ತಮಿಳುನಾಡಿನ ಸಾತಂಕುಲಂ ಲಾಕಪ್ ಡೆತ್ ಪ್ರಕರಣದಲ್ಲಿ, ತಂದೆ-ಮಗನ ಸಾವಿಗೆ ಕಾರಣರಾದ 9 ಪೊಲೀಸರಿಗೆ ಮರಣದಂಡನೆ ವಿಧಿಸಲಾಗಿದೆ. ಈ ಪ್ರಕರಣದಲ್ಲಿ, ಸಹೋದ್ಯೋಗಿಗಳ ಬೆದರಿಕೆಯ ನಡುವೆಯೂ ಧೈರ್ಯವಾಗಿ ಸಾಕ್ಷಿ ಹೇಳಿದ ಮಹಿಳಾ ಕಾನ್ಸ್‌ಟೇಬಲ್ ರೇವತಿ ಅವರಿಗೆ ನ್ಯಾಯಾಲಯವು ಭಾರಿ ಭದ್ರತೆ ಒದಗಿಸಿದೆ.

ಖಾಕಿ ಪಡೆಯ ಕ್ರೌರ್ಯದ ಎದುರು ಎದೆಯುಬ್ಬಿಸಿ ನಿಂತ 'ರೇವತಿ' ಎಂಬ ಧೀಶಕ್ತಿ

ಚೆನ್ನೈ: ತಮಿಳುನಾಡಿನ ಸಾತಂಕುಲದಲ್ಲಿ ಲಾಕಪ್‌ನಲ್ಲಿದ್ದ ತಂದೆ ಮಗನನ್ನು ಭೀಕರವಾಗಿ ಹಲ್ಲೆ ಮಾಡಿ ಕೊಂದ 9 ಪೊಲೀಸರು ತಪ್ಪಿತಸ್ಥರು ಎಂದು ಸಾಬೀತಾಗಿದ್ದು, ಮಧುರೈನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಈ ಅಪರಾಧಿ ಪೊಲೀಸರಿಗೆ ಗಲ್ಲು ಶಿಕ್ಷೆ ನೀಡುವಂತೆ ಹೇಳಿ ಐತಿಹಾಸಿಕ ತೀರ್ಪು ಪ್ರಕಟಿಸಿತ್ತು. ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದು, ಯಾರು ಇಲ್ಲಿದೆ ಡಿಟೇಲ್ ಸ್ಟೋರಿ.

ತಮಿಳುನಾಡನ್ನೇ ಬೆಚ್ಚಿಬೀಳಿಸಿದ್ದ ಸಾತಂಕುಲಂ ಪ್ರಕರಣ:

ಇದು 2020ರಲ್ಲಿ ತಮಿಳುನಾಡಿನಲ್ಲಿ ಭಾರಿ ಸಂಚಲನ ಸೃಷ್ಟಿಸಿದ ಪ್ರಕರಣವಾಗಿತ್ತು. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ನಿಗದಿ ಮಾಡಿದ್ದ ಅವಧಿ ಮೀರಿ ಅಪ್ಪ ಜಯರಾಜ್ ಹಾಗೂ ಮಗ ಬೆನಿಕ್ಸ್ ತಮ್ಮ ಅಂಗಡಿಯನ್ನು ತೆರೆದಿದ್ದಾರೆ ಎಂದು ಅಪ್ಪ ಮಗನನ್ನು ಪೊಲೀಸರು ಬಂಧಿಸಿದ್ದರು. ಬಂಧಿಸಿ ಅವರನ್ನು ಲಾಕಪ್‌ಗೆ ತಳ್ಳಿದ ಪೊಲೀಸರು ಅವರಿಗೆ ಹಿಗ್ಗಾಮುಗ್ಗಾ ಥಳಿಸಿದ ಪರಿಣಾಮ ಅವರು ಪೊಲೀಸರ ಲಾಕಪ್‌ನಲ್ಲೇ ಸಾವನ್ನಪ್ಪಿದ್ದರು. ಈ ಪ್ರಕರಣವನ್ನು ಮುಚ್ಚಿ ಹಾಕಲು ಸುಳ್ಳು ಸಾಕ್ಷ್ಯ ನೀಡಿದ್ದಲ್ಲದೇ ಹಲವು ಯತ್ನಗಳನ್ನು ಆರೋಪಿಗಳು ಮಾಡಿದ್ದರೂ ಸಹ ಈ ಪ್ರಕರಣದ ಪ್ರಮುಖ ಸಾಕ್ಷಿ ಹಾಗೂ ಪ್ರತ್ಯಕ್ಷದರ್ಶಿ ಮಹಿಳಾ ಕಾನ್ಸ್‌ಟೇಬಲ್ ಒಬ್ಬರು ಈ ಎಲ್ಲಾ ಕ್ರೂರಿಗಳನ್ನು ಎದುರು ಹಾಕಿಕೊಂಡು ಧೈರ್ಯವಾಗಿ ಸಾಕ್ಷಿ ಹೇಳಿದ್ದರಿಂದ ಈಗ ಈ ಯಮಕಿಂಕರರಿಗೆ ಮಧುರೈನ ಕೋರ್ಟ್ ಮರಣದಂಡನೆ ಶಿಕ್ಷೆ ನೀಡಿದೆ. ಹೀಗೆ ತನ್ನ ಕ್ರೂರಿ ಸಹೋದ್ಯೋಗಿಗಳ ವಿರುದ್ಧ ಧೈರ್ಯವಾಗಿ ನಿಂತು ಸಾಕ್ಷಿ ಹೇಳಿದವರೇ ಮಹಿಳಾ ಕಾನ್ಸ್‌ಟೇಬಲ್ ರೇವತಿ.

