ತಮಿಳುನಾಡಿನಲ್ಲಿ ನಡೆದ ಶೂಟಿಂಗ್ ಕ್ರೀಡಾಕೂಟದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರಿಂದ ಪದಕ ಸ್ವೀಕರಿಸಲು ವಿದ್ಯಾರ್ಥಿ ನಿರಾಕರಿಸಿದ ಘಟನೆ ನಡೆದಿದೆ.
ಚೆನ್ನೈ: ಮಾಜಿ ಐಪಿಎಸ್ ಅಧಿಕಾರಿ, ತಮಿಳುನಾಡಿನ ಬಿಜೆಪಿ ನಾಯಕರಾಗಿರುವ ಅಣ್ಣಾಮಲೈ ಅವರಿಂದ ಪದಕ ಸ್ವೀಕರಿಸಲು ವಿದ್ಯಾರ್ಥಿ ನಿರಾಕರಿಸಿದ ಘಟನೆ ನಡೆದಿದೆ. ತಮಿಳುನಾಡಿನಲ್ಲಿ ನಡೆದ 51ನೇ ರಾಜ್ಯ ಶೂಟಿಂಗ್ ಕ್ರೀಡಾಕೂಟದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿ ಪದಕವನ್ನು ಕುತ್ತಿಗೆಗೆ ಹಾಕಿಕೊಳ್ಳಲು ನಿರಾಕರಿಸಿದಾಗ ವೇದಿಕೆ ಮೇಲೆ ಒಂದು ಕ್ಷಣ ಗೊಂದಲವುಂಟಾಯ್ತು. ವೇದಿಕೆ ಮೇಲಿದ್ದ ಅತಿಥಿಗಳು ಮತ್ತು ಮುಂಭಾಗದಲ್ಲಿದ್ದ ಜನರಿಗೆ ಏನಾಗ್ತಿದೆ ಅಂತ ತಿಳಿದುಕೊಳ್ಳಲು ಕೊಂಚ ಸಮಯವೇ ಬೇಕಾಯ್ತು. ರಾಜ್ಯ ಶೂಟಿಂಗ್ ಕ್ರೀಡಾಕೂಟದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯನ್ನಾಗಿ ಅಣ್ಣಾಮಲೈ ಅವರನ್ನು ಅಹ್ವಾನಿಸಲಾಗಿತ್ತು. ಅಣ್ಣಾಮಲೈ ಅವರಿಂದ ಪದಕ ಸ್ವೀಕರಿಸಲು ನಿರಾಕರಿಸಿದ ಘಟನೆ ತಮಿಳುನಾಡು ರಾಜಕಾರಣದಲ್ಲಿ ತೀವ್ರ ಸಂಚಲನವನ್ನುಂಟು ಮಾಡಿದೆ.
ಯಾರು ಈ ವಿದ್ಯಾರ್ಥಿ?
ಕೈಗಾರಿಕಾ ಸಚಿವ ಟಿ.ಆರ್.ಬಿ. ರಾಜಾ ಅವರ ಪುತ್ರ ಸೂರ್ಯ ರಾಜ ಬಾಲು ಪದಕ ಸ್ವೀಕರಿಸಲು ನಿರಾಕರಿಸಿದ ವಿದ್ಯಾರ್ಥಿಯಾಗಿದ್ದಾರೆ. ಅತಿಥಿಗಳಾಗಿ ಆಗಮಿಸಿದ್ದ ಅಣ್ಣಾಮಲೈ, ವಿಜೇತರಿಗೆ ಹಾರ ಹಾಕಿ ವೇದಿಕೆಯ ಮೇಲೆ ಪದಕಗಳನ್ನು ಹಾಕುತ್ತಿದ್ದರು. ಸೂರ್ಯ ಸರದಿ ಬಂದಾಗ ಅಣ್ಣಾಮಲೈ ಅವರಿಂದ ಕೊರಳಿಗೆ ಪದಕ ಹಾಕಿಕೊಳ್ಳಲು ನಿರಾಕರಿಸಿದರು. ಕೈಯಲ್ಲಿಯೇ ಪದಕ ಪಡೆದುಕೊಂಡು ತಾವೇ ಕೊರಳಿಗೆ ಹಾಕಿಕೊಂಡರು. ಇದು ತಮಿಳುನಾಡಿನ ರಾಜಕೀಯದಲ್ಲಿ ಹೊಸ ಚರ್ಚೆಗೆ ಗ್ರಾಸವಾಗಿದೆ.
ಎರಡು ವಾರಗಳ ಹಿಂದೆಯೂ ಇದೇ ರೀತಿಯ ಘಟನೆ ನಡೆದಿತ್ತು!
