಾಸಿಕ ಪರಂಪರೆಯನ್ನು ಹೊಗಳಿದ್ದೇನೆಯೇ ಹೊರತು ಇದರಲ್ಲಿ ಯಾವುದೇ ರಾಜಕೀಯವಿಲ್ಲ. ನಾನು ಬಿಜೆಪಿಯನ್ನಾಗಲಿ ಅಥವಾ ಯಾವುದೇ ನಾಯಕರ ಹೆಸರನ್ನಾಗಲಿ ಪ್ರಸ್ತಾಪಿಸಿಲ್ಲ. ಇಂತಹ ವಿಷಯಗಳಲ್ಲಿ ರಾಜಕೀಯ ವಿವಾದ ಸೃಷ್ಟಿಸುವುದು ಸರಿಯಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

ಬಿಹಾರದ ಬದಲಾವಣೆಗೆ ಮೆಚ್ಚುಗೆ

ಬಿಹಾರದ ಕುರಿತಾದ ತಮ್ಮ ಹಳೆಯ ಗ್ರಹಿಕೆಗಳು ಈಗ ಬದಲಾಗಿವೆ ಎಂದು ತರೂರ್ ತಿಳಿಸಿದ್ದಾರೆ. "ಈ ಹಿಂದೆ ಬಿಹಾರದ ಪರಿಸ್ಥಿತಿ ಸರಿ ಇಲ್ಲ ಎಂದು ಕೇಳಿದ್ದೆ. ಆದರೆ ಈಗ ಇಲ್ಲಿನ ರಸ್ತೆಗಳು ಉತ್ತಮವಾಗಿವೆ, ರಾತ್ರಿ ವೇಳೆ ಜನರು ನಿರ್ಭಯವಾಗಿ ಓಡಾಡುತ್ತಿದ್ದಾರೆ. ಬಿಹಾರ ಮ್ಯೂಸಿಯಂ ಮತ್ತು ಬಾಪು ಟವರ್‌ಗಳು ವಿಶ್ವದರ್ಜೆಯ ಪರಂಪರೆಯನ್ನು ಹೊಂದಿವೆ" ಎಂದು ಅವರು ರಾಜ್ಯದ ಆಧುನಿಕ ಮುಖವನ್ನು ಶ್ಲಾಘಿಸಿದ್ದಾರೆ.