ಇದನ್ನೂ ಓದಿ: ಕೆಳಗಿಳಿದು ಬಾ ಒಂದು ಗಂಟೆಯಲ್ಲಿ ಮದುವೆ ಮಾಡಿಸುವೆ: ಯುವತಿಗೆ ಮೈಕ್ ಮೂಲಕ ಭರವಸೆ ನೀಡಿದ ಪೊಲೀಸ್

ಈ ಪ್ರಕರಣದಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗುವಲ್ಲಿ ರೇವತಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಈ ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿಯಾಗಿದ್ದಲ್ಲದೇ ಪ್ರಮುಖ ಸಾಕ್ಷಿಯಾಗಿದ್ದರು. ಅವರೇ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್‌ಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಪೊಲೀಸ್‌ ಠಾಣೆಯಲ್ಲಿದ್ದ ರಕ್ತದ ಕಲೆಗಳು, ರಕ್ತದ ಕಲೆಗಳನ್ನು ಹೊಂದಿದ್ದ ಪೊಲೀಸ್ ಲಾಠಿಗಳು, ಹಾಗೂ ಟೇಬಲ್‌ಗಳನ್ನು ಸಾಕ್ಷ್ಯ ನಾಶವಾಗುವ ಮೊದಲೇ ಜಪ್ತಿ ಮಾಡಬೇಕು ಎಂದು ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಖಾಕಿ ಪಡೆಯ ಕ್ರೌರ್ಯ ಬಯಲಿಗೆಳೆದ ರೇವತಿಗೆ 24*7 ಭಾರಿ ಬಿಗಿ ಭದ್ರತೆ

9 ಕ್ರೂರಿ ಪೊಲೀಸರನ್ನು ಎದುರು ಹಾಕಿಕೊಂಡು ನ್ಯಾಯದ ಪರ ನಿಂತು ದಿಟ್ಟವಾಗಿ ಸಾಕ್ಷಿ ಹೇಳಿದ ರೇವತಿಯ ಜೀವಕ್ಕೆ ಈಗ ಅಪಾಯ ಇರುವುದು ಸಹಜ ಹೀಗಾಗಿ ಈ ಪ್ರಕರಣದಲ್ಲಿ ಸಾಕ್ಷಿ ಹೇಳಿದ ಆಕೆಗೆ ನ್ಯಾಯಾಲಯ ಭಾರಿ ಭದ್ರತೆ ಒದಗಿಸುವುದಕ್ಕೆ ಸೂಚನೆ ನೀಡಿದೆ. ತಮ್ಮ ಸಹೋದ್ಯೋಗಿಗಳಿಂದ ತೀವ್ರವಾದ ಒತ್ತಡ ಹಾಗೂ ಬೆದರಿಕೆಯ ನಡುವೆಯೂ ಅವರು ಜಯರಾಜ್ ಹಾಗೂ ಅವರ ಪುತ್ರ ಬೆನಿಕ್ಸ್‌ ಅವರ ಭೀಕರ ಹತ್ಯೆಯ ಬಗ್ಗೆ ಸಾಕ್ಷಿ ನುಡಿದಿದ್ದರು. ತಂದೆ ಹಾಗೂ ಮಗನನ್ನು ಪೊಲೀಸ್ ಠಾಣೆಯೊಳಗೆ ಕೂಡಿ ಹಾಕಿ ರಾತ್ರಿಯೆಲ್ಲಾ ಅವರ ಮೇಲೆ ಲಾಠಿಯಿಂದ ಭೀಕರವಾಗಿ ಹಲ್ಲೆ ಮಾಡಲಾಗಿದೆ ಎಂದು ಅವರು ವಿವರವಾದ ಮಾಹಿತಿ ನೀಡಿದ್ದರು.

ಇದನ್ನೂ ಓದಿ: ಎಐ ಯುಗದಲ್ಲಿ ಬೆಳಗಿದ ಬ್ಲೂ ಕಾಲರ್ ಬದುಕು: ಸಾಫ್ಟ್‌ವೇರ್ ಉದ್ಯೋಗಿಗಳಿಗಿಂತ ಬಡಗಿ, ಪ್ಲಂಬರ್‌ಗಳೇ ಈಗ 'ಕಿಂಗ್'!

ಹೀಗಾಗಿ ರೇವತಿ ಅವರಿಗೆ ಜೀವಭಯದ ಭೀತಿ ಇರುವುದರಿಂದಾಗಿ ಮದ್ರಾಸ್ ಹೈಕೋರ್ಟ್ ಅವರ ಜೀವಕ್ಕೆ ಯಾವುದೇ ಅಪಾಯವಾಗದಂತೆ ಅವರನ್ನು ರಕ್ಷಿಸುವಂತೆ ಅವರಿಗೆ 24*7 ಗಂಟೆಗಳ ಕಾಲ ರಕ್ಷಣೆ ನೀಡುವಂತೆ ಹಾಗೂ ಆಕೆಗೆ ಕುಟುಂಬದೊಂದಿಗೆ ಕಳೆಯಲು ತಿಂಗಳ ಕಾಲ ರಜೆಯನ್ನು ನೀಡಿದೆ.