ತಿರುನಲ್ವೇಲಿಯ ಮನೋನ್ಮಣಿಯಂ ಸುಂದರನಾರ್ ವಿಶ್ವವಿದ್ಯಾಲಯದ 32 ನೇ ಘಟಿಕೋತ್ಸವದ ಆರಂಭದಲ್ಲಿಯೂ ಇಂತಹವುದೇ ಒಂದು ಘಟನೆ ನಡೆದಿತ್ತು. ಡಾಕ್ಟರೇಟ್ ವಿದ್ಯಾರ್ಥಿನಿ ಜೀನ್ ಜೋಸೆಫ್ ರಾಜ್ಯಪಾಲ ಆರ್.ಎನ್. ರವಿ ಬದಲಾಗಿ ಉಪಕುಲಪತಿಗಳಿಂದ ಪದವಿ ಪಡೆಯಲು ನಿರ್ಧರಿಸಿದರು. ಇದರ ಬೆನ್ನಲ್ಲೇ ಮತ್ತೊಂದು ಘಟನೆ ನಡೆದಿದೆ. ರಾಜ್ಯಪಾಲರು ತಮಿಳು ವಿರೋಧಿ ಮತ್ತು ತಮಿಳುನಾಡು ವಿರೋಧಿ ನಿಲುವನ್ನು ಹೊಂದಿದ್ದಾರೆ. ಹಾಗಾಗಿ ಈ ಕ್ರಮ ಕೈಗೊಂಡಿದ್ದೇನೆ ಎಂದು ಜೋಸೆಫ್ ಹೇಳಿಕೆಯನ್ನು ಮಾಧ್ಯಮಗಳಿಗೆ ನೀಡಿದ್ದರು. ತಾನು ದ್ರಾವಿಡ ಮಾದರಿಯನ್ನು ನಂಬುತ್ತೇನೆ. ಉಪಕುಲಪತಿಯನ್ನು ಗೌರವಿಸುವುದು ಸೂಕ್ತವೆಂದು ಭಾವಿಸಿದ್ದೇನೆ ಎಂದು ಹೇಳಿದ್ದರು.
ಘಟನೆ ಮತ್ತು ವಿದ್ಯಾರ್ಥಿ ನಡೆ ಬಗ್ಗೆ ಅಣ್ಣಾಮಲೈ ಹೇಳಿದ್ದೇನು?
ಡಿಎಂಕೆ ಕಾರ್ಯಕರ್ತರು ಜನಪ್ರಿಯತೆಯನ್ನು ಪಡೆದುಕೊಳ್ಳಲು ನಡೆಸಿದ ಪಿತೂರಿ ಇದಾಗಿದೆ.ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಕೀಳು ಮಟ್ಟದ ರಾಜಕೀಯಕ್ಕೆ ಅವಕಾಶ ನೀಡಬಾರದು ಎಂದು ಅಣ್ಣಾಮಲೈ ಅಭಿಪ್ರಾಯ ವ್ಯಕ್ತಪಡಿಸಿದರು. ಸೂರ್ಯ ರಾಜ ಬಾಲು ವೇದಿಕೆ ಮೇಲೆ ನಡೆದುಕೊಂಡ ನಡೆ ಈ ವಿವಾದವನ್ನು ಮತ್ತಷ್ಟು ಹೆಚ್ಚಿಸಿದೆ. ಇದನ್ನು ಡಿಎಂಕೆ ಮತ್ತು ಬಿಜೆಪಿ ನಡುವಿನ ನೇರ ಘರ್ಷಣೆಯಾಗಿ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಕೆ ಅಣ್ಣಾಮಲೈ ಯಾರು?
ಕುಪ್ಪುಸಾಮಿ ಅಣ್ಣಾಮಲೈ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಮತ್ತು ಮಾಜಿ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿಯಾಗಿದ್ದಾರೆ. ಅಣ್ಣಾಮಲೈ ಅವರು 2011 ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದಾರೆ. ಉಡುಪಿ, ಚಿಕ್ಕಮಗಳೂರು ಮತ್ತು ಬೆಂಗಳೂರಿನಲ್ಲಿ ಅಣ್ಣಾಮಲೈ ಸೇವೆ ಸಲ್ಲಿಸಿದರು. ಅಣ್ಣಾಮಲೈ ಕಾರ್ಯಶೈಲಿಯಿಂದಾಗಿ ಅವರನ್ನು ಕರ್ನಾಟಕ ಪೊಲೀಸರ ಸಿಂಗಂ ಎಂದು ಕರೆಯಲಾಗುತ್ತಿತ್ತು.
